ಅಲಹಾಬಾದ್: ಉತ್ತರ ಪ್ರದೇಶದ ಬಾಗ್‌ಪತ್‌ನ ಬರೌತ್ ಎಂಬಲ್ಲಿ ಇಂದು ಬೆಳಗ್ಗೆ ನಡೆದ ಜೈನ ನಿರ್ವಾಣ ಉತ್ಸವದಲ್ಲಿ ವೇದಿಕೆ ಕುಸಿದು 5 ಮಂದಿ ಮೃತಪಟ್ಟಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜೈನ ಸನ್ಯಾಸಿಗಳ ಸಮ್ಮುಖದಲ್ಲಿ ಭಗವಾನ್ ಆದಿನಾಥನಿಗೆ ಲಡ್ಡುಗಳನ್ನು ಅರ್ಪಿಸುವ ಸಮಾರಂಭದಲ್ಲಿ ಈ ದುರಂತ ನಡೆದಿದೆ.
ಕೂಡಲೇ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಮಾರಂಭಕ್ಕೆ ಮಾನಸ್ತಂಭ ಕಾಂಪ್ಲೆಕ್ಸ್ ನಲ್ಲಿ ಶಾಮಿಯಾನ ಹಾಕಲಾಗಿತ್ತು, ಅದು ಕುಸಿದು ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ. 50ಕ್ಕೂ ಹೆಚ್ಚು ಭಕ್ತರು ಪೆಂಡಲ್ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ. ತೀವ್ರವಾಗಿ ಅಸ್ವಸ್ತಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರಲ್ಲಿ ಐವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಇತರ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
65 ಅಡಿ ಎತ್ತರದ ಮರದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ 4-5 ಅಡಿ ಎತ್ತರದ ಆದಿನಾಥನ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು . ಈ ವೇಳೆ ಭಕ್ತರು ಮೆಟ್ಟಿಲು ಹತ್ತುವಾಗ ಭಾರ ತಡೆಯಲಾರದೆ ವೇದಿಕೆ ಕುಸಿದಿದೆ. ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.