ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ಮತ್ತು ಖಾಸಗಿ ಲೇವಾದೇವಿ ಸಂಸ್ಥೆಗಳಿಂದ ಸಾಲ ಪಡೆದವರ ರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ಕೂಡಲೇ ಹೊಸ ಕಾನೂನು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳ ಜೊತೆ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಹಾಗೂ ಆರ್ಬಿಐ ಅವರ ಅಭಿಪ್ರಾಯ ಪಡೆದುಕೊಂಡಿದ್ಧೇವೆ. ಸಾಲ ಕೊಡಬೇಡಿ ಎಂದು ನಾವು ಹೇಳುವುದಿಲ್ಲ, ವಸೂಲಿ ಮಾಡಬೇಡಿ ಎಂದೂ ಹೇಳಲ್ಲ. ಆದರೆ ವಸೂಲಿ ಮಾಡುವಾಗ ಕಿರುಕುಳ ಕೊಡಬಾರದು ಎಂದು ಎಚ್ಚರಿಎಕ ನೀಡಿದ್ದೇವೆ ಎಂದರು.
ಸಾಲ ವಸೂಲಿ ಮಾಡುವಾಗ ರಿಸರ್ವ್ ಬ್ಯಾಂಕಿನ ನಿಯಮ ಪಾಲಿಸಬೇಕು. ಐದು ಗಂಟೆಯ ಬಳಿಕ ವಸೂಲಿ ಮಾಡಲು ಹೋಗಬಾರದು. ಸಾಲ ವಸೂಲಾತಿಗೆ ಹೊರಗಿನವರನ್ನು. ಅಂದರೆ ಗೂಂಡಾಗಳನ್ನು ಬಳಕೆ ಮಾಡಬಾರದು. ಈ ರೀತಿ ಮಾಡುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು. ಸಾಲ ವಸೂಲಾತಿ ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಬಾರ್ಡ್ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ, ಮನಿ ಲೆಂಡಿಂಗ್ ಮಾಡುವವರಿಗೆ ಎಚ್ಚರಿಕೆ ಕೊಟ್ಟಿದ್ದೇವೆ. ಇದಕ್ಕಾಗಿ ಹೊಸ ಕಾನೂನು ಮಾಡುತ್ತೇವೆ ಎಂದರು.
ಪರವಾನಗಿ ಇಲ್ಲದೇ ಯಾರೂ ಕೂಡ ಮನಿ ಲೆಂಡಿಂಗ್ ಮಾಡಕೂಡದು. ಎಲ್ಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲು ಸೂಚನೆ ನೀಡಿದ್ದೇವೆ. ಅಲ್ಲಿ ದೂರುಗಳನ್ನು ಕೊಡಬಹುದು. ದೂರು ಕೊಟ್ಟರೆ ದಾಖಲಿಸಿಕೊಳ್ಳಲು ಅಥವಾ ಸುಮೋಟೋ ಕೇಸ್ ದಾಖಲಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ. ಯಾರೇ ಒತ್ತಾಯದಿಂದ ವಸೂಲಿ ಮಾಡುವುದು ಗೂಂಡಾಗಳನ್ನ ಬಳಸಿ ವಸೂಲಿ ಮಾಡೋದು, ಗೂಂಡಾಗಳನ್ನ ಬಳಸುವುದು, ಅಗೌರವರಿಂದ ವಸೂಲಿ ಮಾಡಿದರೆ ಪೊಲೀಸರು ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.
ಸಾಲಗಾರರಿಗೆ ಕಿರುಕುಳ ತಪ್ಪಿಸಲು, ಆತ್ಮಹತ್ಯೆ, ಊರು ಬಿಟ್ಟು ಹೋಗೋದನ್ನು ತಡೆಯಲು ಕೇಂದ್ರ ಸರ್ಕಾರ ಕಾನೂನು ಮಾಡಬೇಕು ಎಂದೂ ಒತ್ತಾಯ ಮಾಡುತ್ತೇವೆ. ಮೈಕ್ರೋ ಪೈನಾನ್ಸ್ಗಳು ರಿಸರ್ವ್ ಬ್ಯಾಂಕ್ ಅಡಿ ನೋಂದಣಿ ಆಗಿರುತ್ತದೆ. ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯ ಮಾಡುತ್ತೆನೆ ಎಂದರು.
ಶೇ 17.07 ಅಷ್ಟು ಬಡ್ಡಿ ವಸೂಲಿ ಮಾಡಲು ರಿಸರ್ವ್ ಬ್ಯಾಂಕ್ ಅವಕಾಶ ಕೊಟ್ಟಿದೆ. ಆದರೆ, ಕೆಲವು ಕಡೆ ಹೆಚ್ಚು ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಹಾಗೇ ಒಂದು ಕುಟುಂಬಕ್ಕೆ ಮೂರು ಸಾಲ ಅಷ್ಟೇ ಕೊಡಬೇಕು. ಆದರೆ, ಅದನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಸಾಲಗಾರರು ರೂ. 59,367 ಕೋಟಿ ಸಾಲು ಕಟ್ಟಲು ಬಾಕಿಯಿದೆ. 1.09 ಕೋಟಿ ಖಾತೆಗಳ ಸಾಲ ಕಟ್ಟಲು ಬಾಕಿಯಿದೆ. ಇವೆಲ್ಲವೂ ಅಧಿಕೃತ. ಆದರೆ ಅನಧಿಕೃತವಾದ ಇನ್ನೂ ಸಾಕಷ್ಟು ಖಾತೆಗಳಿವೆ. ಕಿರುಕುಳ ಕೊಟ್ಟವರ ಮೇಲೆ ಇಲ್ಲಿಯವರೆಗೆ 7 ಕೇಸ್ ದಾಖಲಾಗಿದೆ ಎಂದರು.
ಬೇರೆ ರಾಜ್ಯಗಳಲ್ಲೂ ಕಾನೂನು ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಮಾಡಿರುವ ಕಾನೂನನ್ನು ಪರಿಶೀಲಿಸುತ್ತೇವೆ. ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಮಾಡುತ್ತೇವೆ. ಈ ಕಿರುಕುಳ ತಪ್ಪಿಸಲಿಕ್ಕೆ ಕೇಂದ್ರ ಸರ್ಕಾರ ಕೂಡ ಕಾನೂನು ಮಾಡಬೇಕು ಅಂತ ಒತ್ತಾಯ ಮಾಡುತ್ತೇವೆ ಎಂದರು.
ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತು ಪರಿಣಾಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಸುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಎಸಿಎಸ್ ಅತೀಕ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಗೃಹ ಇಲಾಖೆ, ಒಳಾಡಳಿತ, ಕಂದಾಯ, ಗುಪ್ತಚರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದಾರೆ.