ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 3

Most read

ಕಡು ಬಡತನದಲ್ಲಿ ಓದಿ ಬೆಳೆದು ತೃಪ್ತಿಯ ಬದುಕು ಕಟ್ಟಿಕೊಂಡು ಇದೀಗ ತನ್ನ ಓದಿನ ದಿನಗಳ ಸಂಕಷ್ಟಗಳಿಗೆ ಅಕ್ಷರ ರೂಪ ನೀಡಿ ಮನ ಮಿಡಿಯುವ ಕಥೆಯಾಗಿಸಿದ್ದಾರೆ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಎನ್‌ ಮಳೀಮಠ್.‌  ಹಾಸ್ಟೆಲ್‌ ಹುಡುಗರಿಬ್ಬರನ್ನು ಕಾಡಿದ ದೆವ್ವದ ಕಾಟದ ಕತೆ ಇಲ್ಲಿದೆ.

ಭಾಗ ಒಂದು ಮತ್ತು ಎರಡು ಓದಿದ್ದೀರಾ? ಅನ್ನದ ನೆರಳೂ ದೆವ್ವದ ಕಾಟವೂ- ಭಾಗ 2

ಇದರ ಪರಿಣಾಮ ಮಾತ್ರ ವಿಶೇಷವಾಗಿತ್ತು.  ನನ್ನನ್ನೂ ಸೇರಿದಂತೆ ಬಹುಮಂದಿ ಗೆಳೆಯರಿಗೆ ಕೈಯಲ್ಲಿ, ಕಾಲಲ್ಲಿ ಗುಳ್ಳೆಗಳು ಏಳುತ್ತಿದ್ದವು. ಕೆಂಪನೆಯ ಆಕಾರದ ಇವು, ಎಲ್ಲಿಂದೆಲ್ಲಿ ಬೇಕಾದರೂ ಏಳುತ್ತಿದ್ದವು. ಕೆಲವರು ತಮ್ಮ ಗುಪ್ತಾಂಗವನ್ನು ತುರಿಸಿಕೊಳ್ಳಲು ಆರಂಭಿಸಿದರೆ, ನಿಲ್ಲಿಸುತ್ತಲೇ ಇರುತ್ತಿರಲಿಲ್ಲ. ಕೆಲವರಿಗೆ ಒಂದು ಕೈ ಖಾಯಂ ಆಗಿ ಅದೇ ಕೆಲಸಕ್ಕೆ ಮೀಸಲಾಗಿಬಿಟ್ಟಿತು. ಅಭ್ಯಾಸಬಲದಂತೆ ತುರಿಕೆ ಇಲ್ಲದಿದ್ದರೂ, ಯಾರು ಇರಲಿ, ಇಲ್ಲದಿರಲಿ ಆ ಕೈ ಅಲ್ಲಿಗೆ ಹೋಗಿ ಬಿಡುತಿತ್ತು. ನನಗಂತೂ ಎರಡೂ ಕೈಯಲ್ಲಿ ಗುಳ್ಳೆಗಳ ರಾಶಿ. ಈ ಗುಳ್ಳೆಗಳನ್ನು  ಕೆಲವೊಮ್ಮೆ ಒಡೆಯಲು ಸುರುಮಾಡಿದರೆ ಮತ್ತೆ ಮತ್ತೆ ಒಡೆಯೋಣ ಅನ್ನೋ ಚಾಳಿ ಬೆಳೆದುಬಿಟ್ಟಿತ್ತು. ತುರಿಸಿಕೊಳ್ಳೋದರಲ್ಲಿ ಏನೋ ಮಹಾನಂದ ಸಿಗುತ್ತಿತ್ತು. ಗುಳ್ಳೆಗಳನ್ನು ಒಂದು ದಿನ ಪರೀಕ್ಷೆ ನಡೆಯುತ್ತಿದ್ದಾಗಲೇ ಒಡೆಯಲು ಸುರುಮಾಡಿದೆ. ಒಡೆದ ರಭಸಕ್ಕೆ ಪಿಚಕ್ಕನೇ ನನ್ನ ಮುಖಕ್ಕೆ ಹಾರಿತು. ರೇಖಾ ಗಣಿತ ಮೇಷ್ಟ್ರು ಬಸವರಾಜಪ್ಪ ನೋಡಿ “ಏ ಪರೀಕ್ಷೆ ಬರೆಯೋ ಅಂದ್ರೆ, ಏನ್ ಮಾಡ್ತಾ ಇದ್ದೀಯ” ಅಂದ ಮೇಲೆ ಎಚ್ಚರವಾಯಿತು.

ನಮ್ಮ ಗೆಳೆಯ ರಮೇಶ ಓದಿನಲ್ಲಿ ಹಿಂದು, ಆದರೆ ಸಾತ್ವಿಕ, ಯಾರತ್ರನೂ ಜಗಳವಾಡಿದ್ದು ನಾನು ನೋಡಲಿಲ್ಲ. ಆದರೆ ವಾರ್ಡನ್ನಿನಿಂದ ಹಿಡಿದು, ಅಡುಗೆ ಭಟ್ಟರಿಗೆ, ದಿವಾಕರಣ್ಣನಿಗೆ, ಶಾಲೆಯ ಮೇಷ್ಟ್ರಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಸಹಾಯಕನಾಗಿದ್ದನು. ಇವರೆಲ್ಲಾ ಏನೇ ಕೆಲಸ ಹೇಳಿದರು ಮಾಡುವ ವಿಧೇಯ ವಿದ್ಯಾರ್ಥಿಯಾಗಿದ್ದನು. ಗಣಿತ ಮೇಷ್ಟ್ರು ಕೊಳವಿ ಅವರ ಅಂಗಡಿ ಕೆಲಸ ಮತ್ತು ವಾರ್ಡನ್ ಗೋಲಿಯಾ ನಾಯ್ಕರ ಮನೆಕೆಲಸದ ಜೊತೆಗೆ ಅವರ ಮಗ ಅಂಗವೈಕಲ್ಯ ಹೊಂದಿದ ರವಿಯನ್ನು ಎತ್ತಿ ಆಡಿಸುವ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಿದ್ದನು. ದಿವಾಕರಣ್ಣನ ಹೆಂಡತಿ ವೇದಕ್ಕನಿಗೂ, ಅವಳ ತಂಗಿ ನಮ್ಮ ತರಗತಿ ಓರಗೆಯ ಗಿರಿಜೆಗೂ ಕೆಲಸದಲ್ಲಿ ಸಹಾಯ ಮಾಡುತ್ತಿದ್ದನು. ಹಿಂಭಾಗದಲ್ಲಿರುವ ಸೇದೋ ಬಾವಿಗೆ ಸುತ್ತ ಕಟ್ಟೆಯಿರಲಿಲ್ಲ. ಅದಕ್ಕೆ ಅಡ್ಡಡ್ಡ ಕಟ್ಟಿಗೆಯ ತುಂಡುಗಳನ್ನು ಹಾಕಲಾಗಿತ್ತು. ಅದರ ಮೇಲೆ ನಿಂತು ನೀರನ್ನು ಎಳೆಯುವುದು ಸಾಮಾನ್ಯರಿಗೆ ಅಸಾಧ್ಯವಾಗಿತ್ತು. ಇದನ್ನು ರಮೇಶ ಮಾಡಿಕೊಟ್ಟು, ದಿವಾಕರಣ್ಣನ ಮನೆಯಲ್ಲಿದ್ದವರ ಮೆಚ್ಚುಗೆ ಗಳಿಸಿ, ಅವರ ಮನೆಯ ಒಳಗೆ ಲೀಲಾಜಾಲವಾಗಿ ಓಡಾಡುವ ಅಧಿಕಾರ ಪಡೆದಿದ್ದನು. ಇಂತಹ ಅವಕಾಶ ನಮಗ್ಯಾರಿಗೂ ಇಲ್ಲ ಅನ್ನೋ ಸಿಟ್ಟು ಇತ್ತು. ಆದರೆ ಹೆಚ್ಚೆಂದರೆ ಅವರ ಮನೆಯ ಬ್ಲಾಕ್ ಅಂಡ್ ವೈಟ್ ಟಿವಿ ನೋಡುವ ಅವಕಾಶ ಅಪರೂಪಕ್ಕೆ ಸಿಗುತ್ತಿತ್ತು.

ಟಿ.ವಿ ನೋಡುವ ಹುಡುಗರ ಸಂಖ್ಯೆ ಜಾಸ್ತಿಯಾಗುತ್ತಿದ್ದ ಹಾಗೆ ದಿವಾಕರಣ್ಣ ಟಿ.ವಿ ಆಫ್ ಮಾಡಿಬಿಡುತ್ತಿದ್ದನು. ಈ ಸಿಟ್ಟಿಗೆ ಟಿ.ವಿಯಲ್ಲಿ ಬರುತ್ತಿದ್ದ “ಮಳ್ಳಿ ಮಳ್ಳಿ ಮಿಂಚುಳ್ಳಿ, ಜಾಣ ಜಾಣ ಕಾಜಾಣ, ದಿವಾಕರನ ಉದಯ… ಅಂತ ಇರೋ ಹಾಡನ್ನು ಪುರುಷೋತ್ತಮ “ದಿವಾಕರನೂ ಸತ್ತ” ಎಂದು ಹೇಳಿಕೊಂಡು ಸಿಟ್ಟು ತೀರಿಸಿಕೊಳ್ಳುತ್ತಿದ್ದನು. ಹಾಸ್ಟೆಲ್‍ಗೆ ಬೇಕಾದ ರೇಶನ್ ತರೋದು, ವಾರದಲ್ಲಿ ಅಪರೂಪಕ್ಕೆ ಹಾಸ್ಟೆಲ್‍ನಲ್ಲಿ ಮೀನ್ ಸಾರು ಮಾಡೋದಕ್ಕೆ ತೀರ್ಮಾನವಾದರೆ ಅದರ ಉಸ್ತುವಾರಿ, ಅಡುಗೆ ಭಟ್ರಿಗೆ ಊಟ ಬಡಿಸಲು ಸಹಾಯ ಮಾಡುವುದು ಇವೆಲ್ಲಾ ರಮೇಶನ ನಿರಂತದ ಸೇವಾಕಾರ್ಯಗಳಾಗಿದ್ದವು. ಇನ್ನು ಇಡ್ಲಿ ಮಾಡೋ ದಿನದಂದು ರಮೇಶ, ಪುಟ್ಟ, ಸ್ವಾಮಿ ಬೆಳಗಿನ ಜಾವ ಎದ್ದು, ಅಡುಗೆ ಹೊನ್ನಪ್ಪಣ್ಣ, ಮಂಜಣ್ಣನಿಗೆ ಸಹಾಯ ಮಾಡುತ್ತಿದ್ದರು. ಇದರಿಂದ ಎರಡು ಇಡ್ಲಿ ಹೆಚ್ಚುವರಿಯಾಗಿ ಇವರ ತಟ್ಟೆಗೆ ಬೀಳುತ್ತಿದ್ದವು.

ಒಂದು ದಿನ ರಮೇಶ ಶಾಲೆಯಲ್ಲಿ ತಲೆ ಸುತ್ತಿದ ರೀತಿಯಲ್ಲಿ ಬಿದ್ದನು. ಒದ್ದಾಡುತ್ತಿದ್ದ ರಮೇಶನು ಉಸ್ಸೋ ಉಸ್ಸೋ ಎಂದು ತೊದಲು ನುಡಿಗಳನ್ನು ಹರಿಸುತ್ತಿದ್ದನು. ಏನೆಂದು ಅರಿಯದ ಮೇಷ್ಟ್ರುಗಳೆಲ್ಲಾ ಅವನನ್ನು ಎತ್ತಿಕೊಂಡು ಸ್ಟಾಫ್ ರೂಂಗೆ ತಂದರು. ಅಲ್ಲಿ ಅವನ ಅರ್ಭಟ ಜೋರಾಗಿ ಬಿಟ್ಟಿತ್ತು. “ಇದು ನನ್ನ ಜಾಗ… ನೀವೆಲ್ಲಾ ಯಾಕಿದ್ದೀರ… ಉಸ್ಸೋ ಉಸ್ಸೋ  ಇದು ನನ್ನ ಕ್ಷೇತ್ರ.. ಇಲ್ಲಿ ನನಗೆ ನೆಲೆ ಹಾಕಿಲ್ಲ… ಉಸ್ಸೋ ಉಸ್ಸೋ… ಹಾಂ… ಊಂ… ಊಂ… ಉಸ್ಸೋ ಎಂದು ಬಾಯಿ ಬಿಡಲು ಸುರುಮಾಡಿದನು. ಈ ವಿಚಾರ ತಿಳಿಯುತ್ತಿದ್ದ ಹಾಗೆ ಹಾಸ್ಟೆಲ್ ಬಾಡಿಗೆ ಕೊಟ್ಟಿದ್ದ, ರಮೇಶನ ಮೇಲೆ ಅಭಿಮಾನ ಇಟ್ಟುಕೊಂಡಿದ್ದ ದಿವಾಕರಣ್ಣ ಓಡೋಡಿ ಬಂದು ಇವನ ಸ್ಥಿತಿಯನ್ನು ಕಂಡು “ಇವನಿಗೆ ಯಾವುದೋ ದೆವ್ವದ ಕಾಟ ಹಿಡಿದಿದೆ” ಎಂದು ನಿರ್ಧರಿಸಿದನು. ಮುಖಕ್ಕೆ ನೀರು ಹೊಡೆದು, ರಮೇಶನ ಹಣೆ, ಎದೆಬದಿಯೆಲ್ಲಾ ಒರೆಸಿ, ತಿಕ್ಕಿ ಸಮಧಾನದಿಂದ “ ಈ ಹುಡುಗನ ಮೇಲೆ ಬಂದಿರುವ ನೀನಾರು? ಏನು ಬೇಕಿತ್ತು ನಿನಗೆ? ಅವನ ಬಾಳನ್ನು ಯಾಕೆ ಹಾಳು ಮಾಡುತ್ತಿದ್ದೀಯಾ? ಇಲ್ಲಿಂದ ಬೇಗ ಹೊರಡು? ಇಲ್ಲವಾದರೆ ಹೇಗೆ ಬಿಡಿಸಬೇಕೋ ನನಗೆ ಗೊತ್ತಿದೆ? ಎಂಬ ಪ್ರಶ್ನೆಗಳ ಜೊತೆಗೆ ಹೆದರಿಕೆಯನ್ನು ಹಾಕಿದನು. ಇದಕ್ಕೆ ಅಡುಗೆ ಮಂಜಣ್ಣನು ತನ್ನ ಅನುಭವಗಳನ್ನು ಸೇರಿಸಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ತೂರಿದನು. “ನಾನು ಜಟಕ, ನನ್ನ ಜಾಗದಲ್ಲಿ ನೀವಿದ್ದೀರಿ… ನನಗೆ ಬಲಿ ಕೊಡಬೇಕು. ಇಲ್ಲವಾದರೆ ನಾನು ಸುಮ್ಮನಿರಲ್ಲ… ಉಸ್ಸೊ ಉಸ್ಸೋ, ಊಂ ಊಂ” ಎಂದಿತು. ದಿವಾಕರಣ್ಣನು ತನ್ನ ಮನೆಯಲ್ಲಿದ್ದ ಚೌಡೇಶ್ವರಿ ದೇವಸ್ಥಾನದ ಕುಂಕುಮ ಹಚ್ಚಿದನು. ಆಮೇಲೆ ಮುಖಕ್ಕೆ ಜೋರಾಗಿ ನೀರು ಹೊಡೆದು ಯಥಾಸ್ಥಿತಿಗೆ ಬರುವಂತೆ ಮಾಡಿದನು.

14 ರ ರಮೇಶನ ಮೈಮೇಲೆ ದೆವ್ವ ಬರುವುದು ಹಾಸ್ಟೆಲ್‍ನಲ್ಲಿ ಜೋರಾದ ಸುದ್ದಿಯಾಯಿತು. ಅವನ ಬಗ್ಗೆ ಹಿರಿಕಿರಿಯರಿಗೆ ಗೌರವ ಇಮ್ಮಡಿಯಾಯಿತು. ಅಡುಗೆಭಟ್ಟರು ಊಟ ಬಡಿಸುವುದರಲ್ಲಿ ಎಲ್ಲರಿಗಿಂತ ಸ್ವಲ್ಪ ಜಾಸ್ತಿಯಾಗಿಯೇ ಹಾಕಲು ಸುರುಮಾಡಿದರು. ಕೊಳವಿ ಮೇಷ್ಟ್ರು, ವಾರ್ಡನ್ ಸಾಹೇಬರು ಅವನಿಗೆ ಕೆಲಸ ಹೇಳುವುದನ್ನು ನಿಲ್ಲಿಸಿದರು. ತಲೆ ಮೇಲೆ ಖಾಯಂ ಆಗಿ ಡಸ್ಟರ್ನಲ್ಲಿ ಹೊಡೆಯುತ್ತಿದ್ದ ವಿಜ್ಞಾನ ಮೇಷ್ಟ್ರು ಹೊಡೆಯುವುದನ್ನು ನಿಲ್ಲಿಸಿದರು. ದಡ್ಡ ಹುಡುಗರಿಗೆ ಗದರಿಸುತ್ತಿದ್ದ ಮೇಷ್ಟ್ರೆಲ್ಲಾ ಇವನ ವಿಚಾರದಲ್ಲಿ ಸುಮ್ಮನಾದರು. ಯಾರಿಗೂ ನೋಟ್ಸ್ ಕೊಡದೇ ಇರುವ ಜಾಣ ಹುಡುಗರು ರಮೇಶ ಕೇಳಿದರೆ ಇಲ್ಲವೆನ್ನದೇ ನೀಡುತ್ತಿದ್ದರು. ಇದೆಲ್ಲವನ್ನು ಸೂಕ್ಷ್ಮವಾಗಿ ನೋಡಿದವನು ಅವನ ಜೊತೆಗಾರ ಸ್ವಾಮಿ.

ಒಂದು ದಿನ ಶಾಲೆಯಲ್ಲಿ ಸ್ವಾಮಿಯೂ ಇದ್ದಕ್ಕಿದ್ದ ಹಾಗೆ ತಲೆತಿರುಗಿದವರು ಬೀಳುವಂತೆ ದಢಾರನೇ ಸ್ಟಾಪ್ ರೂಮಿನಲ್ಲಿ ಬಿದ್ದನು. ಇದನ್ನು ನೋಡುತ್ತಿದ್ದ ಹಾಗೆ ರಮೇಶನು ಬಿದ್ದನು. ಇವರಿಬ್ಬರನ್ನು ಸುಮ್ಮನಿರಿಸಲು ಹೋದ ನಾವೆಲ್ಲಾ ಹಿಡಿಯಲು ಹೋಗಿ ಮುಖ ಮುಸುಡಿ ಎನ್ನದೆ ಒದೆಯನ್ನು ಸರಿಯಾಗಿ ತಿಂದೆವು. ತರಗತಿಯಲ್ಲಿ ಯಾವಾಗಲೂ ರಮೇಶನಿಗೆ ಬೈಯುತ್ತಿದ್ದ ವಿಜ್ಞಾನದ ಮೇಷ್ಟ್ರು ಕೃಷ್ಣ ಸರ್ ಹಿಡಿಯುವ ಪ್ರಯೋಗಕ್ಕೆ ಹೋದಾಗ ರಮೇಶನು ಜಾಡಿಸಿ ಒದ್ದನು. ಕೃಷ್ಣ ಮೇಷ್ಟ್ರ ಗುಪ್ತಾಂಗಕ್ಕೆ ಬಿದ್ದ ಈ ಒದೆತದಿಂದ ಅಯ್ಯೊಯ್ಯೋ ಎಂದು ಹಿಂದಕ್ಕೆ ಸರಿದರು. ಅವರಿಬ್ಬರನ್ನು ಆ ದಿನ ಹಿಡಿಯಲು ಹೋಗಿ ಒದೆ ತಿನ್ನದ ಪಾಪಿಗಳೇ ಇಲ್ಲ ಎನ್ನಬಹುದು. ಸ್ಕೂಲಿನ ಮುಂಭಾಗದಲ್ಲಿರುವ ನೇರಲು ಮರದ ಕೆಳಗೆ ನೇರ್ಲು ಹಣ್ಣು ಹೆಕ್ಕುತ್ತಿದ್ದ ಇಂಗ್ಲೀಷ್ ಮೇಷ್ಟ್ರು ಲಕ್ಷ್ಮಣ್ ಸರ್ ಮತ್ತು ಹಾಸ್ಟೆಲ್ ನಿಂದ ಅಡುಗೆ ಭಟ್ರು ಹೊನ್ನಪ್ಪಣ್ಣ, ಮಂಜಣ್ಣ ಹಾಗೂ ದಿವಾಕರಣ್ಣ ಈ ಸುದ್ದಿ ಕೇಳಿ ಓಡೋಡಿ ಬಂದರು. ಕುಳ್ಳನೆಯ ದಪ್ಪನೇ ಆಳು ಮಂಜಣ್ಣ, ಎತ್ತರಕ್ಕೆ ಇದ್ದ ಹೊನ್ನಪ್ಪಣ್ಣ ಇವರಿಬ್ಬರನ್ನು ಹಿಡಿದು ಕೂರಿಸಿದರು. ಆಗ ದಿವಾಕರಣ್ಣ ಸ್ವಾಮಿ ಮೇಲೆ ಬಂದ ದೆವ್ವದ ಕುರಿತು “ನೀನಾರು? ಇವನ ಮೇಲೆ ಯಾಕೆ ಬಂದಿದ್ದಿಯಾ? ನಿನಗೆ ಏನು ಬೇಕು? ಎಂಬೆಲ್ಲಾ ಬಾಯಿಪಾಠದ ಪ್ರಶ್ನೆಗಳನ್ನು ಕೇಳಿದನು. ಅದಕ್ಕೆ “ನಾನು ಜಟಕ…ಜಟಕ.. ಉಸ್ಸೋ ಉಸ್ಸೋ… ಆಂ.. ಆಂ… ಊಂ…ಊಂ” ಎನ್ನುತ್ತಾ ತನ್ನ ಕೈಗಳಿಂದ ಒಂದು ಬಾರಿ ಎರಡು ಬೆರಳನ್ನು ತೋರಿಸಿತು. ಇನ್ನೊಂದು ಭಾರಿ ನಾಲ್ಕು ಬೆರಳನ್ನು ತೋರಿಸಿತು. ಆಗ ದಿವಾಕರಣ್ಣ “ಓಹೋ ನಿನಗೆ ಎರಡು ಕೊಂಬಿನದು, ನಾಲ್ಕು ಕಾಲಿನದು ಬೇಕಾ?” ಎಂದಾಗ, ಹೂಂ.. ಹೂಂ ಎಂದಿತು. ಹಾಗೆಯೇ ರಮೇಶನು ತನ್ನೆರಡು ಬೆರಳನ್ನು ಮತ್ತೆ ಮತ್ತೆ ತೋರಿಸುತ್ತಿದ್ದನು. ಇದನ್ನು ನೋಡಿದ ಮಂಜಣ್ಣ ನಿನಗೆ ಎರಡು ಕಾಲಿನದು ಬೇಕಾ? ಎಂದಾಗ ಊಂ ಊಂ ಎಂದಿತು. ಅಂತೂ ಈ ಇಬ್ಬರ ಮೇಲೆ ಬಂದ ಜಟಕಾ ದೆವ್ವವೂ ತನ್ನ ಬೇಡಿಕೆಯನ್ನು ಇಬ್ಬರಿಂದ ಹೇಳಿಸಿತು. ಕೊನೆಗೆ ಪದೇ ಪದೇ ನೀರು ಹೊಡೆದದ್ದರ ಪರಿಣಾಮ ಸ್ಟಾಪ್ ರೂಮೆಲ್ಲಾ ನೀರಾಗಿ, ರಮೇಶ ಮತ್ತು ಸ್ವಾಮಿ ಕೂತ ಜಾಗವೆಲ್ಲಾ ನೀರಾಗಿ ಬಿಟ್ಟಿತು. ಅವರ ಪ್ಯಾಂಟು, ಚಡ್ಡಿ, ಅಂಗಿಯೆಲ್ಲಾ ನೀರಾದದ್ದರ ಪರಿಣಾಮ ಅವರ ಮೇಲೆ ಬಂದ ದೆವ್ವ ಇಳಿದು, ವಾಸ್ತವ ಸ್ಥಿತಿಗೆ ಬಂದರು. ನಾವೆಲ್ಲಾ ನೀರು ಗುಡಿಸಿ, ಒರೆಸಿ, ಶುದ್ಧಿ ಮಾಡುವ ಹೊತ್ತಿಗೆ ಸಂಜೆಯ ಬೆಲ್ಲು ಢಣ ಢಣ ಬಾರಿಸಿತು.

ಹಾಸ್ಟೆಲ್‍ನಲ್ಲಿರುವ ರಮೇಶ ಮತ್ತು ಸ್ವಾಮಿಗೆ ದೆವ್ವ ಬರೋ ಸುದ್ದಿ ಅಲ್ಲಿಯ ಹುಡುಗರ ಬಾಯಿಗೆ ಗುಸುಗುಸು ಸುದ್ದಿಯಾಯಿತು. ಎಲ್ಲರಲ್ಲೂ ಹೇಳಿಕೊಳ್ಳಲಾರದ ಭಯದ ವಿಷಯ ಅದಾಗಿತ್ತು. ರಮೇಶ ಯಾವಾಗಲೂ ಗೆಳೆಯ ಧರ್ಮಪ್ಪನ ಸುತ್ತು ಬರುವುದು ಸಹಜವಾಗಿತ್ತು. ಪಕ್ಕದಲ್ಲಿರುವ ಧರ್ಮಪ್ಪನಿಗೆ ದೆವ್ವದ ಕಾಟವೂ ಸಮೂಹ ಸನ್ನಿಯಾಗಿ ಅಂಟಿಕೊಂಡು ಬಿಟ್ಟಿತು. “ನನ್ನ ಮಗ ಮೂರು ಹೊಳೆ ದಾಟಿ ಬರಬೇಕು, ಅವನಿಗೊಂದು ಹಾಸ್ಟೆಲ್‌ ಸೀಟ್‌ ನ್ನು ಕೊಡಿ” ಅಂತ ವಾರ್ಡನ್‌ನಿಂದ ಕಾಡಿಬೇಡಿ ಪಡೆದವನು ಅವರಪ್ಪ. ಅದರಂತೆ ಶಾಲೆಯಲ್ಲಿ ಎಲ್ಲರಿಗಿಂತ ಬದ್ಧಿವಂತನೂ ಸಂವೇದನಾಶೀಲನೂ ಆಗಿ ತನ್ನ ಒಳ್ಳೆಯ ನಡತೆಯಿಂದ ಗುರುತಿಸಿಕೊಂಡವನು ಧರ್ಮಪ್ಪ. ಹೀಗಿದ್ದವನೂ ಇದ್ದಕ್ಕಿಂದ ಹಾಗೆ ಮಂಕಾಗ ತೊಡಗಿದನು. ಎಲ್ಲರೂ “ಚೆನ್ನಾಗಿದ್ನಲಾ ಇವನೇಗೇನಾಯ್ತೋ ಮರಾಯ” ಅನ್ನುವವರೆ ಜಾಸ್ತಿಯಾಗ ತೊಡಗಿದರು. ಇವನ ಪ್ರತಿಭೆಯ ಕಾರಣದಿಂದ ಹುಡುಗರಿಂದ ಹಿಡಿದು ಹುಡುಗಿಯರಿಗೆ, ಮೇಷ್ಟ್ರಿಗೆ, ಹಾಸ್ಟೆಲ್ಲಿನ ಮನೆಮಾಲಿಕ ದಿವಾಕರಣ್ಣನಿಗೆ, ಮತ್ತು ವಾರ್ಡನ್‍ಗೆ ವಿಶೇಷ ಅಭಿಮಾನವಿತ್ತು. ಇದ್ದಕ್ಕಿದ್ದ ಹಾಗೇ ಧರ್ಮಪ್ಪ ಬೀಳುವುದನ್ನು ಕಂಡ ಮೇಷ್ಟ್ರು ಕೂಡ ಭಯ ಬಿದ್ದರು. ದೆವ್ವದ ಬಗ್ಗೆ ತಾತ್ಸಾರ ಮನೋಭಾವವಿದ್ದ, ನಂಬಿಕೆ ಇಲ್ಲದ ಎಲ್ಲರಿಗೂ ನಂಬುವ ಹಾಗೆ ಇವನಿಂದ ಆಯಿತು. ರಮೇಶ ಮತ್ತು ಸ್ವಾಮಿಯ ದೆವ್ವದ ಕಾಟವು ಯಾರಿಗೂ ಭಯವನ್ನು ಉಂಟುಮಾಡಿರಲಿಲ್ಲ. ಆದರೆ ಶಾಲೆಯಲ್ಲಿ ಪ್ರತಿಭಾವಂತನೂ, ಬುದ್ಧಿವಂತನೂ ಎನಿಸಿಕೊಂಡ ಧರ್ಮನಿಗೆ ಬಂದಿರುವ ದೆವ್ವದ ಬಗ್ಗೆ ಬಿಸಿಬಿಸಿ ಚರ್ಚೆಯಾಗತೊಡಗಿತು.

ಈ ಸುದ್ದಿ ಕೇಳಿ ಆಘಾತಕ್ಕೆ ಒಳಗಾದ ಧರ್ಮಪ್ಪನ ಅಪ್ಪನೂ ಕೋಡೂರಿನಿಂದ ಹದಿನೈದು ಕಿಲೋ ಮೀಟರ್ ದೂರದ ತಮ್ಮೂರು ಹರ್ದೂರಿನಿಂದ ಓಡೋಡಿ ಬಂದರು. ಗಾಬರಿಬಿದ್ದು ಬಂದವರಿಗೆ ಮೊದಲು ಸಿಕ್ಕಿದ್ದು ದಿವಾಕರಣ್ಣ. “ಏನಾಯ್ತು ನನ್ನ ಮಗನಿಗೆ, ಅವನಿಗೆ ಯಾವಾಗ್ಲೂ ಹಿಂಗಾಗಿಲ್ಲ. ಇಲ್ಲೇನಾದ್ರೂ ತೊಂದ್ರೆ ತಾಪತ್ರಯ ಇತ್ತೋ, ಯಂಥಾ ಮರಾಯ್ರೆ. ನನ್ನ ಮಗ ಜಾಣ ಇದಾನೆ, ಅವನಿಗೆಂಥಾ ಪಿಶಾಚಿ ದಾರಿಯಲ್ಲಿ ಬರ್ವಾಗ ಅಂಟ್ತೋ ಯಂಥೋದೊ” ಹೀಗೆ ಏನೆಲ್ಲಾ ತಮ್ಮಗನ್ನಿಸಿದ್ದನ್ನು ಒಂದೇ ಉಸಿರಿಗೆ ನೋವಿನಿಂದಲೇ ಹೇಳಿಕೊಂಡರು. ಅದಕ್ಕೆ ದಿವಾಕರಣ್ಣ “ಹೆದ್ರು ಬೇಡಿ, ಅವನಿಗೆಂಥಾ ದೆವ್ವ ಅಂಟಿದ್ರು ನಾನು ಬಿಡಿಸ್ಕಂಡು ಬತ್ತೀನಿ. ಅವನ್ನ ಹಾಸ್ಟೆಲ್ಲಿಂದ ಬಿಡಿಸ್ಕಂಡು ಹೋಗಿಬಿಟ್ಟೀರಾ ಮತ್ತೆ. ಶಾಲೆಯಲ್ಲಿ ಓದೋದ್ರಲ್ಲಿ ಅವನೇ ಪಸ್ಟು, ನಾನು ನಿಮ್ಮ ಜೊತೆ ಇರ್ತೀನಿ ನಾಯ್ಕ್ರೆ” ಎಂಬ ಧೈರ್ಯದ ಮಾತುಗಳನ್ನಾಡಿ ತಮ್ಮ ಮನೆಯಲ್ಲಿ ಕೂರಿಸಿ ಕೊಂಡಿದ್ದರು. ಶಾಲೆ ಬಿಟ್ಟು ಬಂದಮೇಲೆ ನಾವೆಲ್ಲಾ ಗುಡ್ಡದ ಸರಕ್ಕೆ ಹೋಗಿ ವಾಪಾಸ್ಸು ಬಂದು ನೋಡಿದಾಗ ಅವರಪ್ಪ ಕಾಯ್ತಾ ಇದ್ರು.  ಮಗನ್ನ ನೋಡಿ ಕಣ್ಣೀರಾದರು. “ಎಂದೂ ಇಲ್ಲದ್ದು ಇವಾಗ ಯಾಕೆ ಬಂತು ಮಗನೇ ನಿನಗೆ. ಜೀವ ಇದ್ರೆ ಬೆಲ್ಲ ಬೇಡ್ಕಂಡು ಬದುಕಬಹುದು’ ಬಾ ಮಗ ಮನೆಗೆ ಹೋಗಾನ. ಇರೋದೊಂದು ಮೆಟ್ಟು ಆಸ್ತಿಯಲ್ಲಿಯೇ ಬದುಕ್ಬಹುದು. ಈ ಶಾಲಿಯೂ ಬೇಡ, ಪಾಲಿಯೂ ಬೇಡ.. ನೀನಿದ್ರೆ ಎಲ್ಲವೂ ಇರ್ತೈತೆ.. ಬಾ ಹೋಗಾನ” ಎಂದೂ ಮಗನನ್ನು ಹಠಕ್ಕ ಬಿದ್ದಂತೆ ಕರೆದುಕೊಂಡು ಹೋಗುವ ತಯಾರಿಯಲಿದ್ದರು. ಅಷ್ಟೊತ್ತಿಗೆ ವಾರ್ಡನ್ನು ಮತ್ತು ವಿಜ್ಞಾನ ಮೇಷ್ಟ್ರು ಕೃಷ್ಣ ಸರ್ ಎಲ್ಲರೂ ಬಂದು ಅವರಪ್ಪನಿಗೆ ಸಮಾಧಾನ ಹೇಳಿದರು. “ಇದರ ಬಗ್ಗೆ ಹೆದರ್ಕೋ ಬೇಡಿ, ನಿಮ್ಮ ಜೊತೆ ನಾವಿದ್ದೇವೆ” ಅನ್ನುವ ಧೈರ್ಯದ ಮಾತುಗಳಿಗೆ ಅವರು ಸುಮ್ಮನಾದರು. ಆದರೆ ಮಗನನ್ನು ಊರಿಗೆ ಕರೆದುಕೊಂಡು ಹೋಗಿ, ಅವನನ್ನು ಎರಡು ದಿನ ಬಿಟ್ಟು ಕಳಿಸ್ತೀನಿ ಅನ್ನೋ ಮಾತಿಗೆ ವಾರ್ಡನ್ನು ಒಪ್ಪಿ ಕಳಿಸಿದರು.

(ಮುಂದಿನ ಭಾಗ ನಾಳೆ ಪ್ರಕಟವಾಗಲಿದೆ)

ಡಾ. ಅಣ್ಣಪ್ಪ ಎನ್‌ ಮಳೀಮಠ್‌

ಸಹ ಪ್ರಾಧ್ಯಾಪಕರು.

ಇದನ್ನೂ ಓದಿ- ಬಿಜೆಪಿಯಲ್ಲಿ ಗದ್ದುಗೆಗೆ ಗುದ್ದಾಟ; ವಿಜಯೇಂದ್ರ, ಶ್ರೀರಾಮುಲುಗೆ ಪರದಾಟ!

More articles

Latest article