ಮುಂಬೈ: ಖ್ಯಾತ ಬಾಲಿವುಡ್ ನಟ ಸೈಫ್ ಆಲಿ ಖಾನ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಆರೋಪಿಯನ್ನು ಮತ್ತೆ ಅವರ ಮನೆಗೆ ಕರೆತಂದು ಘಟನೆಯನ್ನು ಮರುಸೃಷ್ಟಿ ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬಂಧಿತ ಆರೋಪಿಯನ್ನು ನ್ಯಾಯಾಲಯ ಐದು ದಿನ ಪೊಲೀಸರ ವಶಕ್ಕೆ ನೀಡಿದೆ.
ಹಲ್ಲೆ ನಡೆಸಿದ ಆರೋಪಿ ಬಾಂಗ್ಲಾದೇಶದ ಪ್ರಜೆ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ತಿಳಿದು ಬಂದಿದೆ. ಈತ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಬದಲಿಸಿಕೊಂಡಿದ್ದ. ಸೈಫ್ ಆಲಿ ಖಾನ್ ಅವರ ನಿವಾಸಕ್ಕೆ ಶೆಹಜಾದ್ ಕಳ್ಳತನದ ಉದ್ದೇಶದಿಂದ ಜನವರಿ 16ರ ತಡರಾತ್ರಿ ಮನೆಗೆ ಪ್ರವೇಶಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಸೈಫ್ ಅವರ ಸದ್ಗುರು ಶರಣ್ ಅವರ ಅಪಾರ್ಟ್ಮೆಂಟ್ಗೆ ಕರೆತಂದು ಘಟನೆಯನ್ನು ಮರುಸೃಷ್ಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತನ್ನ ಮನೆಗೆ ನುಗ್ಗಿದ್ದ ಮೊಹಮ್ಮದ್ನನ್ನು ಸೈಫ್ ಅವರು ಹಿಡಿದುಕೊಳ್ಳಲು ಪ್ರಯತ್ನಿಸಿದ್ದರು. ಆಗ ಮೊಹಮ್ಮದ್, ಸೈಫ್ ಅವರಿಗೆ ಚಾಕುವಿನಿಂದ ಐದಾರು ಕಡೆಗೆ ಇರಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಾಯದಿಂದ ಪಾರಾಗಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಮೊಹಮ್ಮದ್ ಬೆಳಿಗ್ಗೆ 7 ಗಂಟೆಯವರೆಗೆ ಬಾಂದ್ರಾ ಪಶ್ಚಿಮದ ಪಟವರ್ಧನ ಗಾರ್ಡನ್ ಬಸ್ ನಿಲ್ದಾಣದಲ್ಲಿ ನಿದ್ರಿಸಿದ್ದ. ನಂತರ ರೈಲಿನ ಮೂಲಕ ವರ್ಲಿ ತಲುಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಹಲ್ಲೆ ಮಾಡಿದ್ದು ಬಾಲಿವುಡ್ ನಟ ಸೈಫ್ ಅವರ ಮೇಲೆ ಎನ್ನುವುದು ಹಲ್ಲೆಕೋರನಿಗೆ ಗೊತ್ತೇ ಇರಲಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ಗಳನ್ನು ಗಮನಿಸಿದ ನಂತರವೇ ಅವನಿಗೆ ಸತ್ಯ ತಿಳಿದು ಬಂದಿತ್ತು. ಆದರೆಈತ ಯಾವ ಉದ್ದೇಶದಿಂದ ಸೈಫ್ ಮನೆಗೆ ನುಗ್ಗಿದ್ದ ಎನ್ನುವುದು ಇದುವರೆಗೂ ತಿಳಿದು ಬಂದಿಲ್ಲ. ನಿಖರ ಕಾರಣವನ್ನು ಪತ್ತೆ ಹೆಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.