ಮತೀಯವಾದಿ ಬಿಜೆಪಿ ಎದುರಿಸಲೆಂದೇ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ ಆಯೋಜನೆ: ಸುರ್ಜೇವಾಲ

Most read

ಬೆಳಗಾವಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಸಮಾವೇಶಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ  ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಎಂಬ ರಾಷ್ಟ್ರೀಯ ಮಟ್ಟದ ಸಮಾವೇಶ ಆಯೋಜಿಸಿದೆ. ಜನವರಿ 21 ರಂದು ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಈ ಸಮಾವೇಶ ನಡೆಯಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದ ಸಿದ್ದತೆಗಳನ್ನು ಪರಿಶೀಲಿಸಿದರು.

ನಂತರ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ಈ ಬೃಹತ್‌ ಸಮಾವೇಶದಲ್ಲಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗಾವಿಯ ಐತಿಹಾಸಿಕ ಮಹತ್ವ ಕುರಿತು ಮಾತನಾಡಿದ ಅವರು, ಬೆಳಗಾವಿ ನಗರವು ದಶಕಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಮಹಾತ್ಮಾ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಸಮಾವೇಶ ಇದಾಗಿದೆ. ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಮತ್ತು ಸರೋಜಿನಿ ನಾಯ್ಡು ಮುಂತಾದ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂದರು.

ನಂತರ  ಸುರ್ಜೇವಾಲ ಅವರು , ಡಿಸೆಂಬರ್ 17 ರಂದು ಸಂಸತ್ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಶಾ ಅವರು ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅವಮಾನಿಸಿದ್ದು ಮಾತ್ರವಲ್ಲದೆ ಅಂಬೇಡ್ಕರ್ ಅವರ ತತ್ವಗಳನ್ನು ನಂಬುವ ಜನರನ್ನು ಕುರಿತೂ ಅಪಹಾಸ್ಯ ಮಾಡಿದ್ದಾರೆ. ಬಿಜೆಪಿ ಪದೇ ಪದೇ ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಮತ್ತು ಜನರ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುತ್ತಿದೆ. ಇಂತಹ ದಾಳಿಗಳನ್ನು ಎದುರಿಸಲು ಮತ್ತು ಬಿಜೆಪಿಯಂತಹ ಫ್ಯಾಸಿಸ್ಟ್ ಶಕ್ತಿಗಳ ಹಿಡಿತದಿಂದ ಸಂವಿಧಾನವನ್ನು ರಕ್ಷಿಸಲೆಂದೇ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದೇ ಜ. 27 ರಂದು ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಧ್ಯಪ್ರದೇಶದ ಮೊವ್‌ನಲ್ಲಿಯೂ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ ನಡೆಯಲಿದೆ. ಏಕಕಾಲದಲ್ಲಿ ಬಿಜೆಪಿ, ಅಂಬೇಡ್ಕರ್ ಅವರನ್ನು ಅಪಮಾನಿಸುತ್ತಾ ಯುವಕರು, ಹಿಂದುಳಿದವರು, ಮಹಿಳೆಯರು ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದೂ ಅವರು ಆರೋಪಿಸಿದರು.

ಕಳೆದ ವರ್ಷ ಡಿಸೆಂಬರ್ 27 ರಂದು ಈ ಸಮಾವೇಶ ನಿಗದಿಯಾಗಿತ್ತು.  ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಸಮಾವೇಶವನ್ನು ಮುಂದೂಡಲಾಗಿತ್ತು.  ಮುಂದೂಡಲಾಗಿತ್ತು.  

More articles

Latest article