ನಕ್ಸಲರು ಮುಖ್ಯವಾಹಿನಿಗೆ ಬಂದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿದಿಲ್ಲ. ಶರಣಾದ ಸಂಗಾತಿಗಳು ಜೈಲುಗಳಲ್ಲಿ ಕೊಳೆಯದಂತೆ, ಕೋರ್ಟು-ಜೈಲುಗಳ ನಡುವೆಯೆ ಓಡಾಡುತ್ತಾ ಹೈರಾಣಾಗದಂತೆ ನೋಡಿಕೊಳ್ಳಬೇಕು. ಕೊಟ್ಟ ಮಾತಿನಂತೆ ಶರಣಾಗತಿಯಾದ ಸಂಗಾತಿಗಳಿಗೆ ಪರಿಹಾರ ನೆರವುಗಳು ದಕ್ಕಲಿ. ಅದೇ ಕಾಲಕ್ಕೆ ಮುಖ್ಯಮಂತ್ರಿಗಳು ಮಲೆನಾಡಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿಯೂ ಇಚ್ಛಾಶಕ್ತಿಯನ್ನು ತೋರಲಿ – ಎನ್.ರವಿಕುಮಾರ್ ಟೆಲೆಕ್ಸ್, ಪತ್ರಕರ್ತರು.
ಕರ್ನಾಟಕದ ಪಶ್ಚಿಮಘಟ್ಟದ ಹಸಿರು ಕಾನನದ ಮಾವೋ ಚಳವಳಿ ಇನ್ನು ಇತಿಹಾಸ.
“ಈ ಭದ್ರ ಘಾಟಿ ಕಬ್ಬಿಣದ ಗೋಡೆಯೇ ಎನ್ನುವುದು ವ್ಯರ್ಥ ಮಾತು
ಸ್ಥಿರ ಹೆಜ್ಜೆ ಹಾಕುತ್ತಾ ದಾಟುತ್ತಲಿದ್ದೇವೆ.
ನಾವದರ ಶಿಖರ
ದಾಟುತ್ತಲಿದ್ದೇವೆ ನಾವದರ ತುದಿಯ
ಉರುಳುವೀ ಬೆಟ್ಟಗಳು ಸಮುದ್ರ ನೀಲಿ
ಅಸ್ತಮಾನದ ಸೂರ್ಯ ರಕ್ತಗೆಂಪು..”
ಸಮಾನತೆಯ ಕ್ರಾಂತಿಯ ಕನಸುಗಾರ ಮಾವೋ ತ್ಸೆ ತುಂಗ್ ಬರೆದ ಈ ಕವಿತೆ ಇನ್ನು ಕರ್ನಾಟಕದ ಪಶ್ಚಿಮಘಟ್ಟಗಳ ದಟ್ಟ ಅರಣ್ಯದಲ್ಲಿ ಮಾರ್ದನಿಸದು. ಹಸಿರು ಮುಕ್ಕಳಿಸುವ ಕಾನನದಲ್ಲಿ ಕೆಂಪು ಹಣತೆಯ ಗೂಡು ಕಟ್ಟಿಕೊಂಡ ಕಾಡು ಹಕ್ಕಿಗಳ ಕ್ರಾಂತಿಯ ಗೀತೆಯು ಗಮ್ಯ ತಲುಪುವ ಹಾದಿಯಲ್ಲೆ ಚರಮಗೀತೆಯಾಗಿ ಪತನಗೊಂಡು ಇತಿಹಾಸದ ಪುಟ ಸೇರಿದ್ದು ಕಾಲದ ಮಹಿಮೆ ಎನ್ನಬಹುದು.
ಸರಳವಾಗಿ ವಿವರಿಸಬೇಕೆಂದರೆ ಮಲೆನಾಡಿನ ತೋಟಗಳಲ್ಲಿ, ಎಸ್ಟೇಟ್‍ಗಳಲ್ಲಿ, ಭೂ ಮಾಲೀಕರ ಹೊಲ-ಗದ್ದೆಗಳಲ್ಲಿ ದುಡಿಯುವ ಕೃಷಿ ಕೂಲಿಕಾರ್ಮಿಕರಿಗೆ ನ್ಯಾಯಬದ್ಧವಾದ ಕೂಲಿ ಕೊಡಬೇಕು. ನಿರ್ಗತಿಕ ಕುಟುಂಬಗಳಿಗೆ ಭೂಮಿ, ಕಾಡಂಚಿನ ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ, ಸಾರಿಗೆ ಸಂಪರ್ಕ, ಶಾಲೆಗಳು ಬೇಕೆಂಬ ಬೇಡಿಕೆಗಳಿದ್ದವು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯ ಸಾಮ್ರಾಜ್ಯಶಾಹಿ ಧೋರಣೆಯ ಆಡಳಿತದಿಂದ ಮುಕ್ತಿ, ನೆಲ, ಜಲ ಸಂರಕ್ಷಣೆಯಂತಹ ಬೇಡಿಕೆಗಳನ್ನಿಟ್ಟುಕೊಂಡು ಮಲೆನಾಡಿನಲ್ಲಿ ಮಾತು ಸತ್ತವರ ಪಾಲಿನ ಮಾತಾಗಿ ಬಂದ ನಕ್ಸಲ್ ಚಳವಳಿ ಕೇವಲ ಎರಡೂ ಕಾಲು ದಶಕಗಳಲ್ಲಿ ಸಾಧಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.
ಹಾಗಾದರೆ ನಕ್ಸಲ್ ಚಳವಳಿಯಿಂದ ಪ್ರಯೋಜನವೇನು ಆಗಲೇ ಇಲ್ಲವಾ? ಎಂದು ಪ್ರಶ್ನೆ ಕೇಳುವವರಿಗೆ ಉತ್ತರವೂ ಇದೆ. ನಕ್ಸಲರು ಬರುವ ಮುಂಚೆ ಮಲೆನಾಡಿನ ಹಳ್ಳಿಗಳು, ಜನಸಾಮಾನ್ಯರು, ಆದಿವಾಸಿಗಳು ಮೂಕ ಎತ್ತಿನಂತೆ ಬದುಕುತ್ತಿದ್ದರು. ರಾಜಕೀಯ ವ್ಯವಸ್ಥೆ ಈ ಭಾಗದ ಜನರ ಬದುಕಿನ ಕಷ್ಟಗಳಿಗೆ ಕಿವುಡಾಗಿತ್ತು. ಭೂಮಿ, ಕುಡಿಯುವ ನೀರು, ವಿದ್ಯುತ್, ಸಾರಿಗೆ, ಶಿಕ್ಷಣದಂತಹ ಅತ್ಯವಶ್ಯಕ ಮೂಲಭೂತ ಸಮಸ್ಯೆಗಳು ಈ ಜನರನ್ನು ಪರಿಪರಿಯಾಗಿ ಬಾಧಿಸುತ್ತಿದ್ದವು. ಭೂ ಮಾಲೀಕರು, ಸರ್ಕಾರಿ ಪ್ರಾಯೋಜಿತ ಸಾಮ್ರಾಜ್ಯಶಾಹಿ ಶಕ್ತಿಗಳು ಅರಣ್ಯ ಸಂಪತ್ತನ್ನು ಕಬಳಿಸುವ ಹುನ್ನಾರಗಳನ್ನು ನಿರ್ಭಯವಾಗಿ ಅನುಷ್ಠಾನ ಗೊಳಿಸುತ್ತಿದ್ದವು. ನಕ್ಸಲ್ ಚಳವಳಿ ಇವೆಲ್ಲದಕ್ಕೂ ಕನ್ನಡಿ ಹಿಡಿದು ಆಳುವವರ ಮುಖಕ್ಕೆ ರಾಚಿತು. ನಕ್ಸಲರು ಈ ಕಾಡಿಗೆ ಬರದೇ ಇದ್ದಿದ್ದರೆ ಕಾಡಂಚಿನ ಜನರ ಬದುಕು ಸ್ವಲ್ಪವೂ ಸುಧಾರಿಸುವ ಮಾತಿರಲಿ, ಅಲ್ಲಿಗೆ ಸರ್ಕಾರಗಳು ತಲುಪುತ್ತಲೇ ಇರುತ್ತಿರಲಿಲ್ಲ ಎನ್ನುವುದಂತೂ ಖಚಿತ.
ಸಮಾಜವಾದಿ ಹೋರಾಟದಿಂದಲೆ ರಾಜಕೀಯ ಅಧಿಕಾರ ಸೌಧದ ಮೆಟ್ಟಿಲೇರಿದ ಕಾಗೋಡು ತಿಮ್ಮಪ್ಪನವರು ಅದೊಂದು ದಿನ ‘ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಬಂದೂಕು ಹಿಡಿದು ನಕ್ಸಲರಾಗಬೇಕಾ?’ ಎಂದು ವಿಧಾನಸಭೆ ಸ್ಪೀಕರ್ ಪೀಠದಿಂದ ಸರ್ಕಾರಕ್ಕೆ ಬೀಸಿದ ಚಾಟಿಯಿಂದ ದರ್ಪ ಚರ್ಮದ ಆಳುವವರ ಧೋರಣೆಯನ್ನು ಭರ್ಜಿಯಿಂದ ತಿವಿದಿದ್ದರು. ಅವರ ಮಾತು ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಹತಾಶ ವ್ಯಕ್ತಿಯೊಬ್ಬ ಅಂತಿಮವಾಗಿ ಕೈಗೊಳ್ಳುವ ಶಸ್ತ್ರಸಜ್ಜಿತ ಬಂಡಾಯಕ್ಕಿಳಿಯುವ ಸೂಚನೆಯನ್ನು ನೀಡಿದಂತಿತ್ತು. ಈ ಮೂಲಕ ನಕ್ಸಲ್ ಚಳವಳಿಯ ತೀವ್ರತೆ ಮತ್ತು ಪರಿಣಾಮದ ಬಗ್ಗೆ ಎಚ್ಚರಿಸಿದ್ದರು.
ಕಳೆದ ಇಪ್ಪತ್ತು ವರ್ಷಗಳಲ್ಲಿ ಮಲೆನಾಡಿನ ಜನರ ಕಷ್ಟಗಳಿಗೆ ಸರ್ಕಾರಗಳು ಕಿರುಗಣ್ಣನ್ನಾದರೂ ಹಾಯಿಸಿವೆ ಎನ್ನುವುದಾದರೆ ಅದು ನಕ್ಸಲರ ಕಾರಣಕ್ಕೆ ಎಂಬುದನ್ನು ನಿರ್ಧಿಷ್ಟವಾಗಿ ಗುರುತಿಸಬಹುದು. 2004 -05 ರ ಹೊತ್ತಿನಲ್ಲಿ ಸರ್ಕಾರವೇ ನಿಯೋಜಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಅವರು ಮಲೆನಾಡಿನಲ್ಲಿ ನಕ್ಸಲ್ ಚಳವಳಿಗೆ ‘ಸಮಾಜೋ ಆರ್ಥಿಕ’ ಸಮಸ್ಯೆಗಳೇ ಕಾರಣ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಿ ಈ ಹಳ್ಳಿಗಳ ಮೂಲಭೂತ ಸೌಕರ್ಯಗಳಿಗಾಗಿ 66 ಕೋ ರೂ.ಗಳ ವಿನಿಯೋಗಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ನಯಾಪೈಸೆ ಬಿಡುಗಡೆ ಆಗಲಿಲ್ಲ. ವರದಿ ಮೂಲೆ ಸೇರಿತು.
ಸರ್ಕಾರ ಮಾತ್ರ ನಕ್ಸಲರು ಸುವರ್ಣ ರೇಖೆಯನ್ನು ದಾಟಬಾರದು ಎಂದು ತಾಕೀತು ಮಾಡುವ ಮೂಲಕ ಅಧಿಕಾರದ ಅಹಂಕಾರವನ್ನು ಪ್ರದರ್ಶಿಸಿತು. ಧರಂಸಿಂಗ್ ಸರ್ಕಾರ ನಕ್ಸಲ್ ಸರಂಡರ್ ಪ್ಯಾಕೇಜ್ ಘೋಷಿಸಿದರೂ 2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಬರುವವರೆಗೂ ಯಾವ ಸರ್ಕಾರಗಳೂ ಅದನ್ನು ಅನುಷ್ಠಾನ ಗೊಳಿಸುವಲ್ಲಿ ಇಚ್ಛಾಶಕ್ತಿ ತೋರಿಸಲಿಲ್ಲ. ನಕ್ಸಲ್, ಪೊಲೀಸರು, ಅಮಾಯಕ ಗ್ರಾಮಸ್ಥರ ಹೆಣಗಳ ಮೇಲೆ ರಾಜ್ಯವಾಳಿದ್ದು ಮಾತ್ರ ಘೋರ ಇತಿಹಾಸ.
23 ವರ್ಷಗಳಲ್ಲಿ ತುಂಗಾ, ಭದ್ರಾ, ಸೀತಾ, ನೇತ್ರಾವತಿ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಜೊತೆಗೆ ನೆತ್ತರವೂ……, ಶಸ್ತ್ರಸಜ್ಜಿತ ನಕ್ಸಲ್ ಚಳವಳಿಯನ್ನು ಮಾತ್ರ ಸಮಾಜವಾದಿ ನೆಲ ಒಪ್ಪಿಕೊಳ್ಳಲಿಲ್ಲ. ಭೂಮಾಲೀಕರ ವಿರುದ್ಧ ನಡೆದ ಅಹಿಂಸಾತ್ಮಕ ಗೇಣಿಹೋರಾಟ (ಕಾಗೋಡು ಚಳವಳಿ)ವನ್ನು ಎಲ್ಲಾ ಕಾಲಕ್ಕೂ ಜನಪರ ಹೋರಾಟದ ಆದರ್ಶ ಮಾದರಿಯನ್ನಾಗಿ ಧರಿಸಿರುವ ಈ ನೆಲ ಹಿಂಸೆಯ ಸಂಘರ್ಷದ ಕ್ರಾಂತಿಯನ್ನು ತನ್ನೊಳಗೆ ಬಿಟ್ಟುಕೊಳ್ಳಲಿಲ್ಲ. ಒಪ್ಪಿಕೊಳ್ಳಲಿಲ್ಲ. ಇದು ನಕ್ಸಲ್ ಚಳವಳಿಗೆ ಆದ ಆರಂಭಿಕ ಪೆಟ್ಟು ಎನ್ನಬಹುದು.
ಎಂದಿನಂತೆ ಪ್ರಭುತ್ವ ಕೂಡ ಆಕ್ರಮಣಕಾರಿ ಧೋರಣೆ ತಳೆದಿದ್ದರಿಂದ ನಕ್ಸಲ್ ಚಳವಳಿಯಲ್ಲಿದ್ದ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಇದು ಕೇವಲ ನಕ್ಸಲ್ ಸಂಘಟನೆಗೆ ಆದ ನಷ್ಟ ಎನ್ನುವುದಕ್ಕಿಂತ ಈ ಸಮಾಜಕ್ಕೆ ಆದ ಬಹುದೊಡ್ಡ ನಷ್ಟ ಎಂದು ಯಾರಾದೂ ಭಾವಿಸಿದರೆ ಅದು ತಪ್ಪೇನಲ್ಲ.
ಪಾರ್ವತಿ, ಹಾಜೀಮಾ, ಸಾಕೇತ್ ರಾಜನ್, ಶಿವಲಿಂಗು, ಗೌತಮ್, ದಿನಕರ್, ಅಜಿತ್ ಕುಸುಬಿ, ಉಮೇಶ್ ಬಣಕಲ್, ಪರಮೇಶ್ವರ್, ಮನೋಹರ, ನವೀನ, ಅಭಿಲಾಷ್, ವಸಂತಗೌಡ, ವಿಕ್ರಂಗೌಡ ಎಷ್ಟೊಂದು ಜೀವಗಳನ್ನು ಕಳೆದುಕೊಂಡೆವು. ಪ್ರಭುತ್ವ ಮತ್ತು ಚಳವಳಿಗಾರರ ನಡುವೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಪಾಳೆಯದಲ್ಲಿ ಮಹಾದೇವ ಮಾನೆ, ಗುರುಪ್ರಸಾದ್, ಕೆ ವೆಂಕಟೇಶ್ ಸೇರಿದಂತೆ ಹತ್ತಾರು ಪೊಲೀಸರು ಜೀವ ತೆತ್ತಿದ್ದರು. ಇವರೆಲ್ಲರೂ ಪ್ರಜ್ಞಾಪೂರ್ವಕವಾಗಿ ಜನಪರ ಹೋರಾಟವನ್ನು ಮುನ್ನಡೆಸಲು ಹೊರಟ ಈ ಸಮಾಜದ ಮಾವನ ಸಂಪತ್ತೇ ಆಗಿದ್ದರು ಎನ್ನುವುದನ್ನು ಮರೆಯುವಂತಿಲ್ಲ. ಅವರಿಗೆ ದೀರ್ಘಪಯಣದ ದಾರಿಯ ಗಮ್ಯ ಸ್ಪಷ್ಟವಾಗಿ ಗೊತ್ತಿತು.
ನಕ್ಸಲರನ್ನು ಹತ್ತಿಕ್ಕುವ ಸಂಘರ್ಷದಲ್ಲಿ ರಾಮೇಗೌಡ್ಲು, ಕಾವೇರಪ್ಪ, ಸುಂದರೇಶ್‍ರಂತಹ ಕಾಡುಮಕ್ಕಳು ಬಲಿಯಾದದ್ದು ವಿಪರ್ಯಾಸ. ಹಸಿರು ಕಾನನ ಗುಂಡುಗಳ ಸದ್ದು, ಘಮಟು ವಾಸನೆಯಿಂದ ತತ್ತರಿಸಿದರೆ, ನದಿ, ತೊರೆಗಳು ಕೆಂಪಾಗಿ ಹರಿದ ಜಾಡು ಅಷ್ಟು ಸುಲಭವಾಗಿ ಮಾಸುವುದಿಲ್ಲ.
2013 -18 ರ ನಡುವಿದ್ದ ಮತ್ತು ಇದೀಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕ್ಸಲರನ್ನು ಕಾಡಿನಿಂದ ನಾಡಿನ ಪ್ರಜಾಸತ್ತಾತ್ಮಕ ದಾರಿಗೆ ಬರಮಾಡಿಕೊಳ್ಳುವಲ್ಲಿ ಬದ್ಧತೆಯಿಂದ ನಡೆದುಕೊಂಡಿದ್ದಾರೆ. ಇದರ ಶ್ರೇಯಸ್ಸು ಪಶ್ಚಿಮಘಟ್ಟದ ಕಾಡಿನ ಕೊನೆಯ ನಕ್ಸಲ್ ಹೋರಾಟಗಾರನೂ ಶರಣಾಗಿ ಮುಖ್ಯವಾಹಿನಿಗೆ ಬರಬೇಕೆಂದು ಹೋರಾಡಿದ ಮಾನವೀಯತೆಯ ಪುಡುಬಟ್ಟೆಯ ಇಡುಗಂಟ್ಟಿನಂತಿದ್ದ ಗೌರಿ ಲಂಕೇಶ್ ಅವರಿಗೂ ಸಲ್ಲಲೇಬೇಕು.
ನಕ್ಸಲರು ಆಯ್ದುಕೊಂಡ ಮಾರ್ಗವನ್ನು ಒಪ್ಪಲಾಗದು ನಿಜ, ಆದರೆ ಅವರು ಎತ್ತಿದ ಪ್ರಶ್ನೆಗಳು ಎಲ್ಲಾ ಕಾಲಕ್ಕೂ ಸಮರ್ಥನೀಯವಾದವುಗಳೇ. ನಕ್ಸಲರು ಮುಖ್ಯವಾಹಿನಿಗೆ ಬಂದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿದಿಲ್ಲ. ಶರಣಾದ ಸಂಗಾತಿಗಳು ಜೈಲುಗಳಲ್ಲಿ ಕೊಳೆಯದಂತೆ, ಕೋರ್ಟು-ಜೈಲುಗಳ ನಡುವೆಯೆ ಓಡಾಡುತ್ತಾ ಹೈರಾಣಾಗದಂತೆ ನೋಡಿಕೊಳ್ಳಬೇಕು. ಕೊಟ್ಟ ಮಾತಿನಂತೆ ಶರಣಾಗತಿಯಾದ ಸಂಗಾತಿಗಳಿಗೆ ಪರಿಹಾರ ನೆರವುಗಳು ದಕ್ಕಲಿ. ಅದೇ ಕಾಲಕ್ಕೆ ಮುಖ್ಯಮಂತ್ರಿಗಳು ಮಲೆನಾಡಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿಯೂ ಇಚ್ಛಾಶಕ್ತಿಯನ್ನು ತೋರಬೇಕು. ಜೈಲು ಹಕ್ಕಿಗಳಾಗಿರುವ ಸಂಗಾತಿಗಳು ಬಯಲಿಗೆ ಬಂದು ಹಾಡುವಂತಾದಾಗ ಮಾತ್ರ ಮುಖ್ಯವಾಹಿನಿ ಎನ್ನುವುದು ತನ್ನ ವಿಶ್ವಾಸಪೂರ್ಣ ಗುಣಾತ್ಮಕ ಧೋರಣೆಯಿಂದ ಮುನ್ನಡೆಯಲು ಸಾಧ್ಯ. ಮತ್ತೆ ಕಾಡಿನಲ್ಲಿ ನಕ್ಸಲರು ಹುಟ್ಟದಿರಲಿ.
ವರ್ತಮಾನ ಭಾರತ ಇನ್ನಷ್ಟು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೋಭೆಗೆ ತುತ್ತಾಗುವತ್ತ ತಳ್ಳಲ್ಪಡುತ್ತಿದೆ. ಸುಳ್ಳು, ಹುಸಿ ದೇಶಭಕ್ತಿ, ಧರ್ಮ, ಮತೀಯವಾದ, ಜಾತಿವಾದ, ಕ್ರೋನಿ ಕ್ಯಾಪಿಟಿಲಿಸಂ ನ ಶಕ್ತಿಗಳು ವಿಜೃಂಭಿಸುತ್ತಿವೆ. ಇಂತಹ ಹೊತ್ತಿನಲ್ಲಿ ದೇಶ ಅಹಿಂಸಾತ್ಮಕ ಜನಸಂಗ್ರಾಮವನ್ನು ಕಟ್ಟಲು ಬುದ್ಧ, ಬಸವ ಅಂಬೇಡ್ಕರ್, ಗಾಂಧಿ, ರಾಮಮನೋಹರ ಲೋಹಿಯಾ ಮಾದರಿಗಳನ್ನೆ ಆಯ್ಕೆ ಮಾಡಿಕೊಳ್ಳಬೇಕು. ಈ ದಿಕ್ಕಿನಲ್ಲಿ ನಕ್ಸಲರ ಶರಣಾಗತಿ ಒಂದು ಐತಿಹಾಸಿಕ ಘಟನೆಯಾಗಿ ಕಾಣುತ್ತದೆ.
ಮುಂದಿನ ದಿನಗಳಲ್ಲಿ ಅನೇಕ ಕಾರಣಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇತಿಹಾಸ ಸದಾ ನೆನಪಿಟ್ಟುಕೊಳ್ಳುತ್ತದೆ.
ಅಷ್ಟೇ ಅಲ್ಲ:
ಜನರ ವಿಮೋಚನೆಗಾಗಿ ‘ನದಿಗಳಿಗೆ ಬೆಟ್ಟ ಹತ್ತಿ ಸ್ವರ್ಗ ತಲುಪಿಸಲು ಕಲಿಸೋಣ’ ಎಂದು ಹೊರಟ ಜನಸಂಗ್ರಾಮದ ಸಂಗಾತಿಗಳ ಕೈಗೆ ಸಂವಿಧಾನದ ಹೊತ್ತಿಗೆ ಕೊಟ್ಟು ಕೈ ಹಿಡಿದು ಕಂಡಿದ್ದಕ್ಕೆ ಸಿದ್ದರಾಮಯ್ಯ ಅವರನ್ನು ಇತಿಹಾಸ, ನ್ಯಾಯ ಮತ್ತು ತಾಯ್ತನ ತುಂಬಿದ ನಾಗರೀಕ ಸರ್ಕಾರವೊಂದರ ಮಾದರಿ ನಾಯಕನನ್ನಾಗಿಯೂ ಕಾಣಿಸುತ್ತದೆ.
ಕಣಿವೆಯಲ್ಲೀಗ
ಕೆಂಪು ಹಣತೆಗಳಿಲ್ಲ:
ನೀರವ ಮೌನ
ಹಾಗೆಂದ ಮಾತ್ರಕ್ಕೆ ಬೆಳಕಿಲ್ಲವೆನ್ನುವಂತಿಲ್ಲ
ಸೂರ್ಯ- ಚಂದ್ರ, ತಾರೆಗಳಿವೆ
ಮಿಣುಕು ಹುಳಗಳು ಹೊಳೆಯುತ್ತವೆ
ಮಹಾ ಮುನ್ನಡೆಯ ದಾರಿಗೆ ಬಂದ
ಕೆಂಪು ಹಾಡಿಗೆ ನೀಲಿ ರಾಗಗಳ ಮೆರಗು
ಹಾಡು ಮೊಳಗಲಿ ಗಮ್ಯದೂರಿಗೆ ತಲುಪಲು
ಗುಡಿಸಲಲ್ಲಿ ಕೆಂಪು ಸೂರ್ಯ ಹುಟ್ಟುತ್ತಾನೆ
ತುಂಬಿ ತುಳುಕುವ ಹೊಲ-ಗದ್ದೆಗಳು
ಸ್ಫಟಿಕ ಫಲನದಂತೆ ನದಿಗಳರಿವುದಾ ಕಾಣುವಿರಿ
ಮಸುಕು ಮಸುಕು ಕನಸಿನ ಹಾಗೆ
ಸಂಜೆಗೆ ಗುಲಾಬಿ ಹೂವುಗಳ ಹಿಡಿದು ಮನೆಗೆ ಮುಖ ಮಾಡಿ ಬರುತ್ತಾರೆ.
ಎನ್.ರವಿಕುಮಾರ್ ಟೆಲೆಕ್ಸ್
ಪತ್ರಕರ್ತರು
ಇದನ್ನೂ ಓದಿ- ಸಂಪಾದಕೀಯ | ಪಶ್ಚಿಮ ಘಟ್ಟದಲ್ಲಿ ಮುಗಿದ ರಕ್ತಸಿಕ್ತ ನಕ್ಸಲ್ ಅಧ್ಯಾಯ: ಮುಂದೇನು?