ನುಡಿ ನಮನ
ಸಮುದಾಯಗಳ ಒಡಲಲ್ಲಿ ಹುದುಗಿರುವ ಸಂಕಟದ ಬೇರುಗಳನ್ನು, ಡಿಸೋಜ ಅವರು ಪತ್ತೆಹಚ್ಚಿ ನಿರೂಪಿಸಿದಂತೆ, ಅವರ ಈ ಸಾಮಾಜಿಕ ವಿವೇಕವನ್ನು ಗುರುತಿಸಿ, ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯ ಮೈಲುಗಲ್ಲುಗಳಲ್ಲಿ ಇವರನ್ನು ಗುರುತಿಸುವುದು ಅತ್ಯಂತ ಜರೂರಿನ ಕೆಲಸವಾಗಿದೆ. ಪ್ರಶಸ್ತಿ ಮತ್ತು ಗೌರವಗಳಿಂದ ಮಾನ್ಯತೆಯನ್ನು ತಂದುಕೊಡುವುದಕ್ಕಿಂತ, ಸಾಮಾಜಿಕ ನೆನಪಿನಲ್ಲಿ ನೆಲೆಗೊಳಿಸುವುದು ಅಗತ್ಯವಾಗಿದೆ – ಡಾ. ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು
ನಾ. ಡಿಸೋಜ ಅವರು ಕೇವಲ ಬರಹಗಾರ ಇಲ್ಲವೇ ಸಾಹಿತಿ ಮಾತ್ರ ಆಗಿರಲಿಲ್ಲ. ಅವರೊಬ್ಬ ಹೋರಾಟಗಾರ, ಕೃಷಿಕ, ಪರಿಸರವಾದಿ ಹಾಗೂ ಸಹಬಾಳ್ವೆಯ ಬದುಕುಗಳನ್ನು ರೂಪಿಸುವ ಅಪ್ಪಟ ಮಾನವತಾವಾದಿ ಆಗಿದ್ದರು. ಡಿಸೋಜ ಅವರ ಸಾಹಿತ್ಯ ಗ್ರಹಿಕೆ ‘ಬದುಕಿನ ಇಡಿತನ’ವನ್ನು ಅರಿಯುವ ಬಗೆಯಾಗಿದೆ. ಹಾಗಾಗಿ ಅವರ ಸಾಹಿತ್ಯ ಬರೀ ಮನುಷ್ಯ ಲೋಕದ ನಿರೂಪಣೆ ಮಾತ್ರವಾಗಿರದೇ, ನಿಸರ್ಗ, ಪರಿಸರ ಮತ್ತು ಮಾನವ ಲೋಕದ ಅನುಬಂಧವನ್ನು ಹಾಗೂ ಅಭಿವೃದ್ಧಿಯ ನಿಲುವುಗಳನ್ನು ನಿಷ್ಠೂರವಾಗಿ ಪ್ರಶ್ನಿಸುವ, ಆ ನಡೆಗಳ ಹಿಂದಿನ ಕ್ರೌರ್ಯದ ಮುಖಗಳನ್ನು ಅನಾವರಣಗೊಳಿಸುವ ಸೂಕ್ಷ್ಮ ಸಂವೇದನೆಯೇ ಆಗಿದೆ. ಇದುವೇ ಇವರ ಸಾಹಿತ್ಯದ ಸ್ಥಾಯಿಭಾವ. ಆಧುನಿಕತೆ, ಅಭಿವೃದ್ಧಿಯಂತಹ ವಿನ್ಯಾಸಗಳ ಜೊತೆಗೆ ಹೇಗೆ ಮುಖಾಮುಖಿ ಆಗಬೇಕು ಅನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ಇವರ ಸಾಹಿತ್ಯದಲ್ಲಿ ಮೈದೋರಿರುತ್ತವೆ.
ನಮ್ಮ ದೇಶದ ಬಹುಸಂಖ್ಯಾತ ಜನರ ಬಡತನ ಮತ್ತು ಅವಕಾಶ ವಂಚಿತ ಪರಿಸ್ಥಿತಿಗೆ ನೇರವಾಗಿ ಕಾರಣವಾಗಿರುವ ಅಭಿವೃದ್ಧಿಯ ಮಾದರಿಗಳು, ಜನ ಸಾಮಾನ್ಯರ ಬದುಕಿನ ಏಳಿಗೆಗೂ ಮತ್ತು ಅದಕ್ಕೆ ಪೂರಕವಾದ ಜ್ಞಾನ ವಲಯಗಳನ್ನೂ ಸೃಷ್ಟಿ ಮಾಡುವುದಕ್ಕೆ ಈ ಮಾದರಿಗಳು ಹೇಗೆ ತೊಡಕಾಗಿವೆ ಎಂಬ ಕಟು ವಾಸ್ತವವನ್ನು ಅರ್ಥೈಸುವುದಕ್ಕೆ ಬೇಕಾದ ಹಲವು ಬಗೆಯ ನಿಲುವುಗಳು ಹಾಗೂ ಪರಿಕರಗಳು ಇವರ ಸಾಹಿತ್ಯಕ ನಿರೂಪಣೆಗಳಲ್ಲಿ ಪ್ರಚುರಗೊಂಡಿವೆ. ಜನರ ಬದುಕನ್ನು ಅಡ್ಡಿಪಡಿಸುವ ಈ ಜ್ಞಾನ ವಲಯಗಳನ್ನು ನಮ್ಮ ಪ್ರಭುತ್ವ ಆಯ್ಕೆ ಮಾಡಿಕೊಂಡಿರುವುದೇ ಇವತ್ತಿನ ಪರಿಸ್ಥಿತಿಗೆ ಕಾರಣ. ಇಂತಹ ವಾಸ್ತವ ಇವರ ಸಾಹಿತ್ಯದ ಉದ್ದಕ್ಕೂ ಎದ್ದು ಕಾಣುತ್ತದೆ. ಡಿಸೋಜ ಅವರು ಇಂತಹ ಜನ ವಿರೋಧಿ ನಿಲುವುಗಳನ್ನು ಪ್ರತಿರೋಧಿಸುವ ದಾರಿಗಳನ್ನು ತಮ್ಮ ಸಾಹಿತ್ಯದಲ್ಲಿ ಮುಂಗಾಣಿಸಿದ್ದಾರೆ. ಅಂದರೆ, ಈ ನಡೆಗಳನ್ನು ತಮ್ಮ ಸಾಹಿತ್ಯದಲ್ಲಿ ಅತ್ಯಂತ ನಿಚ್ಚಳವಾಗಿಯೂ, ಸೂಕ್ಷ್ಮವಾಗಿಯೂ ಪ್ರಕಟಪಡಿಸಿದ್ದಾರೆ.
ಅಭಿವೃದ್ಧಿ ಪರಿಕಲ್ಪನೆಗೆ ಸಂಬಂಧಿಸಿದಂತೆ, ಆಧುನಿಕ ವಿಜ್ಞಾನ, ತಂತ್ರಜ್ಞಾನದ ಪಾತ್ರವನ್ನು ಕುರಿತು ಬಹುಕಾಲದಿಂದಲೂ ಚರ್ಚೆಗಳು ನಮ್ಮ ನಡುವೆ ನಡೆದಿರುತ್ತವೆ. ಈ ಚರ್ಚೆಗಳು ಕನ್ನಡ ಸಾಹಿತ್ಯದ ಮುಖ್ಯ ಆಶಯ ಇಲ್ಲವೇ ಗುರಿಗಳಾಗಿ ಕಂಡಿದ್ದು ಅತ್ಯಂತ ವಿರಳ. ಡಿಸೋಜ ಅವರು ಅಭಿವೃದ್ಧಿಗೆ ಸಂಬಂಧಿಸಿದ ವಿದ್ಯಮಾನಗಳನ್ನು ತಮ್ಮ ಸಾಹಿತ್ಯದ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು, ಆ ಮೂಲಕ ಸೃಷ್ಟಿಗೊಂಡಿರುವ ಸಾಮಾಜಿಕ ಅತಂತ್ರತೆ, ಬಿಕ್ಕಟ್ಟು ಹಾಗೂ ಬದುಕಿನ ನೆಲೆಗಳನ್ನು ಕಳೆದುಕೊಂಡ ಸಮುದಾಯಗಳ ಶೋಚನೀಯ ಬದುಕನ್ನು ನಿರೂಪಿಸುವ ಮೂಲಕ ಅಭಿವೃದ್ಧಿ ಅನ್ನುವುದು ಎಷ್ಟೊಂದು ಅಪಾಯಕಾರಿ ಹಾಗೂ ಅದೊಂದು ಜೀವ ವಿರೋಧಿ ನಿಲುವು ಅನ್ನುವುದು ಇವರ ಕಥನಗಳಲ್ಲಿ ನಿಚ್ಚಳಗೊಂಡಿದೆ. ಅಂದರೆ, ಭಾರತ ದೇಶದ ಯಾವುದೇ ಸ್ವರೂಪದ ಅಭಿವೃದ್ಧಿಯು, ಬಹುಸಂಖ್ಯಾತ ಸಾಮಾನ್ಯ ಜನಸಮೂಹಗಳ ಬದುಕಿನ ಇಂತಹ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡಿರುವುದಿಲ್ಲ ಅನ್ನುವ ವಾಸ್ತವವು ಕೂಡ ಇವರ ಸಾಹಿತ್ಯದಲ್ಲಿ ಪ್ರಕಟಗೊಂಡಿದೆ. ಬಹುಸಂಖ್ಯಾತ ಸಮೂಹಗಳ ಆಶೋತ್ತರಗಳಿಗೆ ಈ ಅಭಿವೃದ್ಧಿ ಅನ್ನುವಂತಹದು ವಿರೋಧಿ ಆಗಿರುತ್ತದೆ ಎಂಬ ವಾಸ್ತವವನ್ನು ಮನಗಾಣಬೇಕಿದೆ. ಅಷ್ಟೆ ಅಲ್ಲದೇ, ಸಮೂಹಗಳನ್ನು ಶೋಷಿಸುವುದಕ್ಕೆ ಒತ್ತಾಸೆ ಆಗಿರುವ ವಿದ್ಯಮಾನಗಳನ್ನು ಇನ್ನಷ್ಟು ವ್ಯಾಪಕಗೊಳಿಸುವ ಹುನ್ನಾರಗಳು ಹೇಗೆಲ್ಲ ರೂಪುಗೊಳ್ಳುತ್ತವೆ ಅನ್ನುವುದಕ್ಕೂ ಸಾಕಷ್ಟು ಸಾಕ್ಷಿಗಳು ಡಿಸೋಜ ಅವರ ಸಾಹಿತ್ಯದಲ್ಲಿ ಸಿಗುತ್ತವೆ.
ಪ್ರಭುತ್ವ ಮತ್ತು ಬಂಡವಾಳಶಾಹಿ ಪ್ರಣೀತ ಅಭಿವೃದ್ಧಿಯನ್ನು ವಿರೋಧಿಸುವ ನಿಲುವುಗಳನ್ನೇ ಇವರು ತಮ್ಮ ಸಾಹಿತ್ಯದ ಅಜೆಂಡವನ್ನಾಗಿ ಇಟ್ಟುಕೊಂಡಿರಲಿಲ್ಲ ದಿಟ. ಆದರೆ ಇಂತಹ ಪ್ರಾಬಲ್ಯವನ್ನು ಪ್ರತಿರೋಧಿಸುವ ಜಾಯಮಾನ ಇವರ ಕಥನ ಕ್ರಿಯೆಯಲ್ಲಿಯೇ ಅಂತರ್ಗತವಾಗಿದೆ. ಇದಕ್ಕೆ ಮುಖ್ಯ ಕಾರಣವೇ, ತಮ್ಮ ಬಹುತೇಕ ಕಥನಗಳಿಗೆ ಇವರು ಆಯ್ಕೆ ಮಾಡಿಕೊಂಡಿರುವ ವಸ್ತು. ಈ ಮಾತು ಇವರ ಇಡೀ ಸಾಹಿತ್ಯಕ್ಕೆ ಸಾರಾಸಗಟಾಗಿ ಅನ್ವಯಿಸುವುದಿಲ್ಲ ದಿಟ. ಆದಾಗ್ಯೂ, ಮುಳುಗಡೆಗೆ ಸಂಬಂಧಿಸಿದ ಇವರ ಕೆಲವು ಕತೆ ಮತ್ತು ಕಾದಂಬರಿಗಳಲ್ಲಿ, ಈ ಆಯಾಮ ಅತ್ಯಂತ ಪ್ರಬಲವಾಗಿ ಮೂಡಿಬಂದಿದೆ. ಅಷ್ಟೆ ಅಲ್ಲದೇ, ಮುಳುಗಡೆಯನ್ನು ಅಭಿವೃದ್ಧಿ ಎಂಬ ಶೋಷಣೆಯ ರೂಪಕವನ್ನಾಗಿ, ಡಿಸೋಜ ಅವರು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ.
ಶರಾವತಿ ಕಣಿವೆಯ ಸುತ್ತ ಮುತ್ತಲಿನ ಸಮೂಹಗಳ ಬದುಕಿಗೆ ಸಂಬಂಧಿಸಿದ ಆರ್ಥಿಕತೆ, ರಾಜಕಾರಣ, ಸಾಮಾಜಿಕ ನಡೆಗಳು, ಅಭಿವೃದ್ಧಿಯ ಪರಿಣಾಮಗಳು ಮತ್ತು ಇನ್ನಿತರ ವಿದ್ಯಮಾನಗಳನ್ನು ಅತ್ಯಂತ ವಿಮರ್ಶಾತ್ಮಕ ದೃಷ್ಟಿಕೋನದಿಂದ ನಿರೂಪಿಸಿದ್ದಾರೆ. ಬದುಕಿನ ಸಾಂಗತ್ಯವನ್ನು ಹದಗೆಡಿಸುವುದಕ್ಕೆ ಕಾರಣವಾಗಿರುವ ಅಭಿವೃದ್ಧಿಯಂತಹ ವಿದ್ಯಮಾನಗಳ ಬಗೆಗೆ ಇಷ್ಟೊಂದು ತೀವ್ರವಾಗಿ, ಕನ್ನಡ ಸಾಹಿತ್ಯದಲ್ಲಿ ನಿರೂಪಣೆಗೊಂಡಿರುವುದು ಅತ್ಯಂತ ಕಡಿಮೆ. ನಾ. ಡಿಸೋಜ ಅವರ ಇಡೀ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿ, ಈ ಸಾಹಿತ್ಯಕ ನಿಲುವುಗಳ ಹಿಂದಿನ ಮನೋಧರ್ಮ ಮತ್ತು ದೃಷ್ಟಿಕೋನಗಳನ್ನು ವಿಶ್ಲೇಷಿಸಿ ಅರ್ಥೈಸುವ ಕೆಲಸವನ್ನು ಇದುವರೆಗೂ ಯಾರು ಅಂತ ದೊಡ್ಡ ಪ್ರಮಾಣದಲ್ಲಿ ಮಾಡಿರುವುದಿಲ್ಲ. ಈ ಬಗೆಯ ಅಲಕ್ಷ್ಯಕ್ಕೆ ಕನ್ನಡದ ಬಹುಮುಖ್ಯ ಹಲವಾರು ಬರಹಗಾರರು ಒಳಗಾಗಿದ್ದಾರೆ. ಯಾವುದೇ ಪ್ರದೇಶ ಅಥವಾ ದೇಶದ ಜನರ ಬದುಕಿನ ಲಯಗಳನ್ನು ಅರಿಯಬೇಕೆಂದರೆ, ಅವುಗಳ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ರಚನೆಗಳನ್ನು ಅನುಸರಿಸಬೇಕಾಗುತ್ತದೆ. ಇಂತಹ ರಚನೆಗಳನ್ನು ಶೃತಿಗೆಡಿಸುವ ಹುನ್ನಾರವನ್ನು ಅಭಿವೃದ್ಧಿ ಕಲ್ಪನೆ ಇಲ್ಲವೇ ಮಾದರಿಗಳ ಮೂಲಕ ಪ್ರಭುತ್ವ ಪ್ರಾಯೋಜಿತ ಬಂಡವಾಳಶಾಹಿ ಸಂಘಟನೆಗಳು ಕೈಗೊಳ್ಳುತ್ತವೆ. ಡಿಸೋಜ ಅವರ ಸಾಹಿತ್ಯಕ ನಿಲುವುಗಳಲ್ಲಿ ಇಂತಹ ಹುನ್ನಾರದ ಬೇರೆ ಬೇರೆ ಮಾದರಿಗಳನ್ನು ಮುಖಾಮುಖಿ ಮಾಡುವ ಪ್ರಕ್ರಿಯೆ ಸಹಜವಾಗಿಯೇ ಅಡಕವಾಗಿರುತ್ತದೆ.
ಶರಾವತಿ ಆಣೆಕಟ್ಟು ಯೋಜನೆಯಲ್ಲಿ ಕೆಲಸಕ್ಕೆ ಸೇರಿದ್ದರಿಂದ ಮುಳುಗಡೆಯಂತಹ ದುರಂತಗಳನ್ನು ನೇರವಾಗಿ ಕಂಡುಂಡ ಅನುಭವವನ್ನು ತಮ್ಮ ಸಾಹಿತ್ಯದ ಮುಖ್ಯ ವಸ್ತುವನ್ನಾಗಿ ಬಳಸಿಕೊಂಡು, ‘ಮುಳುಗಡೆ, ಒಡ್ಡು, ದ್ವೀಪ’ ಮೊದಲಾದ ಕಾದಂಬರಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಅಂದರೆ ಶರಾವತಿ ಯೋಜನೆಯ ಪರಿಣಾಮದಿಂದ ಸಂಭವಿಸಿದ ಈ ಮುಳುಗಡೆ ಮತ್ತು ಅದು ಸಮುದಾಯಗಳ ಬದುಕಿನಲ್ಲಿ ಉಂಟು ಮಾಡಿದ ಅನಾಹುತಗಳನ್ನು ಸೂಕ್ಷ್ಮ ಪಾತ್ರಗಳ ಚಿತ್ರಣದ ಮೂಲಕ ಮುಳುಗಡೆಯ ಘೋರ ಅನುಭವವನ್ನು ಕಂಡರಿಸಿದ್ದಾರೆ. ಈ ವಿದ್ಯಮಾನವು ರೈತರು, ಕೂಲಿಕಾರ್ಮಿಕರು, ಜನ ಸಾಮಾನ್ಯರು ಅನಾಥ ಪ್ರಜ್ಞೆಗೆ ಒಳಗಾಗಿ ಅನುಭವಿಸಿದ ಯಾತನೆಯನ್ನು ಗ್ರಹಿಸಿದ ವಿಧಾನವೇ, ಸಮುದಾಯಗಳ ಬದುಕಿನ ಸತ್ಯದ ಅನುಸಂಧಾನದ ಮಾದರಿಯೇ ಆಗಿರುತ್ತದೆ. ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡು ಸಮುದಾಯಗಳಿಗೆ ಪ್ರಭುತ್ವವು ಎಸಗಿದ ಹುನ್ನಾರಗಳನ್ನೂ ಡಿಸೋಜ ಅವರು ತಮ್ಮ ಕಥನಗಳ ಮೂಲಕ ಒಂದು ಅನುಭವವನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮುಳುಗಡೆ ಮತ್ತು ಅಭಿವೃದ್ಧಿ ಇವುಗಳ ನಡುವಣ ಸಂಘರ್ಷದ ಮಾದರಿಗಳನ್ನು ಇಷ್ಟೊಂದು ತೀವ್ರವಾಗಿ ನಿರೂಪಿಸಿರುವುದನ್ನು, ಈಗಾಗಲೇ ಹೇಳಿದಂತೆ, ಕನ್ನಡ ಸಾಹಿತ್ಯದ ಸನ್ನಿವೇಶದಲ್ಲಿ ಕಾಣುವುದಕ್ಕೆ ಸಾಧ್ಯವೇ ಇಲ್ಲ ಅನ್ನುವಷ್ಟು ಕಡಿಮೆ ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ. ಅಭಿವೃದ್ಧಿ ಮತ್ತು ಆಧುನಿಕತೆಗಳ ಜೊತೆಗಿನ ಮುಖಾಮುಖಿ, ಅನುಸಂಧಾನ ಹಾಗೂ ಅವುಗಳ ಮೂಲಕ ಬದುಕಿನ ಕ್ರಿಯಾವರ್ತುಲದಲ್ಲಿ ಏರ್ಪಟ್ಟಿರುವ ವಿದ್ಯಮಾನಗಳನ್ನು ಲಂಕೇಶ್, ಅನಂತಮೂರ್ತಿ, ತೇಜಸ್ವಿ, ದೇವನೂರ, ಬೆಸಗರಹಳ್ಳಿ ರಾಮಣ್ಣ, ಅಮರೇಶ್ ನುಗಡೋಣಿ, ವಿನಯಾ ಒಕ್ಕುಂದ ಮೊದಲಾದವರು ಅತ್ಯಂತ ಸೂಕ್ಷ್ಮವಾಗಿ ತಮ್ಮ ಕಥನಗಳಲ್ಲಿ ನಿರೂಪಿಸಿದ್ದಾರೆ. ಈ ನಿರೂಪಣೆಗಳ ಆಂತರ್ಯದಲ್ಲಿ ಅಡಗಿರುವ ಬದುಕಿನ ವೈವಿಧ್ಯತೆ ಮತ್ತು ಅನುಸಂಧಾನದ ವಿಭಿನ್ನ ಮಾದರಿಗಳನ್ನು ಅರಿಯುವುದಕ್ಕೂ ಇಲ್ಲಿ ಅವಕಾಶವಿದೆ. ಡಿಸೋಜ ಅವರು ನಿರೂಪಿಸಿದ ಅಭಿವೃದ್ಧಿಯ ನೆಲೆಗಳಿಗೆ ಸಾಮಾಜಿಕ, ಆರ್ಥಿಕ ನೆಲೆಗಳಿಗೆ ಇರುವ ಆಯಾಮ ಇವರೆಲ್ಲರಿಗಿಂತ ಭಿನ್ನವೂ ಮತ್ತು ವಿಶಿಷ್ಟವೂ ಆಗಿರುತ್ತದೆ. ಜೀವ ನದಿಗಳನ್ನು ಜೀವ ವಿರೋಧಿ ನದಿಗಳನ್ನಾಗಿ ರೂಪಿಸುವ ಹುನ್ನಾರಕ್ಕೆ ಈ ಸೋ ಕಾಲ್ಡ್ ಅಭಿವೃದ್ಧಿ ಹೇಗೆ ಕಾರಣವಾಗುತ್ತೆ ಅನ್ನುವ ಕಟು ಸತ್ಯವನ್ನು ಡಿಸೋಜ ಅವರು ಕಂಡರಿಸಿದ್ದಾರೆ. ಈ ನಿರ್ದಿಷ್ಟ ಕಾರಣಕ್ಕಾಗಿಯೇ ಡಿಸೋಜ ಅವರ ಸಾಹಿತ್ಯ ಮಲೆನಾಡಿನ ಜನ ಸಮೂಹಗಳ ಬದುಕಿನ ನಾಡಿ ಮಿಡಿತವನ್ನು ಹಿಡಿಯುವ ಸಂವೇದನೆಯಾಗಿದೆ.
ಅಭಿವೃದ್ಧಿಯ ಕ್ರಿಯೆ, ಪ್ರಕ್ರಿಯೆ ಹಾಗೂ ಪರಿಣಾಮಗಳನ್ನು ಕಥನವಾಗಿಸುವ ಮೂಲಕ ಯಾವೆಲ್ಲ ರೀತಿಯ ಪ್ರತಿರೋಧದ ಮಾದರಿಗಳನ್ನು ತಮ್ಮ ಸಾಹಿತ್ಯದಲ್ಲಿ ಇವರು ನೆಲೆಗೊಳಿಸುತ್ತಾರೆ ಅನ್ನುವುದನ್ನು ನಾವು ಮನಗಾಣಬಹುದು. ಜನರ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳ ಸ್ವರೂಪ ಎಂತಹವು? ಅವುಗಳನ್ನು ವಿರೋಧಿಸುವ ಬಗೆಗಳು ಯಾವವು? ಅವರಿಗಿರುವ ಪ್ರಕೃತಿ ಕಾಳಜಿಯ ಪರಿಣಾಮವಾಗಿ, ಪ್ರಕೃತಿಯ ಮಡಿಲಿನಲ್ಲಿ ಬಾಳಿ ಬದುಕಿ, ಪ್ರಕೃತಿಯೊಂದಿಗೆ ಬೆರೆತುಕೊಂಡಿದ್ದ ಜನಸಮೂಹಗಳ ಬದುಕಿನ ನೆಲೆಗಳನ್ನು ಕಟ್ಟಿಕೊಡುವುದರ ಜೊತೆಗೆ ಸಮೂಹಗಳ ಗತಿಸ್ಥಿತಿಯನ್ನು ಚಾರಿತ್ರಿಕಗೊಳಿಸಿದ್ದು ಗಮನಾರ್ಹ.
ನಾ. ಡಿಸೋಜ ಅವರು ಅತ್ಯಂತ ವ್ಯಾಪಕವಾಗಿ ಬರೆದಿರುತ್ತಾರೆ. ಅವುಗಳಲ್ಲಿ 75 ಕಾದಂಬರಿಗಳು (6 ಚಾರಿತ್ರಿಕ ಕಾದಂಬರಿಗಳು, 25 ಮಕ್ಕಳ ಕಾದಂಬರಿಗಳನ್ನು ಒಳಗೊಂಡಿವೆ) ಮತ್ತು 9 ಕಥಾ ಸಂಕಲನಗಳು ಹಾಗೂ ಹತ್ತಾರು ನಾಟಕಗಳು, ರೇಡಿಯೋ ನಾಟಕಗಳು, ಅನೇಕ ಪತ್ರಿಕಾ ಲೇಖನಗಳು ಹೀಗೆ ವೈವಿಧ್ಯಮಯ ಬರಹವನ್ನು ಮಾಡಿದ್ದಾರೆ. ಈ ಎಲ್ಲ ಬರಹಗಳಲ್ಲಿಯೂ ಒಂದೇ ತಾತ್ವಿಕ ಚೌಕಟ್ಟನ್ನು ಅನುಸರಿಸಿದ್ದಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದಾಗ್ಯೂ, ಹಿಂದುಳಿದ ಸಮುದಾಯಗಳ ಬದುಕಿನ ಅನುಭವ ವೈವಿಧ್ಯತೆಯನ್ನು ಚಿತ್ರಿಸಿದ ರೀತಿ ವಿಶೇಷವಾದದ್ದು. ಹಾಗಾಗಿಯೇ ಇವರ ಸಾಹಿತ್ಯವನ್ನು ಸಬಾಲ್ಟರ್ನ್ ನೆಲೆಯ ಸಾಹಿತ್ಯವೆಂದೂ ಗುರುತಿಸಬಹುದಾಗಿದೆ.
ಮಲೆನಾಡಿನ ಪ್ರದೇಶದ ಕವಿ-ಲೇಖಕರು ಆಗಿರುವ ಕುವೆಂಪು, ಅನಂತಮೂರ್ತಿ, ಲಂಕೇಶ್, ತೇಜಸ್ವಿ ಇವರುಗಳು ಪಡೆದುಕೊಂಡಿರುವ ‘ಸಾಹಿತ್ಯಕ ಮತ್ತು ಸಾಂಸ್ಕೃತಿಕ’ ಮಹತ್ವದಿಂದ ನಾ. ಡಿಸೋಜ ಅವರು ವಂಚಿತರಾಗಿದ್ದಾರೆ. ಅಂದರೆ ‘ಕವಿ-ಲೇಖಕ’ರಿಗೆ ಒದಗುವ ಸಾಮಾಜಿಕ ಗುರುತಿನಲ್ಲಿ (ಸೋಶಿಯಲ್ ರೆಕಗ್ನಿಶನ್) ಅಪಚಾರವನ್ನು ಎಸಗಲಾಗಿರುತ್ತದೆ. ಅಂತಹ ಅಪಚಾರಕ್ಕೆ ಗುರಿಯಾಗಿದ್ದವರಲ್ಲಿ ಕರ್ನಾಟಕದ ಹಲವಾರು ಮಹತ್ವದ ಲೇಖಕರು ಇದ್ದಾರೆ. ಅವರಲ್ಲಿ ನಾ. ಡಿಸೋಜ ಅವರೂ ಒಬ್ಬರು ಎಂದು ಹೇಳಬಹುದು. ಈ ಮಾತಿಗೆ ಸಾಕಷ್ಟು ತಕರಾರುಗಳು ಎದುರಾಗಬಹುದು. ಏಕೆಂದರೆ ನಾ. ಡಿಸೋಜ ಅವರಿಗೆ ಬಹುತೇಕ ಗೌರವ ಮತ್ತು ಪ್ರಶಸ್ತಿಗಳು ದೊರೆತಿರುತ್ತವೆ ಹಾಗಾಗಿ ಅವರಿಗೆ ಸಿಗಬೇಕಾದ ಎಲ್ಲ ಮಾನ್ಯತೆಯೂ ಲಭಿಸಿದೆ ಎಂದು ಹೇಳಬಹುದು. ನಾನು ಹೇಳುತ್ತಿರುವ ಸಂಗತಿ, ಇಂತಹ ಮಾನ್ಯತೆಯನ್ನು ಕುರಿತಾದದ್ದು ಅಲ್ಲ. ಬದಲಾಗಿ ಸಮುದಾಯಗಳು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಸಂಕಟಗಳಿಗೆ ಒಂದು ಖಚಿತ ತಾತ್ವಿಕ ಆಯಾಮವನ್ನು ನೀಡಿ, ಇಂತಹ ಸಮುದಾಯಗಳ ಬದುಕಿನಲ್ಲಿ ಏರ್ಪಟ್ಟಿರುವ ಬಿಕ್ಕಟ್ಟುಗಳನ್ನು ಅರಿಯಲು ಬೇಕಾದ ಸಾಮಾಜಿಕ ವಿವೇಕವನ್ನು ನೆಲೆಗೊಳಿಸಿದ್ದಾರೆ. ಸಮುದಾಯಗಳನ್ನು ನಿರಂತರವಾಗಿ ಕಾಡುವ ಸಂಗತಿಗಳನ್ನು ನಿಚ್ಚಳಗೊಳಿಸಿದ ಬಗೆಯಲ್ಲಿಯೇ, ಡಿಸೋಜ ಅವರ ಮಹತ್ವ ಅಡಗಿದೆ. ಲಯ ತಪ್ಪಿದ ಬದುಕುಗಳನ್ನು ಶೃತಿಗೊಳಿಸಲು, ಏನೆಲ್ಲ ಮಾಡಬೇಕು ಅನ್ನುವ ತಿಳಿವಳಿಕೆಯನ್ನು ತಮ್ಮ ಸಾಹಿತ್ಯದ ಮೂಲಕ ಮನಗಾಣಿಸಿದ್ದಾರೆ. ಸಾಮಾಜಿಕ ಸಾಂಗತ್ಯವನ್ನು ರೂಪಿಸುವ ಇರಾದೆ ಇಲ್ಲಿ ಮುಖ್ಯವಾಗಿದೆ. ಸಮುದಾಯಗಳ ಒಡಲಲ್ಲಿ ಹುದುಗಿರುವ ಸಂಕಟದ ಬೇರುಗಳನ್ನು, ಡಿಸೋಜ ಅವರು ಪತ್ತೆಹಚ್ಚಿ ನಿರೂಪಿಸಿದಂತೆ, ಅವರ ಈ ಸಾಮಾಜಿಕ ವಿವೇಕವನ್ನು ಗುರುತಿಸಿ, ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯ ಮೈಲುಗಲ್ಲುಗಳಲ್ಲಿ ಇವರನ್ನು ಗುರುತಿಸುವುದು ಅತ್ಯಂತ ಜರೂರಿನ ಕೆಲಸವಾಗಿದೆ. ಪ್ರಶಸ್ತಿ ಮತ್ತು ಗೌರವಗಳಿಂದ ಮಾನ್ಯತೆಯನ್ನು ತಂದುಕೊಡುವುದಕ್ಕಿಂತ, ಸಾಮಾಜಿಕ ನೆನಪಿನಲ್ಲಿ ನೆಲೆಗೊಳಿಸುವುದು ಅಗತ್ಯವಾಗಿದೆ.
ಅಲ್ಪಸಂಖ್ಯಾತ ಅಥವಾ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಹುಟ್ಟಿ ಬೆಳೆದ ಇವರು, ‘ಬದುಕಿನ ಇಡಿತನ’ವನ್ನು ತಮ್ಮ ಸಾಹಿತ್ಯದ ಮೂಲಕ ಕಂಡರಿಸಿದ ಇಂತಹ ಲೇಖಕರು ಯಾಕೆ ನಮ್ಮ ಸಾಹಿತ್ಯ ಪರಂಪರೆಯ ಐಕಾನ್ ಗಳ ಪಟ್ಟಿಯಲ್ಲಿ ಸೇರುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳುವ ಜರೂರಿದೆ. ಸಾಹಿತ್ಯಕ ಮತ್ತು ಸಾಮಾಜಿಕ ಪ್ರತ್ಯೇಕತೆಗೆ ಕಾರಣವೇ ಸಾಂಸ್ಕೃತಿಕ ರಾಜಕಾರಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಲ್ಪಸಂಖ್ಯಾತ ಸಾಮಾಜಿಕ ಹಿನ್ನೆಲೆಗೆ ಸೇರಿರುವ ಲೇಖಕರನ್ನು ಗುರುತಿಸುವಾಗ, ಆಯಾ ಸಮುದಾಯ ಅಥವಾ ಯಾವುದೇ ಒಂದು ಸಂಕುಚಿತ ವಲಯಕ್ಕೆ ಮಾತ್ರ ಸೀಮಿತಗೊಳಿಸಿ ಅವರನ್ನು ಬಿಂಬಿಸಲಾಗುತ್ತದೆ. ಅವರ ಕಾದಂಬರಿಗಳು ಸಿನಿಮಾ ಆಗುವುದು, ಸ್ವರ್ಣಪದಕವನ್ನು ಪಡೆಯುವುದು ಮತ್ತು ಅವರಿಗೆ ಪ್ರಶಸ್ತಿಯನ್ನು ಕೊಡುವುದು ಅಂದರೆ, ಇವರ ‘ಮುಳುಗಡೆಯ ಊರಿಗೆ ಬಂದವರು’ ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಬಾಲ ಸಾಹಿತ್ಯ ಪುರಸ್ಕಾರ’ ಲಭಿಸಿದೆ. ‘ದ್ವೀಪ’ ಮತ್ತು ‘ಕಾಡಿನ ಬೆಂಕಿ’ ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಿಯ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತವೆ. ಈ ಗೌರವಗಳು ಸಾಮಾಜಿಕ ಗುರುತಿಗೆ ಕಾರಣವಾಗುವುದಿಲ್ಲ.
ಡಿಸೋಜ ಅವರು ಮತ್ತು ಅವರಂತಹ ಬರಹಗಾರರು ಯಾಕೆ ಒಂದು ನುಡಿ ಸಮುದಾಯದ ಸಾಂಸ್ಕೃತಿಕ ನಿರ್ಮಾಪಕರಾಗಿಯೂ ಬಿಂಬಿತವಾಗುವುದಿಲ್ಲ. ಹಾಗಾಗಿಯೇ ಕನ್ನಡ ಸಾಹಿತ್ಯದ ಚಹರೆಗಳನ್ನು ಅಥವಾ ಕನ್ನಡ ಸಾಹಿತ್ಯದ ಮೈಲುಗಲ್ಲುಗಳನ್ನು ಗುರುತಿಸುವಲ್ಲಿ ನಾ. ಡಿಸೋಜ ಅವರಂತಹ ಲೇಖಕರನ್ನು ಕೈಬಿಡಲಾಗುತ್ತದೆ. ಇವರನ್ನು ಕೇವಲ ಕಥೆ, ಕಾದಂಬರಿಗಳ ನಿರೂಪಕರನ್ನಾಗಿ ಮಾತ್ರ ಬಿಂಬಿಸಲಾಗುತ್ತದೆ. ಈ ಮಾತನ್ನು ಹೇಳುವುದಕ್ಕೆ ಕಾರಣವೇನೆಂದರೆ, ನಾ. ಡಿಸೋಜ ಅವರಂಥ ಲೇಖಕರನ್ನು ಗುರುತಿಸುವ ಬಗೆಯಲ್ಲಿ ಕೋಟಾ ರಾಜಕಾರಣ ಮಾತ್ರ ಇರುತ್ತದೆ. ಹೊರತು ಅವರನ್ನು ಹಾಗೂ ಅವರ ಸಾಹಿತ್ಯವನ್ನು ಒಂದು ಮುಖ್ಯಧಾರೆಯ ಚಲನೆಯ ರೂವಾರಿಯನ್ನಾಗಿ ನೋಡುವುದು ಅತ್ಯಂತ ವಿರಳ. ಹೀಗೆ ಹೇಳಿದರೆ, ಅವರಿಗೆ ಪ್ರಶಸ್ತಿ-ಗೌರವಗಳು ಸಂದಿವೆ ಎಂಬುದನ್ನು ಉಲ್ಲೇಖಿಸಿ, ನೋಡಿ ಇವರಿಗೆ ಎಲ್ಲಾ ರೀತಿಯ ಮಾನ್ಯತೆಗಳನ್ನು ಕೊಡಲಾಗಿದೆ ಎಂದು ಹೇಳಬಹುದು. ನನ್ನ ಪ್ರಶ್ನೆ ಇರುವುದು ಆಧುನಿಕ ಸಾಹಿತ್ಯ ಅಥವಾ ಕನ್ನಡ ಸಾಹಿತ್ಯದ ಹೆಗ್ಗಳಿಕೆಯನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ ಡಿಸೋಜ ಮತ್ತು ಇಂತಹ ಸಮುದಾಯಗಳಿಂದ ಬಂದಂತಹ ಲೇಖಕರು ಗೈರು ಆಗಿರುತ್ತಾರೆ. ಯಾರನ್ನೋ ಕೆಲವರನ್ನು ಗುರುತಿಸಿ, ಇಗೋ ಇವರಿದ್ದಾರೆ ಎಂದು ಹೇಳುವುದನ್ನು ನಾನು ಒಪ್ಪಲಾರೆ. ಏಕೆಂದರೆ, ಯಾರೋ ಒಬ್ಬರು ಕನ್ನಡ ಸಾಹಿತ್ಯ, ವಿಮರ್ಶೆ ಅಥವಾ ಸಂಶೋಧನೆಯ ಹೆಗ್ಗಳಿಕೆಯನ್ನು ಸಾರುವ ಸಾಲಿಗೆ ಸೇರಿರುವುದನ್ನು ಅಪವಾದವಾಗಿಯೇ (ಎಕ್ಸಪ್ಶನ್) ನೋಡಬೇಕು ಹೊರತು ಅದನ್ನೊಂದು ಸಹಜ ಪ್ರಕ್ರಿಯೆ (ನಾರ್ಮ್) ಎಂದು ಪರಿಗಣಿಸಬಾರದು. ನುಡಿ ನಮನದ ಸಂದರ್ಭದಲ್ಲಿ ಹೀಗೆ ಹೇಳುವುದು ಅಪಚಾರವೆಂದು ಭಾವಿಸಿ ಈ ಮಾತುಗಳಿಗೆ ಯಾರಾದರೂ ಅಡ್ಡಿಪಡಿಸಬಹುದು. ಆದರೆ ಅದು ಹಾಗಲ್ಲ. ನಾವು ನಮ್ಮ ಲೇಖಕರನ್ನು ಹೇಗೆ ಗುರುತಿಸಿಕೊಂಡಿದ್ದೇವೆ, ಅವರನ್ನು ಯಾವ ಸಾಮಾಜಿಕ, ಸಾಂಸ್ಕೃತಿಕ ಮಹತ್ವಕ್ಕೆ ಲಗತ್ತಿಸಿದ್ದೇವೆ ಅನ್ನುವುದು ಮುಖ್ಯ. ಈ ವಾಸ್ತವವನ್ನು ಈಗಲಾದರೂ ಒಪ್ಪಿ, ಆ ಬಗೆಗಿನ ಅಪರಾಧ ಪ್ರಜ್ಞೆಯನ್ನು ಹೊರಹಾಕುವುದು ಕೂಡ ಒಂದು ರೀತಿಯ ನುಡಿ ನಮನವೇ ಆಗಿರುತ್ತದೆ.
ನಾ. ಡಿಸೋಜ ಅವರು ತಮ್ಮ ಸಾಹಿತ್ಯದ ಮೂಲಕ ನಿರೂಪಿಸಿದ ಸಿದ್ಧಾಂತವನ್ನು, ಈ ನಿರ್ದಿಷ್ಟ ತಾತ್ವಿಕತೆಯನ್ನು ಒಪ್ಪದವರ ಸಭೆಗಳಿಗೂ ಇವರು ಹೋಗುತ್ತಿದ್ದರು. ಎಲ್ಲ ಜನಾಂಗ, ಧರ್ಮ, ಜಾತಿ, ಪಂಗಡದವರ ಜೊತೆಗೆ ಅತ್ಯಂತ ಸೌಜನ್ಯದಿಂದ ಇವರು ಬೆರೆಯುತ್ತಿದ್ದರು. ಪ್ರತಿಗಾಮಿ ಪಂಗಡದವರು ಆಯೋಜಿಸುವ ಕಾರ್ಯಕ್ರದಲ್ಲಿ ಭಾಗವಹಿಸಿ, ಮಾತುನಾಡುತ್ತಿದ್ದರು. ಇದನ್ನು ನೋಡಿದ ಜನರು, ಇವರ ವ್ಯಕ್ತಿತ್ವವನ್ನು ಕುರಿತು ಹಗುರವಾಗಿ ಆಡಿಕೊಳ್ಳುತ್ತಿದ್ದರು. ಸಾಹಿತ್ಯದ ನಿರೂಪಣೆಗಳಲ್ಲಿ ಮಾತ್ರ ತಾತ್ವಿಕ ಸ್ಪಷ್ಟತೆಯಿಂದ ಕೂಡಿದ ಸಂವೇದನೆಯನ್ನು ಮಂಡಿಸುತ್ತಲೇ ಬಂದಿದ್ದಾರೆ. ವಿನಯ, ಸೌಜನ್ಯವನ್ನೇ ಧರಿಸಿದ, ಈ ವ್ಯಕ್ತಿ ಯಾರೇ ಕರೆದರೂ, ಅದನ್ನು ನಿರಾಕರಿಸುವಷ್ಟು ನಿಷ್ಠೂರತೆಯನ್ನು ಮೈಗೂಡಿಸಿಕೊಂಡಿರಲಿಲ್ಲ ಅನ್ನಿಸುತ್ತದೆ. ಸಾಹಿತ್ಯದ ವಿಚಾರದಲ್ಲಿ ಇಂತಹ ರಾಜಿ ಮುಲಾಜಿಗೆ ಒಳಗಾಗದೇ ಇದ್ದಿದ್ದರಿಂದ, ಮುಳುಗಡೆ ಪ್ರದೇಶದ ಹಾಗೂ ಅಲಕ್ಷಿತ ಸಮೂಹಗಳ ಆಶೋತ್ತರಗಳನ್ನು ಪ್ರತಿನಿಧಿಸುವ ಹೊಣೆಗಾರಿಕೆಯನ್ನು ಮರೆದಿದ್ದಾರೆ.
ಡಾ. ಮೇಟಿ ಮಲ್ಲಿಕಾರ್ಜುನ ಅವರು ನಾಡಿನ ಪ್ರಮುಖ ಭಾಷಾಶಾಶ್ತ್ರಜ್ಞರಲ್ಲಿ ಒಬ್ಬರಾಗಿದ್ದುಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರದ ಪ್ರಾಧ್ಯಾಪಕರು.
ಇದನ್ನೂ ಓದಿ- ನೆನಪು | ಜನ ಮನದ ನಡುವೆ ಅಲಕ್ಷಿತರ ಕತೆಗಾರ