“ಹಿಂದೆ ನಮ್ಮ ಸರಕಾರ ಇದ್ದಾಗ, ಮುಖ್ಯಮಂತ್ರಿ ಗೊಗೋಯ್ ಅವರಿಗೆ ಮುಕ್ತ ಸ್ವಾತಂತ್ರ್ತ ನೀಡಿದ್ದೆವು. ಅಸ್ಸಾಂನವರೇ ಅಸ್ಸಾಂ ಅನ್ನು ಆಳುತ್ತಿದ್ದರು. ಈಗ ಹಾಗಲ್ಲ. ಕೇಂದ್ರ ಸರಕಾರ, ಅಮಿತ್ ಶಾ ಹೇಳಿದ ಹಾಗೆ ಇಲ್ಲಿನ ಮುಖ್ಯಮಂತ್ರಿ ಶರ್ಮಾ ಅವರು ನಡೆದುಕೊಳ್ಳುತ್ತಾರೆ, ಅಸ್ಸಾಂ ಅನ್ನು ಅಸ್ಸಾಂನವರೇ ಆಳಬೇಕೇ ಹೊರತು, ನಾಗಪುರದವರಲ್ಲ” ರಾಹುಲ್ ಗಾಂಧಿ
ಭಾರತ ಜೋಡೋ ನ್ಯಾಯ ಯಾತ್ರೆಗೆ ಇಂದು 11 ನೆಯ ದಿನ. ಇಂದು ನಡೆದ ಕಾರ್ಯಕ್ರಮಗಳು- ಬೆಳಗ್ಗೆ 8.30 ಅಸ್ಸಾಂ ಉತ್ತರ ಬರ್ಪೇಟಾ ಟೌನ್ ನಿಂದ ಹೊಸ ಬಸ್ ನಿಲ್ದಾಣಕ್ಕೆ ಯಾತ್ರೆ ಆರಂಭ, 11.00 ರಿಂದ ಅಭಯಪುರಿ ಹರಮೋಹನ್ ಚಕ್ರವರ್ತಿ ಮಮೋರಿಯಲ್ ಗರ್ಲ್ಸ್ ಸ್ಕೂಲ್ ನಿಂದ ಅಭಯಪುರಿ ಕಾಲೇಜ್ ತನಕ ಪಾದಯಾತ್ರೆ, 12.00 ಕ್ಕೆ ಬೊಂಗಿಯಾಗಾಂವ್ ನಲ್ಲಿ ವಿರಾಮ, ಮಧ್ಯಾಹ್ನ 3.00 ಕ್ಕೆ ಧುಬ್ರಿ, ಬಿಲಾಸ್ಪಾರ ದ ಚಲಬಂದಾ ಗ್ರಾಮದಲ್ಲಿ ಬೃಹತ್ ಸಾರ್ವಜನಿಕ ಸಭೆ, ರಾತ್ರಿ ವಿಶ್ರಾಂತಿ ಧುಬ್ರಿ, ಗೌರಿಪುರದಲ್ಲಿ.
ಯಾತ್ರೆಯ ನಡುವೆ ಜನರೊಂದಿಗೆ ಮಾತನಾಡಿದ ಅವರು, “ಇಲ್ಲಿನ ಮುಖ್ಯಮಂತ್ರಿಗೆ ನನ್ನನ್ನು ಹೆದರಿಸಬಹುದು ಎಂಬ ಆಲೋಚನೆ ಹೇಗೆ ಬಂತೋ ಗೊತ್ತಿಲ್ಲ, ನನ್ನ ಮೇಲೆ ಇಪ್ಪತ್ತೈದಲ್ಲ ಎಷ್ಟು ಪ್ರಕರಣ ಬೇಕಾದರೂ ದಾಖಲಿಸಿ, ನಾನು ಬಿಜೆಪಿಗಾಗಲೀ ಆರ್ ಎಸ್ ಎಸ್ ಗಾಗಲೀ ಯಾರಿಗೂ ಹೆದರುವುದಿಲ್ಲ. ಹಿಂದೆ ನಮ್ಮ ಸರಕಾರ ಇದ್ದಾಗ, ಮುಖ್ಯಮಂತ್ರಿ ಗೊಗೋಯ್ ಅವರಿಗೆ ಮುಕ್ತ ಸ್ವಾತಂತ್ರ್ತ ನೀಡಿದ್ದೆವು. ಅಸ್ಸಾಂನವರೇ ಅಸ್ಸಾಂ ಅನ್ನು ಆಳುತ್ತಿದ್ದರು. ಈಗ ಹಾಗಲ್ಲ. ಕೇಂದ್ರ ಸರಕಾರ, ಅಮಿತ್ ಶಾ ಹೇಳಿದ ಹಾಗೆ ಇಲ್ಲಿನ ಮುಖ್ಯಮಂತ್ರಿ ಶರ್ಮಾ ಅವರು ನಡೆದುಕೊಳ್ಳುತ್ತಾರೆ, ಅಸ್ಸಾಂ ಅನ್ನು ಅಸ್ಸಾಂನವರೇ ಆಳಬೇಕೇ ಹೊರತು, ನಾಗಪುರದವರಲ್ಲ” ಎಂದರು.
ಭಾರೀ ಸಂಖ್ಯೆಯಲ್ಲಿ ಧುಬ್ರಿಯಲ್ಲಿ ಸೇರಿದ ಜನಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿಯವರು “ನಿಮ್ಮ ರಾಜ್ಯದ ಮುಖ್ಯಮಂತ್ರಿ ದೇಶದ ಕಡು ಭ್ರಷ್ಟ ಮುಖ್ಯಮಂತ್ರಿ. ನೀವು ಚಾ ಕುಡೀತೀರಾದರೆ ಚಹಾದ ತೋಟ ನಿಮ್ಮ ಮುಖ್ಯಮಂತ್ರಿಯದು, ಪೇಪರ್ ಓದುತ್ತೀರಾ, ಟಿವಿ ನೋಡುತ್ತೀರಾ? ಪೇಪರ್ ಮತ್ತು ಟಿವಿ ನಿಮ್ಮ ಮುಖ್ಯಮಂತ್ರಿಯದು, ರಸ್ತೆಯಲ್ಲಿ ಹೋಗ್ತೀರಾ, ಸೇತುವೆ ದಾಟುತ್ತೀರಾ? ಅದರಲ್ಲೂ ನಿಮ್ಮ ಮುಖ್ಯಮಂತ್ರಿಗೆ ಹಣ ಹೋಗುತ್ತದೆ, ಸಂಜೆ ಪಾನ್ ತಿನ್ನುತ್ತೀರಾ ಅದರೊಳಗಿನ ಸುಪಾರಿಯಲ್ಲೂ ಮುಖ್ಯಮಂತ್ರಿಗೆ ಹಣ ಹೋಗುತ್ತದೆ, ಕಾಜಿರಂಗಾದಲ್ಲೂ ಅವರದೊಂದು ರಿಸಾರ್ಟ್ ಇದೆ. ಇಂತಹ ಭ್ರಷ್ಟ ಮುಖ್ಯಮಂತ್ರಿ ಹೇಮಂತ ವಿಶ್ವ ಶರ್ಮಾ. ನಮ್ಮದು ದ್ವೇಷದ ಬಾಜಾರ್ ನಲ್ಲಿ ಪ್ರೀತಿಯ ಅಂಗಡಿ ತೆರೆಯುವ ಕಾರ್ಯಕ್ರಮ. ಇಲ್ಲಿನ ಮುಖ್ಯಮಂತ್ರಿ ಹಗಲು ರಾತ್ರಿಯೆನ್ನದೆ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ನಾವು ಬಿಜೆಪಿಯವರು ಹರಡಿದ ದ್ವೇಷದ ಕೊಳಕನ್ನು ಸ್ವಚ್ಛಗೊಳಿಸಲು ಬಂದಿದ್ದೇವೆ” ಎಂದರು.
ನಾಳೆ ಅಸ್ಸಾಂ ನಲ್ಲಿ ಯಾತ್ರೆಯ ಕೊನೆಯ ದಿನ. ಅಲ್ಲಿಂದ ಪಶ್ಚಿಮ ಬಂಗಾಳದ ಕೋಕ್ರಾಜಾರ್ ಪ್ರವೇಶಿಸಲಿದೆ.
ಶ್ರೀನಿವಾಸ ಕಾರ್ಕಳ, ಮಂಗಳೂರು