Saturday, December 7, 2024

G-20 ಎಂಬುದು ಪ್ರೊಪಗಾಂಡದ ಭಾಗ; ಯಾವುದು ಭ್ರಮೆ, ಯಾವುದು ವಾಸ್ತವ ಅರಿತುಕೊಳ್ಳಿ : ಡಾ. ಪರಕಾಲ ಪ್ರಭಾಕರ್‌

Most read

ನಮ್ಮ ದೇಶದಲ್ಲಿ ಜಿ-೨೦ ಶೃಂಗ ನಡೆಯಿತು. ಅದು ಬಹುಕಾಲದಿಂದಲೂ ನಡೆಯುತ್ತಾ ಇತ್ತು. ಆದರೆ ಅದರ ಬಗ್ಗೆ ವಿಪರೀತ ಕೇಳುತ್ತಾ ಇರಲಿಲ್ಲ. ಆದರೆ, ಇತ್ತೀಚೆಗೆ ನಾವು ರೈಲ್ವೇ ನಿಲ್ದಾಣ, ಬೀದಿ, ನಗರಗಳು ಎಲ್ಲೆಡೆ ಕಾಣುತ್ತಿದ್ದೇವೆ. ಇದು ಯಾಕೆ, ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂದಿನ ದೊಡ್ಡ ಸವಾಲು ಯಾವುದು ಭ್ರಮೆ, ಯಾವುದು ವಾಸ್ತವ ಎಂಬುದನ್ನು ಅರಿತುಕೊಳ್ಳುವುದು ಎಂದು ಖ್ಯಾತ ರಾಜಕೀಯ ಅರ್ಥಶಾಸ್ತ್ರಜ್ಞ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಮನ್ ಅವರ ಪತಿ ಡಾ. ಪರಕಾಲ ಪ್ರಭಾಕರ್‌ ಹೇಳಿದ್ದಾರೆ.

ಇಂದು ಬೆಂಗಳೂರಿನ ಗಾಂಧಿಭವನದಲ್ಲಿ ಆಯೋಜಿಸಲಾಗಿದ್ದ ಜಾಗೃತ ಕರ್ನಾಟಕ ಕಾರ್ಯಕರ್ಮದಲ್ಲಿ ಮಾತನಾಡಿ, ಇಲ್ಲಿಗೆ ಬಂದಿರುವುದು ನನಗೆ ಒಂದು ಗೌರವ ಎಂದು ಭಾವಿಸುತ್ತೇನೆ. ನಿಮಗೆ ಗೊತ್ತಿರುವ ಹಲವು ಸಂಗತಿಗಳನ್ನೇ ನಾನು ಜೋಡಿಸಿ ಒಂದಷ್ಟು ತಿಳಿಸಬಯಸುತ್ತೇನೆ. ಅದೇನೆಂದರೆ ಕಳೆದ ಹಲವು ವರ್ಷಗಳಿಂದ ಈ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ನಡುವೆ ಒಂತು ತಂತು ಇದೆ.

ಇಂದಿನ ಕಾರ್ಯಕ್ರಮದ ಶೀರ್ಷಿಕೆಯ ಕುರಿತು ನಾವು ಒಮ್ಮತದಿಂದ ತೀರ್ಮಾನಿಸಿದೆವು. ಭ್ರಮೆಯೇ ವಾಸ್ತವವಾಗಿ ಅಂತ. ಇಂದಿನ ದೊಡ್ಡ ಸವಾಲೇ ಯಾವುದು ಭ್ರಮೆ, ಯಾವುದು ವಾಸ್ತವ ಎಂಬುದನ್ನು ಅರಿತುಕೊಳ್ಳುವುದು. ಉದಾಹರಣೆಗೆ ನಮ್ಮ ದೇಶದಲ್ಲಿ ಜಿ-20 ಶೃಂಗ ನಡೆಯಿತು. ಅದು ಬಹುಕಾಲದಿಂದಲೂ ನಡೆಯುತ್ತಾ ಇತ್ತು. ಆದರೆ ಅದರ ಬಗ್ಗೆ ವಿಪರೀತ ಕೇಳುತ್ತಾ ಇರಲಿಲ್ಲ. ಆದರೆ, ಇತ್ತೀಚೆಗೆ ನಾವು ರೈಲ್ವೇ ನಿಲ್ದಾಣ, ಬೀದಿ, ನಗರಗಳು ಎಲ್ಲೆಡೆ ಕಾಣುತ್ತಿದ್ದೇವೆ. ಇದು ಯಾಕೆ, ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

G-20 ಮೂಲಕ ಒಂದು ಭ್ರಮೆಗೆ ಬೇಕಾದ ತಳಹದಿಯನ್ನು ಸೃಷ್ಟಿಸಲಾಯಿತು. ಪ್ರಚಾರ, ಪ್ರೊಪಗಾಂಡಾದ ಮೂಲಕ ಜಿ-೨೦ಯನ್ನು ಎಲ್ಲೆಡೆ ತಲುಪಿಸಲಾಯಿತು. ನನಗೆ ಅದರಿಂದ ದಕ್ಕಿದ್ದೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದನ್ನು ನಿಮ್ಮ ಮುಂದೆ ಹೇಳುತ್ತೇನೆ.

ನನಗೆ ಸಿಕ್ಕಿದ ಚಿತ್ರಣ ಏನೆಂದರೆ, ಇಡೀ ಪ್ರಪಂಚ (ಪ್ರಪಂಚದ ಪ್ರಮುಖ ದೇಶಗಳು), ಅಮೆರಿಕಾ, ರಷ್ಯಾ, ಚೀನಾ, ಯುಕೆ, ಜಪಾನ್‌, ದ.ಅಮೆರಿಕಾದ ದೇಶಗಳೆಲ್ಲವೂ ಪ್ರಪಂಚದಲ್ಲಿ ಏನು ಮಾಡಬೇಕೆಂಬುದರ ಕುರಿತು ಯಾವ ಐಡಿಯಾ ಇಲ್ಲದೇ ಭಾರತದ ಮುಂದೆ ಶರಣಾಗಿ ತಮಗೆ ದಾರಿ ತೋರಿಸೆಂದು ಕೇಳಿದೆವು. ಏಕೆಂದರೆ ಇದು ವಿಶ್ವಗುರು. ಹಾಗಾಗಿ ಇಡೀ ಪ್ರಪಂಚ ಇಲ್ಲಿಗೆ ಬಂದು ಭಾರತದಿಂದ ಕಲಿತು ಹೋದವು. ಇದು ನನಗೆ G-20 ಪ್ರಚಾರದಿಂದ ಗೊತ್ತಾಗಿದ್ದು.

ಆದರೆ, ವಾಸ್ತವವೇನು?, ಮೊನ್ನೆ ಇದು ಇಂಡಿಯಾ ಆಗಿತ್ತು. ನಿನ್ನೆ, ಇಂದೂ ಇಂಡಿಯಾವೇ ಆಗಿದೆ. G-20ಯೂ ಹಿಂದೆಯೂ ಇತ್ತು. ಈಗಲೂ ಇದೆ. ಆದರೆ ಜಗತ್ತಿನ ಯಾವ ದೇಶವೂ ಇಲ್ಲಿ ಮಾಡಿದಷ್ಟು ಗಾನ, ನೃತ್ಯ ಮಾಡಲಿಲ್ಲ. ಆದರೆ, ಇಲ್ಲಿ ಮಾತ್ರ ಎಲ್ಲವೂ ನಡೆಯಿತು.

G-20 ಮೂಲಕ ಕೇಂದ್ರ ಘೋಷಿಸಿದ ವಸುಧೈವ ಕುಟುಂಬಕಂ ಎಂಬ ವಿಷಯವಿದೆ. ಅದೇನು? ಅದೆಲ್ಲಿಂದ ಬಂದಿತು? ನೀವು ಹುಡುಕಿದರೆ – ಅದು ಮಹೋಪನಿಷತ್‌ ಎಂಬ ಸಣ್ಣ ಉಪನಿಷತ್ತಿನಿಂದ ಬಂದಿದ್ದು. ಈಸೋಪನಿಷತ್ತಿನಂತಹ ಹಲವು ಪ್ರಮುಖ ಉಪನಿಷತ್ತಿನಿಂದ ಬಂದಿದ್ದಲ್ಲ.

ಕೇಂದ್ರ ಸರ್ಕಾರದ ಪ್ರಕಾರ, ಈ ದೇಶ, ಸರ್ಕಾರವು ಈ ಮೌಲ್ಯದ ಪರವಾಗಿ ನಿಲ್ಲುತ್ತದೆ ಎಂದು ಬಿಂಬಿಸಲಾಯಿತು. ಇಡೀ ಭುವಿಯೇ ಒಂದು ಕುಟುಂಬ ಎಂದು ಅದರ ಅರ್ಥ ಎಂದು ಪ್ರಚಾರ ಮಾಡಿತ್ತು.

ಆ ಉಪನಿಷತ್ತು ಏನು ಹೇಳುತ್ತದೆ ಎಂದರೆ, ಅದು ಎರಡು ರೀತಿಯ ಮನಸ್ಸುಗಳನ್ನು ಕುರಿತಾಗಿ ಹೇಳುತ್ತದೆ. ಒಂದು ಸಂಕುಚಿತ ಮನಸ್ಸು. ಮತ್ತೊಂದು ಉದಾರ ಮನಸ್ಸು. ಯಾರು ಸಂಕುಚಿತ ಮನಸ್ಸು ಹೊಂದಿರುತ್ತಾರೋ ಅವರು ಕೆಲವರು ಮಾತ್ರ ತಮ್ಮವರೆಂದು ಭಾವಿಸುತ್ತಾರೆ. ಉದಾರ ಮನಸ್ಸು ಹೊಂದಿರುವವರು ಇಡೀ ಭುವಿಯನ್ನೇ ತಮ್ಮ ಕುಟುಂಬವೆಂದು ಭಾವಿಸುತ್ತಾರೆ. ಉದಾರ ಮನಸ್ಸು ಮತ್ತು ಸಂಕುಚಿತ ಮನಸ್ಸು ಎಂದರೇನೆಂದು ವಿವರಿಸುವ ಒಂದು ಶ್ಲೋಕ ಅದು.

ಆದರೆ, ಇದು ಎಂತಹ ವೈರುಧ್ಯ ಅಂದರೆ, ಇವರು ಆ ಜನ ನಮ್ಮವರಲ್ಲ, ಆ ಧರ್ಮದವರು ನಮ್ಮವರಲ್ಲ, ಈ ಭಾಷೆಯವರು ನಮ್ಮನವರಲ್ಲ, ಆ ಪ್ರದೇಶ ನಮ್ಮದಲ್ಲ, ಈ ಭಾಷೆಯವರು ಮಾತ್ರ ನಮ್ಮವರು ಎಂದೆಲ್ಲಾ ಹೇಳುವವರು. ತಮ್ಮ ಸಿದ್ಧಾಂತದಲ್ಲಿ, ತಮ್ಮ ನೀತಿಯಲ್ಲಿ ತಮ್ಮ ಕಾರ್ಯಕ್ರಮಗಳಲ್ಲಿ ತಮ್ಮವರು ಮತ್ತು ಬೇರೆಯವರು ಎಂಬ ಬೇಧ ಉಂಟು ಮಾಡುವ ಈ ಸರ್ಕಾರವು ಇಂತಹ ದೊಡ್ಡ ಮೌಲ್ಯವನ್ನು G-20ಯ ಸಂದರ್ಭದಲ್ಲಿ ಮುಂದಿಟ್ಟಿತು.

ಇದೇ ಆ ವೈರುಧ್ಯ. ನಮಗೆ ಗೊತ್ತಿರುವ ವಾಸ್ತವ ಹಾಗೂ ಸರ್ಕಾರವು ಬಿಂಬಿಸಬಯಸಿರುವ ಭ್ರಮೆಯ ಕುರಿತೇ ಇಲ್ಲಿ ಮಾತಾಡುತ್ತೇನೆ ಎಂದು ಹೇಳಿದ್ದಾರೆ.

More articles

Latest article