ಹುಬ್ಬಳ್ಳಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಬಳಸಿರುವ ಅವಾಚ್ಯ ಶಬ್ಧ ಕುರಿತ ಪ್ರಕರಣವನ್ನು ವಿಸ್ತೃತ ತನಿಖೆಗಾಗಿ ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಮತ್ತೊಂದು ಕಡೆ ತಾನು ಅಂತಹ ಪದ ಬಳಸಿಲ್ಲ ಎಂದು ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ ಎಂದು ಸಚಿವೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.
ಸಚಿವೆ ಹೆಬ್ಬಾಳ್ಕರ್ ಅಕ್ಕಪಕ್ಕದಲ್ಲಿದ್ದವರು ಅಶ್ಲೀಲ ಪದ ಬಳಸಿದ್ದಾರೆ ಎಂದು ಹೇಳುತ್ತಾರೆ. ಸಿಟಿ ರವಿ ನಾನು ಅಂತಹ ಪದ ಬಳಸಿಲ್ಲ ಎನ್ನುತ್ತಾರೆ. ಈ ಎಲ್ಲ ವಿಚಾರಗಳ ಕೂಲಂಕಷ ತನಿಖೆ ಆಗಲೆಂದೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿ.ಟಿ ರವಿ ಪ್ರಕರಣದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದಿಲ್ಲ. ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಸಿ.ಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸ್ಪೀಕರ್ ತಮ್ಮ ಕೆಲಸ ಮಾಡುತ್ತಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲಿಯ ಸಾಧಕ ಬಾಧಕಗಳನ್ನು ನೋಡಿಕೊಂಡು ಹೇಳಿಕೆ ಕೊಟ್ಟಿರಬಹುದು. ಕಾನೂನು ಪ್ರಕ್ರಿಯೆ ನಡೆಯುವಾಗ ಕೆಲವು ವಿಳಂಬವಾಗಬಹುದು. ಆದರೆ ತನಿಖೆಯನ್ನು ಸರಿಯಾಗಿ ಮಾಡಬೇಕಾಗಿರುತ್ತದೆ. ಪ್ರಕರಣದ ಸತ್ಯಾಸತ್ಯತೆ ನೋಡಬೇಕಿದೆ ಎಂದು ತಿಳಿಸಿದರು. ಪೊಲೀಸ್ ಇಲಾಖೆ ಜವಾಬ್ದಾರಿಯುತ ಇಲಾಖೆಯಾಗಿದ್ದು, ಸಿಎಂ ಮತ್ತು ಗೃಹ ಸಚಿವರ ಆದೇಶಗಳನ್ನು ಮಾತ್ರ ಪಾಲನೆ ಮಾಡುತ್ತಾರೆ. ಬೇರೆ ಯಾರೇ ಆದೇಶ ಮಾಡಿದರೂ ಪಾಲನೆ ಮಾಡುವುದಿಲ್ಲ ಎಂದರು.
ರಾಮಾಯಣ, ಮಹಾಭಾರತ ನಡೆದಿದ್ದು ಮಹಿಳೆಯನ್ನು ಅಪಮಾನ ಮಾಡಿದ್ದಕ್ಕೆ. ಅಲ್ಲಿ ಅಪಮಾನ ಮಾಡಿದ ಎಲ್ಲರಿಗೂ ಶಿಕ್ಷೆ ಆಗಿದೆ. ಇಲ್ಲಿಯೂ ಆಗುತ್ತದೆ. ಸಿ.ಟಿ ರವಿ ಅವರು ಆ ರೀತಿ ಹೇಳಿಲ್ಲ ಅನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ. ಆಣೆ ಮಾಡಲಿಕ್ಕೆ ನಾನೂ ನನ್ನ ಕುಟುಂಬ ಸಹಿತ ಬರುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿದ್ದಾರೆ.