ಕೌಟುಂಬಿಕ ಹಿಂಸೆ ಮಹಿಳೆಯರ ಮೇಲಿನ ನಿಶಬ್ದ ಯುದ್ಧ

Most read

ಕೌಟುಂಬಿಕ ಹಿಂಸೆಯನ್ನು ನೋಡುವ ಸಾಮಾಜಿಕರ ದೃಷ್ಟಿಕೋನ ಬದಲಾಗಬೇಕಾಗಿದೆ. ಟೆಕ್ಕಿ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ಟೆಕ್ಕಿ ಸಮುದಾಯವೇ ಹೌಹಾರಿ ಮಹಿಳೆಯರ ಬಗೆಗೆ, ಮಹಿಳೆಯರ ವಿಶೇಷ ಕಾನೂನುಗಳ ಬಗೆಗೆ ಮಾತನಾಡುವುದು ದುರದೃಷ್ಟಕರ. ಲಿಂಗತ್ವ ದೃಷ್ಟಿಯಿಂದ ಸಮಸ್ಯೆಗಳನ್ನು ನೋಡುವ ವಿಧಾನವನ್ನೇ ಅರಿಯದ ಇವರು ಇನ್ನೂ ಬಾಲಕರಾಗಿ ಕಾಣುತ್ತಾರೆ ಡಾ. ಸುನಂದಮ್ಮ, ವಿಶ್ರಾಂತ ಪ್ರಾಧ್ಯಾಪಕರು.

ಕುಟುಂಬದಲ್ಲಿ ನಡೆಯುವ ಹಿಂಸೆಗಳು ಹೇಳದ ಹೊರತು ಜನರಿಗೆ ಯಾಕೆ ಅಕ್ಕಪಕ್ಕದವರಿಗೆ ಮತ್ತು ನೆಂಟರಿಷ್ಟರಿಗೆ ತಿಳಿಯುವುದೇ ಇಲ್ಲ. ಕೌಟುಂಬಿಕ ಹಿಂಸೆ ನಿಶಬ್ದ ಯುದ್ಧ. ಅದು ನಾಲ್ಕು ಗೋಡೆಗಳ ನಡುವೆ ನಡೆಯುತ್ತದೆ. ಗಂಡು ಅಥವಾ ಹೆಣ್ಣು ಕುಟುಂಬದ ಒಳಗೆ ಹಿಂಸೆಗೆ ಒಳಗಾಗಬಹುದು. ಆದರೆ ಗಂಡು, ಹೆಣ್ಣು ನಡುವೆ ತುಲನೆ ಮಾಡಿದರೆ ಮಹಿಳೆಯರೆ ಹೆಚ್ಚು ಹಿಂಸೆಗೆ ಒಳಗಾಗುತ್ತಾರೆ. ಕುಟುಂಬದಲ್ಲಿ ಹೆಣ್ಣು ಯಾವಾಗಲೂ ಅಧೀನ ಸ್ಥಿತಿಯಲ್ಲಿರುವವಳು ಎಂಬ ಜೀವನ ವಿಧಾನ ಹಿಂಸೆಯಾಗಿದೆ. ಈ ಸ್ಥಿತಿಯನ್ನು ಇಂದು ಯಾವ ಹೆಣ್ಣುಮಕ್ಕಳೂ ಒಪ್ಪುವುದಿಲ್ಲ. ಈ ಅಧೀನ ಸ್ಥಿತಿಯನ್ನು ಸಹಿಸಲು ಅಸಾಧ್ಯವಾದಾಗ ಅವರು ಕುಟುಂಬದಿಂದ ಹೊರಬಂದು ಜೀವಿಸಲು ಪ್ರಾರಂಭಿಸುತ್ತಾರೆ.

ಮಹಿಳೆಯರಿಗೆ ತನ್ನದೆನ್ನುವ ಮನೆ ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಇಲ್ಲವೇ ಇಲ್ಲ. ಒಂದೋ ತಂದೆ ಮನೆಯಾಗಿರುತ್ತದೆ, ಅದನ್ನು ತವರು ಮನೆ ಎನ್ನುವ ಮೂಲಕ ತವರಿಗೆ ಹೆಸರು ತರುವ ಮಗಳಾಗಬೇಕೆಂದು ಎಲ್ಲ ಪೋಷಕರು ಇಷ್ಟಪಡುತ್ತಾರೆ. ಇನ್ನೊಂದು ಗಂಡನ ಮನೆ, ಅದರಲ್ಲಿ ಮಹಿಳೆಗೆ ಜೀವನಾಂಶವಿದೆ ಆದರೆ ಅವಳದೆನ್ನುವ ಮನೆ ಇಲ್ಲ. ಇದು ಮಹಿಳೆಯರ ಬದುಕನ್ನು ಅತಂತ್ರವಾಗಿಸಿದೆ. ಹೆಣ್ಣಿನ ವಿಷಯದಲ್ಲಿ ಯಾವುದು ಮೌಲ್ಯವಾಗುತ್ತದೆ ಎಂದರೆ ಅವಳು ಎಲ್ಲ ಕಷ್ಟ ಕೋಟಲೆಗಳನ್ನು ಸಹಿಸಿ ಬದುಕಿದಾಗ ಮಾತ್ರ. ಇದು ಎಲ್ಲರ ಕಣ್ಣಲ್ಲೂ ಗೌರವಕ್ಕೆ ಯೋಗ್ಯವಾಗುವ ದಾರಿಯಾಗಿದೆ.

ಹಿಂಸೆಯನ್ನು ಸಹಿಸಬೇಕಾಗಿಲ್ಲ ಎಂಬ ಜ್ಞಾನ ಮೂಡಿರುವ ಇಂದಿನ ಹೆಣ್ಣುಮಕ್ಕಳು ಅದರಿಂದ ಮುಕ್ತರಾಗಲು ಬಯಸುತ್ತಾರೆ. ಹಾಗೆಯೇ ಗಂಡುಮಕ್ಕಳು ಕೂಡ. ಪಿತೃಪ್ರಧಾನ ಮೌಲ್ಯಗಳನ್ನು ರೂಢಿಸಿಕೊಂಡಿರುವ ಗಂಡು, ಹೆಣ್ಣು ಇಬ್ಬರಲ್ಲೂ ಹಿಂಸೆ ಸಹಜವಾಗಿ ರೂಢಿಯಲ್ಲಿದೆ. ಆದರೆ ಅವುಗಳ ಸ್ವರೂಪ ಬೇರೆ ಬೇರೆಯಾಗಿದೆ. ಅಧ್ಯಯನಗಳ ಪ್ರಕಾರ ಜಗತ್ತಿನಲ್ಲಿ ಶೇ.60ರಷ್ಟು ಮಹಿಳೆಯರು ಒಂದಲ್ಲ ಒಂದು ಸ್ವರೂಪದಲ್ಲಿ ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎನ್ನುತ್ತದೆ. ಬೈಗುಳ, ಹೊಡೆತ, ಮಾತು ಬಿಡುವುದು, ಕುಹಕ, ಛೇಡಿಸುವುದು, ಅಗತ್ಯ ಸಾಮಗ್ರಿ ಕೊಡಿಸುವಲ್ಲಿ ನಿರಾಕರಣೆ, ದೈಹಿಕ ಹಾಗೂ ಆರ್ಥಿಕವಾದ ಹಿಂಸೆಗಳನ್ನು ನೀಡುವುದನ್ನು ಸಂಶೋಧನೆಗಳು ಖಚಿತ ಪಡಿಸುತ್ತವೆ.

ಗಂಡುಮಕ್ಕಳ ಆತ್ಮಹತ್ಯೆಗಳಿಗೆ ಹೆಂಡತಿ ನೀಡುವ ಕಿರುಕುಳ ಕಾರಣವೆಂದು ಹೇಳುವ ಗಂಡುಮಕ್ಕಳು ಇಂದಿಗೂ ಲಿಂಗತ್ವ ಆಧಾರಿತ ಶ್ರಮವಿಭಜನೆಯನ್ನೇ ನಂಬಿದ್ದಾರೆ ಮತ್ತು ಅದನ್ನೇ ಸರಿ ಎಂದು ತಿಳಿದಿದ್ದಾರೆ. ದುಡಿದು ಬಂದರೂ ಗಂಡ ಕುಳಿತ ಜಾಗಕ್ಕೆ ಎಲ್ಲವನ್ನು ನೀಡಬೇಕೆನ್ನುವ ಗಂಡುಗಳ ಸಂಖ್ಯೆ ಕಡಿಮೆ ಇಲ್ಲ. ಅವರಿಗೆ ನೀಡಿರುವ ತರಬೇತಿ ಹಾಗಿದೆ. ತಾಯಂದಿರು ಮಗನು ಕುಳಿತ ಜಾಗಕ್ಕೆ ಎಲ್ಲವನ್ನು ನೀಡುವುದು ರೂಢಿಸಿಕೊಂಡ ಗಂಡುಮಕ್ಕಳು ಮದುವೆಯ ಬಳಿಕ ಇದನ್ನು ಹೆಂಡತಿಯಿಂದ ಬಯಸುತ್ತಾರೆ. ಗಂಡುಮಕ್ಕಳಂತೆ ತವರಲ್ಲಿ ಬೆಳೆದು ಬಂದ ಹೆಣ್ಣುಮಕ್ಕಳು ಸಹಜವಾಗಿ ತನ್ನ ಪಾತ್ರವನ್ನು ಬದಲಿಸಿಕೊಳ್ಳಲು, ರೂಢಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ತಾಯಿ, ಗಂಡು ಮತ್ತು ಹೆಣ್ಣು ಇಬ್ಬರಿಗೂ ಕುಟುಂಬದಲ್ಲಿನ ಕೆಲಸಗಳನ್ನು ರೂಢಿಸಿದ್ದರೆ ಅವರಿಗೆ ಇಂಥ ಸಂಘರ್ಷ ಬರುವುದಿಲ್ಲ. ಇಬ್ಬರೂ ಕೆಲಸಗಳನ್ನು ಹಂಚಿಕೊಂಡು ಜೀವನ ಸುಗಮಗೊಳಿಸಿಕೊಳ್ಳುತ್ತಾರೆ.

ಇಂದು ಸೊಸೆಯ ಪಾತ್ರ ಸ್ಥಿತ್ಯಂತರದಲ್ಲಿ ಇರುವುದನ್ನು ಸಮಾಜ ಗ್ರಹಿಸಬೇಕಾಗಿದೆ ಮತ್ತು ಭಾರತೀಯ ಕುಟುಂಬ ವ್ಯವಸ್ಥೆಯ ಈ ಬದಲಾವಣೆಯನ್ನು ಪ್ರಾಮಾಣಿಕವಾಗಿ ಕುಳಿತು ವಿಮರ್ಶಿಸಿಕೊಳ್ಳುವ ಅಗತ್ಯವಿದೆ. ವಿವಾಹ ಸಂಸ್ಥೆ ನಿರಂತರವಾಗಿ ಬದಲಾಗುತ್ತಿದೆ. ಹೆಣ್ಣುಮಕ್ಕಳ ರಕ್ಷಣೆಗೆ ತಂದೆತಾಯಿಗಳು ಇಡಬೇಕಾದ ಹಣವನ್ನು ಅವರ ಮದುವೆಗಳಿಗೆ ದುಂದುವೆಚ್ಚ ಮಾಡುತ್ತಾರೆ. ಬರಿಗೈಯಲ್ಲಿ ಮಗಳ ಉಸ್ತುವಾರಿಯನ್ನು ಗಂಡನಿಗೆ ಒಪ್ಪಿಸುತ್ತಾರೆ. ಇದು ಅಸುರಕ್ಷಿತ ಸ್ಥಿತಿಯಲ್ಲಿ ಮಹಿಳೆಯರು ಬದುಕುವಂತೆ ಮಾಡುವುದು ಮಾತ್ರವಲ್ಲ. ಅವರನ್ನು ಹಲವು ಬಾರಿ ಸಾವಿಗೂ ದೂಡುತ್ತದೆ. ಆರ್ಥಿಕ ಅಸುರಕ್ಷಿತತೆ ಹೆಣ್ಣಿಗೆ ಹೆಚ್ಚಾಗಿದೆ.

ವಿರಸ ದಾಂಪತ್ಯಗಳಲ್ಲಿ ಇದು ಇನ್ನಷ್ಟು ಸಮಸ್ಯೆ. ಮುಖ್ಯವಾಗಿ ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಹೆಚ್ಚಾಗಿ ಹೆಣ್ಣಿಗೆ ವರ್ಗಾಯಿಸಲಾಗುತ್ತದೆ. ಆಗ ಆರ್ಥಿಕವಾಗಿ ಹೆಣ್ಣು ಹೆಚ್ಚು ಪರಿಶ್ರಮದ ಜೊತೆಗೆ ಹೊಣೆಗಾರಿಕೆಯಿಂದಲೂ ನಲುಗುವಳು. ಏಕ ಪೋಷಕತ್ವ ಮಕ್ಕಳ ಮನೋಬಲದ ಮೇಲೆ ಯಾವುದೇ ಪೆಟ್ಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಣ್ಣಿಗೆ ಮಾತ್ರ ಇದೆ.

ಮಹಿಳೆ ಪತಿಯ ಮರಣದ ನಂತರ ಮಕ್ಕಳ ಹೊಣೆಗಾರಿಕೆ ಹೊರುವ ಸ್ಥಿತಿಗೂ ವಿಚ್ಛೇದನ ಪಡೆದು ಅಥವಾ ಪತಿಯಿಂದ ದೂರವಿದ್ದು ಮಕ್ಕಳ ಹೊಣೆಗಾರಿಕೆ ವಹಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ವಿಧವೆ ಮಕ್ಕಳನ್ನು ಪೋಷಿಸುವಾಗ ಒಂದು ರೀತಿಯ ಮೆಚ್ಚುಗೆ ಸಮಾಜದಿಂದ ದೊರೆಯುತ್ತದೆ. ಗಂಡನ ಹಿಂಸೆಯನ್ನು ತಾಳದೆ ವಿಚ್ಛೇದನ ಪಡೆದು ಹೊರಬಂದಾಗ ಸಮಾಜ ಇವರ ಬಗ್ಗೆ ಮೆಚ್ಚುಗೆಗಿಂತ ಕುಹಕವನ್ನೇ ಪ್ರದರ್ಶಿಸುತ್ತದೆ. ಈ ಸ್ಥಿತಿಯಿಂದಲೂ ಮಹಿಳೆಯರು ಇಂದು ಹಿಂಸೆಗೆ ಒಳಗಾಗುತ್ತಿದ್ದಾರೆ.

ಇದರಿಂದಾಗಿ ಕೌಟುಂಬಿಕ ಹಿಂಸೆಯನ್ನು ನೋಡುವ ಸಾಮಾಜಿಕರ ದೃಷ್ಟಿಕೋನ ಬದಲಾಗಬೇಕಾಗಿದೆ. ಟೆಕ್ಕಿ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ಟೆಕ್ಕಿ ಸಮುದಾಯವೇ ಹೌಹಾರಿ ಮಹಿಳೆಯರ ಬಗೆಗೆ, ಮಹಿಳೆಯರ ವಿಶೇಷ ಕಾನೂನುಗಳ ಬಗೆಗೆ ಮಾತನಾಡುವುದು ದುರದೃಷ್ಟಕರ. ಲಿಂಗತ್ವ ದೃಷ್ಟಿಯಿಂದ ಸಮಸ್ಯೆಗಳನ್ನು ನೋಡುವ ವಿಧಾನವನ್ನೇ ಅರಿಯದ ಇವರು ಇನ್ನೂ ಬಾಲಕರಾಗಿ ಕಾಣುತ್ತಾರೆ. ಪತ್ನಿಯನ್ನು ಮಾನವಳಂತೆ ಕಾಣುವ ಮತ್ತು ಗೌರವಿಸುವುದನ್ನು ರೂಢಿಸಿಕೊಳ್ಳುವ ಮೂಲಕ ಗಂಡುಮಕ್ಕಳು ತಮ್ಮನ್ನು ತಾವು ಗೌರವಿಸಿಕೊಳ್ಳಬೇಕಾಗಿದೆ.

ಸಮಂತ ಎಂಬ ನಟಿ ತನ್ನ ಕುಟುಂಬದಲ್ಲಿನ ಕೆಲಸಗಳು ನನ್ನವು ಎಂಬುದನ್ನು ಆಕೆಯ ಗಂಡ ತಿಳಿಸುತ್ತಿದ್ದ, ನಾನು ಸುಸ್ತಾಗಿ ಬಂದರೂ ಆ ಕೆಲಸಗಳನ್ನು ನನ್ನ ಜವಾಬ್ದಾರಿ ಎನ್ನಲಾಗುತ್ತಿತ್ತು ಎಂದು ಹೇಳಿಕೊಂಡಿದ್ದಾಳೆ. ಅಂದರೆ ಕೋಟಿಗಳನ್ನು ಸಂಪಾದಿಸುವ ಹೆಂಡತಿಯಾದರೂ ಅವಳು ಸಮಾಜದಲ್ಲಿ ಎಷ್ಟೇ ಮುಖ್ಯ ವ್ಯಕ್ತಿಯಾಗಿದ್ದರೂ ಅವಳು ಮನೆಯಲ್ಲಿ ‘ಹೆಂಡತಿ’ ಮಾತ್ರ ಎನ್ನುವ ಪುರುಷ ಧೋರಣೆ ಇಂದಿನ ಅನೇಕ ವಿಚ್ಛೇದನಗಳಿಗೂ ಕಾರಣವಾಗಿದೆ. ಇದು ಸಹಜ ಎನ್ನುವಂತೆ ಎಲ್ಲರೂ ನೋಡುವುದರಿಂದ, ಹೆಣ್ಣು ಆ ಕೆಲಸ ನಿರಾಕರಿಸಿದರೆ ಅಥವಾ ಗಂಡನಿಗೂ ಆ ಕೆಲಸಗಳನ್ನು ಹಂಚಿಕೊಳ್ಳಲು ಸೂಚಿಸಿದರೆ ಅದು ಹಿಂಸೆಯಾಗುತ್ತದೆ. ಇದನ್ನೇ ಅನೇಕ ಗಂಡುಮಕ್ಕಳು ನಂಬಿದ್ದಾರೆ. ಬದಲಾದ ಸಾಮಾಜಿಕತೆಯಲ್ಲಿ ಕೆಲಸಗಳು, ಕರ್ತವ್ಯಗಳು ಬದಲಾಗಬೇಕಾಗುತ್ತವೆ. ಮಕ್ಕಳು ಮುದ್ದಿಸಲು ಮಾತ್ರವಲ್ಲ. ಅವರಿಗೆ ‘ತಂದೆತನ’ದ ಕರ್ತವ್ಯವನ್ನೂ ಮಾಡಬೇಕು. ಅದು ಬರೀ ಆರ್ಥಿಕ ನೆರವಲ್ಲ. ಉಣಿಸುವುದರಿಂದ ಹಿಡಿದು ಅವರ ದಿನನಿತ್ಯ ಕೆಲಸಗಳಲ್ಲಿ ಭಾಗಿಯಾಗುವುದು ಮಾತ್ರ ಇಂದು ಹೆಣ್ಣು ಗಂಡುಗಳ ನಡುವಿನ ಸಾಮರಸ್ಯಕ್ಕೆ ಮಾರ್ಗವಾಗಬಲ್ಲದು. ಇದರ ಮೂಲಕ ಹಿಂಸಾಮುಕ್ತ ಕುಟುಂಬವನ್ನು ರೂಪಿಸಿಕೊಳ್ಳಬಹುದಾಗಿದೆ. ತಾಯಿ ಕುರಿತು ಕವನ ಬರೆಯುವ ಕವಿಗಳು ತಂದೆತನದ ಬಗ್ಗೆ ಕವಿತೆ ಬರೆಯುವಂತಾಗಲಿ. ಅಂತಹ ಜೀವನವಿಧಾನ ನಮ್ಮದಾಗಲಿ. ಮನೆಯ ಮತ್ತು ಹೊರಗಿನ ಕೆಲಸಗಳಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಹಿಂಸಾಮುಕ್ತ ಹಾದಿಗೆ ನಾಂದಿ.

ಪ್ರೊ.ಆರ್.ಸುನಂದಮ್ಮ

ವಿಶ್ರಾಂತ ಪ್ರಾಧ್ಯಾಪಕರು

ಇದನ್ನೂ ಓದಿ- ಸ್ತ್ರೀದ್ವೇಷಕ್ಕೆ ಎಷ್ಟು ಮುಖಗಳು?

More articles

Latest article