ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಇಂಟರ್ನ್ ಶಿಫ್‌ಗೆ ಎಂದು ಪ್ರತಿದಿನ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪಶು ವೈದ್ಯಕೀಯ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿಯಾಗಿ ದಾರುಣ ಸಾವನ್ನಪ್ಪಿದ್ದಾರೆ. ಈ ದುರಂತ ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಯೋಗಿತಾ ಮೃತ ದುರ್ದೈವಿ ವಿದ್ಯಾರ್ಥಿನಿ.
ಯೋಗಿತಾರನ್ನು ಅವರ ತಂದೆ ಪ್ರತಿದಿನ ಬಸ್ ನಿಲ್ದಾಣಕ್ಕೆ ಬಿಡುತ್ತಿದ್ದರು. ಇಂದೂ ಸಹ ಹಾಗೆಯೇ ದ್ವಿಚಕ್ರ ವಾಹನದಲ್ಲಿ ಡ್ರಾಪ್ ಮಾಡಲು ಬರುತ್ತಿರುವಾಗ ಎಂ.ಜಿ ರಸ್ತೆಯ ಅಂಭಾಭವಾನಿ ಹೋಟೆಲ್ ಬಳಿ ಬರುತ್ತಿದ್ದ ಕ್ಯಾಂಟರ್‌ಗೆ ಪಾದಚಾರಿಯೊಬ್ಬ ಅಡ್ಡ ಬಂದಿದ್ದಾನೆ. ಆತನನ್ನು ತಪ್ಪಿಸಲು ಕ್ಯಾಂಟರ್ ಚಾಲಕ ವಾಹನವನ್ನು ಪಕ್ಕಕ್ಕೆ ಚಲಾಯಿಸಿದ್ದಾನೆ. ಈ ವೇಳೆ ಬೈಕ್‌ಗೆ ಕ್ಯಾಂಟರ್ ತಗುಲಿ ಬೈಕ್ ಕೆಳಗೆ ಉರುಳಿದೆ. ಬೈಕ್‌ನ ಹಿಂದೆ ಕುಳಿತಿದ್ದ ಯೋಗಿತಾ ಉರುಳಿ ಬಿದಿದ್ದು, ತಲೆಗೆ ಗಂಭೀರವಾದ ಗಾಯವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ ಅಸು ನೀಗಿದ್ದಾರೆ.
ಯೋಗಿತಾ ಹಾಸನದ ಪಶು ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷ ಮುಗಿಸಿ ಬೆಂಗಳೂರಿನಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದರು. ತಂದೆಯ ಕಣ್ಣೆದುರೇ ಮಗಳು ಸಾವನ್ನಪ್ಪಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.