ಅಮಿತ್‌ ಶಾ ಹೇಳಿಕೆ ಅಳಿಸಿಹಾಕಲು ಎಕ್ಸ್‌ ಗೆ ಕೇಂದ್ರ ಸರ್ಕಾರ ಸೂಚನೆ; ಕಾಂಗ್ರೆಸ್‌ ಆರೋಪ

Most read

ಬೆಂಗಳೂರು: ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರನ್ನು ಕುರಿತು ಅಮಿತ್ ಶಾ ನೀಡಿರುವ ಅವಹೇಳನಾಕಾರಿ ಹೇಳಿಕೆಯ ವಿಡಿಯೋವನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಈ ಸಂಬಂಧ ದೆಹಲಿಯ ವಿಜಯ್ ಚೌಕ್ ಬಳಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರೆ ಹಾಗೂ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರಿನೇಟೆ, ಅಮಿತ್ ಶಾ ಅವರ ಭಾಷಣದ ವಿಡಿಯೋವನ್ನು ಅಳಿಸಿ ಹಾಕಲು ಕೇಂದ್ರ ಸರ್ಕಾರ ಸೂಚಿಸಿರುವುದಾಗಿ ಕಾಂಗ್ರೆಸ್ ಸಂಸದರು, ಪದಾಧಿಕಾರಿಗಳು ಮತ್ತು ವಿಪಕ್ಷದ ಕೆಲ ನಾಯಕರಿಗೆ ಎಕ್ಸ್ ನಿಂದ ಈ-ಮೇಲ್ ಬಂದಿದೆ ಎಂದು ಹೇಳಿದರು.
ಬಾಬಾ ಸಾಹೇಬರ ಕುರಿತು ಅಮಿತ್ ಶಾ ಅವರು ನೀಡಿರುವ ಹೇಳಿಕೆ ಅಕ್ಷ್ಯಮ್ಯ ಅಪರಾಧ. ಅವರು ಈ ಪಾಪಕೃತ್ಯಕ್ಕೆ ಕ್ಷಮೆ ಯಾಚಿಸಬೇಕು. ಅವರನ್ನು ಗೃಹಮಂತ್ರಿ ಹುದ್ದೆಯಿಂದ ವಜಾ ಮಾಡಬೇಕು ಎಂದು ದೇಶ ಆಗ್ರಹಿಸುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಮತ್ತು ಇಡೀ ಆಡಳಿತಯಂತ್ರ ಅವರನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿರುವ ಅವಮಾನಕರ ಹೇಳಿಕೆಯ ವಿಡಿಯೋವನ್ನು ಪೋಸ್ಟ್ ಮಾಡುವುದು ದೇಶದ ಕಾನೂನಿನ ಉಲ್ಲಂಘನೆಯಾಗಿದೆ. ಅದನ್ನು ತೆಗೆದು ಹಾಕಬೇಕು ಎಂದು ಎಕ್ಸ್ ಗೆ ಮೋದಿ ಸರ್ಕಾರ ಸೂಚನೆ ನೀಡಿದೆ. ಆದರೆ, ಎಕ್ಸ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು ವಿಡಿಯೋ ಡಿಲಿಟ್ ಮಾಡಲು ನಿರಾಕರಿಸಿದೆ. ಈ ಸಂಬಂಧ ನಮಗೆ ಈ-ಮೇಲ್ ಸಂದೇಶ ಬಂದಿದೆ ಎಂದು ತಿಳಿಸಿದರು.ನೀವು ವಿಡಿಯೋ ಡಿಲಿಟ್ ಮಾಡಲು ಏಕೆ ಸೂಚಿಸುತ್ತಿದ್ದೀರಿ? ನೀವು ಯಾವ ಮುಖ ಇಟ್ಟುಕೊಂಡು ವಿಡಿಯೋ ಕಾನೂನು ಉಲ್ಲಂಘಿಸುತ್ತಿದೆ ಎಂದಿದ್ದೀರಿ? ಎಂದು ಅವರು ವಾಗ್ದಾಳಿ ನಡೆಸಿದರು.

More articles

Latest article