ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ವ್ಯಾಪಕ ಚರ್ಚೆಗೆ ಗ್ರಾಸವೊದಗಿಸಿದ. ಕಾಂಗ್ರೆಸ್ ನಾಯಕರು ಸಿಟಿ ರವಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಪರಿಷತ್ನಲ್ಲಿ ಇಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿರುವಾಗ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ನನ್ನ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದವನ್ನು ಬಳಸಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯರು ಪ್ರಾಸ್ಟಿಟ್ಯೂಟ್ ಎಂಬ ಪದ ಬಳಕೆ ಮಾಡಿದ್ದಾರೆ. ಸಿ.ಟಿ. ರವಿ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಹೇಳಿದ್ದಾರೆ. ಈ ಪದವನ್ನು ಬಳಕೆ ಮಾಡಿದ್ದರಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶಗೊಂಡಿದ್ದಾರೆ. ತಮಗಾದ ಅವಮಾನವನ್ನು ತಡೆಯಲಾರದೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಣ್ಣಿರು ಹಾಕುತ್ತಾ ಪರಿಷತ್ತಿನಿಂದ ಹೊರ ಹೋಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸದಸ್ಯರು ಸಿಟಿ ರವಿ ವಿರುದ್ಧ ಮುಗಿಬಿದ್ದಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಸಭಾಪತಿಗೆ ಮನವಿ ಮಾಡಿದ್ದಾರೆ.
ಅಶ್ಲೀಲ ಪದ ಬಳಿಕೆ ಮಾಡಿರುವ ಸಿಟಿ ರವಿ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಕಾಂಗ್ರೆಸ್ ನಾಯಕರು ಕಾನೂನ ಪರಿಣಿತರ ಜೊತೆ ಚರ್ಚೆ ನಡೆಸಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿ ಕಚೇರಿಯಲ್ಲಿ ಡಿ ಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಬೋಸರಾಜ್ ಲಕ್ಷ್ಮಿ ಹೆಬ್ಬಾಳ್ಕರ್, ಹೆಚ್ ಕೆ ಪಾಟೀಲ್ ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ಉಮಾಶ್ರೀ ಪ್ರತಿಕ್ರಿಯಿಸಿ, ಸಿ.ಟಿ ರವಿ ಆ ಪದ ಬಳಕೆ ಮಾಡಿದ್ದು ನಿಜ ಎಂದಿದ್ದಾರೆ. ಸಿ.ಟಿ. ರವಿ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಜರಿದರು. ಆಗ ನೀವು ಅಪಘಾತದಲ್ಲಿ ಇಬ್ಬರ ಕೊಲೆ ಮಾಡಿದ್ದೀರಿ, ಕೊಲೆಗಡುಕರು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕೂಗಿದರು. ಸಿ.ಟಿ. ರವಿ ಪ್ರಾಸಿಟ್ಯೂಟ್ ಎಂದು 10 ಬಾರಿ ಕೂಗಿದ್ದು ನಿಜ ಎಂದರು.