ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ವಿಷಯ. ಸಮ್ಮೇಳನದ ಅಧ್ಯಕ್ಷತೆಗೆ ಸಾಹಿತಿಗಳಲ್ಲದವರನ್ನು ಮಾಡಲು ಹೊರಟಿದ್ದ ಕನ್ನಡ ಸಾಹಿತ್ಯ ಪರಿಷತ್ ಅಂಥ ದುಸ್ಸಾಹಸವನ್ನೇನು ಮಾಡದೇ ಇರುವುದು ಸಮಾಧಾನದ ವಿಷಯ. ಕನ್ನಡ ಸಾಹಿತ್ಯ, ಸಂಶೋಧನೆ ಕ್ಷೇತ್ರಕ್ಕೆ ಅದ್ಭುತವಾದ ಕೊಡುಗೆಗಳನ್ನು ಕೊಟ್ಟಿರುವ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಯಶಸ್ವಿಯಾಗಿ ನಡೆಯಲೆಂದು ಹಾರೈಸುವೆ.
ಕನ್ನಡ ಸಾಹಿತ್ಯ ಪರಿಷತ್ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತು ಅನೇಕ ಪ್ರಾತಃಸ್ಮರಣೀಯರು ಕಟ್ಟಿದ ಸಂಸ್ಥೆ. ಅದಕ್ಕೊಂದು ಭವ್ಯವಾದ ಇತಿಹಾಸವಿದೆ. ಆ ಕಾಲದಿಂದಲೂ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೇ ಕರೆಯಲಾಗುತ್ತದೆ. ಅನೇಕ ಮಹಾನ್ ಸಾಹಿತಿಗಳು ಕಸಾಪ ತೇರನ್ನು ಎಳೆಯುತ್ತ ಬಂದಿದ್ದಾರೆ. ಅದು ನಡೆಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೂ ತನ್ನದೇ ಆದ ಹಿರಿಮೆ ಇದೆ, ಗರಿಮೆ ಇದೆ. ಈ ಕಾರಣಕ್ಕಾಗಿಯೇ ಕರ್ನಾಟಕ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಸಮ್ಮೇಳನಕ್ಕೆ ಅಪಾರ ಪ್ರಮಾಣದ ಹಣದ ಅನುದಾನ ನೀಡುತ್ತದೆ. ಇದೆಲ್ಲವೂ ಸರಿಯೇ ಹೌದು.
ಆದರೆ ನಾವು ಈ ಹೊತ್ತಿನಲ್ಲಿ ಕೇಳಿಕೊಳ್ಳಲೇಬೇಕಾದ ಹಲವು ಪ್ರಶ್ನೆಗಳಿವೆ. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಕನ್ನಡಿಗರು ಸೇರುತ್ತಾರೆ, ಸಂಭ್ರಮಿಸುತ್ತಾರೆ. ಸಾಹಿತ್ಯ ಸಮ್ಮೇಳನ ಅಕ್ಷರಶಃ ಕನ್ನಡದ ಜಾತ್ರೆಯೇ ಆಗಿಹೋಗಿದೆ. ಆದರೆ ಇಷ್ಟಾದರೆ ಸಾಕೇ? ಇದಕ್ಕೆ ಹೊರತಾಗಿ ಈ ಸಮ್ಮೇಳನಗಳ ಹೊಣೆಗಾರಿಕೆ ಏನು? ಸಮ್ಮೇಳನ ಕೇವಲ ಸಂಭ್ರಮದ ಜಾತ್ರೆಯಾಗಿ ಉಳಿಯಬೇಕೆ ಅಥವಾ ಅದಕ್ಕೆ ಮೀರಿದ್ದನ್ನು ಸಾಧಿಸಲು ಸಾಧ್ಯವಿಲ್ಲವೇ?
ಮೂರು ದಿನಗಳ ಸಂಭ್ರಮದಲ್ಲಿ ಹಲವು ಬಗೆಯ ವಿಚಾರಗೋಷ್ಠಿಗಳು ನಡೆಯುತ್ತದೆ. ಸಮಕಾಲೀನ ಸಂಗತಿಗಳ ಕುರಿತಾಗಿ ಮಹತ್ವದ ಚರ್ಚೆಗಳು ನಡೆಯುತ್ತವೆ. ಇದೆಲ್ಲ ಆದ ನಂತರ ಸಮ್ಮೇಳನದಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ. ಈ ನಿರ್ಣಯಗಳನ್ನು ಸರ್ಕಾರಕ್ಕೂ ಸಲ್ಲಿಸಲಾಗುತ್ತದೆ.
ಆದರೆ ಇದುವರೆಗೆ ಕಸಾಪ ತೆಗೆದುಕೊಂಡ ನಿರ್ಣಯಗಳ ಅನುಷ್ಠಾನವಾಗಿದೆಯೇ? ಎಲ್ಲ ನಿರ್ಣಯಗಳ ವಿಷಯ ಹಾಗಿರಲಿ, ಕೆಲವಾದರೂ ನಿರ್ಣಯಗಳನ್ನು ಸರ್ಕಾರಗಳು ಅನುಷ್ಠಾನಗೊಳಿಸಿವೆಯೇ? ಇಲ್ಲವಾದಲ್ಲಿ ಪ್ರತಿ ಸಮ್ಮೇಳನದಲ್ಲೂ ಇಂಥ ನಿರ್ಣಯಗಳನ್ನು ಅಂಗೀಕರಿಸುವ ಅಗತ್ಯವಾದರೂ ಏನು? ನಿರ್ಣಯಗಳ ಮಂಡನೆ ಅನ್ನುವುದು ಕೇವಲ ಒಂದು ಸಂಪ್ರದಾಯವಾಗಿ ಉಳಿಯುವುದಾದರೆ ಸಾಹಿತ್ಯಸಮ್ಮೇಳನಕ್ಕಾಗಲೀ, ಪರಿಷತ್ ಗಾಗಿ ಯಾವ ಗೌರವ ಉಳಿಯುತ್ತದೆ? ಕಸಾಪ ಅಂಗೀಕರಿಸುವ ನಿರ್ಣಯಗಳನ್ನು ಅಂಗೀಕರಿಸಲು ಸರ್ಕಾರಕ್ಕೆ ಆಗುವುದಿಲ್ಲವಾದರೆ ಅದು ಕೋಟ್ಯಂತರ ರುಪಾಯಿ ಅನುದಾನವನ್ನೇಕೆ ಕೊಡುತ್ತದೆ? ಮುಖ್ಯಮಂತ್ರಿಗಳಾದಿಯಾಗಿ ಸಚಿವ ಸಂಪುಟದ ಮಂತ್ರಿಗಳು, ಶಾಸಕರು ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ವಿಜೃಂಭಿಸುವುದಕ್ಕಾದರೂ ಏನು ಅರ್ಥವಿರುತ್ತದೆ?
ಇದೆಲ್ಲದರ ನಡುವೆ ಕನ್ನಡ ಸಾಹಿತ್ಯ ಪರಿಷತ್ ತನ್ನ ಗೊತ್ತುಗುರಿಗಳಿಂದ ವಿಮುಖವಾಗುತ್ತಿದೆಯೇನೋ ಎಂಬ ಅನುಮಾನವೂ ನನ್ನನ್ನು ಕಾಡುತ್ತದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರ ಸ್ಥಾನಮಾನ ಪಡೆಯುವ ಅಗತ್ಯವಾದರೂ ಏನಿತ್ತು? ಪರಿಷತ್ ಯಾವತ್ತಿಗೂ ಸರ್ಕಾರದ ಅಥವಾ ಇನ್ಯಾವುದೇ ಸಂಸ್ಥೆಯ ಹಂಗಿನಲ್ಲಿ ಇರಬಾರದಲ್ಲವೇ? ಈ ಥರದ ಸ್ಥಾನಮಾನಕ್ಕೆ ಪರಿಷತ್ ಅಧ್ಯಕ್ಷರು ಹಲ್ಲುಗಿಂಜಿ ನಿಂತರ ಸಂಸ್ಥೆಯ ಸ್ವಾಯತ್ತತೆ ಎಲ್ಲಿ ಉಳಿಯುತ್ತದೆ.
ಕಸಾಪ ಅಧ್ಯಕ್ಷರಾದವರು ಹಿಂದೆಯೆಲ್ಲ ಸರ್ಕಾರ ತಪ್ಪು ಮಾಡಿದಾಗಲೂ ಯಾವುದೇ ಮುಲಾಜಿಲ್ಲದೆ ಮಾತನಾಡುತ್ತಿದ್ದರು. ಸ್ವಭಾವತಃ ಹೋರಾಟಗಾರರೇ ಆಗಿದ್ದ ಪ್ರೊ ಚಂದ್ರಶೇಖರ ಪಾಟೀಲರು ಅಂದಿನ ಸರ್ಕಾರಕ್ಕೆ ಸವಾಲೊಡ್ಡಿಯೇ ಸಮ್ಮೇಳನ ನಡೆಸಿದ್ದರು. ಅಂದಿನ ಮುಖ್ಯಮಂತ್ರಿ ಸಮ್ಮೇಳನಕ್ಕೇ ಬರುವುದಿಲ್ಲ ಎಂದು ಬೆದರಿಸಿದರೂ ಚಂಪಾ ಅವರು ಅಂಜಿರಲಿಲ್ಲ. ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ಅವರು ತಾವು ಹೇಳಬೇಕಾಗಿದ್ದನ್ನು ಹೇಳುವ ಎದೆಗಾರಿಕೆ ಪ್ರದರ್ಶಿಸಿದ್ದರು. ಯಾರ ಮುಲಾಜಿಗೂ ಬೀಳದೇ ಇದ್ದರಷ್ಟೆ ಇಂಥ ನಿಷ್ಠುರತೆ ಸಾಧ್ಯವಾಗುತ್ತದೆ. ಚಂಪಾ ಅಧ್ಯಕ್ಷತೆಯ ಅವಧಿಯಲ್ಲಿ ಸರ್ಕಾರದ ತೀರ್ಮಾನಗಳು ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿದ್ದಾಗ ಬೀದಿಗಿಳಿದು ಹೋರಾಡಲೂ ಅವರು ಹಿಂದೆಮುಂದೆ ನೋಡಲಿಲ್ಲ. ಆದರೆ ಈಗ ಆಗುತ್ತಿರುವುದೇನು?
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಈಗ ಯಾವುದೇ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆಯುತ್ತಿದೆ. ಸ್ಪರ್ಧೆ ಮಾಡಿದವರು ಕೋಟಿಗಳ ಲೆಕ್ಕದಲ್ಲಿ ಹಣ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ಇಷ್ಟೆಲ್ಲ ಹಣ ಖರ್ಚು ಮಾಡಲು ಸಾಧ್ಯವಿಲ್ಲದ ಸಾಹಿತಿಗಳು ಹಿಂದೆ ಸರಿಯುತ್ತಿದ್ದರೆ ಸಾಹಿತ್ಯ ಪರಿಚಾರಕರ ಹೆಸರಿನ ರಾಜಕಾರಣಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಗೆಲುವಿಗಾಗಿ ರಾಜಕೀಯ ಪಕ್ಷಗಳ ಮುಂದೆ, ಆ ಪಕ್ಷಗಳ ಮಾತೃ ಸಂಘಟನೆಗಳ ಮುಂದೆ ಈ ಸ್ಪರ್ಧಿಗಳು ಕೈ ಒಡ್ಡಿ ನಿಲ್ಲುತ್ತಿದ್ದಾರೆ. ಹೀಗಿರುವಾಗ ಇಂಥವರು ಅಧ್ಯಕ್ಷರಾದರೆ ಕನ್ನಡ ಸಾಹಿತ್ಯ ಪರಿಷತ್ ನ ಘನತೆ ಉಳಿಯುತ್ತದೆಯೇ? ಕಸಾಪ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲು, ಅಧಿಕಾರದ ಅವಧಿ ವಿಸ್ತರಿಸಿಕೊಳ್ಳಲು ಮೇಲಿಂದ ಮೇಲೆ ಬೈಲಾ ತಿದ್ದುಪಡಿ ಮಾಡುವುದು ಯಾವ ಸಂದೇಶ ನೀಡುತ್ತದೆ?
ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ. ಅದರ ಜೊತೆಗೆ ಪರಿಷತ್ ಎದುರಿಸುತ್ತಿರುವ ಬಿಕ್ಕಟ್ಟುಗಳ ಕುರಿತೂ ಚರ್ಚೆಯಾಗಲಿ. ಸಾಹಿತ್ಯ ಪರಿಷತ್ ಎಂಬುದು ಸಾಹಿತಿಗಳ ಸಂಘಟನೆಯಾಗಿ ಉಳಿಯಬೇಕೆ ಹೊರತು ಅಲ್ಲಿ ಪುಡಾರಿಗಳ ಮೇಲಾಟ ನಡೆಯಬಾರದು. ಅದರ ಬಗ್ಗೆ ಗಂಭೀರ ಚರ್ಚೆ ನಡೆಯಲಿ ಎಂಬುದು ನನ್ನ ಕಾಳಜಿಯಾಗಿದೆ.
-ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ