ಬೆಂಗಳೂರು: ಅಂಬೇಡ್ಕರ್ ಅಂಬೇಡ್ಕರ್…. ಎಂದು ಹೇಳುವುದು ಇದೀಗ ಫ್ಯಾಷನ್ ಆಗಿಬಿಟ್ಟಿದೆ. ಅಂಬೇಡ್ಕರ್ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು ಎಂದು ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ನೀಡಿದ್ದ ಹೇಳಿಕೆಗೆ ದೇಶದ ಉದ್ದಗಲಕ್ಕೂ ವ್ಯಾಪಕ ಟೀಕೆಗೆ ಒಳಗಾಗಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ಅಮಿತ್ ಶಾ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲಾ ಮುಖಂಡರೂ ಶಾ ಹೇಳಿಕೆಯನ್ನು ಖಂಡಿಸಿದ್ದಾರೆ.
ರಾಜಕೀಯ ಮುಖಂಡರಷ್ಟೇ ಅಲ್ಲದೆ, ಚಿಂತಕರು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರೂ ಸಹ ಅಮಿತ್ ಶಾ ಹೇಳೀಕೆಯನ್ನು ವಿರೋಧಿಸಿದ್ದು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬನ್ನಿ ಯಾರು ಏನು ಹೇಳಿದ್ದಾರೆ ನೋಡೋಣ!
“ಡಾ. ಅಂಬೇಡ್ಕರ್ ಅವರ ಬಗ್ಗೆ ಇರುವ ಅಸಹನೆಯನ್ನು ಅಮಿತ್ ಶಾ ಮಾತು ಬಯಲು ಮಾಡಿದೆ. ಸ್ವಚ್ಛ ಭಾರತದ ಮಾತಾಡುವ ಇಂಥವರಿಗೆ ಭಾವ ಭಾರತದ ಸ್ವಚ್ಛತೆ ಬೇಕಾಗಿಲ್ಲ. ಮಾನಸಿಕ ಮಾಲಿನ್ಯ ತುಂಬಿಕೊಂಡ ಪಡೆಯ ಪ್ರತೀಕ ಈ ಅಮಿತ್ ಶಾ ಮಾತು. ಸಾಮಾಜಿಕ ಸಮಾನತೆಯ ರೂಪಕ ವ್ಯಕ್ತಿತ್ವವಾದ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕತೆ ಇಂಥವರಿಗಿಲ್ಲ. ಇಂಥವರಿಗೆ ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್ ಅವರು ಬೇಕು ಅಷ್ಟೇ. ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಖಂಡನೀಯ”
– ಡಾ ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿಗಳು
“ತನ್ನನ್ನು ಶ್ರೇಷ್ಠ ಹಿಂದು ಎಂದು ಕರೆದುಕೊಳ್ಳುತ್ತಿದ್ದ ಗಾಂಧಿಯನ್ನೇ ಕೊಂದ ಮನುವಾದಿಗಳಿಗೆ, ಅಂಬೇಡ್ಕರ್ ಸೈದ್ಧಾಂತಿಕತೆಯನ್ನು ಮುಗಿಸುವುದು ಸುಲಭವೇನಲ್ಲ. ಅಕ್ಷರ ಪ್ರಜ್ಞೆಯುಳ್ಳ ಪ್ರತಿಯೊಬ್ಬ ಭಾರತೀಯನಿಗೂ ಅಂಬೇಡ್ಕರ್ ನಿಜದ ತಂದೆ. ಮೇಲ್ಜಾತಿಯ ಶೂದ್ರ ಮನಸ್ಸುಗಳಿಗೆ ಕೋಮು ವಿಷ ತುಂಬುವ ಮೂಲಕ ದಮನಿತ ಸಮುದಾಯಗಳ ಭವಿಷ್ಯವನ್ನು ನಾಶ ಮಾಡುವ ಕುತಂತ್ರದ ಭಾಗವಾಗಿ ಬಾಬಾಸಾಹೇಬರನ್ನು ಹಣಿಯಲು ಹೊರಟಿದ್ದಾರೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು”.
– ಎಲ್.ಎನ್. ಮುಕುಂದರಾಜ್ ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ
“ಅಂಬೇಡ್ಕರ್ ವ್ಯಸನ ಅನ್ನುವ ಶಬ್ದವೇ ಅಮಿತ್ ಶಾ ವ್ಯಕ್ತಿತ್ವಕ್ಕಿಂತ ಆತ ಅಲಂಕರಿಸಿರುವ ಹುದ್ದೆಗೆ ಅಗೌರವ ತರುವ ರೀತಿಯ ಪ್ರಯೋಗ. ಇವತ್ತು ಈ ದೇಶಕ್ಕೆ ಬೇಕಿರುವುದು ಅಂಬೇಡ್ಕರ್ ಪ್ರತಿಪಾದಿಸಿದ ಸಂವಿಧಾನ ಧರ್ಮ. ಇದನ್ನು ಬಿಟ್ಟು ಬೇರೆ ಯಾವ ಭಗವಾನನೂ ಇಲ್ಲ”.
– ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಹಿರಿಯ ಸಾಹಿತಿಗಳು
“ಅಂಬೇಡ್ಕರ್ ಎಂಬುದು ಒಂದು ಹೆಸರಲ್ಲ.. ಅದು ಈ ದೇಶವನ್ನುಳಿಸಿರುವ ಶಕ್ತಿಮಂತ್ರ..ಸ್ವರ್ಗ ನರಕಗಳಂಥ ಸುಳ್ಳುಗಳಾಚೆಗಿನ ನನ್ನಿ….. ನೊಂದು ಬೆಂದವರ ಬಾಳ ದೊಂದಿ. ನಾವು ಭಾರತೀಯರು ‘ಸ್ವಾಭಿಮಾನ’ ಅನ್ನುವ ಪದಕ್ಕೆ ಬಳಸುವ ಸಮಾನಾರ್ಥಕ ಪದ ಅಂಬೇಡ್ಕರ್..ಅಮಿತ್ ಶಾ ಮತ್ತವರ ಪಟಾಲಂ ಈ ದೇಶದಲ್ಲಿದ್ದಾರೆ, ಅಧಿಕಾರ ಅನುಭವಿಸುತ್ತಿದ್ದಾರೆ ಅಂದರೆ ಅದು ಬಾಬಾಸಾಹೇಬರ ,ಕಾರುಣ್ಯ. ಅಂಬೇಡ್ಕರ್ ಎಂಬುದು ಕೇವಲ ಒಂದು ಹೆಸರಲ್ಲ ನಮ್ಮ ಉಚ್ವಾಸ ನಿಶ್ವಾಸ…”
-ಹುಲಿಕುಂಟೆ ಮೂರ್ತಿ ಉಪನ್ಯಾಸಕರು
“ಸಾಮಾಜಿಕ ನ್ಯಾಯದ, ಪ್ರಜಾಪ್ರಭುತ್ವದ, ಜಾತಿರಹಿತ-ವರ್ಣರಹಿತ ನವ ಭಾರತ ನಿರ್ಮಾಣದ ಪ್ರತೀಕವೇ ಅಂಬೇಡ್ಕರ್. ಆ ಹೆಸರು ವ್ಯಸನ ಅಲ್ಲ ನಮ್ಮ ಆಶಯವಾಗಬೇಕು. ನಾವು ಗ್ರಾಮ ಸ್ವರಾಜ್ಯ ಅಂದ್ರೆ ಗಾಂಧಿ ಅಂತಿವೋ, ಹಂಗೆ “ಸಾಮಾಜಿಕ ನ್ಯಾಯದ ರಾಜ್ಯ” ಅಂದ್ರೆ ಅಂಬೇಡ್ಕರ್. ಅಮಿತ್ ಶಾ-ಮೋದಿ-ಸಂಘಪರಿವಾರದವರಿಗೆ ವರ್ಣವ್ಯವಸ್ಥೆ ಮತ್ತು ಜಾತಿವ್ಯವಸ್ಥೆ ಬಗ್ಗೆ ಗುಪ್ತವಾದ ಒಲವಿದೆ. ಆ ಒಲವಿನಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧವಾಗಿ ಕಾಣುತ್ತದೆ”.
-ಬಂಜಗೆರೆ ಜಯಪ್ರಕಾಶ್, ಸಂಸ್ಕೃತಿ ಚಿಂತಕರು
“ಭಗವಾನ್ ಅಂತ ಹೇಳಿ ಪುಣ್ಯ ಕಟ್ಕೊಳೋದಾದ್ರೆ ಅದು ಅಮಿತ್ ಶಾನೇ ಕಟ್ಕೊಳ್ಳಿ. ಜನರಿಗೆ ದಿಕ್ಕು ತಪ್ಪಿಸೋದೆ ಇವರ ಹುನ್ನಾರ. ಆದರೆ ಈ ದೇಶದ ದಲಿತರಿಗೆ, ಶೋಷಿತರಿಗೆ, ಅಸಹಾಯಕರಿಗೆ ಸಂವಿಧಾನದ ಮೂಲಕ ಬಾಬಾಸಾಹೇಬರು ಮೀಸಲಾತಿ ಕೊಟ್ಟಿದ್ದರಲ್ವ ಆ ಪುಣ್ಯ ನಮಗೆ ಸಿಗ್ಲಿ”.
– ಕೆ.ಷರಿಫ, ಹಿರಿಯ ಸಾಹಿತಿಗಳು
“ಬಿಜೆಪಿ ಮತ್ತು ಸಂಘಪರಿವಾರದವರು, ನಾವು ಈಗ ಹೊಂದಿರುವ ಸಂವಿಧಾನದ ಕಾರಣಕ್ಕಾಗಿಯೇ ಅಂಬೇಡ್ಕರ್ ಅವರನ್ನು ಅಂತರಂಗದಲ್ಲಿ ವಿರೋಧ ಮಾಡ್ತ ಬಂದಿದ್ದಾರೆ. ಅಮಿತ್ ಶಾ ಮೊದಲಿನಿಂದಲೂ ಸಂಘಪರಿವಾರದ ಮೌತ್ ಪೀಸ್ ಆಗಿ ಕೆಲಸ ಮಾಡಿದ್ದಾರೆ. ಅವರಿಗೆ ಸಂವಿಧಾನವೂ ಬೇಕಾಗಿಲ್ಲ. ಅಂಬೇಡ್ಕರ್ ಸಹ ಬೇಕಾಗಿಲ್ಲ. ಗಾಂಧಿ, ಬುದ್ಧ, ಬಸವ, ಕನಕ, ಮಹಾವೀರ, ಕುವೆಂಪು, ನಾರಾಯಣಗುರು ಹೀಗೆ ಸಮಸಮಾಜಕ್ಕಾಗಿ ದುಡಿದ ಯಾರನ್ನು ಅವರು ಒಪ್ಪುವುದಿಲ್ಲ ಎಂಬುದು ಅಮಿತ್ ಶಾ ಮಾತಿನಿಂದ ರುಜುವಾತಾಗಿದೆ. RSS ನವರು ಅಂಬೇಡ್ಕರ್ ಹೆಸರೇಳುವುದು ಕೇವಲ ಓಟ್ ಬ್ಯಾಂಕ್ ಕಾರಣಕ್ಕಾಗಿ”.
– ಸುಧೀರ್ ಕುಮಾರ್ ಮುರೊಳ್ಳಿ, ವಕ್ತಾರರು ಕೆಪಿಸಿಸಿ
“ಅಮಿತ್ ಶಾ ಮಾನಸಿಕ ಅಸ್ವಸ್ಥ. ರಾಷ್ಟ್ರೀಯ ನಾಯಕರ ಅವಹೇಳನ ಕಾಯಿದೆ ಅಡಿಯಲ್ಲಿ ತಂದು ಅಮಿತ್ ಶಾಗೆ ಶಿಕ್ಷೆ ಕೊಡಬೇಕು. ಬಾಬಾಸಾಹೇಬರನ್ನು ಕಡೆಗಾಣಿಸುವದರಲ್ಲಿ ಬಿಜೆಪಿ-ಕಾಂಗ್ರೆಸ್ ಎರಡೂ ಒಂದೇ. ಅಮಿತ್ ಶಾ ಹೇಳಿಕೆ ಹಿಂದೆ ಇರುವುದು ರಕ್ತಗತವಾಗಿ ಬಂದಿರುವಂತಹ ಜಾತಿ ರೋಗ”.
– ಬಿ ಆರ್ ಭಾಸ್ಕರ್ ಪ್ರಸಾದ್ ಚಿಂತಕರು, ಹೋರಾಟಗಾರರು
“ಅಂಬೇಡ್ಕರರು ಇಲ್ಲದೆ ಹೋಗಿದ್ದರೆ, ಅಮಿತ್ ಷಾ ಮತ್ತು ಎಲ್ಲಾ ಬ್ರಾಹ್ಮಣೇತರರು ವಿದ್ಯೆ, ಅಧಿಕಾರ ಇಲ್ಲದೆ ಗುಲಾಮರಾಗಿ ಇರುತ್ತಿದ್ದರು. ವಿವೇಕ ಇಲ್ಲದವರನ್ನು ಅಧಿಕಾರ ಸ್ಥಾನದಿಂದ ಹೊರಕ್ಕೆ ಅಟ್ಟುವುದು ಅವಶ್ಯ”.
– ಮಂಗ್ಳೂರ ವಿಜಯ ಕರ್ನಾಟಕ ಸಮಾಜವಾದಿ ವೇದಿಕೆ ಬೆಂಗಳೂರು
“ನಾವು ಮನುಷ್ಯರು ನಮ್ಮೊಳಗೊ ಸಿಡಿದ್ದೇಳುವ ಕಿಚ್ಚಿದೆ, ಸ್ವಾಭಿಮಾನದ ಮತ್ತು ಘನತೆಯ ಬದುಕಿದೆಯೆಂದು ತಿಳಿಸಿಕೊಟ್ಟ ಡಾ. ಬಿ.ಆರ್ ಅಂಬೇಡ್ಕರ್ ಅವರ ಹೆಸರು ನಮ್ಮ ಕೊನೆಯುಸಿರು ಇರುವವರೆಗೂ ನಮ್ಮೆದೆಯೊಳಗೆ ಇರುತ್ತದೆ. ಅಮಿತ್ ಶಾ ಅವರು ಗೃಹಸಚಿವರಾಗಲಿಕ್ಕೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಬರೆದಿಟ್ಟ ಸಂವಿಧಾನವೇ ಹೊರತು ಮನುಶಾಸ್ತ್ರದ ಗ್ರಂಥವಲ್ಲ ಎಂಬುವುದನ್ನ ತಲೆಯಲ್ಲಿಟ್ಟಕೊಳ್ಳಬೇಕು”.
-ಪ್ರಿಯಾಂಕಾ ಮಾವಿನಕರ್, ಬರಹಗಾರ್ತಿ, ಕಲಬುರಗಿ
“ಹೌದು ಗೃಹಸಚಿವರೇ, ಈಗ ಎಲ್ಲೆಲ್ಲಿಯೂ ಅಂಬೇಡ್ಕರ್ ಹೆಸರು ಕೇಳಿಬರುತ್ತಿದೆ. ಸಂವಿಧಾನದ ಶಕ್ತಿ ಏನೆಂದು ಈಗ ಪ್ರತಿಯೊಬ್ಬರಿಗೂ ಅರಿವಾಗಿದೆ. ಮತ್ತೆ ಅದೊಂದೇ ದಮನಿತರ ಪಾಲಿನ ರಕ್ಷಾ ಕವಚ ಎಂದೂ ಅರ್ಥವಾಗಿದೆ. ನಿಮ್ಮ ಅಹಂಕಾರ ಮುರಿಯಲು ಅಂಬೇಡ್ಕರ್ ಎಂಬ ಹೆಸರೊಂದೇ ಸಾಕು. ಮತ್ಯಾವ ಹರಿತವಾದ ಅಸ್ತ್ರವೂ ಬೇಕಿಲ್ಲ. ನಾವು ಕೂಗಿ ಕೂಗಿ ಹೇಳುತ್ತೇವೆ. ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್…”
– ಹೇಮಾ ಸುಳ್ಯ, ಪತ್ರಕರ್ತರು
“ಗೂಂಡಾ ಆಗಿದ್ದ ಅಮಿತ್ ಶಾ ಗೃಹಸಚಿವನಾಗಿರುವುದು ತಂದೆ ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರವರ ಸಂವಿಧಾನದ ಮೂಲಕ. ಮಿಸ್ಟರ್ ಅಮಿತ್ ಶಾ, ನಿಮ್ಮ ತೆವಲಿಗೆ ಬಾಬಾಸಾಹೇಬರನ್ನು ಹೀಯಾಳಿಸುವುದು ಗೃಹಮಂತ್ರಿ ಸ್ಥಾನಕ್ಕೆ ಶೋಭೆ ತರುವಂತದಲ್ಲ ಬೇಷರತ್ ಕ್ಷಮೆ ಯಾಚಿಸಿ ತಕ್ಷಣ ರಾಜಿನಾಮೆ ಸಲ್ಲಿಸಿ ಮನುವ್ಯಾದಿಗಳೇ”.
ಗುಡಿಬಂಡೆ ಗಂಗಪ್ಪ, ಚಿಕ್ಕಬಳ್ಳಾಪುರ ಜಿಲ್ಲಾಸಂಚಾಲಕರು ದಸಂಸ
“ಸಾವಿರಾರು ವರ್ಷಗಳಿಂದ ಧರ್ಮದ ಹೆಸರಿನಲ್ಲಿ ಕಾಪಿಟ್ಟುಕೊಂಡು ಬಂದಿದ್ದ ಬ್ರಾಹ್ಮಣಶಾಹಿ ರಿಲಿಜನ್ ನ ಮೇಲ್ರಚನೆಯನ್ನೇ ಬುಡಮೇಲು ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಪದೇ ಪದೇ ಕೇಳಿದರೆ ಖಂಡಿತ ಇವರು ಭಯ ಪಡಲೇಬೇಕು, ಮತ್ತು ಪಡುತ್ತಿದ್ದಾರೆ”.
-ರುದ್ರು ಪುನೀತ್ ಚಿಂತಕರು