ಸಿಂಧನೂರು: ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ರಸ್ತೆ ಬದಿ ನಿಂತಿದ್ದವರ ಮೇಲೆ ಲಾರಿಯೊಂದು ಪಲ್ಟಿಯಾಗಿ ಬಿದ್ದ ಕಾರಣ ಇಬ್ಬರು ಇಂಜಿನಿಯರ್ಗಳು ಸೇರಿ ಮೂವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಸಿಂಧನೂರು ಲೋಕೋಪಯೋಗಿ ಕ್ಯಾಂಪ್ ಸಮೀಪದ ಡಾಲರ್ಸ್ ಕಾಲನಿ ಕ್ರಾಸ್ ಬಳಿ ಈ ದುರಂತ ನಡೆದಿದೆ. ಲೋಕೋಪಯೋಗಿ ಇಲಾಖೆಯ ಜವಳಗೇರಾ ಉಪವಿಭಾಗದ ಕಿರಿಯ ಇಂಜಿನಿಯರ್ಗಳಾದ ಶಿವರಾಜ ರಾಂಪುರ (28), ಮಲ್ಲಿಕಾರ್ಜುನ ಸರ್ಜಾಪುರ (29) ಮತ್ತು ಗುತ್ತಿಗೆ ಆಧಾರದ ಕಂಪ್ಯೂಟರ್ ಆಪರೇಟರ್ ಮಹೆಬೂಬ್ (30) ಮೃತ ದುರ್ದೈವಿಗಳು. ಶಿವರಾಜ್ ಹಾಗೂ ಮಲ್ಲಿಕಾರ್ಜುನ ಲಿಂಗಸುಗೂರು ತಾಲೂಕಿನವರಾದರೆ, ಮಹೆಬೂಬ್ ಸಿಂಧನೂರು ಪಟ್ಟಣದವರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದುರ್ದೈವಿಗಳು ಸೋಮವಾರ ಸಂಜೆ ಜವಳಗೇರಾದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದಿದ್ದರು. ಅಲ್ಲಿ ಲೋಕೋಪಯೋಗಿ ಕ್ಯಾಂಪ್ನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದರು. ಇದೇ ವೇಳೆ, ರಾಯಚೂರಿನಿಂದ ಸಿಂಧನೂರು ಭತ್ತದ ಹೊಟ್ಟಿನ ಚೀಲಗಳನ್ನು ತುಂಬಿಕೊಂಡಿದ್ದ ಲಾರಿ ವೇಗವಾಗಿ ಬಂದು ಪಲ್ಟಿಯಾಗಿದೆ. ಆಗ ಲಾರಿಯಲ್ಲಿದ್ದ ಭತ್ತದ ಚೀಲಗಳು ಈ ಮೂವರ ಮೇಲೆ ಬಿದ್ದಿವೆ. ಆ ಚೀಲಗಳ ಅಡಿಯಲ್ಲಿ ಸಿಲುಕಿದ ಇವರಿಗೆ ಮೇಲೆ ಏಳಲಾಗದೆ ಉಸಿರುಗಟ್ಟಿ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭತ್ತದ ಚೀಲಗಳ ಅಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಜೆಸಿಬಿ ಬಳಸಲಾಗಿದೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಲಾರಿ ಚಾಲಕ ಹಾಗೂ ಕ್ಲಿನರ್ ಗಾಯಗೊಂಡಿದ್ದು, ಅವರನ್ನು ಬಳ್ಳಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನಗರ ಸಂಚಾರ ಠಾಣೆ ಪೊಲೀಸರು ದುರಂತ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.