ಬೆಂಗಳೂರು: ನಿನ್ನೆ ನಿಧನ ಹೊಂದಿದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಕುಟುಂಬದ ಆಪ್ತೆ ನಟಿ ರಮ್ಯಾ ಭಾವುಕವಾದ ಪೋಸ್ಟ್ ಹಂಚಿಕೊಂಡಿದ್ದು, ಕೃಷ್ಣ ಅವರನ್ನು ವಿಶಿಷ್ಠವಾಗಿ ನೆನಪಿಸಿಕೊಂಡಿದ್ದಾರೆ. ನಾನು ರಾಜಕೀಯ ಪ್ರವೇಶ ಮಾಡಿದಾಗ ನನಗೆ ಮಾರ್ಗದರ್ಶನ ಮಾಡಿದ್ದರು. ಎಲ್ಲ ರೀತಿಯಿಂದಲೂ ಒಬ್ಬ ಅದ್ಭುತ ರಾಜನೀತಿಜ್ಞ ಆಗಿದ್ದರು, ಎಂದಿಗೂ ಅವರು ‘ರಾಜಕಾರಣಿ’ ರೀತಿ ವರ್ತಿಸಿದವರಲ್ಲ. ಎಂದಿಗೂ ಸಹ ಯಾರ ಬಗ್ಗೆಯೂ ಕೀಳಾಗಿ ಅವರು ಮಾತನಾಡಿದ್ದಿಲ್ಲ, ಅವರ ಎದುರಾಳಿಗಳಿಗೂ ಅದೇ ಗೌರವವನ್ನು ಅವರು ನೀಡುತ್ತಿದ್ದರು. ದೂರದೃಷ್ಟಿಯುಳ್ಳ, ಮಾನವೀಯತೆ ಹೊಂದಿದ್ದ ಸಿಹಿ ಮಾತುಗಳ ಕೃಷ್ಣ ಅವರು ಚೆನ್ನಾಗಿ ಓದಿಕೊಂಡಿದ್ದ, ಹಾಸ್ಯಪ್ರಜ್ಞೆ ಹೊಂದಿದ್ದ ವ್ಯಕ್ತಿ. ಅವರಂಥಹಾ ಸುಂದರ ವ್ಯಕ್ತಿತ್ವ ಹೊಂದಿರುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ನೀವು ನೀಡಿರುವ ಎಲ್ಲದಕ್ಕೂ ಧನ್ಯವಾದ ಎಂದು ಸ್ಮರಿಸಿಕೊಂಡಿದ್ದಾರೆ.
ಕೃಷ್ಣ ಅವರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದ ನಂತರ ನಟಿ ರಮ್ಯಾ, ಕಣ್ಣೀರು ಹಾಕಿದ್ದರು. ರಮ್ಯಾ ಅವರ ಸಾಕು ತಂದೆ ಆರ್ಟಿ ನಾರಾಯಣ್ ಅವರು ಎಸ್ಎಂ ಕೃಷ್ಣ ಅವರ ಆತ್ಮೀಯ ಗೆಳೆಯರಾಗಿದ್ದರು. ಹಲವು ವರ್ಷಗಳ ಕಾಲ ಇಬ್ಬರೂ ಒಟ್ಟಿಗೆ ಟೆನ್ನಿಸ್ ಆಡುತ್ತಿದ್ದರು. ಇದೇ ಕಾರಣಕ್ಕೆ ರಮ್ಯಾ, ಅವರು ‘ನೀವೀಗ ನಿಮ್ಮ ಆತ್ಮೀಯ ಗೆಳೆಯನೊಟ್ಟಿಗೆ ಇರಲಿದ್ದೀರಿ’ ಎಂದು ತಮ್ಮ ಪೋಸ್ಟ್ನಲ್ಲಿ ಕಂಬನಿ ಮಿಡಿದಿದ್ದಾರೆ.