ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವರಹೊಸಹಳ್ಳಿ ಗ್ರಾಮದ ಕೇರಿಯ ದಲಿತರು ಇಂದು ವಿಶ್ವಗುರು ಎಂದು ಬೀಗುವ ಭಾರತದಲ್ಲಿಯೂ ಕೂಡ ಸತ್ತರೆ ಮಣ್ಣಾಗಬೇಕಾಗಿರುವ ತುಂಡು ಭೂಮಿಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಇಲ್ಲಿನ ಜನಪ್ರತಿನಿಧಿಗಳು ಆದಷ್ಟು ಬೇಗ ಅರ್ಥ ಮಾಡಿಕೊಂಡು ಸತ್ತಾಗ ಗೌರವಯುತವಾಗಿ ಶವಸಂಸ್ಕಾರ ಮಾಡಲು ಸ್ಮಶಾನದ ಭೂಮಿಯನ್ನು ಮಂಜೂರು ಮಾಡಿ ಕೊಡುವರೆ ಎಂದು ಕಾದು ನೋಡಬೇಕಿದೆ _ ರುದ್ರು ಪುನೀತ್ ಆರ್ ಸಿ, ಸಾಮಾಜಿಕ ಚಿಂತಕರು.
ಭಕ್ತರ ಪಾಲಿಗೆ ದೈವ ಶಕ್ತಿಯನ್ನೊಳಗೊಂಡ, ನಂಬಿದವರ ಕಾಮಧೇನು, ಆರಾಧಿಸುವವರ ಪಾಲಿನ ಕಲ್ಪವೃಕ್ಷ ಎನಿಸಿಕೊಂಡ ಪುರಾಣ ಪ್ರಸಿದ್ಧ ಸಂಜೀವರಾಯ ಸ್ವಾಮಿಯ ನೆಲೆಬೀಡಾಗಿರುವ ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿನ ಕೇರಿಯ ದಲಿತರು ಸತ್ತರೆ ಹೂಳಲು ಸ್ಮಶಾನವಿಲ್ಲದ ಪರಿಸ್ಥಿತಿ ಬಂದಿದೆ. ಮನುಷ್ಯ ಸತ್ತಾಗ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಬೇಕು ಎನ್ನುವುದು ಲೋಕ ರೂಢಿಯ ಮಾತು. ಆದರೆ ಇಲ್ಲಿನ ದಲಿತರ ಪಾಲಿಗೆ ಅಂತ್ಯಕ್ರಿಯೆ ನಡೆಸಲು ಕನಿಷ್ಠ ಜಾಗವೂ ಇಲ್ಲದೆ ಅಂಗಲಾಚಿ ಬೇಡಿಕೊಳ್ಳುವ ಪರಿಸ್ಥಿತಿ ಬಂದು ಬಿಗಡಾಯಿಸಿರುವುದು ದುರಂತವೇ ಸರಿ.
ಹೌದು… ಸಿಲಿಕಾನ್ ಸಿಟಿ ಬೆಂಗಳೂರಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲದಲ್ಲಿಯೇ ಅಂಟಿಕೊಂಡಂತಿರುವ, ವಿಶ್ವವಿಖ್ಯಾತ ರೇಷ್ಮೆ ನಗರಿ ಎಂದು ಕರೆಸಿಕೊಳ್ಳುವ, ರಾಜ್ಯಕ್ಕೆ ಮೂರು ಜನ ಮುಖ್ಯಮಂತ್ರಿಗಳನ್ನು ಕೊಡುಗೆ ಕೊಟ್ಟ ರಾಮನಗರ ಜಿಲ್ಲೆಯಲ್ಲಿ ಬರುವ, ಬೊಂಬೆ ನಾಡಾದ ಚನ್ನಪಟ್ಟಣ ನಗರ ಕೇಂದ್ರದಿಂದ 03 ಕಿಲೋ ಮೀಟರ್ ಕೂಗಳತೆಯ ಹತ್ತಿರದಲ್ಲಿ ಕಂಡುಬರುವ ದೇವರಹೊಸಹಳ್ಳಿ ಎಂಬ ಹಳ್ಳಿ ದೇಶವಿದೇಶಗಳಿಂದ ದೇವರನ್ನು ಹುಡುಕಿಕೊಂಡು ಬರುವ ಭಕ್ತರ ಪಾಲಿಗೆ ಪುಣ್ಯಭೂಮಿಯಾಗಿದೆ. ಆದರೆ ಅದೇ ಊರಿನ ಕೇರಿಗಳಲ್ಲಿಯೇ ಹುಟ್ಟಿ ಜೀವ ಸವೆಸುತ್ತಿರುವ ದಲಿತರು ತಾವು ಸತ್ತರೆ ಹೂಳಲು ಆರಡಿ-ಮೂರಡಿ ಜಾಗವಿಲ್ಲದೆ ಪರದಾಡುವ ದರಿದ್ರ ಸ್ಥಿತಿಯ ಸಂಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಇದನ್ನು ಗಮನಿಸಿದರೆ, ದೇವರನಾಡು ದೇವರಹೊಸಹಳ್ಳಿ ತನ್ನ ದುರಂತ ಕಥೆಯನ್ನು ಹೇಳುತ್ತದೆ !
ಇಲ್ಲಿಯ ಸಂಜೀವರಾಯಸ್ವಾಮಿ ಮೂರ್ತಿಯ ಮೊರೆ ಹೋದರೆ ಮನುಷ್ಯನ ಆಯುಷ್ಯ-ಆರೋಗ್ಯ ವೃದ್ಧಿಯಾಗುತ್ತದೆ ಎಂಬ ಪ್ರತೀತಿ ಇದೆ. ಇಲ್ಲಿನ ಸುತ್ತಮುತ್ತಲಿನ ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸ್ವಾಮಿಯ ಮೊರೆ ಹೋದರೆ ಕ್ಷಣಾರ್ಧದಲ್ಲಿ ಸಂಜೀವರಾಯಸ್ವಾಮಿಯು ಸಕಲ ಸೌಭಾಗ್ಯವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಬಹುಕಾಲದಿಂದ ಬೇರೂರಿದೆ. ಅಷ್ಟು ಮಾತ್ರವಲ್ಲ ದಾಸ ಶ್ರೇಷ್ಠರೆನಿಸಿದ ಪುರಂದರದಾಸರು ಈ ಗ್ರಾಮಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದು ಕೀರ್ತನೆಯನ್ನು ಕಟ್ಟಿ ಹಾಡಿದರೆಂಬ ಐತಿಹ್ಯ ಕೂಡ ಈ ಗ್ರಾಮಕ್ಕಿದೆ. ಆದರೆ ಇಂದು ಅದೇ ಗ್ರಾಮದ ಕೇರಿಗಳಲ್ಲಿ ವಾಸಿಸುತ್ತಿರುವ ದಲಿತರು ತಾವು ಸತ್ತರೆ ಹೂಳಲು ಸ್ಮಶಾನಕ್ಕಾಗಿ ದಿನಗಟ್ಟಲೆ ಕೂತು ಎಷ್ಟೇ ಪರಿಪರಿಯಾಗಿ ಬಾಯಿಬಡಿದುಕೊಂಡು ಬೇಡಿಕೊಂಡರೂ ಯಾವ ದೇವರು ಕೂಡ ದೌರ್ಜನ್ಯ ಎಸಗುವ ಸವರ್ಣಿಯರಿಗೆ ತನ್ನ ದಿವ್ಯದೃಷ್ಟಿಯಿಂದ ಬುದ್ಧಿ ಹೇಳುವುದಿರಲಿ, ದಲಿತರ ಕೇರಿಯ ಕಡೆಗೆ ಕಣ್ಣುಹಾಯಿಸಿ ಇಲ್ಲಿಯ ತನಕ ನೋಡಲೂ ಇಲ್ಲ!
ಇದ್ದಾಗಂತೂ ನೆಮ್ಮದಿ ಇಲ್ಲ, ಸತ್ತಮೇಲಾದರೂ ನೆಮ್ಮದಿ ಸಿಗಲಿ ಅಂತ ಜನ ಮಾತಿಗೆ ಹೇಳ್ತಾರೆ. ಆದ್ರೆ ಇಲ್ಲಿನ ಜನಗಳ ಪರಿಸ್ಥಿತಿ ಹೇಗಾಗಿದೆ ಅಂದರೆ ಸತ್ತ ಮೇಲೂ ನೆಮ್ಮದಿ ಇಲ್ಲ ಎನ್ನುವಂತಾಗಿದೆ. ಅದ್ಯಾಕಪ್ಪ ಅಂದ್ರೆ ದೇವರಹೊಸಹಳ್ಳಿಯಲ್ಲಿನ ಕೇರಿಗಳಲ್ಲಿನ ದಲಿತರು ಸತ್ತರೆ, ಪ್ರತಿ ಶವಕ್ಕೂ ಒಂದಲ್ಲ ಒಂದು ವಿಘ್ನ ಎದುರಾಗುತ್ತಿರುತ್ತದೆ. ದಲಿತರು ಕಳೆದ ಎರಡೂವರೆ ಶತಮಾನಗಳಿಂದ ಅಂದರೆ ಸುಮಾರು 250 ವರ್ಷಗಳಿಂದ ಶವಸಂಸ್ಕಾರ ಮಾಡಿಕೊಂಡು ಬರುತ್ತಿರುವ ಸರ್ವೇ ನಂಬರ್ 115 ರಲ್ಲಿರುವ ಸ್ಮಶಾನ ಭೂಮಿಯನ್ನು ಅದೇ ದೇವರಹೊಸಹಳ್ಳಿ ಗ್ರಾಮದ ಮೇಲ್ಜಾತಿಯ ಸವರ್ಣೀಯರು ಇದ್ದಕ್ಕಿದ್ದಂತೆ ಆಕ್ರಮಿಸಿಕೊಂಡು ಆ ಜಾಗ ನಮಗೆ ಸೇರಬೇಕು ಎಂದು ತಕರಾರು ತೆಗೆಯುತ್ತಿದ್ದು, ಶವ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡದೆ ದೌರ್ಜನ್ಯ ಎಸಗುತ್ತಿರುವುದರಿಂದ ಸತ್ತ ಪ್ರತೀ ವ್ಯಕ್ತಿಯ ಶವವನ್ನು ತಾಲೂಕು ಕಚೇರಿಯ ಆವರಣಕ್ಕೆ ಒಯ್ಯಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಬೊಂಬೆನಾಡು ಚನ್ನಪಟ್ಟಣದ ಶೋಚನೀಯ ಪರಿಸ್ಥಿತಿಯನ್ನು ಅನಾವರಣ ಗೊಳಿಸುತ್ತದೆ.
ಮೊನ್ನೆ 28. 11. 2024ರ ಗುರುವಾರ ದೇವರಹೊಸಹಳ್ಳಿ ಗ್ರಾಮದ ದಲಿತ ಕೇರಿಯ ರಾಜೇಶ್ ಎಂಬ 40 ವರ್ಷದ ಯುವಕ ರಸ್ತೆ ಅಪಘಾತದಲ್ಲಿ ತೀರಿಕೊಂಡಾಗ ಶವಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೊತ್ತೊಯ್ದಾಗ ಮತ್ತೆ ಅದೇ ಪರಿಸ್ಥಿತಿ ಬಿಗಡಾಯಿಸಿತು. ದಯೆ ತೋರದ ಗ್ರಾಮದ ಸವರ್ಣಿಯರು ಶವಸಂಸ್ಕಾರ ಮಾಡಲು ತಂದಿದ್ದ ಸೌದೆಯನ್ನು ಸ್ಮಶಾನದಲ್ಲಿ ಜೋಡಿಸಲು ಬಿಡದೆ, ಶವದ ಮುಂದೆ ಅಡ್ಡಲಾಗಿ ನಿಂತು ತಕರಾರು ತೆಗೆದ ಪರಿಣಾಮವಾಗಿ ಪೋಸ್ಟ್ ಮಾರ್ಟಂ ಆಗಿ ಜರ್ಜರಿತವಾಗಿ ಹೋಗಿದ್ದ ಮೃತ ರಾಜೇಶ್ ಶವವನ್ನು ತಾಲೂಕು ಕಚೇರಿಗೆ ಗ್ರಾಮದ ದಲಿತರು ಹೊತ್ತೊಯ್ದರು. ಇಲ್ಲಿ ಸ್ಮಶಾನ ಇಲ್ಲದಿರುವ ಬಗ್ಗೆ ಈ ಹಿಂದಿನಿಂದಲೂ ಇಲ್ಲಿನ ದಲಿತರಿಗೆ ಆಕ್ರೋಶವಿತ್ತು. ರಾಜೇಶ್ ಸಾವಿನ ಸಂದರ್ಭವು ಇದನ್ನು ಇನ್ನಷ್ಟು ಕೆರಳಿಸಿತು. ಅವರು ಇದನ್ನೇ ಸಂದರ್ಭ ಎಂದುಕೊಂಡು ತಾಲೂಕು ಆಡಳಿತಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿದರು. ಗ್ರಾಮದ ಜನರೆಲ್ಲ ಸೇರಿಕೊಂಡು ಶವವನ್ನು ನೇರವಾಗಿ ತಾಲೂಕು ಆಡಳಿತ ಕಚೇರಿ ಮುಂದೆ ತಂದು, ಬಿದಿರಿನ ಮೇಲೆ ಮಲಗಿಸಿದ ಸ್ಥಿತಿಯಲ್ಲಿ, ಬಿಳಿ ಬಟ್ಟೆ ಹಾಕಿ, ಇನ್ನೇನು ನೇರವಾಗಿ ಚಿತೆ ಏರಿಸುವ ಸ್ಥಿತಿಯಲ್ಲೇ ಮೃತದೇಹವನ್ನು ಮಲಗಿಸಿದರು. ಈ ನಡುವೆ, ಕೆಲವರು ಟ್ರ್ಯಾಕ್ಟರ್ನಲ್ಲಿ ಕಟ್ಟಿಗೆಯನ್ನೂ ತಂದಿದ್ದಾರೆ. ಅಷ್ಟು ಹೊತ್ತಿಗೆ ಕೆಲವರು ಚಿತೆ ನಿರ್ಮಾಣ ಮಾಡಿದ್ದಾರೆ. ಯಾವ ಕಾರಣಕ್ಕೂ ಇವತ್ತು ಬೇರೆ ಕಡೆ ಶವ ತೆಗೆದುಕೊಂಡು ಹೋಗುವುದೇ ಇಲ್ಲ. ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ ಎಂದು ತಾಲೂಕು ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಇವರ ಜೊತೆಗೆ ತಾಲೂಕಿನ ದಲಿತ ಮುಖಂಡರು ಸೇರಿಕೊಂಡು ಪ್ರತಿಭಟನೆ ಮಾಡಿದ ನಂತರ ಪರಿಸ್ಥಿತಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ತಮ್ಮ ಸರ್ಪಗಾವಲಿನಲ್ಲಿ ಶವಸಂಸ್ಕಾರ ಮಾಡಿಸಿದರು.
ದಲಿತ ಮುಖಂಡರ ಪ್ರತಿಭಟನೆಗೆ ಶವಸಂಸ್ಕಾರ ಕಾರ್ಯಕ್ಕೆ ಸಹಕರಿಸಿ ಕೈತೊಳೆದು ಕೊಂಡ ತಾಲೂಕು ಆಡಳಿತ ವ್ಯವಸ್ಥೆಯು ಕೊಟ್ಟ ಅರ್ಜಿಯನ್ನು ಮೂಲೆಗೆಸೆದು ಸುಮ್ಮನಾಯ್ತು. ಮಾರನೇ ದಿನ ಮಾಧ್ಯಮಗಳ ಮೂಲಕ ಈ ಸುದ್ದಿ ಇಡೀ ರಾಜ್ಯದಾದ್ಯಂತ ಬಿತ್ತರಿಸಿದ ಪರಿಣಾಮವಾಗಿ ರಾಜ್ಯದ ಪ್ರಜ್ಞಾವಂತರು ತಾಲೂಕು ಆಡಳಿತವನ್ನು ಪ್ರಶ್ನೆ ಮಾಡತೊಡಗಿದರು. ರಾಮನಗರ ಜಿಲ್ಲಾ ಕೆಡಿಪಿ ಸದಸ್ಯರೂ ಹಾಗೂ ಸಾಮಾಜಿಕ ಹೋರಾಟಗಾರರಾದ ಗುರುಮೂರ್ತಿ ಅವರು ಜಿಲ್ಲಾ ಮೇಲುಸ್ತುವಾರಿ ಮತ್ತು ಜಾಗೃತಿ ಸಮಿತಿಯ ಸದಸ್ಯರಾದ ಚಲುವರಾಜು, ಕುಂಬಾಪುರ ಬಾಬು, ಶಿವರಾಜ್, ಮಾಜಿ ಸದಸ್ಯರಾದ ಬಿ.ಕಿರಣ್ ಕುಮಾರ್, ಲಿಡ್ಕರ್ ಜಿಲ್ಲಾ ಸಮಿತಿ ಸದಸ್ಯರಾದ ಶಿವಪ್ರಸಾದ್, ಲಿಡ್ಕರ್ ಹಾಗೂ ಹಾರೋಹಳ್ಳಿ ಗ್ಯಾರಂಟಿ ಸಮಿತಿ ಸದಸ್ಯರಾದ ಅಡ್ವೋಕೇಟ್ ವರದರಾಜ್, ಹಾರೋಹಳ್ಳಿ ಲ್ಯಾಂಡ್ ಗ್ರ್ಯಾಂಟ್ ಸಮಿತಿ ಸದಸ್ಯರಾದ ರಾಮಕೃಷ್ಣಯ್ಯ, ದಲಿತ ಸಂಘರ್ಷ ಸಮಿತಿ ಹಾಗೂ ಆದಿ ಜಾಂಬವ ಸಮುದಾಯದ ಜಿಲ್ಲಾ ನಾಯಕರಾದ ರವೀಂದ್ರ ಮುಂತಾದವರು ತಮ್ಮ ಸರ್ಕಾರಿ ನಿಯೋಗದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸ್ಮಶಾನದ ಜಾಗವನ್ನು ಪರಿಶೀಲಿಸಿ, ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿ, ನೊಂದ ಗ್ರಾಮಸ್ಥರಿಗೆ ಸಾಂತ್ವನ ಹೇಳಿದ್ದು ಮಾತ್ರವಲ್ಲ, ಸ್ಥಳದಲ್ಲಿಯೇ ಕರೆ ಮಾಡಿ ತಾಲೂಕು ದಂಡಾಧಿಕಾರಿಗಳೊಂದಿಗೆ ಮಾತನಾಡಿ ಹತ್ತುಹದಿನೈದು ದಿನಗಳಲ್ಲಿ ದಲಿತರ ಸ್ಮಶಾನದ ಸಮಸ್ಯೆಯನ್ನು ಪರಿಹರಿಸಬೇಕೆಂದು ಸೂಚಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ ಮುಗಿಲು ಮುಟ್ಟಿದ್ದನ್ನು ನಾವು ಗಮನಿಸಿದ್ದೇವೆ. ದೇಶದ ಒಟ್ಟು ರಾಜಕಾರಣ ಇಪ್ಪತ್ತು ದಿನಗಳ ಕಾಲ ಚನ್ನಪಟ್ಟಣದಲ್ಲಿ ಬೀಡು ಬಿಟ್ಟಿತ್ತು. ಕರ್ನಾಟಕ ಸರ್ಕಾರವೇ ವಿಧಾನಸೌಧಕ್ಕೆ ಬೀಗ ಜಡಿದು ಬಂದು ಚನ್ನಪಟ್ಟಣ ಗಲ್ಲಿಗಲ್ಲಿಗಳಲ್ಲಿ ಮತ ಭಿಕ್ಷೆಗಾಗಿ ಸುತ್ತಾಡಿದ್ದು ಕಣ್ಣ ಮುಂದಿದೆ. ದೇಶದ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕೊನೆಯ ವಯಸ್ಸಿನಲ್ಲಿಯೂ ಮೊಮ್ಮಗನ ಗೆಲುವಿಗಾಗಿ ಸೆಟೆದೆದ್ದು ಬಂದು ಹಳ್ಳಿಹಳ್ಳಿಗೆ ನುಗ್ಗಿ ಶಕ್ತಿ ಮೀರಿ ದುಡಿದಿದ್ದನ್ನು ದೇಶ ಕಂಡಿದೆ. ದೆಹಲಿ ಮಟ್ಟದ ರಾಜಕಾರಣಿಗಳು ತಾಲೂಕಿನ ಬೂತ್ ಮಟ್ಟಕ್ಕಿಳಿದು, ತಮ್ಮ ಪಕ್ಷದ ಪ್ರತಿನಿಧಿಯನ್ನು ಗೆಲ್ಲಿಸಿಕೊಳ್ಳಲು ಎಡತಾಕಿದ್ದನ್ನು ಇಡೀ ಭಾರತವೇ ಗಮನಿಸಿದೆ. ಆದರೆ ಚುನಾವಣೆ ಮುಗಿದ ಮಾರನೇ ದಿನ ಇತ್ತ ತಿರುಗಿಯೂ ನೋಡುವುದಿಲ್ಲ. ಮುಖ್ಯಮಂತ್ರಿ, ಮಂತ್ರಿ, ಸರ್ಕಾರದ ಸಚೇತಕರನ್ನಾಗಿ ಮಾಡಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇವರಹೊಸಹಳ್ಳಿ ಗ್ರಾಮದ ಕೇರಿಯ ದಲಿತರು ಇಂದು ವಿಶ್ವಗುರು ಎಂದು ಬೀಗುವ ಭಾರತದಲ್ಲಿಯೂ ಕೂಡ ಸತ್ತರೆ ಮಣ್ಣಾಗಬೇಕಾಗಿರುವ ತುಂಡು ಭೂಮಿಗಾಗಿ ಕಣ್ಣೀರು
ಹಾಕುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಇಲ್ಲಿನ ಜನಪ್ರತಿನಿಧಿಗಳು ಆದಷ್ಟು ಬೇಗ ಅರ್ಥ ಮಾಡಿಕೊಂಡು ಸತ್ತಾಗ ಗೌರವಯುತವಾಗಿ ಶವಸಂಸ್ಕಾರ ಮಾಡಲು ಸ್ಮಶಾನದ ಭೂಮಿಯನ್ನು ಮಂಜೂರು ಮಾಡಿ ಕೊಡುವರೆ ಎಂದು ಕಾದು ನೋಡಬೇಕಿದೆ.
ರುದ್ರು ಪುನೀತ್ ಆರ್ ಸಿ
ಸಾಮಾಜಿಕ ಚಿಂತಕರು
ಇದನ್ನೂ ಓದಿ-ಸಂವಿಧಾನ ವಿರೋಧಿ ಸ್ವಾಮಿಗೋಳು