ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ, ಅದು ಸೌಹಾರ್ದತೆಯ ಪ್ರಬಲ ಶಕ್ತಿಯಾಗಿದೆ: ಯು.ಟಿ.ಖಾದರ್

Most read

ವ್ಯಾಟಿಕನ್ ಸಿಟಿ: ಯಾವುದೇ ಧರ್ಮ ಮತ್ತು ಸಮಾಜವು ಕೀಳರಿಮೆ ಹಾಗೂ ಪ್ರತ್ಯೇಕತೆಯನ್ನು ಅನುಭವಿಸುವ ವಾತಾವರಣವಿರಬಾರದು. ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ, ಅದು ಭೂಮಿಯ ಮೇಲಿನ ಸೌಹಾರ್ದತೆಯ ಪ್ರಬಲ ಶಕ್ತಿಯಾಗಿದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಹೇಳಿದ್ದಾರೆ.

ರೋಮಿನ ವ್ಯಾಟಿಕನ್ ನಗರದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಮೊದಲ ಅಂತರರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವ ಸ್ಮರಣಾರ್ಥ “ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು” ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಲಾದ ಮೂರು ದಿನಗಳ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದ ಅವರು ನಾವು ವೈವಿಧ್ಯತೆಗಳನ್ನು ಹೊಂದಿದ್ದರೂ, ಪ್ರತಿಯೊಬ್ಬರೊಳಗಿರುವ ದೈವಿಕ ಚೇತನವು ಒಂದೇ. ಸಮಾಜವನ್ನು ಮುನ್ನಡೆಸುವ ನನ್ನ ಸಹೋದರ ಸಹೋದರಿಯರೇ, ನಾವಿಂದು ದ್ವೇಷವನ್ನು ತಿರಸ್ಕರಿಸುವ ಪ್ರತಿಜ್ಞೆ ಮಾಡೋಣ ಎಂದರು.

ನಾನು ಇಲ್ಲಿ ಯಾವುದೇ ಒಂದು ಧರ್ಮದ ಪ್ರತಿನಿಧಿಯಾಗಿ ಬಂದಿಲ್ಲ. ಬದಲಾಗಿ ಮಾನವೀಯತೆಯ ವಿನಮ್ರ ಧ್ವನಿಯಾಗಿ, ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯಿಂದ ತುಂಬಿದ ಒಂದು ಸುಂದರ ಪ್ರಪಂಚದ ಕನಸು ಕಾಣುವ ಶತಕೋಟಿ ಜನರ ಸಾಮೂಹಿಕ ಆಶಯ, ಹೋರಾಟ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡು ಅವರೆಲ್ಲರ ದ್ವನಿಯಾಗಿ ಇಲ್ಲಿ ನಿಮ್ಮೆದುರು ನಿಂತಿದ್ದೇನೆ ಎಂದು ತಿಳಿಸಿದರು.

“ಒಂದು ಜಾತಿ, ಒಂದು ಧರ್ಮ ಮತ್ತು ಒಬ್ಬ ದೇವರು”ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಬೋಧನೆಯು ಕೇರಳದಲ್ಲಿ ಸಾಮಾಜಿಕ ಸಮಾನತೆ, ಸಾಮರಸ್ಯ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಪ್ರತಿಪಾದಿಸುವ ಮಹತ್ವದ ಸಾಮಾಜಿಕ ಆಂದೋಲನವನ್ನು ಸೃಷ್ಟಿಸಿತ್ತು. ಜೊತೆಗೆ, ಶ್ರೀ ನಾರಾಯಣ ಗುರುಗಳು ಸಮಾಜದ ಸಬಲೀಕರಣ ಮತ್ತು ಉನ್ನತೀಕರಣದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜನರಲ್ಲಿ ಗಾಢವಾದ ಅರಿವು ಮೂಡಿಸಿದವರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಆಧ್ಯಾತ್ಮಿಕ ದಾರ್ಶನಿಕರ ಪುಣ್ಯಭೂಮಿ ಭಾರತದಿಂದ ಬಂದಿದ್ದೇನೆ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ. ಹಾಗೆಯೇ, ನನಗೆ ಮತ್ತು ನನ್ನಂತಹ ಅಸಂಖ್ಯಾತರಿಗೆ ಏಕತೆ, ಶಾಂತಿ, ಮತ್ತು ಸೌಹಾರ್ದತೆಯಿಂದ ಕೂಡಿದ ಹೊಸ ಸಮಾಜ ನಿರ್ಮಾಣಕ್ಕೆ ಪ್ರೇರೇಪಣೆ ನೀಡಿದ ಈ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ನೂರು ವರ್ಷಗಳ ನಂತರ ಈ ಮೈಲಿಗಲ್ಲನ್ನು ಆಚರಿಸುವುದು ಕೇವಲ ಒಂದು ಸ್ಮರಣಾರ್ಥ ಸಮ್ಮೇಳನವಾಗಿ ಮಾತ್ರವಲ್ಲ-ಇದು ಹೊಸ ಸಾಮರಸ್ಯ ಸಮಾಜದ ನಿರ್ಮಾಣಕ್ಕೆ ನೀಡುವಂತಹ ಒಂದು ಶಕ್ತಿಯುತ ಕರೆಯಾಗಿದೆ ಎಂದು ಹೇಳಿದರು.

ಕಳೆದ ಶತಮಾನದಲ್ಲಿ ನಡೆದ ಗಮನಾರ್ಹವಾದ ಪ್ರಗತಿಗಳು, ವಿಶೇಷವಾಗಿ ತಂತ್ರಜ್ಞಾನದಲ್ಲಿ ನಡೆದ ಅನ್ವೇಷಣೆಗಳು ಮತ್ತು ಜಾಗತೀಕರಣದ ಪರಿಣಾಮವಾಗಿ, ನಾವು ಬೌತಿಕವಾಗಿ ಹತ್ತಿರವಾಗಿದ್ದೇವೆ. ಆದರೆ, ನಮ್ಮ ಹೃದಯಗಳು ಮತ್ತಷ್ಟು ದೂರ ಹೋಗಿವೆ. ಅಸಮಾನತೆ, ಅಜ್ಞಾನ, ಅಸಹಿಷ್ಣುತೆ ಮತ್ತು ಪೂರ್ವಾಗ್ರಹಗಳಿಂದ ಪ್ರೇರಿತವಾದ ಭಯ ಮತ್ತು ಅಪನಂಬಿಕೆಗಳು ನಮ್ಮ ಮನಸ್ಸುಗಳನ್ನು ಆವರಿಸಿಕೊಂಡಿವೆ. ಇದರ ಪರಿಣಾಮವಾಗಿ, ಮಾನವೀಯತೆಯ ಮೂಲಭೂತ ಮೌಲ್ಯಗಳು ಮಸುಕಾಗಿವೆ. ಸಮಾಜದಲ್ಲಿ ಎಲ್ಲಾ ವರ್ಗಗಳ ಜನರ ಕೂಗು, ಸಂಘರ್ಷಗಳು ಮತ್ತು ಈ ಜಗತ್ತಿನ ಮೌನ ರೋಧನೆಗಳು ನಮ್ಮೆಲ್ಲರ ತುರ್ತು ಗಮನಕ್ಕೆ ಕಾದಿವೆ. ಸಮ್ಮೇಳನದ ಈ ಮಹತ್ವಪೂರ್ಣ ಕ್ಷಣಗಳು ಶ್ರೀ ನಾರಾಯಣ ಗುರುಗಳ ಬೋಧನೆಗಳನ್ನು ಪುನರ್ಮನನ ಮಾಡುವ ಕ್ಷಣಗಳು ಮಾತ್ರವಲ್ಲ, ಅದು ಧಾರ್ಮಿಕ ಧ್ರುವೀಕರಣ, ಸಾಮಾಜಿಕ ಅನ್ಯಾಯ ಮತ್ತು ಅಂತರ್ಧರ್ಮೀಯ ಸಂವಾದದ ನಿರ್ಣಾಯಕ ಅಗತ್ಯವನ್ನು ಸ್ಪಷ್ಟವಾಗಿ ಎಲ್ಲರಿಗೆ ಸೂಚಿಸುವ ಸಮಯೋಚಿತ ಜ್ಞಾಪನೆಯಾಗಿವೆ. ಆದ್ದರಿಂದ, “ಮಾನವೀಯತೆಗಾಗಿ ಧರ್ಮಗಳ ಏಕತೆ” ಎಂಬ ಈ ವಿಶ್ವ ಸಮ್ಮೇಳನವನ್ನು ಆಯೋಜಿಸಿದ ಶಿವಗಿರಿ ಮಠದ ಶ್ರೀ ನಾರಾಯಣ ಧರ್ಮ ಸಂಘದ ಟ್ರಸ್ಟ್ನ ಅಧ್ಯಕ್ಷರಾದ ಸ್ವಾಮಿ ಸಚ್ಚಿದಾನಂದರಿಗೆ, ಕಾರ್ಡಿನಲ್ ಮಿಗುಯೆಲ್ ಏಂಜೆಲ್ ಆಯುಸೊ ಗುಯಿಕ್ಸೊಟ್, M.C.C.J. ಅಂತರಧರ್ಮಿಯ ಸಂವಾದದ ಡಿಕ್ಯಾಸ್ಟರಿಯ ಪ್ರಿಫೆಕ್ಟ್, ಕಾರ್ಡಿನಲ್- ಡೆಸಿಗ್ನೇಟ್ ಮಾನ್ಸಿಂಜರ್ ಜಾರ್ಜ್ ಕೂವಕಾಡ್ ಮತ್ತು ಅವರ ತಂಡಕ್ಕೆ, ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದರು.

ಈ ಶುಭ ಸಂದರ್ಭದಲ್ಲಿ, ನನಗೆ ನನ್ನ ತಾಯ್ನಾಡಾದ ಭಾರತದ ಪೂಜ್ಯ ಋಷಿ ಮುನಿಗಳ “ವಸುಧೈವ ಕುಟುಂಬಕಂ” – ಜಗತ್ತು ಒಂದೇ ಕುಟುಂಬ ಎನ್ನುವ ಅಮರ ನುಡಿಗಳು ನೆನಪಿಗೆ ಬರುತ್ತದೆ. ಎಲ್ಲರೂ ನಮ್ಮವರು ಎನ್ನುವ ಈ ಪ್ರಾಚೀನ ಮಂತ್ರವು ಇಂದಿನ ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದ್ದು, ನಮ್ಮ ದೇಶದ ಸಂವಿಧಾನದ ಆದರ್ಶವನ್ನೂ ಪ್ರತಿಬಿಂಬಿಸುತ್ತದೆ. ತಾರತಮ್ಯ ಮತ್ತು ವಿಭಜನೆಯಿಂದ ನಲುಗುತ್ತಿರುವ ಸಮಾಜದಲ್ಲಿ ಪ್ರಬಲ ಧ್ವನಿಗಳು ದ್ವೇಷವನ್ನು ಪ್ರಚೋದಿಸುತ್ತಿರುವಾಗ, ನಾವು ಒಗ್ಗಟ್ಟಾಗಿ ಏಕತೆ ಮತ್ತು ಸಹಿಷ್ಣುತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗಬೇಕು ಎಂದರು.

More articles

Latest article