ಎರಡನೇ ವಿಮಾನ ನಿಲ್ದಾಣ ತುಮಕೂರಿನಲ್ಲಿ ಸ್ಥಾಪಿಸಲು ಸಚಿವ ಪರಮೇಶ್ವರ್‌ ಆಗ್ರಹ

Most read

ತುಮಕೂರು: ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮತ್ತು ಸಮೀಪದಲ್ಲಿರುವ ಪ್ರತ್ಯೇಕವಾಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಾ. ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲೆಯ ರೂ. 1259 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ತುಮಕೂರು ಜಿಲ್ಲೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಘಟಕವನ್ನು ಸ್ಥಾಪಿಸಲು 20 ಸಾವಿರ ಭೂಮಿಯನ್ನು ನೀಡಲಾಗಿದೆ. ಜಿಲ್ಲೆಗೆ ಮೆಟ್ರೋ ರೈಲು ಯೋಜನೆ ತರಲು ಮುಖ್ಯಮಂತ್ರಿಯವರು ಸಮ್ಮತಿಸಿದ್ದಾರೆ. ಅದಕ್ಕಾಗಿ ಕಾರ್ಯಸಾಧ್ಯತಾ ವರದಿ ತಯಾರಿಸಲು ಸೂಚಿಸಿದ್ದಾರೆ. ಇದೀಗ ಸರ್ಕಾರವು ರಾಜ್ಯದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಚಿಂತನೆ ನಡೆಸಿದೆ. ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕು. ಇದರಿಂದ ರಾಜ್ಯದ 24 ಜಿಲ್ಲೆಗಳ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಅವರು ಒತ್ತಾಯಿಸಿದರು.

ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೆ ವಿಶ್ವವಿದ್ಯಾನಿಲಯ ಮಂಜೂರಾಗಿತ್ತು. ವಿಶ್ವವಿದ್ಯಾಲಯಕ್ಕೆ ನೂತನ ಕ್ಯಾಂಪಸ್ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಉದ್ಘಾಟಿಸಬೇಕಿದೆ. ಕೊರಟಗೆರೆಯಲ್ಲಿನ ಕೆಎಸ್ಆರ್ಪಿ ಬೆಟಾಲಿಯನ್, ಪಾವಗಡ ತಾಲ್ಲೂಕಿಗೆ ಕುಡಿಯಲು ತುಂಗಾಭದ್ರ ನದಿಯಿಂದ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಯೋಜನೆಯನ್ನು ಮುಖ್ಯಮಂತ್ರಿಗಳೇ ಉದ್ಘಾಟಿಸಬೇಕು ಎಂದು ಮನವಿ ಮಾಡಿಕೊಂಡರು. ಸ್ಮಾರ್ಟ್ಸಿಟಿ ಯೋಜನೆ ತುಮಕೂರು ಮಹಾನಗರದ ಕೆಲವೇ ವಾರ್ಡ್ಗಳಿಗೆ ಸೀಮಿತವಾಗಿದ್ದು, ಎಲ್ಲ 35 ವಾರ್ಡ್ಗಳ ಅಭಿವೃದ್ಧಿಗೆ ರೂ. 500 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಶ್ರೀನಿವಾಸ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಹೆಚ್.ವಿ.ವೆಂಕಟೇಶ್, ಕೆ.ಷಡಕ್ಷರಿ, ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಡಿ.ಟಿ.ಶ್ರೀನಿವಾಸ್, ಆರ್.ರಾಜೇಂದ್ರ, ಕೇಂದ್ರ ವಲಯ ಐಜಿಪಿ ಲಾಭೂ ರಾಮ್ ಉಪಸ್ಥಿತರಿದ್ದರು.

More articles

Latest article