ಸ್ಮಾರ್ಟ್ ಸಿಟಿಯ ಹೆಸರಲ್ಲಿ ಸಾವಿರಾರು ಕೋಟಿ ಖರ್ಚು ಮಾಡುವ ವ್ಯವಸ್ಥೆಗೆ ನಗರ ಹಳೆಯ ಮಂಗಳೂರು ಮತ್ತು ಬದಲಾಗುತ್ತಿರುವ ಮಂಗಳೂರಿನ ನಡುವೆ ಕೊಂಡಿಯಾಗಿರುವ ಈ ವಾಸ್ತುವಿನ್ಯಾಸಗಳನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡಲು, ಮತ್ತು ಆಡಳಿತ ವ್ಯವಸ್ಥೆಗೆ ಸಲಹೆ, ಸಹಕಾರ ನೀಡಲು ಪರಿಣಿತರ ಸಮಿತಿಯೊಂದನ್ನು ರಚಿಸುವ ಅಗತ್ಯವಿದೆ – ಡಾ. ಉದಯ ಕುಮಾರ ಇರ್ವತ್ತೂರು.
ಮಂಗಳೂರು ನಗರದಲ್ಲಿರುವ ಸುಮಾರು 150 ವರ್ಷಗಳಷ್ಟು ಹಳೆಯದಾದ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ “ಇಕೋಸ್ ಆಫ್ ದಿ ಪಾಸ್ಟ್, ವಿಷನ್ಸ್ ಆಫ್ ಟುಮಾರೋ (ಭೂತ ಕಾಲದ ಮಾರ್ದನಿ ನಾಳಿನ ದೃಷ್ಟಿ)” ಎನ್ನುವ, ಎರಡು ದಿನಗಳ ಅವಧಿಯ ಪಾರಂಪರಿಕ ಉತ್ಸವ ನಡೆಯಿತು. ಇದರ ಭಾಗವಾಗಿ ಯುವ ಜನತೆಗೆ ಗತದಿನಗಳ ನೆನಪು ಮಾಡಿಕೊಡುವ ಉದ್ದೇಶ ಹೊಂದಿದ ಕೆಲವು ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಅಧಿಕಾರದ ಕೇಂದ್ರಗಳು ಪ್ರಾದೇಶಿಕ ಅನನ್ಯತೆಯನ್ನು ಅರಿತು ಸಮಾಜವನ್ನು ಒಳಗೊಂಡು ನಡೆಸಬಹುದಾಗಿದ್ದ ರಚನಾತ್ಮಕ ಮತ್ತು ಸೃಜನಶೀಲ ಕಾರ್ಯಗಳಿಗೆ ಇದೊಂದು ಅನುಕರಣೀಯ ಮಾದರಿಯಾಯಿತು.
ಬಹಳ ಹಿಂದಿನಿಂದಲೂ ಕರಾವಳಿಯ ಪ್ರಮುಖ ವ್ಯಾಪಾರದ ಕೇಂದ್ರವಾಗಿದ್ದ ಮಂಗಳೂರು ಆಡಳಿತಾತ್ಮಕವಾಗಿ ಆರಂಭದ ದಿನಗಳಲ್ಲಿ ಮದರಾಸು ಪ್ರಾಂತ್ಯದ ಭಾಗವಾಗಿತ್ತು. ವಸಾಹತುಶಾಹಿಯ ಆಡಳಿತದ ಕಾಲದಲ್ಲಿ ಆರಂಭವಾದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿವರ್ತನೆಯ ಹೆಜ್ಜೆ ಗುರುತುಗಳನ್ನು ಈಗಿನ ತಲೆಮಾರು ಮರೆತೇ ಬಿಡುತ್ತಿರುವ ಈ ಹೊತ್ತಲ್ಲಿ ಎರಡು ದಿನಗಳ ಈ ಕಾರ್ಯಕ್ರಮ ನಮ್ಮ ಇತಿಹಾಸವನ್ನು ನೆನಪಿಗೆ ತಂದುಕೊಂಡು ನಾವು ಉಳಿಸಿಕೊಳ್ಳಬೇಕಾದದ್ದು ಏನನ್ನು ಮತ್ತು ಬೆಳೆಸಿಕೊಳ್ಳಬೇಕಿರುವುದು ಯಾವುದನ್ನು ಎನ್ನುವುದನ್ನು ಗುರುತು ಮಾಡಿಕೊಂಡು ಮುನ್ನಡೆಯುವ ದೃಷ್ಟಿಯಿಂದ ಆಸಕ್ತರಿಗೆ ಒಳ್ಳೆಯ ಅವಕಾಶ ಒದಗಿಸಿತು.
ತಾಂತ್ರಿಕ ಶಿಕ್ಷಣ ಪಡೆಯುವ ಅದರಲ್ಲಿಯೂ ಸಿವಿಲ್ ಇಂಜಿನಿಯರಿಂಗ್‍ನ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಭಾಗವಾಗಿ ಪಾರಂಪರಿಕ ಕಟ್ಟಡಗಳು, ಗುತ್ತಿನ ಮನೆಗಳು, ದೇವಸ್ಥಾನಗಳನ್ನು ಕೆಲವೊಮ್ಮೆ ಗಮನಿಸಿ ಅದರ ಕುರಿತು ಕೆಲಸ ಮಾಡುತ್ತಿರುವುದು ನಮ್ಮ ಪರಂಪರೆಯ ಬಗ್ಗೆ ಕಿರಿಯರ ಕುತೂಹಲದ ಕಣ್ಣು ಈಗಲೂ ತೆರೆದುಕೊಂಡಿರುವುದಕ್ಕೆ ಸಾಕ್ಷಿ ಎನ್ನಬಹುದು. ಇಂತಹ ಸಂದರ್ಭಗಳಲ್ಲಿ ಆಸಕ್ತಿಯಿರುವ ನಮ್ಮ ವಿದ್ಯಾರ್ಥಿಗಳಿಗೆ ತಾಂತ್ರಿಕ ಸಂಗತಿಗಳ ಆಚೆಗೆ ವಾಸ್ತುವಿನ್ಯಾಸದ ಜೊತೆಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಇತರ ಸಂಬಂಧಿತ ವಿಷಯಗಳ ಕುರಿತು ವಿಸ್ತೃತಮಾಹಿತಿ ಒದಗಿಸಿಕೊಟ್ಟರೆ ಹೊಸ ಆಯಾಮದಲ್ಲಿ ವಿಸ್ತೃತವಾಗಿ ಅಧ್ಯಯನಗಳು ನಡೆಯುವ ಮತ್ತಷ್ಟು ಅವಕಾಶಗಳು ತೆರೆದುಕೊಳ್ಳಬಹುದು. ಈ ರೀತಿಯ ಪ್ರಯತ್ನ ಮುಂದಿನ ದಿನಗಳಲ್ಲಿ ನಡೆದರೆ ಅದರಿಂದ ನಮ್ಮ ಇತಿಹಾಸದ ಕುರಿತ ತಿಳುವಳಿಕೆ ನೆಲ ಮೂಲದ ಸಂಸ್ಕೃತಿಗೆ ನಮ್ಮನ್ನು ಹೆಚ್ಚು ಹೆಚ್ಚು ಆಪ್ತವಾಗಿಸಬಹುದು.
ಹಣ ಕೇಂದ್ರಿತ ಅಭಿವೃದ್ಧಿಯ ನಾಗಾಲೋಟದಲ್ಲಿ ದಣಿದು ಹೋಗಿ ಹಿಂದಿನದ್ದನ್ನು ನೋಡುವ ಚೈತನ್ಯವಾಗಲೀ ಆಸಕ್ತಿಯಾಗಲೀ ನಮ್ಮಲ್ಲಿ ಕಳೆದುಹೋಗುತ್ತಿರುವ ಹೊತ್ತಲ್ಲಿ ಆಡಳಿತ ವ್ಯವಸ್ಥೆಯೇ ಆಸಕ್ತಿ ವಹಿಸಿ ನಮ್ಮ ಅಭಿವೃದ್ಧಿಯ ಓಟದ ಓಘಕ್ಕೆ ವಿರಾಮ ನೀಡಿ ಹಳೆಯದನ್ನು ನೆನಪಿಸಿಕೊಳ್ಳುವಂತೆ ಮಾಡಿರುವುದು ಸ್ತುತ್ಯರ್ಹ ಮತ್ತು ಸಮಯೋಚಿತ. ಆಡಳಿತ ವ್ಯವಸ್ಥೆಯಲ್ಲಿ ಸಂವೇದನಾಶೀಲ ಅಧಿಕಾರಿಗಳು ಇದ್ದಾಗ ಆಡಳಿತ ಜನಪರವಾಗಿ ಕೆಲಸ ಮಾಡುವುದು ಮತ್ತು ಜನಸಾಮಾನ್ಯರ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳನ್ನು ಸುಲಭವಾಗಿ ತರಲು ಸಾಧ್ಯ ಎನ್ನುವುದು ಆಗೊಮ್ಮೆ ಈಗೊಮ್ಮೆ ಕಂಡುಬರುವುದಿದೆ. ಅಧಿಕಾರವೆಂದರೆ ಕಣ್ಣು, ಕಿವಿ ಸೂಕ್ಷ್ಮವಾಗಿರಿಸಿಕೊಂಡು, ಕೈ, ಬಾಯಿ, ಕಚ್ಚೆ ಶುದ್ಧವಾಗಿರಿಸಿಕೊಂಡು ನಿರ್ವಹಿಸಬೇಕಾದ ದೊಡ್ಡ ಜವಾಬ್ದಾರಿ ಎನ್ನುವುದು ಬಹುತೇಕ ಅಧಿಕಾರಿ ವರ್ಗಕ್ಕೆ ನೆನಪಿಸುವ ನೈತಿಕ ಸ್ಥೈರ್ಯವನ್ನು ರಾಜಕಾರಣಿಗಳು ಬಿಡಿ, ಇತ್ತೀಚೆಗೆ ನಮ್ಮ ಸಮಾಜವೂ ಕಳೆದುಕೊಳ್ಳುತ್ತಿದೆ ಎನ್ನುವುದು ನೋವಿನ ಸಂಗತಿ.
ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಶ್ರೀಯುತ ಪೊನ್ನುರಾಜ್ ಅವರು ಇದ್ದಕ್ಕಿದ್ದಂತೆ ನಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಆವರಣದಲ್ಲಿ ಒಂದು ದಿನ ಪ್ರತ್ಯಕ್ಷರಾದರು. ಅಧಿಕಾರದ ಯಾವ ಹಮ್ಮುಬಿಮ್ಮುಗಳಿಲ್ಲದೆ ಕ್ಯಾಂಪಸ್ಸಿನ ತುಂಬಾ ಒಡಾಡಿ ಹಳೆಯ ಕಟ್ಟಡಗಳನ್ನೆಲ್ಲಾ ವೀಕ್ಷಿಸಿದ ನಂತರ ಮೆಲ್ಲನೆ ವಿಷಯಕ್ಕೆ ಬಂದರು. ಮುಖ್ಯರಸ್ತೆಗೆ ಸಮೀಪವಿರುವ ಪಾರಂಪರಿಕ ಕಟ್ಟಡ ಕೆಡವಿ, ಹೊಸ ಕಟ್ಟಡ ನಿರ್ಮಿಸುವ ಪ್ರಸ್ತಾಪವೇನಾದರೂ ಇದೆಯೇ? ಎಂದು ವಿಚಾರಿಸಿ, ಹಾಗೆಲ್ಲಾ ಮಾಡುವುದು ಅಪೇಕ್ಷಣೀಯವಲ್ಲ. ಕಟ್ಟಡದ ಗುಣಮಟ್ಟ ಪರಿಶೀಲಿಸಿ, ಗಟ್ಟಿಮಟ್ಟಾಗಿದ್ದಲ್ಲಿ ಅದನ್ನು ಸಂರಕ್ಷಿಸಿಕೊಂಡು ಹೋಗಬೇಕು, ಹಿಂದಿನ ಕಾಲದ ವಾಸ್ತು ವಿನ್ಯಾಸ, ಕಟ್ಟಡ ನಿರ್ಮಾಣದಲ್ಲಿ ಬಳಸಲಾಗುವ ವಸ್ತುಗಳ ಗುಣಮಟ್ಟ, ನಿರ್ಮಾಣದ ವಿಧಾನ ಇವುಗಳೆಲ್ಲ ಪರಿಪಕ್ವವಾಗಿದ್ದು, ಅನಿರೀಕ್ಷಿತ ಅವಘಡಗಳೇನಾದರೂ ಸಂಭವಿಸದೇ ಇದ್ದಲ್ಲಿ ಅವು ಉತ್ತಮ ಸ್ಥಿತಿಯಲ್ಲಿಯೇ ಇರುತ್ತವೆ ಎಂದು ಹೇಳಿದರು. ತಾವು ಓದಿದ ಸಂಸ್ಥೆಯ ಹಳೆಯ ಕಟ್ಟಡಗಳನ್ನು ಸಂರಕ್ಷಿಸಿದ ಕುರಿತೂ ಉಲ್ಲೇಖಿಸಿದರು. ನಮ್ಮ ಆವರಣದಲ್ಲಿರುವ ಕಟ್ಟಡಗಳು ಗಟ್ಟಿಮುಟ್ಟಾಗಿವೆ ಎನ್ನುವುದು ತಾಂತ್ರಿಕ ಪರಿಶೀಲನೆಯಲ್ಲಿ ಕಂಡುಬಂದು ಅವುಗಳ ಸೂಕ್ತ ಸಂರಕ್ಷಣೆಗೆ ಏನೇನು ಕ್ರಮಕೈಗೊಳ್ಳಬೇಕು ಎನ್ನುವ ಕುರಿತು ಮಾರ್ಗದರ್ಶನವೂ ದೊರೆಯಿತು. ಇಗಲೂ ಆ ಕಟ್ಟಡಗಳು ಮಂಗಳೂರಿನ ಕತೆ ಹೇಳುತ್ತಾ ದೂರದೂರಿಂದ ಬರುವ ಪ್ರವಾಸಿಗರ ಮೊಬೈಲ್‍ನೊಳಗೆ ಸೆರೆಯಾಗುತ್ತಾ ಲೋಕ ಸಂಚಾರ ಮಾಡುತ್ತಿವೆ ಎನ್ನುವುದು ಖುಷಿಯ ಸಂಗತಿಯೇ.
ನಮ್ಮಲ್ಲಿ ಬಹತೇಕ ಜನರಿಗೆ ಸುಂದರವಾದದ್ದು ಏನನ್ನಾದರೂ ನೋಡಿದರೆ ಅದನ್ನು ನಾವು ಹೇಗೆ ಉಪಯೋಗಿಸುವುದು, ಅದರಿಂದ ನಮಗೇನು ಉಪಯೋಗ ಅಂತ ಲೆಕ್ಕ ಹಾಕುವುದೇ ಅಭ್ಯಾಸ. ಸುಂದರ ವಿಶಿಷ್ಟ ರಚನೆಯ ಹಿಂದಿನ ಕತೆ, ಅದು ಈಗ ಹೇಳುತ್ತಿರುವ ಕತೆ, ವ್ಯಥೆ, ಅದರ ಮಹತ್ವ ಯಾರಿಗೂ ಬೇಕಾಗಿಲ್ಲ. ಮಂಗಳೂರಿನ ಹೃದಯ ಭಾಗದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ (ಈ ಮೊದಲಿನ ಸರಕಾರೀ ಕಾಲೇಜು) ಆವರಣದಲ್ಲಿ ಮೂರು ಪ್ರಮುಖ ಪಾರಂಪರಿಕ ಕಟ್ಟಡಗಳಿವೆ (ಅವುಗಳಲ್ಲಿ ರವೀಂದ್ರ ಕಲಾಭವನ ಸಂಕೀರ್ಣ, ಕಛೇರಿ ಸಂಕೀರ್ಣ ಮತ್ತು ವಾಣಿಜ್ಯ ವಿಭಾಗಗಳಿದ್ದ ವಿಭಾಗ. ಅವುಗಳಲ್ಲಿ ರವೀಂದ್ರ ಕಲಾಭವನ ಸಂಕೀರ್ಣ (ಮುಖ್ಯ ಸಭಾಂಗಣ ಮೀಟಿಂಗ್ ಹಾಲ್ ಮತ್ತು ಎರಡು ಸಂಕಿರಣ ಕೊಠಡಿಗಳಿರುವ ಭಾಗ) ಪುನಶ್ಚೇತನಗೊಂಡು ಮತ್ತೆ ತನ್ನ ಹಳೆಯ ವೈಭವವನ್ನು ಮರಳಿ ಪಡೆದಿದೆ. ಇದು 1920ರಲ್ಲಿ ನಿರ್ಮಾಣವಾದ ಕಟ್ಟಡ (ಇದರ ಒಂದು ಭಾಗ ಇದಕ್ಕಿಂತ ಮೊದಲೇ ನಿರ್ಮಾಣವಾಗಿತ್ತು ಎನ್ನಲಾಗುತ್ತಿದೆ). ಇದರ ರಚನೆ, ವಾಸ್ತು ವಿನ್ಯಾಸ ಅದ್ಭುತವಾಗಿದೆ. ವಿಶೇಷವಾಗಿ ಸಂಗೀತ, ವಿಚಾರ ಸಂಕಿರಣ ಕಾರ್ಯಕ್ರಮಗಳಿಗೆ ಇದು ಭವ್ಯ ಇತಿಹಾಸದ ಹಿನ್ನೆಲೆಯನ್ನು ಒದಗಿಸಿ ಕಾರ್ಯಕ್ರಮಗಳಿಗೆ ವಿಶಿಷ್ಟತೆಯನ್ನು ನೀಡುವ ರೀತಿಯಲ್ಲಿದೆ. ಈ ಕಟ್ಟಡಗಳು ನಿಜವಾಗಿಯೂ ಮಂಗಳೂರು ನಗರದ ಹೆಮ್ಮೆಯಾಗಿದೆ.
ಮೊದಲೇ ಹೇಳಿದಂತೆ ಬಹುತೇಕರಿಗೆ ಇವುಗಳೆಲ್ಲಾ ತಮ್ಮ ಉತ್ಪನ್ನದ ಕೆಲಸದ ಮೌಲ್ಯ ಹೆಚ್ಚಿಸಿಕೊಳ್ಳಲು ಇರುವಂತ ಜಾಗ ಎನ್ನುವ ಭಾವನೆ ಇದೆ. ಸಾರ್ವಜನಿಕ ಸಂಸ್ಥೆಯಾಗಿರುವುದು ಇನ್ನೊಂದು ಸಮಸ್ಯೆ. ಕಾರಣ ಪ್ರತಿಯೊಬ್ಬರಿಗೂ ಇದರ ಮೇಲೆ ಹಕ್ಕು ಇರುವ ಬಗ್ಗೆ ವಿಪರೀತ ಅರಿವು, ಆದರೆ ಕರ್ತವ್ಯದ ಬಗ್ಗೆ ಸಂಪೂರ್ಣ ಅಜ್ಞಾನ. ಈ ಕಟ್ಟಡಗಳು ನೂರಾರು ವರ್ಷಗಳ ಸೇವೆ ನೀಡಿ ದಣಿದು ಬಿಟ್ಟಿವೆ ಅವುಗಳನ್ನು ಆದಷ್ಟು ಜತನದಿಂದ ಬಳಸಿ ಮುಂದಿನ ತಲೆಮಾರಿಗೆ ನೀಡಬೇಕು ಎನ್ನುವ ಪ್ರಜ್ಞೆ ವಿದ್ಯಾವಂತರಲ್ಲಿಯೂ ಕಡಿಮೆಯೇ. ಬಹಳಷ್ಟು ಚಲನಚಿತ್ರ ನಿರ್ದೇಶಕರಿಗೆ ಇದು ತಮ್ಮ ಚಲನ ಚಿತ್ರದ ಮೌಲ್ಯ ಹೆಚ್ಚುಮಾಡಲು ಬಹಳ ಮೆಚ್ಚಿನ ತಾಣ. ಚಲನಚಿತ್ರಗಳಲ್ಲಿ ಬಳಸಿ ಅದನ್ನು ಜನ ವೀಕ್ಷಿಸಿ ಜನ ಸಂತೋಷಪಟ್ಟರೇ ಒಳ್ಳೆಯದೇ. ಆದರೆ ಇದನ್ನು ಬಳಸುವಾಗ ವಹಿಸಬೇಕಾದ ಎಚ್ಚರ, ಕಟ್ಟಡದ ಮಹತ್ವ ಅವರಿಗೆ ತಿಳಿಯುವುದೇ ಇಲ್ಲ. ಸ್ಟುಡಿಯೋಗಳಲ್ಲಿ ಇರುವ ರೆಡಿಮೇಡ್ ಚಲನಚಿತ್ರದ ಸೆಟ್ ಮತ್ತು ಇಂತಹ ಪಾರಂಪರಿಕ ಕಟ್ಟಡದ ನಡುವೆ ಇರುವ ವ್ಯತ್ಯಾಸ ಬಹಳಷ್ಟು ಜನರಿಗೆ ಅರ್ಥವಾಗುವುದೇ ಇಲ್ಲ. ಐತಿಹಾಸಿಕ ಕೋಟೆ, ಕೊತ್ತಳ ನೋಡಿದಾಗೆಲ್ಲ ತಮ್ಮ ಹೆಸರು ಕೊರೆಯುವ ಕೆಲವು ವಿದ್ವಾಂಸರ ಮನಸ್ಥಿತಿಯ ಬಗ್ಗೆ ಏನು ಹೇಳುವುದು?
ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಕಟ್ಟಡ, ವಿಶ್ವವಿದ್ಯಾನಿಲಯ ಕಾಲೇಜು, ಗಣಪತಿ ಹೈಸ್ಕೂಲ್ ಮುಂತಾದ ಹಲವಾರು ಪಾರಂಪರಿಕ ಕಟ್ಟಡಗಳಿದ್ದು ಕಾಲದ ಎಲ್ಲ ಹೊಡೆತಗಳನ್ನು ಎದುರಿಸಿಯೂ ಅವು ಈಗಲೂ ಸದೃಢವಾಗಿವೆ. ಈ ಕಟ್ಟಡಗಳನ್ನು ಸಂರಕ್ಷಿಸುವುದು ಬಹಳ ಅಗತ್ಯ. ನಾವು ನಮ್ಮ ಪರಂಪರೆ ಇತಿಹಾಸದ ಬಗ್ಗೆ ಬಹಳ ಕಾಳಜಿ ಉಳ್ಳವರು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ನಿಜವಾದ ಪರಂಪರೆ ಯಾವುದು ಮತ್ತು ನಾವು ಯಾವುದನ್ನೆಲ್ಲಾ ಉಳಿಸಬೇಕು ಎನ್ನುವ ಬಗ್ಗೆ ನಮಗೆ ಸ್ಪಷ್ಟತೆಯೇ ಇಲ್ಲ. ಸರಕಾರ ಮಂಗಳೂರಿನ ಪಾರಂಪರಿಕ ಕಟ್ಟಡಗಳನ್ನು ಪಟ್ಟಿಮಾಡಿ ಅವುಗಳನ್ನು ಪ್ರವಾಸೋದ್ಯಮದ ನಕಾಶೆಯಲ್ಲಿ ಗುರುತಿಸಬೇಕು. ಮೇಲಾಗಿ ಈ ಕಟ್ಟಡಗಳ ನಿರ್ವಹಣೆಗೆ ವಿಶೇಷ ಅನುದಾನವನ್ನೂ ನೀಡಬೇಕು. ಭಾರತದ ರಾಷ್ಟ್ರೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ, ಇಂಟಾಕ್ನ ಮಂಗಳೂರು ವಿಭಾಗ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿರುವುದು ಒಂದು ಒಳ್ಳೆಯ ಬೆಳವಣಿಗೆ. ಸ್ಮಾರ್ಟ್ ಸಿಟಿಯ ಹೆಸರಲ್ಲಿ ಸಾವಿರಾರು ಕೋಟಿ ಖರ್ಚು ಮಾಡುವ ವ್ಯವಸ್ಥೆಗೆ ನಗರ ಹಳೆಯ ಮಂಗಳೂರು ಮತ್ತು ಬದಲಾಗುತ್ತಿರುವ ಮಂಗಳೂರಿನ ನಡುವೆ ಕೊಂಡಿಯಾಗಿರುವ ಈ ವಾಸ್ತುವಿನ್ಯಾಸಗಳನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡಲು, ಮತ್ತು ಆಡಳಿತ ವ್ಯವಸ್ಥೆಗೆ ಸಲಹೆ, ಸಹಕಾರ ನೀಡಲು ಪರಿಣಿತರ ಸಮಿತಿಯೊಂದನ್ನು ರಚಿಸುವ ಅಗತ್ಯವಿದೆ. ಈ ಕುರಿತು ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸರಕಾರ ಕಾರ್ಯೋನ್ಮುಖವಾಗಲಿ ಎನ್ನುವುದು ನಾಗರೀಕ ಸಮಾಜದ ಹಾರೈಕೆ.
ಡಾ. ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- ಮತಗಳ್ಳತನಕ್ಕೆ ಇವಿಎಂ ಬಳಕೆ; ಅನುಮಾನಗಳ ಮುಂದುವರಿಕೆ