Thursday, December 12, 2024

ಮತಗಳ್ಳತನಕ್ಕೆ ಇವಿಎಂ ಬಳಕೆ; ಅನುಮಾನಗಳ ಮುಂದುವರಿಕೆ

Most read

ಚುನಾವಣೆಯಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವುದು ಮುಖ್ಯವಲ್ಲ. ಯಾವ ಪಕ್ಷ ಅಧಿಕಾರ ಹಿಡಿಯಿತು ಎನ್ನುವುದೂ ಮ್ಯಾಟರ್ ಅಲ್ಲ. ಆದರೆ ಮತದಾರರ ಮತ ಅವರ ಇಚ್ಛೆಯಂತೆ ಸೇರಬೇಕಾದವರಿಗೆ ಸೇರಿದೆಯಾ? ಬಹುಸಂಖ್ಯಾತ ಮತದಾರರ ಬಯಕೆಯಂತೆ ಪ್ರತಿನಿಧಿಗಳ ಆಯ್ಕೆ ಪ್ರಾಮಾಣಿಕವಾಗಿ ಆಗಿದೆಯಾ ಎನ್ನುವುದೇ ಪ್ರಜಾಪ್ರಭುತ್ವದಲ್ಲಿ ಅತೀ ಮುಖ್ಯವಾದದ್ದು ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ವಿದ್ಯುನ್ಮಾನ ಮತಯಂತ್ರಗಳು ಬಳಕೆಗೆ ಬಂದಾಗಿನಿಂದಲೂ ಅವುಗಳ ವಿಶ್ವಾಸಾರ್ಹತೆಯ ಮೇಲೆ ಗುಮಾನಿ ಇದ್ದೇ ಇದೆ. ಆ ಅನುಮಾನಗಳನ್ನು ಕಡಿಮೆ ಮಾಡಲು ಮತಯಂತ್ರಗಳ ಜೊತೆಗೆ ವಿವಿಪಾಟ್ ನ್ನು ಸಹ ಅಳವಡಿಸಲು ಆದೇಶಿಸಿದ್ದರಿಂದ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಇವಿಎಂ ಮಷಿನ್ ಜೊತೆ ವಿವಿಪಾಟ್ ಗಳನ್ನು ಬಳಸಲಾಯ್ತು. ಆಗಲೂ ಸಂದೇಹಗಳು ಹಾಗೆಯೇ ಉಳಿದಿದ್ದರಿಂದಾಗಿ ವಿವಿಪಾಟ್ ಒಳಗಿನ ಮುದ್ರಿತ ಪತ್ರಗಳ ಪೈಕಿ ಶೇ.2 ರಷ್ಟನ್ನು ಹೋಲಿಕೆ ಮಾಡಿ ನೋಡಬೇಕೆಂದೂ 2019 ರಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿತು. ಹ್ಯಾಕಿಂಗ್ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿರುವ ತಾಂತ್ರಿಕ ವೇಗದ ಜಗತ್ತಿನಲ್ಲಿ ಇವಿಎಂ ಹ್ಯಾಕ್ ಮಾಡುವುದು ಅಸಾಧ್ಯವೇನಲ್ಲಾ ಎಂಬುದು ಜನರಲ್ಲಿ ಮತಯಂತ್ರಗಳ ಮೇಲೆ ಸಂದೇಹವನ್ನು ಹೆಚ್ಚಿಸುತ್ತಲೇ ಬಂದಿತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ತನಗೆ ಬೇಕಾದ ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ನೇಮಿಸಿದ ನಂತರ ಪಾರದರ್ಶಕ ಚುನಾವಣೆಗಳ ಸುತ್ತ ಅನುಮಾನದ ಹುತ್ತ ಹೆಚ್ಚಾಗತೊಡಗಿತು.

ಇತ್ತಿಚೆಗೆ ನಡೆದ ಹರಿಯಾಣದ ವಿಧಾನ ಸಭೆಯಲ್ಲಿ ಮತದಾರರ ಒಲವು, ಸಮೀಕ್ಷೆಗಳ ಬಲವು ಕಾಂಗ್ರೆಸ್ ಪರವಾಗಿದ್ದರೂ ಫಲಿತಾಂಶ ಬಿಜೆಪಿ ಪರವಾಗಿ ಬಂದಿತು. ಮತ್ತೆ ಇವಿಎಂ ವಿಶ್ವಾಸಾರ್ಹತೆ ಮೇಲೆ ಸಂದೇಹ ವ್ಯಕ್ತಪಡಿಸಲಾಯ್ತು.

2024 ರ ಲೋಕಸಭಾ ಚುನಾವಣೆಯಲ್ಲೂ ಮತದಾರರ ಮತದಾನ ಪ್ರಮಾಣ ಹಾಗೂ ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತದಾರರ ಸಂಖ್ಯೆಯಲ್ಲಿ ಗಮನಾರ್ಹವಾದ ವ್ಯತ್ಯಾಸವಾಗಿತ್ತು. ಈ ಅಂತರದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಸಂಸ್ಥೆಯು ಸುಪ್ರೀಂ ಕೋರ್ಟ್ ಮೆಟ್ಟಲೇರಿತು. ‘ಮತದಾನವಾದ 48 ಗಂಟೆಯ ಒಳಗೆ ಮತದಾನ ಕೇಂದ್ರದ ಮತಪ್ರಮಾಣದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು’ ಎಂದೂ ಕೋರಿತ್ತು. ಯಾಕೆಂದರೆ ಲೋಕಾ ಚುನಾವಣೆಯಲ್ಲಿ ಆರಂಭಿಕ ಮತ್ತು ಅಂತಿಮ ಅಂಕಿಅಂಶಗಳ ನಡುವೆ ಶೇ.5 ರಿಂದ ಶೇ.6 ರಷ್ಟು ವ್ಯತ್ಯಾಸ ಕಂಡು ಬಂದಿತ್ತು. “ಮತದಾನ ಮುಗಿದ ನಂತರ ಫಾರಂ 17C ಯಲ್ಲಿ ದಾಖಲಿಸಲಾಗುವ ಮತದಾನ ಪ್ರಮಾಣ ಕೇವಲ ಅಭ್ಯರ್ಥಿಗಳ ಎಜೆಂಟರುಗಳ ಮಾಹಿತಿಗಾಗಿ ಮಾತ್ರವೇ ಹೊರತು ಸಾರ್ವಜನಿಕಗೊಳಿಸಲಾಗದು” ಎಂದು ಆಯೋಗ ವಾದ ಮಂಡಿಸಿತು. ಆಯೋಗದ ವಾದವನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್ ಸಂಸ್ಥೆಯ ಮನವಿಯನ್ನು ತಿರಸ್ಕರಿಸಿತು.

ನಂತರ ನವೆಂಬರ್ 20 ರಂದು ಮಹಾರಾಷ್ಟ್ರ ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಯ ಫಲಿತಾಂಶ ಅಚ್ಚರಿದಾಯಕವಾಗಿತ್ತು. 280 ಸದಸ್ಯ ಬಲದ ಚುನಾವಣೆಯಲ್ಲಿ 230 ಕ್ಷೇತ್ರಗಳಲ್ಲಿ ಎನ್ ಡಿ ಎ ಮೈತ್ರಿ ಕೂಟ ಪ್ರತಿಕೂಲ ಸನ್ನಿವೇಶದಲ್ಲಿಯೂ ಗೆದ್ದಿತ್ತು.  ಇವಿಎಂ ಚಮತ್ಕಾರವೇ ಇದಕ್ಕೆಲ್ಲಾ ಕಾರಣವೆಂದು ಆರೋಪ ಮಾಡಲಾಯ್ತು. ಇವಿಎಂ ವಿಶ್ವಾಸಾರ್ಹತೆ ಹಿಂದೆಂದಿಗಿಂತಲೂ ಹೆಚ್ಚು ಪ್ರಶ್ನೆಗೊಳಗಾಯ್ತು. ಈ ಆರೋಪಕ್ಕೆ ಪೂರಕವಾದ ಅಂಕಿ ಅಂಶಗಳೂ ಸಾಕಷ್ಟಿದ್ದವು.

ನವೆಂಬರ್ 20 ರಂದು ಸಂಜೆ 5 ಗಂಟೆಗೆ ಚುನಾವಣಾ ಆಯೋಗ ಶೇ.58.22 ಮತದಾನ ಆಗಿದೆ ಎಂದು ಪ್ರಕಟಿಸಿತ್ತು. 5 ಗಂಟೆಯ ಒಳಗೆ ಬಂದು ಸರದಿ ಸಾಲಲ್ಲಿ ನಿಂತವರಿಗೆ ಮತದಾನ ಮಾಡಲು ಅವಕಾಶ ಕೊಟ್ಟಿದ್ದರಿಂದಾಗಿ ರಾತ್ರಿ 11.30 ರ ವರೆಗೂ ಮತದಾನ ಮಾಡಲಾಯ್ತು. ರಾತ್ರಿ 11.30 ಕ್ಕೆ ಮತದಾನ ಪ್ರಕ್ರಿಯೆ ಮುಗಿದಾದ ಮೇಲೆ ಶೇ.65.02 ಮತದಾನ ಆಗಿದೆ ಎಂದು ಆಯೋಗ ಪ್ರಕಟಿಸಿತು. ಮೊದಲ ಸಂದೇಹ ಆರಂಭವಾಗಿದ್ದೇ ಇಲ್ಲಿ. ಯಾಕೆಂದರೆ ಸಂಜೆ 5 ಗಂಟೆಯಿಂದ ರಾತ್ರಿ 11.30 ರ ಒಳಗಿನ 6.30 ಗಂಟೆಯಲ್ಲಿ ಶೇ.7.83 ಮತದಾನ ಆಗಲು ಹೇಗೆ ಸಾಧ್ಯ? ಆ ಲೆಕ್ಕದಲ್ಲಿ ಸರಿಸುಮಾರು 76 ಲಕ್ಷ ಜನರು ಮತ ಚಲಾವಣೆ ಮಾಡಲು ಸಾಧ್ಯವಾಗುತ್ತದಾ? ಎನ್ನುವ ಪ್ರಶ್ನೆ ಕಾಡತೊಡಗಿತು.

ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್

ಯಾಕೆಂದರೆ… ಸಂಜೆ 5 ಗಂಟೆಯಲ್ಲಿ ಪ್ರತಿ ಮತದಾನ ಕೇಂದ್ರದಲ್ಲಿ ಸರಾಸರಿ ಒಂದು ಸಾವಿರ ಜನರು ಮತದಾನ ಮಾಡಲು ಸರದಿ ಸಾಲಲ್ಲಿ ಕಾಯುತ್ತಾ ನಿಂತಿದ್ದಾರೆ ಎಂದುಕೊಳ್ಳೋಣ. ಒಬ್ಬರಿಗೆ ಕನಿಷ್ಟ ಒಂದು ನಿಮಿಷವಾದರೂ ಮತ ಚಲಾಯಿಸುವ ಪ್ರಕ್ರಿಯೆಗೆ ಸಮಯ ಬೇಕಾಗುತ್ತದೆ ಎಂದು ಅಂದಾಜಿಸೋಣ. ಅಂದರೆ 1000 ಮತದಾರರು ಇದ್ದರೆ ಅವರು ಮತದಾನ ಮಾಡಲು ತೆಗೆದುಕೊಳ್ಳುವ ಕನಿಷ್ಟ ಸಮಯ ಒಂದು ಸಾವಿರ ನಿಮಿಷಗಳು. ಅಂದರೆ ಒಟ್ಟಾಗಿ ಬೇಕಾಗುವುದು 16.6 ಗಂಟೆ ಸಮಯ. ಆದರೆ ಅಷ್ಟೂ ಜನ ಕೇವಲ ಆರುವರೆ ಗಂಟೆಗಳಲ್ಲಿ ಹೇಗೆ ಮತದಾನ ಮಾಡಲು ಸಾಧ್ಯವಾಯ್ತು?

ಹೋಗಲಿ, ನವೆಂಬರ್ 20 ರಂದು ರಾತ್ರಿ 11.30 ಕ್ಕೆ ಶೇ.65.02 ಮತದಾನ ಆಗಿದೆ ಎಂದು ಆಯೋಗ ಪ್ರಕಟಿಸಿದ್ದಾದರೂ ಅಂತಿಮವಾಗಬಹುದಾಗಿತ್ತು. ಆದರೆ ನವೆಂಬರ್ 23 ರಂದು ಮತಗಳ ಎಣಿಕೆ ನಡೆದಾಗ ಮತದಾನ ಪ್ರಮಾಣ ಶೇ.66.05 ಆಗಿದ್ದು ಪ್ರಮಾಣಿತವಾಯ್ತು. ಈ ವ್ಯತ್ಯಾಸ ಯಾಕೆ, ಹೇಗೆ? ಎನ್ನುವುದು ಇವಿಎಂ ಮೇಲೆ ಸಂದೇಹ ವ್ಯಕ್ತ ಪಡಿಸುವವರ ಪ್ರಶ್ನೆ. ಆದರೆ ಈ ಪ್ರಶ್ನೆಗೆ ಚುನಾವಣಾ ಆಯೋಗ ಉತ್ತರಿಸದೇ ದಿವ್ಯ ಮೌನವನ್ನು ವಹಿಸಿದೆ. ಹರಿಯಾಣದಲ್ಲಿ ಪ್ರತಿಪಕ್ಷವು ಇವಿಎಂ ಮೇಲೆ ಸಂದೇಹ ವ್ಯಕ್ತ ಪಡಿಸಿದಾಗ ಪ್ರಶ್ನಿಸಿದವರ ಮೇಲೆ ಹರಿಹಾಯ್ದ ಚುನಾವಣಾ ಆಯೋಗದ ಆಯುಕ್ತರು ಮಹಾರಾಷ್ಟ್ರದ ಇವಿಎಂ ವ್ಯತ್ಯಾಸಗಳ ಬಗ್ಗೆ ಪ್ರಶ್ನಿಸಿದಾಗ ಯಾಕೆ ಸುಮ್ಮನೆ ಕೂತಿದ್ದಾರೆ ಎಂಬುದು ಇನ್ನಷ್ಟೂ ಅನುಮಾನವನ್ನು ಹೆಚ್ಚಿಸಿದೆ.

ಮಹಾರಾಷ್ಟ್ರದ ಚುನಾವಣೆಯಲ್ಲಿ ಒಟ್ಟು 6 ಕೋಟಿ 40 ಲಕ್ಷ 28 ಸಾವಿರದ 195 ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ಚುನಾವಣೆಯ ದಿನ ಚುನಾವಣಾ ಆಯೋಗ ಅಂಕಿ ಅಂಶಗಳ ಸಮೇತ ಪ್ರಕಟಿಸಿತ್ತು. ಆದರೆ ಮೂರು ದಿನಗಳ ನಂತರ ಮತಗಳ ಎಣಿಕೆ ಮುಗಿದಾದ ಮೇಲೆ ಒಟ್ಟು ಮತಗಳ ಸಂಖ್ಯೆ 6 ಕೋಟಿ 45 ಲಕ್ಷ 95 ಸಾವಿರದ 508 ಆಗಿತ್ತು. ಅಂದರೆ ವ್ಯತ್ಯಾಸ 5 ಲಕ್ಷದ 4 ಸಾವಿರದ 313 ಮತಗಳು ಎಂದಾಯ್ತು. ಇಷ್ಟೊಂದು ಹೆಚ್ಚುವರಿ ಮತಗಳು ಹೇಗೆ ಬಂದವು? ಮೂರು ದಿನಗಳಲ್ಲಿ ಇವಿಎಂ ಮತಯಂತ್ರ ಇಷ್ಟೊಂದು ಹೆಚ್ಚುವರಿ ಮತಗಳ ಹೆರಿಗೆ ಹೇಗೆ ಮಾಡಿತು. ಮಾಡಿದ್ಯಾರು? ಮಾಡಿಸಿದ್ಯಾರು? ಉತ್ತರಿಸಬೇಕಾದ ಆಯೋಗದವರು ಮೌನಕ್ಕೆ ಶರಣಾಗಿದ್ದಾರೆ. ಸೋತವರು ಹತಾಶೆಯಿಂದ ಇವಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ.

ಇವಿಎಂ ಮತಯಂತ್ರದ ಚಮತ್ಕಾರ ಇಷ್ಟೇ ಅಲ್ಲ ಇನ್ನೂ ಬೇಕಾದಷ್ಟಿವೆಯಂತೆ. ಮಹಾರಾಷ್ಟ್ರದ ಕರಣ ಎನ್ನುವ ಗ್ರಾಮದಲ್ಲಿ ಇರೋದೇ 514 ಮತಗಳು. ಆದರೆ ಬಿಜೆಪಿಗೆ ಬಿದ್ದ ಮತಗಳ ಸಂಖ್ಯೆ 527. ಎಲ್ಲಾ ಮತದಾರರು ಬಿಜೆಪಿಗೆ ಮತ ಹಾಕಿದ್ದಾರೆ ಎಂದುಕೊಂಡರೂ ಹೆಚ್ಚುವರಿಯಾಗಿ ಬಿದ್ದ 13 ಮತಗಳನ್ನು ಹಾಕಿದ್ದು ಯಾರು?   ಇನ್ನೊಂದು ತಾಲೇರ ಎನ್ನುವ ಗ್ರಾಮದಲ್ಲಿ 397 ಅರ್ಹ ಮತದಾರರಿದ್ದಾರೆ. ಅದರಲ್ಲಿ 312 ಜನ ಮತದಾನ ಮಾಡಿದ್ದಾರೆ. ಉದ್ಧವ್ ಬಣಕ್ಕೆ 194 ಮತಗಳು ಹಾಗೂ ಸ್ವತಂತ್ರ ಅಭ್ಯರ್ಥಿಗೆ 104 ಮತಗಳು ಬಿದ್ದಿವೆ. ಬಾಕಿ ಉಳಿದದ್ದು 14 ಮತಗಳು ಮಾತ್ರ. ಆದರೆ ಶಿವಸೇನೆಯ ಶಿಂಧೆ ಬಣದ ಅಭ್ಯರ್ಥಿಗೆ 326 ಮತಗಳು ಬಂದಿವೆ. ಈ ಪವಾಡ ಹೇಗೆ ಸಾಧ್ಯ? ಇವು ಯಾವುವೂ ಊಹೆಗಳಲ್ಲ. ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆಯ ಅಂಕಿ ಅಂಶಗಳಿಂದಲೇ ಪಡೆದ ದತ್ತಾಂಶಗಳು. ಇಂತಹುದು ಕೇವಲ ಒಂದೆರಡಲ್ಲ ನೂರಾರು ಗ್ರಾಮಗಳಲ್ಲಿ ಮತವ್ಯತ್ಯಾಸ ಕಂಡು ಬಂದಿದೆ. ಒಟ್ಟಾರೆಯಾಗಿ 5 ಲಕ್ಷಕ್ಕೂ ಹೆಚ್ಚು ಮತಗಳು ಹೆಚ್ಚುವರಿಯಾಗಿ ಸೇರಿಸಲ್ಪಟ್ಟಿವೆ. ಇದೇ ರೀತಿ ಕಳೆದ ಲೋಕಸಭಾ ಚುನಾವಣೆಯಲ್ಲೂ 11 ಲಕ್ಷ ಮತಗಳು ಹೆಚ್ಚುವರಿಯಾಗಿ ಸೇರಿಸಲ್ಪಟ್ಟಿದ್ದವು. ಮತದಾನದ ನಂತರದ ಸಂಖ್ಯೆಗೂ, ಮತ ಎಣಿಕೆ ಸಮಯದಲ್ಲಿ ಕಂಡುಬಂದ ಅಂಕಿಅಂಶಗಳ ವ್ಯತ್ಯಾಸಕ್ಕೂ ಇರುವ ಲೆಕ್ಕಗಳ ಹೊಣೆ ಯಾರದ್ದು? ಹೊಣೆಗಾರಿಕೆ ಹೊರಬೇಕಾದ ಚುನಾವಣಾ ಆಯೋಗ ಯಾಕೆ ಸುಮ್ಮನಿದೆ? ಈ ರೀತಿಯ ಮತಗಳ್ಳತನವನ್ನು ತನಿಖೆ ಮಾಡುವುದಾದರೂ ಯಾರು?

ಇದರಿಂದಾಗಿ ಇವಿಎಂ ಮತಯಂತ್ರಗಳ ಪಾರದರ್ಶಕತೆಯ ಮೇಲೆ ಅನುಮಾನಗಳು ಅವ್ಯಾಹತವಾಗಿ ಕಾಡುತ್ತಿವೆ. ಚುನಾವಣೆಯಲ್ಲಿ ಯಾರು ಗೆದ್ದರು, ಯಾರು ಸೋತರು ಎನ್ನುವುದು ಇಲ್ಲಿ ಮುಖ್ಯವಲ್ಲ. ಯಾವ ಪಕ್ಷ ಅಧಿಕಾರ ಹಿಡಿಯಿತು ಎನ್ನುವುದೂ ಮ್ಯಾಟರ್ ಅಲ್ಲ. ಆದರೆ ಮತದಾರರ ಮತ ಅವರ ಇಚ್ಛೆಯಂತೆ ಸೇರಬೇಕಾದವರಿಗೆ ಸೇರಿದೆಯಾ? ಬಹುಸಂಖ್ಯಾತ ಮತದಾರರ ಬಯಕೆಯಂತೆ ಪ್ರತಿನಿಧಿಗಳ ಆಯ್ಕೆ ಪ್ರಾಮಾಣಿಕವಾಗಿ ಆಗಿದೆಯಾ ಎನ್ನುವುದೇ ಪ್ರಜಾಪ್ರಭುತ್ವದಲ್ಲಿ ಅತೀ ಮುಖ್ಯವಾದದ್ದು. ಆದರೆ ಮತಯಂತ್ರ ತಿರುಚಿ ಫಲಿತಾಂಶವನ್ನು ಮೋಸದಿಂದ ಒಬ್ಬ ಅಭ್ಯರ್ಥಿ ಇಲ್ಲವೇ ಒಂದು ಪಕ್ಷದ ಪರವಾಗಿ ಬರುವಂತೆ ಮಾಡುವುದು ಜನತಂತ್ರ ವ್ಯವಸ್ಥೆಗೆ ಮಾಡುವ ದ್ರೋಹ.

ಇವಿಎಂ ಮತಯಂತ್ರದ ಮೇಲೆ ಇಷ್ಟೊಂದು ಅನುಮಾನ ಆರೋಪಗಳಿರುವಾಗ ಮೊದಲಿನಂತೆ ಮತಪತ್ರಗಳ ವ್ಯವಸ್ಥೆಗೆ ಹೋಗುವುದೇ ಎಲ್ಲಾ ಸಂದೇಹಗಳಿಗೆ ಪರಿಹಾರವಾಗಿದೆ. ಆಧುನಿಕ ತಾಂತ್ರಿಕ ಯುಗದಲ್ಲಿ ಯಾವುದೇ ಎಲೆಕ್ಟ್ರಾನಿಕ್ ಡಿವೈಸ್ ಗಳನ್ನು ಹ್ಯಾಕ್ ಮಾಡಲು ಸಾಧ್ಯವಿರುವಾಗ, ಅತೀ ಭದ್ರತೆಯ ಮಿಲಿಟರಿ ಸರ್ವರ್ ಗಳಿಗೆ ಹ್ಯಾಕರ್ ಗಳು ಕನ್ನ ಹಾಕಲು ಸಾಧ್ಯ ಇರುವಾಗ, ಬ್ಯಾಂಕ್ ಅಕೌಂಟ್‌ ಗಳಲ್ಲಿದ್ದ ಹಣವನ್ನೇ ಹ್ಯಾಕಿಂಗ್ ಮೂಲಕ ಲಪಟಾಯಿಸುವವರು ಸಕ್ರಿಯವಾಗಿರುವಾಗ ಈ ಇವಿಎಂ ಯಂತ್ರಗಳು ಯಾವ ಲೆಕ್ಕ? 

ಹೀಗಾಗಿಯೇ ತಾಂತ್ರಿಕವಾಗಿ ಅತ್ಯಂತ ಮುಂದುವರೆದ ದೇಶಗಳಾದ ಅಮೇರಿಕಾ, ಬ್ರಿಟನ್, ಇಟಲಿ, ಫ್ರಾನ್ಸ್ ನಂತಹ ಮುಂದುವರೆದ ದೇಶಗಳೇ ಬ್ಯಾಲೆಟ್ ಪೇಪರ್ ಓಟಿಂಗ್ ಸಿಸ್ಟಂ ನಲ್ಲೇ ಚುನಾವಣೆ ನಡೆಸುತ್ತಿವೆ. ಅದೇ ರೀತಿ ಭಾರತದಲ್ಲಿ ಯಾಕೆ ಸಾಧ್ಯವಿಲ್ಲ? ಚುನಾವಣಾ ಖರ್ಚು ಹಾಗೂ ಸಮಯ ಹೆಚ್ಚು ಬೇಕಾಗುತ್ತದೆ ಎನ್ನುವುದೇ ಆದರೆ ವಿಶ್ವಾಸಾರ್ಹತೆಯ ಮುಂದೆ ಅದು ದೊಡ್ಡದೇನಲ್ಲ. ಚುನಾವಣೆಯಲ್ಲಿ ಅಕ್ರಮವಾಗಿ ಬಳಸಲಾಗುವ ಹಣವನ್ನೆಲ್ಲಾ ಸೀಜ್ ಮಾಡಿದರೆ ಚುನಾವಣಾ ಖರ್ಚನ್ನು ನಿಭಾಯಿಸಬಹುದು. ಆದರೆ ಜನರಿಗೆ ಮತದಾನ ಪ್ರಕ್ರಿಯೆ ಮೇಲೆ ನಂಬಿಕೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕುಸಿಯಬಹುದು. ಹಾಗಾಗ ಬಾರದು ಎಂದರೆ, ಇವಿಎಂ ಮೇಲಿರುವ ಅಪನಂಬಿಕೆ ತೊಲಗಬೇಕೆಂದರೆ ಮತಪತ್ರಗಳನ್ನು ಬಳಸುವುದೊಂದೇ ಈಗಿರುವ ಪರ್ಯಾಯ. ಅದನ್ನು ಮಾಡದೇ ಹೋದರೆ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಗೆ ಗಾಯ ಮಾಡಿದಂತೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ʼಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆʼ ಎಂಬ ಒಂದು ಬಹು ದೊಡ್ಡ ಜೋಕ್

More articles

Latest article