ಬೆಂಗಳೂರು: ಬೆಂಗಳೂರು ನಗರದ ಹೊರವಲ ಹಾಗೂ ದಾವಣಗೆರೆಯದಲ್ಲಿ 18 ಪಾಕ್ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 1,350 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಅಕ್ರಮವಾಗಿ ಭಾರತ ಪ್ರವೇಶ, ಹಣ ವರ್ಗಾವಣೆ, ಉದ್ಯೋಗ, ಧರ್ಮ ಬೋಧನೆ ಸೇರಿದಂತೆ ಹಲವು ವಿಚಾರಗಳು ಮತ್ತು ಅಕ್ರಮ ಚಟುವಟಿಕೆಗಳು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿವೆ. ಚಾರ್ಜ್ ಶೀಟ್ ನಲ್ಲಿ ದಾಖಲಾಗಿರುವ ಎಲ್ಲಾ ಬಂಧಿತ 18 ಮಂದಿಯೂ ಪಾಕ್ ಪ್ರಜೆಗಳಾಗಿದ್ದಾರೆ. ಇವರೆಲ್ಲರನ್ನೂ ಧರ್ಮದಿಂದ ಬಹಿಷ್ಕಾರ ಮಾಡಲಾಗಿತ್ತು. ಅದ್ದರಿಂದ ಇವರೆಲ್ಲರೂ ಮೂರ್ನಾಲ್ಕು ವರ್ಷಗಳ ಹಿಂದೆಯೇ ಭಾರತಕ್ಕೆ ಅಕ್ರಮವಾಗಿ ನುಸುಳಿ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದರು.
ಇವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ, ಬೆಂಗಳೂರು ಸಮೀಪವಿರುವ ಜಿಗಣಿ ಹಾಗೂ ಪೀಣ್ಯ ಮತ್ತು ದಾವಣಗೆರೆಯಲ್ಲಿ ನೆಲೆಸಿದ್ದರು. ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಇವರು, ತಮದೇ ಯೂಟ್ಯೂಬ್ ಚಾನೆಲ್ ತೆರೆದು ಧರ್ಮ ಬೋಧನೆ ಮಾಡುತ್ತಿದ್ದರು. ಈ ಎಲ್ಲಾ ಅಂಶಗಳನ್ನು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದರು.
ತನಿಖೆ ಸಂದರ್ಭದಲ್ಲಿ ಪಾಕ್ ಪ್ರಜೆಗಳು ಸೇರಿದಂತೆ ಹಲವಾರು ಮಂದಿಯ ಹೇಳಿಕೆಗಳನ್ನು ದಾಖಲು ಮಾಡಲಾಗಿದೆ. ತಾಂತ್ರಿಕ ಸಾಕ್ಷ್ಯಗಳು, ಸಿಡಿಆರ್ ವರದಿ , ಯೂ ಟ್ಯೂಬ್ ಚಾನೆಲ್ ವಿವರಗಳನ್ನು ಕಲೆಹಾಕಲಾಗಿತ್ತು. ಈ ಪ್ರಕರಣ ಕುರಿತು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ರಾಜತಂತ್ರಿಕ ಮಟ್ಟದಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.