ಬೆಂಗಳೂರು: ದೆಹಲಿ ಮೂಲದ 24 ವರ್ಷದ ಸ್ಪಾ ಉದ್ಯೋಗಿಯೊಬ್ಬರು ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋನಿಯಾ ಮೃತ ಯುವತಿ. ಬಾಗಲಗುಂಟೆ ಠಾಣಾ ವ್ಯಾಪ್ತಿಯ 8ನೇ ಮೈಲಿಯಲ್ಲಿರುವ ಸ್ಪಾ ಒಂದರಲ್ಲಿ ಒಂದೂವರೆ ತಿಂಗಳ ಹಿಂದೆಯಷ್ಟೇ ಸೋನಿಯಾ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಬಂದಿಲ್ಲ ಎಂದು ಸ್ಪಾ ಮಾಲೀಕ ಕರೆ ಮಾಡಿದಾಗ ಸೋನಿಯಾ ಸ್ವೀಕರಿಸಿರಲಿಲ್ಲ.
ಅನುಮಾನಗೊಂಡ ಸ್ಪಾ ಮಾಲೀಕ ಸೋನಿಯಾ ಅವರ ಮನೆ ಬಳಿ ಬಂದು ಕಾಲಿಂಗ್ ಬೆಲ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಗ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ಸೋನಿಯಾ ಮೃತದೇಹ ಪತ್ತೆಯಾಗಿದೆ. ಸೋನಿಯಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸೋಮವಾರ ರಾತ್ರಿ ಕೊನೆಯದಾಗಿ ತನ್ನ ತಾಯಿಯೊಂದಿಗೆ ಸೋನಿಯಾ ಮಾತನಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ದೆಹಲಿಯಲ್ಲಿರುವ ಸೋನಿಯಾ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡಿದ್ದು, ಮೊಬೈಲ್ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಮನೆ ಮಾಲೀಕರು ಹಾಗೂ ಸ್ಪಾ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗುವುದು ಎಂದು ಬಾಗಲಗುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.