ಬಿ.ವೈ.ವಿಜಯೇಂದ್ರಗೆ ಮುಖ್ಯಮಂತ್ರಿ ಗಾದಿಯ ಕನಸು. ಹೇಗಾದರೂ ಮಾಡಿ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎಂಬ ಉಮೇದು ಈಗಲೇ ಶುರುವಾಗಿದೆ. ಈ ನಿಲುವು ಬಿಜೆಪಿ ನಾಯಕರಲ್ಲಿ ಬಿಪಿ ಹೆಚ್ಚು ಮಾಡಿದೆ. ಹೀಗಾಗಿ ಸಹಜವಾಗಿಯೇ ಅವರೂ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಲೇ ವಿಜಯೇಂದ್ರಗೆ ಪೈಪೋಟಿ ಕೊಡಲು ಸಜ್ಜಾಗಿದ್ದಾರೆ – ರಮೇಶ್ ಹಿರೇಜಂಬೂರು, ಹಿರಿಯ ಪತ್ರಕರ್ತರು.
ಭಾರತೀಯ ಜನತಾ ಪಕ್ಷ ಈಗ ಅಕ್ಷರಶಃ ಒಡೆದ ಮನೆಯಾಗಿದೆ. ಈ ಮನೆಯಲ್ಲಿನ ಪ್ರತಿಯೊಬ್ಬರೂ ಒಂದೊಂದು ಬಾಗಿಲು ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ! ಅದನ್ನು ಸ್ವತಃ ಬಿಜೆಪಿ ನಾಯಕರೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಇದಕ್ಕಿಂತ ದುರಂತ ಸ್ಥಿತಿ ಒಂದು ಪಕ್ಷಕ್ಕೆ ಬೇಕಾ?
ಇಡೀ ಭಾರತದಲ್ಲಿ ಮೋದಿ ವಿಶ್ವ ಗುರು (ಅದು ಯಾವ ಕಾರಣಕ್ಕೋ ಗೊತ್ತಿಲ್ಲ). ಮೋದಿಯನ್ನು ಬೆಂಬಲಿಸಿ ದೇಶದಲ್ಲೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷ ಅಂತೆಲ್ಲ ಬೀಗುತ್ತಿದ್ದ ಬಿಜೆಪಿಗೆ ಈಗ ನಾಯಕರೇ ಇಲ್ಲದಾಗಿದೆ. ಎಲ್ಲವನ್ನೂ ಸರಿಯಾಗಿ ನಿಭಾಯಿಸಿಕೊಂಡು ಹೋಗುವ; ಎಲ್ಲ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕರು ಈಗ ಇಲ್ಲದಾಗಿದೆ. ಆ ಕೊರತೆ ಈಗ ಬಿಜೆಪಿಯಲ್ಲಿ ಎದ್ದು ಕಾಣುತ್ತದೆ. ಜೊತೆಗೆ ಬಹಿರಂಗವಾಗಿಯೂ ಅದು ಪ್ರಜ್ವಲಿಸುತ್ತಿದೆ. ನಿಜ, ಬಿಜೆಪಿ ಈಗ ಮನೆಯೊಂದು ಮೂರು ಬಾಗಿಲಾಗಿದೆ. ಹೀಗಾಗಿ ತಾಳ ಮೇಳ ಒಂದೂ ಇಲ್ಲದಾಗಿದೆ.
ಮುಖ್ಯಮಂತ್ರಿ ಕನಸು:
ಕೂಸು ಹುಟ್ಟದೆ ಕುಲಾವಿ ಹೊಲಿದರು ಎನ್ನುವ ಹಾಗೆ ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ. ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋತು ಸುಣ್ಣ ಆಗಿರುವ ಬಿಜೆಪಿ ಉಪ ಚುನಾವಣೆಯಲ್ಲಿ ಕೂಡ ಮೂರಕ್ಕೆ ಮೂರೂ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇಷ್ಟಾದರೂ ಭ್ರಮೆಯಿಂದ ಹೊರ ಬಂದಿಲ್ಲ. ಮುಂದಿನ ಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರೆ ಮತ್ತೊಂದು ಕಡೆ ಮುಂದಿನ ಮುಖ್ಯಮಂತ್ರಿ ನಮ್ಮ ತಂಡದವರೇ ಆಗ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳುತ್ತಾರೆ. ಅಲ್ಲಿಗೆ ಈಗಿನ ಕೆಲಸ ಬಿಟ್ಟು ಹಗಲುಗನಸು ಕಾಣಲು ಶುರು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಇಡೀ ಕರ್ನಾಟಕದಲ್ಲಿ ವಕ್ಫ್ ಹಗರಣದ ಬಗ್ಗೆ ಸುದ್ದಿಯಾಗುತ್ತಿದೆ. ಈ ವಿಚಾರವನ್ನು ಇಟ್ಟುಕೊಂಡು ಬಸನಗೌಡ ಯತ್ನಾಳ್ ಹೋರಾಟ ನಡೆಸುತ್ತಿದ್ದಾರೆ. ಆದರೆ ವಿಪರ್ಯಾಸ ಎಂದರೆ ಹಿಂದಿನ ಬಿಜೆಪಿ ಸರ್ಕಾರವೇ ಅತಿ ಹೆಚ್ಚು ಅಂದರೆ 2,001 ರೈತರಿಗೆ ನೋಟಿಸ್ ನೀಡಿದೆ! ಕಾಂಗ್ರೆಸ್ ನೋಟಿಸ್ ನೀಡಿದ್ದು ಅದರ ಅರ್ಧ ಅಂದರೆ 1,404 ರೈತರಿಗೆ ಮಾತ್ರ. ಹೀಗಿದ್ದೂ ಯತ್ನಾಳ್ ಹೋರಾಟ ಕೈಗೆತ್ತಿಕೊಂಡಿದ್ದೇ ಬಿಜೆಪಿ ನಾಯಕರೂ ಸೇರಿದಂತೆ ಈ ಹಗರಣದ ಎಲ್ಲ ಸತ್ಯ ಬಯಲಿಗೆಳೆಯಬೇಕು ಎಂಬ ಕಾರಣಕ್ಕೆ. ಆದರೆ ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರಗೆ ತಾವು ರಾಜ್ಯಾಧ್ಯಕ್ಷರು ಎಂಬ ಅಹಂ. ಜೊತೆಗೆ ಕಳೆದ ಬಾರಿ ಸಿಎಂ ಆಗಿದ್ದಾಗ ಬಸವರಾಜ್ ಬೊಮ್ಮಾಯಿ ಅವರೇ ವಕ್ಫ್ ವಿಚಾರದಲ್ಲಿ ವಕಾಲತ್ತು ಹಾಕಿದ್ದರು. “ನಿಮ್ಮ ವಕ್ಫ್ ಆಸ್ತಿ ಉಳಿಸಿಕೊಳ್ಳುವುದು ನಿಮ್ಮ ಕರ್ತವ್ಯ. ಸರ್ಕಾರ ನಿಮ್ಮ ಜೊತೆಗೆ ಇರುತ್ತದೆ ಎಂದು” ರೈತ ವಿರೋಧಿ ನೀತಿ ಅನುಸರಿಸಿದ್ದರು. ಈಗ ಅದೇ ವಿಚಾರದಲ್ಲಿ ನಿಲುವು ಬದಲು!
ಅಬ್ಬಾ, ಎಂಥಹ ಬಿಜೆಪಿ ನಾಯಕರು, ಒಂದೇ ವಿಚಾರವನ್ನು ತಮ್ಮ ಅನುಕೂಲಕ್ಕೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಚಾಕಚಕ್ಯತೆ ಇವರದು ಎಂಬುದನ್ನು ಜನ ಅರ್ಥ ಮಾಡಿಕೊಳ್ಳದೆ ಇರಲಾರರು. ಕರ್ನಾಟಕದಲ್ಲಿ ಈಗಾಗಲೇ 2008 ರಿಂದ 2024 ರ ವರೆಗೆ 3,519 ರೈತರಿಗೆ, ಭೂ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ಹೆಚ್ಚು ಪಾಲು ಬಿಜೆಪಿಯದ್ದೇ. ಹೀಗಾಗಿ ಇದೇ ಪ್ರಕರಣ ಇಟ್ಟುಕೊಂಡು ಒಂದು ಕಡೆ ಸರ್ಕಾರ ಮತ್ತೊಂದು ಕಡೆ ವಿಜಯೇಂದ್ರ ಟೀಮ್ ಮೇಲೆ ಯತ್ನಾಳ್ ಮುಗಿ ಬಿದ್ದಿದ್ದಾರೆ. ಆದರೆ ಬಿ.ವೈ.ವಿಜಯೇಂದ್ರಗೆ ಮುಖ್ಯಮಂತ್ರಿ ಗಾದಿಯ ಕನಸು. ಹೇಗಾದರೂ ಮಾಡಿ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎಂಬ ಉಮೇದು ಈಗಲೇ ಶುರುವಾಗಿದೆ. ಈ ನಿಲುವು ಬಿಜೆಪಿ ನಾಯಕರಲ್ಲಿ ಬಿಪಿ ಹೆಚ್ಚು ಮಾಡಿದೆ. ಹೀಗಾಗಿ ಸಹಜವಾಗಿಯೇ ಅವರೂ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಲೇ ವಿಜಯೇಂದ್ರಗೆ ಪೈಪೋಟಿ ಕೊಡಲು ಸಜ್ಜಾಗಿದ್ದಾರೆ.
ಆದರೆ ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪ ಮಾತ್ರ “ಹೌದು, ನಮ್ಮ ಪಕ್ಷದಲ್ಲಿ ಭಿನ್ನಮತ ಇದೆ, ಸಮಸ್ಯೆ ಇದೆ. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ವರಿಷ್ಠರೇ ಈ ಸಮಸ್ಯೆ ಬಗೆಹರಿಸುತ್ತಾರೆ ಎಂದು ಹೇಳುತ್ತಿದ್ದಾರೆ. ಅದೇನೇ ಇರಲಿ ಯಡಿಯೂರಪ್ಪಗೆ ಎದೆಗಾರಿಕೆ ಇದೆ. ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಎದೆಗಾರಿಕೆ ಇದ್ದೇ ಇದೆ. ಆದರೆ ವಿಜಯೇಂದ್ರ ಮಾತ್ರ ದೆಹಲಿಗೆ ತೆರಳಿ ಚಿಕ್ಕಮಕ್ಕಳು ಹೆಡ್ ಮಾಸ್ಟರ್ ಗೆ ದೂರು ನೀಡುವ ಹಾಗೆ ಯತ್ನಾಳ್, ಈಶ್ವರಪ್ಪ ವಿರುದ್ಧ ದೂರು ನೀಡುತ್ತಲೇ ಬರ್ತಿದ್ದಾರೆ. ಇದಕ್ಕೇ ಯತ್ನಾಳ್ ದೂರು ಕೊಟ್ಟ ಪತ್ರದಿಂದ ಒಂದು ಕೊಠಡಿ ತುಂಬಿಹೋಗಿದೆ ಎಂದಿದ್ದು…
ಕೊನೆ ಮಾತು:
ಒಂದೇ ಮನೆಯಲ್ಲಿದ್ದು ಬೀದಿ ಜಗಳಕ್ಕೆ ನಿಂತಿರುವ ಬಿಜೆಪಿ ನಾಯಕರು ಜನರ ಸಮಸ್ಯೆಗಳಿಗೆ ಮೊದಲು ಧ್ವನಿಯಾಗಬೇಕು. ಆನಂತರ ಚುನಾವಣೆ ಹತ್ತಿರ ಬಂದಾಗ ರಾಜಕಾರಣ ಮಾಡಬೇಕು. ಆದರೆ ವರ್ಷವಿಡೀ ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದರೆ ಅದನ್ನು ಅರ್ಥ ಮಾಡಿಕೊಂಡು ಬುದ್ದಿ ಕಲಿಸಲಾರದಷ್ಟು ಜನ ದಡ್ಡರಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ನಿಜವಾದ ಪ್ರಭು ಎಂಬುದನ್ನು ಅವರು ಮರೆಯಬಾರದು…
ರಮೇಶ್ ಹಿರೇಜಂಬೂರ್
ಹಿರಿಯ ಪತ್ರಕರ್ತರು
ಇದನ್ನೂ ಓದಿ- ಕರ್ನಾಟಕದ ಉಪಚುನಾವಣೆ | ರಾಜಕೀಯ ಪಕ್ಷಗಳಿಗೆ ಪಾಠಗಳು