ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು, ಆಗ ಎಲ್ಲವೂ ಸರಿಯಾಗುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮಿ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬರಹಗಾರ ಮುಷ್ತಾಕ್ ಹೆನ್ನಾಬೈಲ್ ಸ್ವಾಮೀಜಿಗೆ ಬರೆದ ಪತ್ರ ಇಲ್ಲಿದೆ.
ಇಡೀ ಜಗತ್ತಿಗೆ ತಿಳಿದಿರುವಂತೆ ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಸೇವೆ, ವಿಚಾರ ಮತ್ತು ವಿದ್ಯಮಾನಗಳಿಗೆ ಒಕ್ಕಲಿಗ ಸಮುದಾಯದ ಮಠಗಳು ರಾಜ್ಯದಲ್ಲಿ ನಿರಂತರವಾಗಿ ಸೂಕ್ತ ಮತ್ತು ಸಮಂಜಸ ರೀತಿಯಲ್ಲಿ ಸ್ಪಂದಿಸುತ್ತಾ ಎಲ್ಲ ಸಮುದಾಯದವರ ಪ್ರೀತಿ ಮತ್ತು ಗೌರವಕ್ಕೆ ಸದಾ ಪಾತ್ರವಾಗಿವೆ. ಹೀಗೆ ಜವಾಬ್ದಾರಿಯುತವಾದ ಭೂಮಿಕೆಯನ್ನು ಕಾಲಕಾಲಕ್ಕೆ ನಿಭಾಯಿಸಿಕೊಂಡು ಬಂದ ಹೆಗ್ಗಳಿಕೆ- ಹಿರಿಮೆ- ಇತಿಹಾಸ ಕ್ಷೇತ್ರ ಮತ್ತು ಪೀಠಾಧಿಪತಿಗಳಿಗಿದೆ ಎಂಬುದು ನಿಮಗೆ ತಿಳಿದಿದೆ..
ಕರ್ನಾಟಕದ ಸರ್ವ ಸಮುದಾಯಗಳು ಒಂದು ಸುಂದರ ಸೌಹಾರ್ದ ಸಮುಚ್ಛಯವೆಂದು ಪರಿಭಾವಿಸಿ ರಾಜ್ಯವನ್ನು “ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಪರಿಕಲ್ಪನೆಯಡಿಯಲ್ಲಿ ಒಂದಾಗಿಸಿ, ಜಗತ್ತಿನ ಮುಂದೆ ಪ್ರಸ್ತುತಪಡಿಸುವಲ್ಲಿ ಒಕ್ಕಲಿಗ ಮಠಗಳ ಪ್ರತ್ಯಕ್ಷ-ಪರೋಕ್ಷ ಭೂಮಿಕೆಯು ಸಾರ್ವಕಾಲಿಕವಾದ ಮನ್ನಣೆ ಮತ್ತು ಗೌರವವನ್ನು ಸಾಮಾಜಿಕ ವಲಯದಲ್ಲಿ ಪಡೆದುಕೊಂಡಿದೆ ಎಂಬುದು ಯಾರು ಅಲ್ಲಗಳೆಯಲಾರದ ವಿಚಾರ.
ಈ ಮಠಗಳ ದಶಕಗಳ ಕಾಲದ ನಿತ್ಯ ನಿರಂತರ ಸರ್ವರಂಗದ ಸೇವೆ-ಸ್ಪಂದನಗಳ ಕುರಿತು ರಾಜ್ಯದ ಮುಸ್ಲಿಂ ಸಮುದಾಯ ಸದಾಕಾಲವೂ ಅಭಿಮಾನ ಪಡುತ್ತಲೇ ಬಂದಿದೆ ಎನ್ನುವುದು ಬಹುತೇಕ ಎಲ್ಲ ಪೀಠಾಧಿಪತಿಗಳಿಗೂ ತಿಳಿದಿರುವಂಥದ್ದು.
ಒಕ್ಕಲಿಗ ಮಠಗಳೊಂದಿಗೆ ಮುಸ್ಲಿಂ ಸಮುದಾಯದ ಬಾಂಧವ್ಯಕ್ಕೆ ಸುದೀರ್ಘ ಕಾಲದ ಇತಿಹಾಸ ಮತ್ತು ದೊಡ್ಡ ಪರಂಪರೆಯಿದೆ. ಈ ಪರಂಪರೆ ಮತ್ತು ಬಾಂಧವ್ಯದ ಅಡಿಪಾಯದ ಮೇಲೆ ಬೆಳೆದುಬಂದ ಒಕ್ಕಲಿಗ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಸಾಮಾಜಿಕ ಮಾತ್ರವಲ್ಲ ರಾಜಕೀಯ ಸಹಭಾಗಿತ್ವಗಳೂ ಕೂಡ ರಾಜ್ಯದಲ್ಲಿ ನಿರ್ಣಾಯಕ ಭೂಮಿಕೆಗಳನ್ನು ನಿಭಾಯಿಸಿವೆ. ಒಕ್ಕಲಿಗ ಮಠಗಳ ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳಿಂದ ಮುಸ್ಲಿಂ ಸಮುದಾಯವೂ ಕೂಡ ಫಲಾನುಭವಿಯಾಗಿದೆ ಎಂಬುದನ್ನು ಒಪ್ಪಿಕೊಂಡು ಅದನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ ಬಂದಿದ್ದೇವೆ..
ಒಕ್ಕಲಿಗ ಸಮುದಾಯವು ದಶಕಗಳಿಂದ ಕೇಂದ್ರ ಮತ್ತು ರಾಜ್ಯದಲ್ಲಿ ರಾಜಕೀಯಾಧಿಕಾರ ಪಡೆಯುವಲ್ಲಿ ಮುಸ್ಲಿಂ ಸಮುದಾಯದ ನಿರಂತರವಾದ ಸಹಕಾರ, ಸ್ಪಂದನ ಮತ್ತು ಸಹಭಾಗಿತ್ವ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ತೀರ ಇತ್ತೀಚಿನ ಮೂರು ದಶಕಗಳ ರಾಜಕೀಯ ಇತಿಹಾಸ ಮತ್ತು ವರ್ತಮಾನವನ್ನು ಗಮನಿಸಿದರೆ ಒಕ್ಕಲಿಗ ಸಮುದಾಯದ ಮಾನ್ಯ ಶ್ರೀ ದೇವೇಗೌಡರು ರಾಷ್ಟ್ರದ ಪ್ರಧಾನಮಂತ್ರಿಯಾಗುವಲ್ಲಿ ಮತ್ತು ಶ್ರೀ ಎಸ್ ಎಂ ಕೃಷ್ಣ, ಶ್ರೀ ದೇವೇಗೌಡ, ಶ್ರೀ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗುವಲ್ಲಿ ಮುಸ್ಲಿಂ ಸಮುದಾಯದ ಶ್ರಮ ಮತ್ತು ಕಾಣಿಕೆ ಸದಾಕಾಲಕ್ಕೂ ಸ್ಮರಣೀಯವಾದುದು ಎಂಬುದು ಸರ್ವರಿಗೂ ತಿಳಿದಿರುವ ವಿಚಾರ..
ಕಳೆದ ವರ್ಷವೂ ಕೂಡ ಒಕ್ಕಲಿಗ ನಾಯಕರಾದ ಶ್ರೀ ಡಿ ಕೆ ಶಿವಕುಮಾರ್ ರವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮುಸ್ಲಿಂ ಸಮುದಾಯ ಗಮನಾರ್ಹ ಕಾಣಿಕೆಯನ್ನು ನೀಡಿರುತ್ತದೆ. ಒಕ್ಕಲಿಗ ಸಮುದಾಯವು ರಾಜಕೀಯವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ನಿರಂತರ ಪಾರಮ್ಯ ಸಾಧಿಸಲು ಮುಸ್ಲಿಂ ಸಮುದಾಯ ನೀಡಿದ ಪ್ರತ್ಯಕ್ಷ- ಪರೋಕ್ಷ ಕೊಡುಗೆ ಸಾಮಾನ್ಯ ರಾಜಕೀಯ ಇತಿಹಾಸದ ಅವಲೋಕನದ ಮೂಲಕ ಸುಲಭವಾಗಿ ಕಂಡುಕೊಳ್ಳಬಹುದು. ಇದೊಂದು ಒಕ್ಕಲಿಗ ಸಮುದಾಯ ಮತ್ತು ಮುಸ್ಲಿಂ ಸಮುದಾಯ ರಾಜಕೀಯ ಮತ್ತು ಸಾಮಾಜಿಕವಾಗಿ ಹೇಗೆ ಬೆಸೆದುಕೊಂಡಿದೆ ಎಂಬುದರ ಸಂಕ್ಷಿಪ್ತ ಇತಿಹಾಸ..
ಬಹುಶಃ ನಿಮಗೂ ತಿಳಿದಿರುವಂತೆ ಕಳೆದ ಸರ್ಕಾರ ಮತ್ತು ಈ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಮುಸ್ಲಿಂ ಸಮುದಾಯದ ವಿಚಾರದ ಸುತ್ತಲೇ ನಿರಂತರ ವಿವಾದಗಳು ರಾಜಕೀಯಾಧಿಕಾರದ ಕಾರಣಕ್ಕಾಗಿ ನಡೆಯುತ್ತಿದೆ. ಇಡೀ ದೇಶದಲ್ಲಿ ಮುಸ್ಲಿಂ ಸಮುದಾಯ ಸಂಬಂಧಿತ ಅಸಂಬದ್ಧ ವಿಚಾರಗಳು ಹೆಚ್ಚು ರಾಜಕೀಯ ರೂಪ ಪಡೆದು ವಿಲಕ್ಷಣ ಸನ್ನಿವೇಶ ಸೃಷ್ಟಿಯಾಗುವುದು ಇಡೀ ದೇಶದ ರಾಜ್ಯಗಳಲ್ಲಿ ಕರ್ನಾಟಕದಲ್ಲೇ ಅತಿಹೆಚ್ಚು.
ಟಿಪ್ಪು ಜಯಂತಿ/ ಉರಿಗೌಡ-ನಂಜೇಗೌಡ/ ಹಿಜಾಬ್/ ಹಲಾಲ್/ ಆಜಾನ್/ ವ್ಯಾಪಾರ ನಿರ್ಬಂಧ/ ಸುನ್ನತ್/ ಮೀಸಲಾತಿ ರದ್ಧತಿ/ ಹೀಗೆ ನಿರಂತರ ಮುಸ್ಲಿಂ ಸಮುದಾಯವೇ ರಾಜಕೀಯ ಕಾರಣಕ್ಕಾಗಿ ಮತೀಯ ಶಕ್ತಿಗಳ ಮತ್ತು ಧರ್ಮಾಧಾರಿತ ಕೀಳು ಮಟ್ಟದ ರಾಜಕಾರಣ ಮಾಡುವವರ ಅಸಹನೆಗೆ ಗುರಿಯಾಗಿ ಶೋಷಣೆಗೆ ಒಳಗಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಒಂದು ರಾಜಕೀಯವಾದರೆ, ಎರಡನೆಯದು ಮೌಲ್ಯಾಧಾರಿತವಾಗಿರದೆ ಕುಸಿದಿರುವ ಸಾಮಾಜಿಕ ವ್ಯವಸ್ಥೆ. ಸಾಮಾಜಿಕ ವ್ಯವಸ್ಥೆಯ ಸದೃಢ ಮತ್ತು ಪ್ರಬುದ್ಧ ವಾತಾವರಣ ರೂಪಿಸುವಿಕೆಯಲ್ಲಿ ಮಠಗಳು ಮತ್ತು ಪ್ರಮುಖ ಪೀಠಾಧಿಪತಿಗಳ ಪಾತ್ರ ಬಹಳ ನಿರ್ಣಾಯಕ..
ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯವು, ರಾಜ್ಯದಲ್ಲೇ ಅತಿಹೆಚ್ಚು ನಿಕಟ ಬಾಂಧವ್ಯ ಹೊಂದಿರುವ ಒಕ್ಕಲಿಗ ಸಮುದಾಯದ ಮಠಗಳಿಂದ ಇಂತಹ ಶೋಷಣೆ ಮತ್ತು ಕೆಟ್ಟ ರಾಜಕೀಯವನ್ನು ನಿಯಂತ್ರಿಸುವ ಪ್ರಯತ್ನಗಳು ನಿರಂತರವಾಗಿ ಆಗಬೇಕು ಎಂಬ ಆಶಯವನ್ನು ಸಮುದಾಯ ಹೊಂದಿದೆ.
ದಶಕಗಳ ಹಿಂದೆ ಕರ್ನಾಟಕದಲ್ಲಿ ಈ ರೀತಿಯ ವಾಮಮಾರ್ಗದ ನಕಾರಾತ್ಮಕ ರಾಜಕಾರಣವಿರಲಿಲ್ಲ. ಅದಕ್ಕೆ ಮುಖ್ಯ ಕಾರಣ, ಆ ಕಾಲದ ಸದೃಢ ಸಾಮಾಜಿಕ ವ್ಯವಸ್ಥೆ ಮತ್ತು ಒಕ್ಕಲಿಗ ಮಠಗಳೂ ಸೇರಿದಂತೆ ಅಂತಹ ವ್ಯವಸ್ಥೆ ರೂಪಿಸುವಲ್ಲಿ ಪ್ರಧಾನ ಭೂಮಿಕೆ ನಿಭಾಯಿಸುತ್ತಿದ್ದ ಮಠಾಧಿಪತಿಗಳ ಉಪಸ್ಥಿತಿಯ ಪ್ರಭಾವವಾಗಿತ್ತು..
ಆದರೆ ಈಗಿನ ಪರಿಸ್ಥಿತಿಯಲ್ಲಿ ದುರದೃಷ್ಟವಶಾತ್ ರಾಜ್ಯಾದ್ಯಂತವಿರುವ ಮಠಾಧಿಪತಿಗಳೂ ಸೇರಿದಂತೆ ಇರುವ ಪ್ರಜ್ಞಾವಂತ ವಲಯದಿಂದ ಅಂತಹ ಪ್ರಭಾವ ಮತ್ತು ನಿಯಂತ್ರಣ ಈಗಿನ ಸಮಾಜದ ಮೇಲೆ ಕಾಣದಿರುವುದು ಶತಮಾನಗಳ ಇತಿಹಾಸದ ಸೌಹಾರ್ದ ವಾತಾವರಣಕ್ಕೆ ಮಾರಕವಾಗಿ ಪರಿಣಮಿಸಿದೆ. ಹಾಗಾಗಿಯೇ ಸಾಮಾಜಿಕ ವಿಭಜನೆ ರಾಜಕಾರಣಿಗಳ ನೇತೃತ್ವದಲ್ಲಿ ಅವ್ಯಾಹತವಾಗಿ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ವ್ಯಕ್ತಿಗತ ಮತ್ತು ವೈಯುಕ್ತಿಕ ನೆಲೆಯ ಅಪರಾಧಗಳನ್ನು ಸಮುದಾಯಗಳಿಗೆ ಅಂಟಿಸಿ ಸಾಮೂಹೀಕರಣಗೊಳಿಸುವ ವಿಕೃತಿ ದೇಶದಲ್ಲಿ ಅದರಲ್ಲೂ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಬರೀ ಕರ್ನಾಟಕದಲ್ಲಿ ಮಾತ್ರ ನಿರಂತರ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಹೀಗೆ ವಿಭಜಿಸಿ ಆಳುವವರಿಗೆ ಮಠಾಧಿಪತಿಗಳು, ಧಾರ್ಮಿಕ ನಾಯಕರು, ಸಾಮಾಜಿಕ ನಾಯಕರು ಮತ್ತು ಮುತ್ಸದ್ದಿಗಳ ಮೌನ ಮತ್ತು ಪ್ರಚೋದನಾಕಾರಿ ಹೇಳಿಕೆಗಳು ಸಮ್ಮತಿಯಾಗಿ ಪರೋಕ್ಷವಾಗಿ ಸಹಕರಿಸುತ್ತಿದೆ.
ಇಂತಹ ಶೋಷಣೆಯಿಂದ ಕೂಡಿದ ವಿಭಜಕ ರಾಜಕಾರಣ ಪಕ್ಕದ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ ಅಂಧ್ರದಲ್ಲಿ ಪಾರಮ್ಯ ಸಾಧಿಸಲು ಸಾಧ್ಯವಾಗದೇ ಇರುವುದಕ್ಕೆ ಅಲ್ಲಿನ ಪ್ರಬುದ್ಧ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯೇ ಪ್ರಮುಖ ಕಾರಣವಾಗಿದೆ. ಆದರೆ ಈ ವಿಚಾರದಲ್ಲಿ ನಮ್ಮ ರಾಜ್ಯದ ಪರಿಸ್ಥಿತಿ ಚಿಂತಾಜನಕ ಮತ್ತು ನಿರಾಶಾದಾಯಕ. ಪರಿಸ್ಥಿತಿ ಈ ವಿಷಮ ಹಂತವನ್ನು ತಲುಪಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದ ಸಕ್ರಿಯ ಭೂಮಿಕೆಯನ್ನು ಸಮಾಜ ಸಹಜವಾಗಿಯೇ ನಿರೀಕ್ಷಿಸುತ್ತದೆ. ತಾವು ಸದ್ಭಾವನೆಯಿಂದ ಸರ್ವತ್ರ ಸಹಕರಿಸಿದ ಸಮುದಾಯಗಳೇ ತಮ್ಮನ್ನು ಶೋಷಿಸಲು ತೊಡಗಿವೆ ಎಂಬ ಭಾವನೆ ಮುಸ್ಲಿಂ ಸಮುದಾಯದಲ್ಲಿ ಸದ್ಯದ ಮಟ್ಟಿಗೆ ದಟ್ಟವಾಗಿದೆ.
ಈ ಹಿಂದೆ ಹಲವು ಬಾರಿ ಒಕ್ಕಲಿಗ ಸಮುದಾಯದ ಮಠಗಳು ರಾಜ್ಯದಲ್ಲಿ ಸೌಹಾರ್ದ ವಾತಾವರಣ ರೂಪಿಸುವ ನಿಟ್ಟಿನಲ್ಲಿ ಬಹಳಷ್ಟು ಹೆಜ್ಜೆಗಳನ್ನು ಸ್ವಯಂಪ್ರೇರಿತರಾಗಿ ಇಟ್ಟಿದ್ದೂ ಅಲ್ಲದೆ ಸಮುದಾಯಗಳ ನಡುವಿನ ಸಹಬಾಳ್ವೆಗೆ ಪೂರಕ ಮತ್ತು ಪ್ರೇರಕ ವಾತಾವರಣ ರೂಪಿಸಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಕ್ಕಾಗಿ ರಾಜ್ಯದ ಮುಸ್ಲಿಂ ಸಮುದಾಯ ಪೀಠಾಧಿಪತಿಗಳನ್ನು ಅಪಾರವಾಗಿ ಗೌರವಿಸುತ್ತದೆ. ಇಂತಹ ಸಕಾಲಿಕ ಕಾರ್ಯಕ್ರಮಗಳ ಮೂಲಕ ಮಠಗಳ ಘನತೆಯನ್ನು ಮಠಾಧಿಪತಿಗಳು ಎತ್ತರಿಸಿದ್ದರು. ಅಪಾರವಾದ ಸಾಮಾಜಿಕ ಬದ್ಧತೆಯನ್ನು ತೋರಿದ್ದರು. ಹೀಗಿದ್ದೂ ರಾಜ್ಯದಲ್ಲಿ ಸದ್ಯದ ಮಟ್ಟಿಗೆ ಸಾಮಾಜಿಕ ರಾಜಕೀಯ ವಲಯದಲ್ಲಿ ಮತೀಯ ವಾತಾವರಣ ತೀವ್ರ ಹದಗೆಟ್ಟಿರುವುದು ಮತ್ತು ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಮಾರಕವಾಗಿರುವುದನ್ನು ನಿತ್ಯ ಕಾಣುತ್ತಿದ್ದೇವೆ..
ಈ ನಿಟ್ಟಿನಲ್ಲಿ, ನೀವು ಇತ್ತೀಚೆಗೆ ನೀಡಿದ, ಮುಸ್ಲಿಂ ಸಮುದಾಯವನ್ನು ಮತದಾನದ ಹಕ್ಕಿನಿಂದ ದೂರವಿರಿಸಬೇಕು ಎನ್ನುವ ಹೇಳಿಕೆ ಸಮಸ್ತ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು. ಹಿರಿಯರಾಗಿ, ದೇಶದ ಪ್ರಜೆಯಾಗಿ, ಅದರಲ್ಲೂ ಮುಸ್ಲಿಮರು ಅಭಿಮಾನಿಸುವ ಒಕ್ಕಲಿಗ ಮಠದ ಪೀಠಾಧಿಪತಿಯಾಗಿ ನೀವು ತೋರಿದ ವರ್ತನೆ ಅಸಹ್ಯಕರವಾದುದು. ನೀವು ಹೇಳಿಕೆಯನ್ನು ಹೊರಡಿಸುವಾಗ ಸುತ್ತಮುತ್ತಲು ಕೂತವರ ವಿಘ್ನಸಂತೋಷಿತನ ನಿಜಕ್ಕೂ ಹೇಸಿಗೆ ಹುಟ್ಟಿಸುವಂತಿತ್ತು. ಕೋಮುವಾದ ಸದಾಕಾಲದ ಒಂದು ಸಾಮಾಜಿಕ ವಿಕೃತಿ. ಅದು ಎಲ್ಲ ರಂಗದಲ್ಲೂ ಕಾಣಸಿಗುತ್ತದೆ. ಆದರೆ ಅದು ಪೀಠವೇರಿ ಕೂತರೆ ಮಾತ್ರ ಅದಕ್ಕಿಂತ ಹೇಯ ಮತ್ತೊಂದಿಲ್ಲ..
ಸದ್ಯಕ್ಕೆ ವಿಷಾದದ ತೇಪೆ ಹಾಕಿದ್ದೀರಿ. ಅದಕ್ಕಿಂತ ಮುಂಚಿನ ಹೇಳಿಕೆ ನಿಮ್ಮ ಮನಸ್ಥಿತಿಯಿಂದ ಪ್ರೇರಿತವಾದದ್ದು ಮತ್ತು ಕಿಡಿಗೇಡಿತನದಿಂದ ಕೂಡಿದ್ದು ಎಂಬುದನ್ನು ಇಡೀ ರಾಜ್ಯವೇ ನೋಡಿದೆ. ಭಿನ್ನ ವಿಚಾರಧಾರೆ ಮತ್ತು ವೈಚಾರಿಕ ವೈರುಧ್ಯಗಳ ನಡುವೆಯೂ ಮಾನವರಾದ ನಾವು ಒಂದಾಗಿ ಬದುಕುವಷ್ಟು ಆಗಿರುವ ಪ್ರಜ್ಞೆಯ ಪ್ರಗತಿಯು ಸುಸೂತ್ರ ನಾಗರಿಕತೆಯ ಪ್ರಧಾನ ಪಲ್ಲಟ. ಆದರೆ ಅಂತಹ ಪ್ರಜ್ಞೆಯ ಅನುಪಸ್ಥಿತಿ ಹಿರಿಯ ಪೀಠಾಧಿಪತಿಯೊಬ್ಬರಲ್ಲಿ ಕಾಣುತ್ತಿರುವುದು ದುರದೃಷ್ಟಕರ. ಹೀಗಿದ್ದರೂ ಕೂಡ, ಭವಿಷ್ಯದ ದಿನಗಳಲ್ಲಿ ಕೂಡಿ ಬದುಕುವ ಸಹ ಸಮುದಾಯಗಳ ವಿಚಾರಗಳು ಬಂದಾಗ ಸ್ವಲ್ಪಮಟ್ಟಿಗೆ ಸಜ್ಜನಿಕೆ ಮತ್ತು ಸಂವೇದನಾಶೀಲತೆಯೊಂದಿಗೆ ವರ್ತಿಸುತ್ತೀರಿ ಎನ್ನುವ ಆಶಾವಾದ ಈಗಲೂ ಇದೆ.
ಮುಷ್ತಾಕ್ ಹೆನ್ನಾಬೈಲ್
ಬರಹಗಾರರು.
ಇದನ್ನೂ ಓದಿ- ಎಪ್ಪತ್ತೈದರ ಸಂಭ್ರಮದಲ್ಲಿ ಸಂವಿಧಾನ; ಬೇಕಿದೆ ಆತ್ಮಾವಲೋಕನ