ಕೆಲವು ಬಿಜೆಪಿ ಮಂದಿ ನಮ್ಮ ಬಸ್ ಮುಂದೆ ಬಂದರು. ನಾನು ಅವರನ್ನು ಎದುರಿಸಹೋದಾಗ ಅವರು ಓಡಿ ಹೋದರು. ನಾವು ಬಿಜೆಪಿ ಆರ್ ಎಸ್ ಎಸ್ ಗೆ ಹೆದರುತ್ತೇವೆ ಎಂದು ಇವರೆಲ್ಲ ತಪ್ಪು ತಿಳಿದಿದ್ದಾರೆ -ರಾಹುಲ್ ಗಾಂಧಿ
ಭಾರತ ಜೋಡೋ ಯಾತ್ರೆ ಎಂಟನೆಯ ದಿನವಾದ ಇಂದು ಅರುಣಾಚಲದಿಂದ ಮತ್ತೆ ಅಸ್ಸಾಂ ಗೆ ಮರಳಿದೆ. ಇಂದು ಯಾತ್ರೆ ಅಸ್ಸಾಂ ನ ರಾಯಘರ್ ನಿಂದ ಆರಂಭವಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಸ್ವಹಿತ್ ಕನಕ್ಲಾಟ ಮತ್ತು ಮುಕುಂದ ಕಾಕತಿಯವರ ಕಂಚಿನ ಪ್ರತಿಮೆಗಳಿಗೆ ಗೌರವ ಸಲ್ಲಿಸಲಾಯಿತು. ಅಸ್ಸಾಂನ ಬಿಸ್ವನಾಥ ಚರಲಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ನಡೆಯಿತು.
ಮಧ್ಯಾಹ್ನ ಬಿಸ್ವನಾಥ್ ನ ಮುಖರ್ ಘರ್ ಮೂಲಕ ಯಾತ್ರೆ ಕಾಲ್ನಡಿಗೆಯಲ್ಲಿ ಮುಂದುವರಿಯಿತು. ಸೋನಿತ್ ಪುರದ ಜಮುಗುರಿಹಟ್ ಮೂಲಕ ಮಧ್ಯಾಹ್ನ ನಗಾಂವ್, ಕಾಲಿಯಾಬೋರ್ ತಲಪಿ, ರಾಜೀವ್ ಗಾಂಧಿ ಸ್ಪೋರ್ಟ್ಸ್ ಫೀಲ್ಡ್ ನ ಸುಲಂಗ್ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಭಾಷಣ ನಡೆಯಿತು.
ಭಾರತ್ ಜೋಡೋ ನ್ಯಾಯ ಯಾತ್ರೆಯ ಮೇಲೆ ಹಲ್ಲೆ ಇಂದೂ ಮುಂದುವರಿಯಿತು. ಸೋನಿತಪುರದ ಜಮುಗುರಿಹಟ್ ನಲ್ಲಿ ಯಾತ್ರೆಯ ಮೇಲೆ ಬಿಜೆಪಿ ಗೂಂಡಾಗಳು ಧಾಳಿ ಮಾಡಿದರು, ವಾಹನಗಳ ಸ್ಟಿಕರ್ ಕಿತ್ತೆಸೆದು ಬಿಜೆಪಿ ಬಾವುಟ ನೆಟ್ಟರು, ಪತ್ರಕರ್ತರ ಕ್ಯಾಮರಾ ಕೂಡಾ ಹಾನಿ ಮಾಡಿದರು, ಅಸ್ಸಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಅವರ ಮೇಲೆ ಕೂಡಾ ಧಾಳಿಯಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಿದ ರಾಹುಲ್ ಗಾಂಧಿ ಕೆಲವು ಬಿಜೆಪಿ ಮಂದಿ ನಮ್ಮ ಬಸ್ ಮುಂದೆ ಬಂದರು. ನಾನು ಅವರನ್ನು ಎದುರಿಸಹೋದಾಗ ಅವರು ಓಡಿ ಹೋದರು. ನಾವು ಬಿಜೆಪಿ ಆರ್ ಎಸ್ ಎಸ್ ಗೆ ಹೆದರುತ್ತೇವೆ ಎಂದು ಇವರೆಲ್ಲ ತಪ್ಪು ತಿಳಿದಿದ್ದಾರೆ ಎಂದು ಹೇಳಿದರು.
ಮಧ್ಯಾಹ್ನ 3 ಗಂಟೆಗೆ ನಗಾಂವ್ ಕಾಲಿಯಾಬೋರ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಭಾಗವಹಿಸಿದ್ದರು. ಅಸ್ಸಾಂನ ಮುಖ್ಯಮಂತ್ರಿ ಶರ್ಮಾ ಅವರನ್ನು ಮೋದಿಯ ಚೇಲಾ ಎಂದ ಅವರು ಶರ್ಮಾ ಅವರು ದೇಶದ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳಿಗೆ ಹೆದರಿದ್ದಾರೆ, ಕಳೆದ ಭಾರತ್ ಜೋಡೋ ಸಮಯದಲ್ಲಿ ನಮ್ಮ ಮೇಲೆ ಯಾವುದೇ ರೀತಿಯಲ್ಲಿ ಧಾಳಿ ನಡೆದಿರಲಿಲ್ಲ, ಇಲ್ಲಿ ಬಿಜೆಪಿಯವರು ಧಾಳಿ ಮಾಡಿದ್ದಾರೆ, ಮೋದಿಯ ಚೇಲಾ ಶರ್ಮಾ ಅವರು ಶಾ ಏನು ಹೇಳುತ್ತಾರೋ ಅದನ್ನು ಕೇಳಿಕೊಂಡು ಇಲ್ಲಿ ಅವನ್ನೆಲ್ಲ ಮಾಡಿಸುತ್ತಿದ್ದಾರೆ. ಆದರೆ ಇಂಥಹ ಬಹಳ ಮಂದಿಯನ್ನು ನಾವು ನೋಡಿದ್ದೇವೆ, ನೀವು ನಮ್ಮನ್ನು ಹೆದರಿಸಲಾರಿರಿ ನೆನಪಿಟ್ಟುಕೊಳ್ಳಿ ಎಂದರು. ಮೋದಿಯವರೇ, ಸಾಧು ಸಂತರು ಮಾಡಬೇಕಾದ ಕೆಲಸವನ್ನು ಅವರಿಗೆ ಬಿಟ್ಟುಬಿಡಿ, ನೀವು ಪ್ರಧಾನಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಿ ಎಂದು ಪ್ರಧಾನಿಗಳಿಗೆ ಅವರು ಕಿವಿ ಮಾತನ್ನೂ ಹೇಳಿದರು.
ರಾತ್ರಿ ರುಪಾಹಿಯ ಒವಾನಾದಲ್ಲಿ ಯಾತ್ರಾರ್ಥಿಗಳು ತಂಗಲಿದ್ದಾರೆ.
ಶ್ರೀನಿವಾಸ ಕಾರ್ಕಳ
ಮಂಗಳೂರು