ಬೆಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನಡುವಿನ ಬಿರುಕು ವಾಕ್ಸಮರ ಮುಂದುವರೆದಿದೆ. ಇಂದು ಇದೇ ಮೊದಲ ಬಾರಿಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರ ಬಿ.ಎಸ್.ಯಡಿಯೂರಪ್ಪ ಅವರು ಯತ್ನಾಳ ಅವರ ವರ್ತನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯತ್ನಾಳ ಅವರು ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದು, ಈ ವರ್ತನೆ ಅವರಿಗೆ ಶೋಭೆ ತರುವುದಿಲ್ಲ. ಅವರು ಪ್ರತ್ಯೇಕ ಹೋರಾಟ ಕೈಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಪಕ್ಷ ಬಲಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಹೋರಾಟ ಕೈಬಿಟ್ಟು ಜತೆ ಸೇರಿ ಒಟ್ಟಿಗೆ ಕೆಲಸ ಮಾಡೋಣ ಎಂದು ವಿಜಯೇಂದ್ರ ಹೇಳಿದ್ದಾರೆ. ಆದರೆ, ಯತ್ನಾಳ ಅವರು ಸ್ವಪ್ರತಿಷ್ಠೆಗಾಗಿ ಇದನ್ನೆಲ್ಲಾಮಾಡುತ್ತಿದ್ದಾರೆ. ಈಗಲಾದರೂ ಜಾಗ್ರತರಾಗಬೇಕು. ಅವರಿಗೆ ಹೇಳುವ ನಮ್ಮಕೆಲಸವನ್ನು ನಾವು ಮಾಡಿದ್ದೇವೆ. ಉಳಿದದ್ದು ಅವರಿಗೆ ಮತ್ತು ವರಿಷ್ಠರಿಗೆ ಬಿಟ್ಟಿದ್ದು ಎಂದು ಯಡಿಯೂರಪ್ಪ ಹೇಳಿದರು.
ಪಕ್ಷದಲ್ಲಿನ ಒಡಕು ವಿಚಾರ ವರಿಷ್ಠರ ಗಮನಕ್ಕೆ ಬಂದಿದೆ. ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಸರಿಹೋಗುತ್ತವೆ ಎಂಬ ವಿಶ್ವಾಸ ಇದೆ. ಪಕ್ಷದಲ್ಲಿ ಕೆಲವು ವಿಚಾರಗಳಿಗೆ ಬೇಸರ ಮಾಢಿಕೊಂಡವರನ್ನು ಬನ್ನಿ ಮಾತನಾಡಿ ಸರಿಪಡಿಸೋಣ ಎಂದು ಹೇಳಿದ್ದೇನೆ. ವರಿಷ್ಠರು ಈ ಬಗ್ಗೆ ಗಮನಹರಿಸಿ ಸರಿಪಡಿಸುತ್ತಾರೆ ಎಂದೂ ತಿಳಿಸಿದ್ದಾರೆ.
ಮತ್ತೊಂದು ಕಡೆ ಯತ್ನಾಳ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಚುನಾವಣೆ ಗೆದ್ದರೆ ಧೀಮಂತ ನಾಯಕ, ರಾಜಾಹುಲಿ ಶ್ರಮ ಎಂದು ಹೇಳಿಕೊಳ್ಳುತ್ತಾರೆ. ಸೋತರೆ ಎಲ್ಲರೂ ಹೊಣೆ ಹೊರಬೇಕು ಎಂದು ಹೇಳುತ್ತಾರೆ. ಇದು ಯಾವ ನ್ಯಾಯ ಎಂದು ಕಲಬುರಗಿಯಲ್ಲಿ ಯತ್ನಾಳ್ ಪ್ರಶ್ನಸಿದ್ದಾರೆ.
ಚುನಾವಣೆ ಗೆದ್ದಾಗ ಯಾವತ್ತಾದರೂ ನನ್ನ ಹೆಸರೇಳಿದ್ದಾರೆಯೇ ? ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಸುಮ್ಮನೆ ಮನೆಯಲ್ಲಿ ಕೂರಬೇಕು. ಒಳ್ಳೆಯ ಮಕ್ಕಳು, ಮರಿಮೊಮ್ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದು ಬಿಟ್ಟು ಮಗನನ್ನು ಬೆಳೆಸುವುದಕ್ಕೆ ಯಾಕೆ ಕಷ್ಟಪಡುತ್ತಿದ್ದಾರೆ? ಅವನಿಗೆ ಯೋಗ್ಯತೆ ಇದ್ದರೆ ಬೆಳೆಯುತ್ತಾನೆ, ಇಲ್ಲದಿದ್ದರೆ ಇಲ್ಲ ಎಂದು ಕಿಡಿಕಾರಿದ್ದಾರೆ.