ಬೆಂಗಳೂರು: ಜನಪ್ರತಿನಿಧಿಗಳಿಲ್ಲದೇ ಸತತ 5ನೇ ಬಾರಿಗೆ ಬಜೆಟ್ ಮಂಡಿಸಲು ಬೃಹತ್ ಬೆಂಗಳೂರು ಮಹಾನಗರ ಪ ಪಾಲಿಕೆ ಸಜ್ಜಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಯ ಮುನ್ನೋಟ ಎಂದೇ ಕರೆಯಲಾಗುವ ಬಜೆಟ್ನಲ್ಲಿ ಈ ಬಾರೀ ಹೊಸ ಪ್ರಯೋಗಗಳನ್ನು ನಡೆಸಲು ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸದ್ಯ ಬಿಬಿಎಂಪಿಯ ಎಂಟು ವಲಯಗಳಿಗೆ ವಲಯವಾರು ಬಜೆಟ್ ಮಂಡನೆಗೆ ಹಣಕಾಸು ವಿಭಾಗದಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ವರ್ಷ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆ ಕೂಡಾ ಇದ್ದು ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆಯಿದೆ.
ಜನಪ್ರತಿನಿಧಿಗಳಿಲ್ಲದೆ ಬಿಬಿಎಂಪಿ ಐದು ವರ್ಷ ಕಳೆದಿದೆ. ಪಾಲಿಕೆಗೆ ಚುನಾವಣೆ ನಡೆಸಲು ಯಾವುದೆ ಪಕ್ಷದ ಸರ್ಕಾರಕ್ಕೂ ಆಸಕ್ತಿ ಇಲ್ಲವಾಗಿದೆ. ಇದೇ ಮೊದಲ ಬಾರಿಗೆ ವಲಯವಾರು ಬಜೆಟ್ ಮಂಡಿಸುವುದಕ್ಕೆ ಹಣಕಾಸು ವಿಭಾಗದಿಂದ ಬಿಬಿಎಂಪಿಯ ಆಯುಕ್ತರಿಗೆ ಪ್ರಸ್ತಾವನೆಗಳೂ ಸಲ್ಲಿಕೆಯಾಗಿವೆ. . ಇದುವರೆಗೂ ಇಡೀ ಬೆಂಗಳೂರಿನ ಸಮಗ್ರ ಅಭಿವೃದ್ಧಿಯನ್ನ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸುತ್ತಿದ್ದ ಪಾಲಿಕೆ, ಇದೀಗ ಮೊದಲ ಬಾರಿಗೆ ವಲಯವಾರು ಬಜೆಟ್ ಮಂಡನೆಗೆ ಲೆಕ್ಕಾಚಾರ ಹಾಕಿದೆ. ಇದು ಯಶಸ್ವಿಯಾಗುವುದೇ ಎಂದು ಕಾದು ನೋಡಬೇಕಿದೆ.
ಸದ್ಯ ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ತಮ್ಮ ವಲಯದ ನಿರ್ವಹಣೆ ಕಾಮಗಾರಿ, ಕಚೇರಿ ವೆಚ್ಚ ಹಾಗೂ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ವರದಿ ಸಿದ್ಧಪಡಿಸಿ ಕೊಡುವಂತೆ ಪಾಲಿಕೆ ಸೂಚಿಸಿದೆ. ಈ ವರದಿಯನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತರಿಗೆ ಸಲ್ಲಿಸುವಂತೆ ಸೂಚನೆ ಕೊಡಲಾಗಿದೆ. ಯಾವ ವಲಯಕ್ಕೆ ಎಷ್ಟು ಅನುದಾನ ನೀಡಬೇಕು ಎಂದು ವಿಭಾಗಗಳ ಬೇಡಿಕೆ ಆಧರಿಸಿ ನಿರ್ಧಾರ ಮಾಡುವುದಾಗಿ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್ ಹೇಳುತ್ತಿದ್ದಾರೆ. ಬಿಬಿಎಂಪಿ ಕಳೆದ ಬಾರಿ 12,369 ಕೋಟಿ ರೂ. ಬಜೆಟ್ ಮಂಡಿಸಿತ್ತು. ಈ ವರ್ಷ ಬಜೆಟ್ ಗಾತ್ರ ಹೆಚ್ಚಾಗುವ ನಿರೀಕ್ಷೆ ಇದೆ.