Saturday, December 7, 2024

ಶಾಸಕರು, ಸಂಸದರಿಗೆ ನಿವೇಶನ ಹಂಚಿಕೆ : ಸರ್ಕಾರದ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Most read

ನವದೆಹಲಿ: ಗ್ರೇಟರ್‌ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್‌ಎಂಸಿ) ವ್ಯಾಪ್ತಿಯಲ್ಲಿ ಶಾಸಕರು, ಸಂಸದರು, ಪೌರಕಾರ್ಮಿಕರು, ನ್ಯಾಯಾಧೀಶರು, ರಕ್ಷಣಾ ಸಿಬ್ಬಂದಿ ಮತ್ತು ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡುವ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ದ್ವಿಸದಸ್ಯ ಪೀಠ  ಆದ್ಯತೆ ಹಂಚಿಕೆಯನ್ನು ಅನುಮತಿಸುವ ಸರ್ಕಾರದ ಆದೇಶ ವಿಚಿತ್ರ ಮತ್ತು ತರ್ಕಬದ್ದವಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದು ಅಸಮಾನತೆಯನ್ನು ಉತ್ತೇಜಿಸುತ್ತದೆ ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಸಂಸದರು, ಶಾಸಕರು, ಅಖಿಲ ಭಾರತ ಸೇವಾ ಅಧಿಕಾರಿಗಳು, ರಾಜ್ಯ ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಮತ್ತು ಪತ್ರಕರ್ತರನ್ನು ಮೂಲ ದರದಲ್ಲಿ ಭೂ ಮಂಜೂರಾತಿಗೆ ಪ್ರತ್ಯೇಕ ವರ್ಗ ಎಂದು ವರ್ಗೀಕರಿಸಿ, ಆಗಿನ ಆಂಧ್ರ ಪ್ರದೇಶ ಸರ್ಕಾರ 2005ರಲ್ಲಿ ಹೊರಡಿಸಿದ್ದ ಜ್ಞಾಪಕ ಪತ್ರವನ್ನು ಬದಿಗೊತ್ತಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ವ್ಯಾಪ್ತಿಯಲ್ಲಿರುವ ಭೂಮಿಯನ್ನು ಈ ವಿಭಾಗಗಳಿಗೆ ಮಂಜೂರು ಮಾಡಿ 2008ರಲ್ಲಿ ನೀಡಲಾದ ಆದೇಶವನ್ನೂ ಸರ್ಕಾರ ರದ್ದುಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಈ ಆದೇಶ ಒಂದು ಕೆಟ್ಟ ಕಾನೂನು ಮತ್ತು ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗಿದೆ. 2010ರಲ್ಲಿ ತೆಲಂಗಾಣ ಹೈಕೋರ್ಟ್ ಸರ್ಕಾರದ ಆದೇಶವನ್ನು ಭಾಗಶಃ ರದ್ದುಗೊಳಿಸಿತ್ತು. ಇದರ ವಿರುದ್ಧ ತೆಲಂಗಾಣ ಸರ್ಕಾರ, ಸಹಕಾರ ಸಂಘಗಳು ಮತ್ತು ಅದರ ಸದಸ್ಯರು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಾಲಯವು ವಜಾಗೊಳಿಸಿದೆ.

ಸಮಾಜದ ಅರ್ಹ ವರ್ಗಗಳಿಗೆ ಭೂಮಿ ಮಂಜೂರು ಮಾಡುವುದಾಗಿ ಹೇಳಿಕೊಂಡು ನ್ಯಾಯಸಮ್ಮತತೆಯ ವೇಷದಲ್ಲಿ ನಡೆಸುತ್ತಿರುವ ನಿರಂಕುಶ ಆಡಳಿತದ ಒಂದು ಕ್ರಮವಾಗಿದ ಈ ಆದೇಶ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಮಾಜದ ಶ್ರೀಮಂತ ವರ್ಗಗಳಿಗೆ ಆದ್ಯತೆಯಲ್ಲಿ ಮನೆಗಳನ್ನು ನೀಡಲು ಉದ್ದೇಶಿಸಿರುವುದು ಅಧಿಕಾರದ ದುರುಪಯೋಗವಾಗಿದೆ. ಅಲ್ಲದೆ, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದವರನ್ನು ದೂರವಿಡುವ ಮೂಲಕ, ಅವರ ಸಮಾನತೆಯ ಹಕ್ಕನ್ನು ನಿರಾಕರಿಸುವ ನಡೆಯಾಗಿದೆ. ಇದು ಆರ್ಥಿಕ-ಸಾಮಾಜಿಕ ನೆಲೆಗಟ್ಟಿನಲ್ಲಿ ಬಡವರು ಮತ್ತು ಶ್ರೀಮಂತರನ್ನು ಸಮಾಜದಲ್ಲಿ ಪ್ರತ್ಯೇಕಿಸುತ್ತದೆ ಎಂದು ಹೇಳಿದೆ. ಈ ಮೂಲಕ ಸಂವಿಧಾನದ ಆಶಯವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಸರ್ಕಾರಗಳು ಸವಲತ್ತು ಪಡೆದ ಕೆಲವರಿಗೆ ರಿಯಾಯಿತಿ ದರದಲ್ಲಿ ಭೂಮಿಯನ್ನು ಹಂಚಿದಾಗ, ಅದು ಅಸಮಾನತೆಯನ್ನು ಸೃಷ್ಟಿಸುತ್ತದೆ. ಇತರರು ಪ್ರವೇಶಿಸಲಾಗದ ಅನ್ಯಾಯದ ಪ್ರಯೋಜನವನ್ನು ಅವರಿಗೆ ನೀಡಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

More articles

Latest article