ವಕ್ಫ್ ವಿಚಾರದಲ್ಲಿ ತಪ್ಪು ಹೆಜ್ಜೆ ಇಡುತ್ತಿರುವ ಮುಸ್ಲಿಮರು

Most read

ಯಾರ ವಿರೋಧವೂ ಇಲ್ಲದಾಗ ತೆರವಾಗದ ವಕ್ಫ್ ಭೂಮಿ, ಈಗ ದೇಶದ ಸರಕಾರ ಮುಸ್ಲಿಮರ ವಿರುದ್ಧ ದೊಡ್ಡ ಸಮುದಾಯವನ್ನು ಎತ್ತಿಕಟ್ಟಿ ಮತ್ತಷ್ಟು ಕಠಿಣವಾಗಿಸಿದ ನಂತರ ಮತ್ತೆ ಮರಳಿ ಪಡೆಯಬಹುದು ಎನ್ನುವುದು ಕನಸಿನ ಮಾತು. ಒಂದೊಮ್ಮೆ ವಕ್ಫ್ ತಿದ್ದುಪಡಿ ವಿಧೇಯಕ ಸದನದಲ್ಲಿ ಪಾಸಾಗದಿದ್ದರೂ ವಕ್ಫ್ ಭೂಮಿ ಹಿಂಪಡೆಯುವುದು ಅಷ್ಟು ಸುಲಭವಿಲ್ಲ. ಬಹುತೇಕ ವಕ್ಫ್ ಭೂಮಿ ಕಬಳಿಕೆದಾರರು ಮುಸ್ಲಿಮರೇ ಎಂಬುದು ಮುಸ್ಲಿಮರಿಗೆ ಗೊತ್ತಿರಲಿ ಮುಷ್ತಾಕ್‌ ಹೆನ್ನಾಬೈಲ್‌, ಬರಹಗಾರರು.

ತಿಪ್ಪರಲಾಗ ಹಾಕಿದರೂ ಕಳೆದುಕೊಂಡ ಬಹುತೇಕ ವಕ್ಫ್ ಭೂಮಿಯನ್ನು ಮರಳಿ ಪಡೆಯಲಾಗದು ಎನ್ನುವ ಸತ್ಯವನ್ನು ಮುಸ್ಲಿಮರು ಅರಿತುಕೊಳ್ಳಬೇಕಿದೆ. ಇದು ವಕ್ಫ್ ಭೂಮಿಯ ಕುರಿತಾಗಿ ಮುಸ್ಲಿಂ ಸಮುದಾಯ ದಶಕಗಳಿಂದ ತೋರಿದ ನಿರ್ಲಕ್ಷ್ಯಕ್ಕೆ ತೆತ್ತ ಬೆಲೆಯಾಗಿದೆ. ಸಮುದಾಯದ ಶಕ್ತಿಯಂತಿರುವ ವಕ್ಫ್ ಭೂಮಿಯ ಬಗ್ಗೆ ವ್ಯವಸ್ಥೆಗಳನ್ನು ಪ್ರಭಾವಿಸಿ ಸೂಕ್ತ ನೀತಿ ರೂಪಿಸಬಲ್ಲ ಮತ್ತು ಅದನ್ನು ಸದೃಢವಾಗಿ ಅನುಷ್ಠಾನ ಮಾಡಬಲ್ಲ ದೇಶೀಯವಾದ ನಾಯಕತ್ವ ರೂಪಿಸಿಕೊಳ್ಳದ ಕಾರಣಕ್ಕೆ ಮುಸ್ಲಿಂ ಸಮುದಾಯ ಈ ದೊಡ್ಡ ಪೆಟ್ಟು ತಿಂದಿದೆ. ವಿಷಯ ಹೀಗಿರುವಾಗ, ಇತ್ತೀಚೆಗೆ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಸಂಘಟನೆಗಳು ಜನರನ್ನು ಸೇರಿಸಿ ಸಾರ್ವಜನಿಕ ಶಕ್ತಿ ಪ್ರದರ್ಶನಗಳಂತಹ ಅಪಾಯಕಾರಿ ಹೆಜ್ಜೆ ಇಟ್ಟಿವೆ. ಇದು ಮುಸ್ಲಿಮರ ಎಂದಿನ ದೌರ್ಬಲ್ಯ..

ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆಯ ನಂತರ ಮೂರನೇ ಅತಿದೊಡ್ಡ ಆಸ್ತಿ ವಕ್ಫ್ ಆಸ್ತಿ ಎಂದು ಸುಳ್ಳು ಪುಂಗಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಯಾಮಾರಿಸಿ ಬಹುಸಂಖ್ಯಾತರಲ್ಲಿ ಸ್ವಲ್ಪ ಅಭದ್ರತೆಯ ವಾತಾವರಣ ಮೂಡಿಸಿದೆ. ಇದರ ಮಧ್ಯೆ, ಮುಸ್ಲಿಮರು, ಅಲ್ಲಲ್ಲಿ ಶಕ್ತಿ ಪ್ರದರ್ಶನಗಳಂತಹ ಅಸಂಬದ್ಧಗಳನ್ನು ತೋರಿದರೆ, ಗುಂಪು ನಡವಳಿಕೆಗಳಿಂದ ಪ್ರೇರಿತವಾಗಿ ಸಹಜವಾಗಿಯೇ ಇತರ ಸಮುದಾಯಗಳು ಮುಸ್ಲಿಮರ ವಿರುದ್ಧ ಸಂಘಟಿತವಾಗುತ್ತವೆ. ಈ ಹಿಂದೆ ಆಗಿದ್ದೆಲ್ಲ ಇದೇ. ಕೇಂದ್ರ ಸರ್ಕಾರಕ್ಕೆ ಇದೇ ಬೇಕಿರುವುದು..

ವಕ್ಫ್ ವಿಚಾರದಲ್ಲಿ ಮುಸ್ಲಿಮರು ಶಕ್ತಿಗಿಂತ ಯುಕ್ತಿಯನ್ನು ಆಯ್ದುಕೊಳ್ಳಬೇಕು. ವಕ್ಫ್ ಭೂಮಿಯನ್ನು ಉಳಿಸಿಕೊಳ್ಳಬೇಕೆಂದರೆ ಮುಸ್ಲಿಮರಿಗೆ ಇರುವುದು ಎರಡೇ ಆಯ್ಕೆ. ಅವುಗಳೆಂದರೆ-

ಒಂದನೆಯದು ರಾಜಕೀಯದಲ್ಲಿ ಇಲ್ಲಿಯವರೆಗಿನ ಸ್ಥಾನಮಾನ ಮತ್ತು ಮನ್ನಣೆಗಳನ್ನು ಹೆಚ್ಚುಕಡಿಮೆ ಮುಸ್ಲಿಮರಿಂದಲೇ ಪಡೆದಿರುವ ಬಿಹಾರದ ನಿತೀಶ್ ಕುಮಾರ್ ಮತ್ತು ಆಂಧ್ರದ ಚಂದ್ರಬಾಬು ನಾಯ್ಡುರವರ ಮೇಲೆ ಪ್ರಭಾವ ಬೀರಿ ಅಥವಾ ಒತ್ತಡ ಹೇರಿ ತಿದ್ದುಪಡಿ ಕಾಯ್ದೆ ಸದನದಲ್ಲಿ ಪಾಸಾಗದಂತೆ ನೋಡಿಕೊಳ್ಳುವುದು.

ಎರಡನೆಯದು ನ್ಯಾಯಾಲಯದ ಕದತಟ್ಟುವುದು. ವಕ್ಫ್ ಭೂಮಿ ಕುರಿತಾಗಿ 1998ರ ಸುಪ್ರೀಂ ಕೋರ್ಟ್ ಆದೇಶ “Once a Waqf always a Waqf “( ಒಮ್ಮೆ ವಕ್ಫ್ ಎಂದು ಘೋಷಿಸಿದ ಭೂಮಿ ಎಂದಿಗೂ ವಕ್ಫ್ ಭೂಮಿ ಆಗಿರುತ್ತದೆ) ಆಧಾರವಾಗಿಟ್ಟುಕೊಂಡು ಅಕ್ರಮ ಒತ್ತುವರಿ ಮತ್ತು ಅತಿಕ್ರಮಣ ತೆರವು ಮಾಡಲು ಸಮಯ ನಿಗದಿಪಡಿಸಿ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರ್ಟ್ ಆದೇಶ ತರುವುದು. ಮುಸ್ಲಿಮರ ಮುಂದಿರುವುದು ಇವೆರಡೇ ಆಯ್ಕೆ. ಮೊದಲ ಆಯ್ಕೆಯೇ ಇದರಲ್ಲಿ ಸುಲಭದ್ದು..

ಕೆಲವು ಕೋರ್ಟ್ ಜಡ್ಜುಗಳ ಇತ್ತೀಚಿನ ಮುಸ್ಲಿಂ ಸಂಬಂಧಿತ ತೀರ್ಪುಗಳಲ್ಲಿ ಸರ್ಕಾರದೊಂದಿಗಿನ ಲವ್ವಿಡವ್ವಿ ಕಾಣಿಸಿರುವುದರಿಂದ ಕೋರ್ಟುಗಳಲ್ಲಿ ನ್ಯಾಯ ಸುಲಭದಲ್ಲಿ ನಿರೀಕ್ಷಿಸಲಾಗದು. ಹೀಗಾಗಿ ಎರಡನೆಯ ಆಯ್ಕೆ ಕಠಿಣ. ಈ ಎರಡು ಆಯ್ಕೆ ಬಿಟ್ಟರೆ ಮುಸ್ಲಿಮರಿಗೆ ಬೇರೆ ಯಾವ ಆಯ್ಕೆ ಉಳಿದಿಲ್ಲ.

ಯಾರ ವಿರೋಧವೂ ಇಲ್ಲದಾಗ ತೆರವಾಗದ ವಕ್ಫ್ ಭೂಮಿ, ಈಗ ದೇಶದ ಸರಕಾರ ಮುಸ್ಲಿಮರ ವಿರುದ್ಧ ದೊಡ್ಡ ಸಮುದಾಯವನ್ನು ಎತ್ತಿಕಟ್ಟಿ ಮತ್ತಷ್ಟು ಕಠಿಣವಾಗಿಸಿದ ನಂತರ ಮತ್ತೆ ಮರಳಿ ಪಡೆಯಬಹುದು ಎನ್ನುವುದು ಕನಸಿನ ಮಾತು. ಒಂದೊಮ್ಮೆ ವಕ್ಫ್ ತಿದ್ದುಪಡಿ ವಿಧೇಯಕ ಸದನದಲ್ಲಿ ಪಾಸಾಗದಿದ್ದರೂ ವಕ್ಫ್ ಭೂಮಿ ಹಿಂಪಡೆಯುವುದು ಅಷ್ಟು ಸುಲಭವಿಲ್ಲ. ಬಹುತೇಕ ವಕ್ಫ್ ಭೂಮಿ ಕಬಳಿಕೆದಾರರು ಮುಸ್ಲಿಮರೇ ಎಂಬುದು ಮುಸ್ಲಿಮರಿಗೆ ಗೊತ್ತಿರಲಿ. ಈ ಹಿಂದಿನ ವರದಿಗಳು ಮತ್ತು ಕೆಲವು ಮೂಲಗಳ ಪ್ರಕಾರ 90% ವಕ್ಫ್ ಭೂಮಿಯ ಕಬಳಿಕೆದಾರರು ಮುಸ್ಲಿಮರು. ಇವರಿಂದ ಭೂಮಿಯನ್ನು ವಶಪಡಿಸಿಕೊಳ್ಳದೇ, 10% ಕಬಳಿಕೆದಾರರಾದ ಉಳಿದ ಸಮುದಾಯದವರಿಗೆ ತೆರವುಗೊಳಿಸಿರಿ ಎನ್ನುವುದಕ್ಕೆ ನೈತಿಕತೆ ಇರುವುದಿಲ್ಲ..

ಮುಸ್ಲಿಮರ ಕುರಿತಾದ ವಿವಾದಗಳಿಗೆ ಸಮುದಾಯದ ಪ್ರತಿಕ್ರಿಯೆ ಮತ್ತು ತಪ್ಪು ಹೆಜ್ಜೆಗಳೆಲ್ಲವೂ ಕೂಡ ಮುಸ್ಲಿಮರನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಗೆ ಮತವಾಗುತ್ತದೆ ಎನ್ನುವ ಜ್ಞಾನ ಮುಸ್ಲಿಮರಲ್ಲಿ ಬರುವವರೆಗೂ ಮುಸ್ಲಿಮರು ತಪ್ಪು ಮಾಡುತ್ತಿರುತ್ತಾರೆ. ಮುಸ್ಲಿಂ ಸಂಬಂಧಿತ ವಿಚಾರಗಳಿಂದ ರಾಜಕೀಯ ಮೈಲೇಜ್ ತೆಗೆದುಕೊಳ್ಳುವ ಪಕ್ಷ ಮತ್ತು ಸರ್ಕಾರಗಳ ಹುನ್ನಾರವನ್ನು ವಿಫಲಗೊಳಿಸಬೇಕಿದ್ದರೆ, ಮುಸ್ಲಿಮರು ಮುಸ್ಲಿಮೇತರ ಸಮುದಾಯಗಳೊಂದಿಗೆ ಸೂಕ್ತ ಸಂವಹನ ಮತ್ತು ಸಂಪರ್ಕ ವ್ಯವಸ್ಥೆಯನ್ನು ಹೊಂದಬೇಕಾಗಿದೆ. ಇಲ್ಲದಿದ್ದರೆ ಮುಸ್ಲಿಮರನ್ನು ಉಳಿದ ಸಮುದಾಯಗಳಿಂದ ದೂರವಿರಿಸುವ ಈ ರಾಜಕೀಯ ಷಡ್ಯಂತ್ರ ನಿಲ್ಲಲಾರದು. ಲಾಭವಿರುವ ವ್ಯಾಪಾರ ಯಾರಾದರೂ ಮಾಡದಿರುತ್ತಾರೆಯೇ?.

ಮುಷ್ತಾಕ್‌ ಹೆನ್ನಾಬೈಲ್‌

ಬರಹಗಾರರು

ಇದನ್ನೂ ಓದಿ- ವಕ್ಫ್ ಸುತ್ತ ಮತೀಯವಾದಿ ಶಕ್ತಿಗಳ ಚಿತ್ತ

More articles

Latest article