ಕಮರದಿರಲಿ ಕನ್ನಡದ ಮನಸು, ನೆಮ್ಮದಿಯ ಕನಸು

Most read

ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿದು ಬೆಳೆಯಬೇಕಾದರೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಪರಿಷತ್ತಿನ ಹೊರತಾಗಿ ಕನ್ನಡದ ಬೀಜಗಳು ಮೊಳಕೆಯೊಡೆಯುತ್ತಿರುವ ಕನ್ನಡದ ಶಾಲೆಗಳು ಕಲಿಕೆಯ ತಾಣಗಳಾಗಿ ಇನ್ನಷ್ಟು ಗಟ್ಟಿಯಾಗಬೇಕು ಡಾ. ಉದಯಕುಮಾರ ಇರ್ವತ್ತೂರು.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೋ. ರು. ಚನ್ನಬಸಪ್ಪನವರು ಆಯ್ಕೆಯಾಗಿರುವ ಸುದ್ದಿ ಕನ್ನಡದ ಕುರಿತು ಕಾಳಜಿ ಇರುವ ಎಲ್ಲರಿಗೆ ಸಮಾಧಾನ ತಂದಿದೆ. ಹಿರಿಯ ವಿದ್ವಾಂಸರ ಹಿರಿತನದಲ್ಲಿ ನಡೆಯುವ ಈ ವರ್ಷದ ಸಾಹಿತ್ಯ ಸಮ್ಮೇಳನಕ್ಕೆ ಸರಕಾರ 25 ಕೋಟಿ ರೂಪಾಯಿಗಳ ಅನುದಾನ ನೀಡುತ್ತಿರುವ ವಿಷಯ ಈಗಾಗಲೇ ಪ್ರಕಟಗೊಂಡಿದೆ. ಸರಕಾರದ ಹಣ ನಮ್ಮೆಲ್ಲರ ದುಡಿಮೆಯ ಒಂದು ಭಾಗ ಕೂಡಾ ಆಗಿದೆ ಎನ್ನುವುದನ್ನು ಮರೆಯದಿರೋಣ. ನಾವು ದುಡಿದ ಹಣ ಯಾವ ಕಾರಣಕ್ಕೂ ಅನಗತ್ಯ ಗೌಜಿ, ಗಲಾಟೆಗಳಲ್ಲಿ ಕಳೆದು ಹೋಗಬಾರದು ಎನ್ನುವುದಷ್ಟೇ ನಮ್ಮೆಲ್ಲರ ಕಾಳಜಿ. ಕನ್ನಡ ಭಾಷೆ, ಸಾಹಿತ್ಯ, ಕಲೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಇದು ವಿನಿಯೋಗವಾದರೆ ಖುಷಿಯೇ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಸಮ್ಮೇಳನಗಳಂತಹ ಅವಕಾಶಗಳನ್ನು ತಮ್ಮ ಬೇಳೆಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ವ್ಯವಹಾರ ಚತುರರು ಕನ್ನಡ ಸೇವೆಯ ಪರದೆಯ ಹಿಂದೆ ಆಡುವ ಕಳ್ಳಾಟಗಳು ನೂರಾರು. ಬಹಳಷ್ಟು ಜನ ಇದನ್ನು ನೋಡಿಯೂ ನೋಡದಂತೆ, ಅಥವಾ ನೋಡಿದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುತ್ತಾರೆ. ಈ ಸಲ ಹಾಗೆ ಆಗದಿರಲಿ ಎಂದು ಆಶಿಸೋಣ.

ಕನ್ನಡದ ಬೆಳವಣಿಗೆ ಕುಂಠಿತವಾಗುತ್ತಿರುವ ಕಳವಳಕಾರೀ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ತುಳು ಮಾತೃಭಾಷೆ ಆಗಿರುವ ನನ್ನಲ್ಲಿ ಕನ್ನಡದ ಪ್ರಜ್ಞೆಯನ್ನು ಮೂಡಿಸಿದವರು ನಮಗೆ ಕನ್ನಡ ಕಲಿಸಿದ ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲಿನ ಕನ್ನಡ ಅಧ್ಯಾಪಕರು. ನಾವು ಓದುವ ಕಾಲಕ್ಕೆ ಈಗಿನಂತೆ ಹಳ್ಳಿ ಮತ್ತು ಅರೆನಗರ ಪ್ರದೇಶಗಳಲ್ಲಿ ಇಂಗ್ಲೀಷ್ ಭಾಷೆಯ ಬಗೆಗೆ ಕುರುಡು ವ್ಯಾಮೋಹ ಇರಲಿಲ್ಲ. ಈಗ ಪರಿಸ್ಥಿತಿ ಬಹಳಷ್ಟು ಬದಲಾಗಿದೆ. ಯಾವ ಹಳ್ಳಿ ಮೂಲೆಯನ್ನೂ ಬಿಡದೇ ವಿದ್ಯಾರ್ಥಿಗಳಿಗಾಗಿ ಹುಡುಕಾಡುವ ಇಂಗ್ಲೀಷ್ ಶಾಲೆಗಳು ಒಂದೆಡೆಯಾದರೆ, ನಮ್ಮ ಮಕ್ಕಳೂ ಇಂಗ್ಲೀಷ್ ಕಲಿತು ಉದ್ಧಾರ ಯಾಕಾಗಬಾರದು ಎನ್ನುವ ಮನಸ್ಥಿತಿಯ ಪೋಷಕರು ಇನ್ನೊಂದೆಡೆ. ಒಟ್ಟಿನಲ್ಲಿ ಸರ್ವವೂ ಇಂಗ್ಲೀಷ್‍ಮಯ, ಆಂಗ್ಲ ಮಾಯಾಜಾಲ. ಇದರಿಂದ ಯಾರು ಬೆಳೆಯುತ್ತಿದ್ದಾರೆ? ಏನು ಬೆಳೆಯುತ್ತಿದೆ? ಉತ್ತರ ಅಸ್ಪಷ್ಟ, ಅಸಮರ್ಪಕ!

ಮಕ್ಕಳು ಬೆಳೆಯುವ ಹಂತದಲ್ಲಿ, ಅವರಲ್ಲಿ ಬೆಳೆಯ ಬೇಕಿರುವುದು ಅವರ ಆಲೋಚನೆಯ ಶಕ್ತಿ, ಆಲೋಚನಾ ಕ್ರಮ ಮತ್ತು ಅವರ ಸುತ್ತಲ ಪರಿಸರದೊಂದಿಗೆ ಪರಿಚಯ. ಈ ಎಲ್ಲಾ ಕಾರಣದಿಂದ ಆರಂಭಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಹೆಚ್ಚು ಪರಿಣಾಮಕಾರಿ. ಏನನ್ನ, ಎಷ್ಟು ಮತ್ತು ಹೇಗೆ ಕಲಿಸಬೇಕು ಎನ್ನುವುದನ್ನು ಪರಿಣಿತರು ಸಾಕಷ್ಟು ಪ್ರಯೋಗ ಮಾಡಿ, ವಿಚಾರ ವಿಮರ್ಶೆ ಮಾಡಿ ನಿರ್ಧರಿಸಬೇಕಾಗುತ್ತದೆ. ಎಳವೆಯಲ್ಲಿ ಕಲಿತದ್ದು ಕೊನೆತನಕವೂ ಉಳಿಯುತ್ತದೆ. ಆದರೆ ಇಂದಿನ ಪರಿಸ್ಥಿತಿ ಇದಕ್ಕೆ ಅನುಗುಣವಾಗಿ ಮತ್ತು ಪೂರಕವಾಗಿದೆಯೇ? ಖಂಡಿತಾ ಇಲ್ಲ.

ಶಿಕ್ಷಣ, ಆರೋಗ್ಯ ಮತ್ತು ಆಹಾರ ಮನುಷ್ಯನ ಮೂಲಭೂತ ಅಗತ್ಯಗಳು. ಆದ್ದರಿಂದ ಅವುಗಳಿಗೆ ಯಾವತ್ತಿದ್ದರೂ ಬೇಡಿಕೆ ಇದ್ದೇ ಇರುತ್ತದೆ. ಹಣ ನಿರ್ದೇಶಿತ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಯಶಸ್ಸಿಗೆ ಬಹಳ ಅಗತ್ಯವಾಗಿರುವುದು ಬೇಡಿಕೆಯೇ. ಅದರಲ್ಲಿಯೂ ಹೇಳಿಕೇಳಿ ಈಗ ನಾವು ಮಾರುಕಟ್ಟೆ ಯುಗದಲ್ಲಿದ್ದೇವೆ, ಅಂದ ಮೇಲೆ ಕೇಳಬೇಕೆ? ಶಿಕ್ಷಣವೂ ಸದ್ಯ ಮಾರಾಟದ ಸರಕಾಗಿರುವ ಕಾರಣ ಮತ್ತು ಅದಕ್ಕೆ ನಿರಂತರವಾಗಿ ಬೇಡಿಕೆ ಇರುವ ಕಾರಣ ಆ ಕಡೆಗೆ ಬಂಡವಾಳ ಸಹಜವಾಗಿಯೇ ದೊಡ್ಡ ಮಟ್ಟದಲ್ಲಿ ಹರಿಯ ತೊಡಗುತ್ತದೆ.

ಬೇಡಿಕೆ ಇದೆ ಎಂದರೆ ಲಾಭ ಗಳಿಕೆಗೆ ಸುವರ್ಣ ಅವಕಾಶ ಎಂದೇ ಅರ್ಥ. ಇತರೆಡೆಗಳಂತೆ ಕರಾವಳಿಯ ಜಿಲ್ಲೆಗಳಲ್ಲಿಯೂ ಕಳೆದ ಮೂರು ದಶಕಗಳಲ್ಲಿ ಶಿಕ್ಷಣ ರಂಗದಲ್ಲಿ ಎಲ್ಲಾ ಹಂತದಲ್ಲಿ ಬಹಳ ದೊಡ್ಡ ಮಟ್ಟದಲ್ಲಿಯೇ ಖಾಸಗೀ ವಲಯದಿಂದ ಬಂಡವಾಳ ಹೂಡಿಕೆಯಾಗುತ್ತಾ ಬಂದಿರುವುದನ್ನು ಕಾಣಬಹುದು. ಬಂಡವಾಳ ಹೂಡಬೇಕಿದ್ದರೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸಬಲರಾಗಿದ್ದವರಿಗೆ ಮಾತ್ರ ಸಾಧ್ಯ. ಇನ್ನು ಧಾರ್ಮಿಕ ಶಕ್ತಿ ಇದ್ದರಂತೂ ನಮ್ಮ ವ್ಯವಸ್ಥೆಯಲ್ಲಿ ಎಲ್ಲಾ ಕೆಲಸಗಳು ಹೂ ಎತ್ತಿದಷ್ಟು ಸಲೀಸು. ಖಾಸಗೀಕರಣದ ವೇಗಕ್ಕೆ ಸರಕಾರೀ ಶಾಲೆಗಳು ಬಲಿಯಾದಲ್ಲಿ ಅದಕ್ಕೆ ದೊಡ್ಡ ಬೆಲೆ ತೆರುವವರು ಸಮಾಜದ ಕೆಳವರ್ಗದ ಜನ ಎನ್ನುವುದನ್ನು ಮರೆಯಬಾರದು. ಸರಕಾರ ಮತ್ತು ಜನಪ್ರತಿನಿಧಿಗಳು ಇದನ್ನು ನೆನಪಿಟ್ಟು ಕೊಳ್ಳಬೇಕು. ಶಿಕ್ಷಣವನ್ನು ಸೇವೆ ಎಂದು ನಮ್ಮ ಸಮಾಜ ಪರಿಗಣಿಸಿದ ಕಾಲವೂ ಇತ್ತು. ತಮ್ಮ ಸಮುದಾಯ ಮಾತ್ರವಲ್ಲ, ಎಲ್ಲ ಸಮುದಾಯದ ವಿದ್ಯೆಯ ಆಕಾಂಕ್ಷಿಗಳು ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಲಿ ಎನ್ನುವ ಉದಾತ್ತ ಧ್ಯೇಯದಿಂದ, ತ್ರಿಕರಣ ಪೂರ್ವಕವಾಗಿ ದುಡಿದ ಧಾರ್ಮಿಕ ಸಂಸ್ಥೆಗಳೂ ನಮ್ಮಲ್ಲಿ ಇವೆ ಎನ್ನಬೇಕೋ, ಇದ್ದುವು ಎನ್ನಬೇಕೋ ಈಗಿನ ಪರಿಸ್ಥಿತಿಯಲ್ಲಿ ಗೊತ್ತಾಗುತ್ತಿಲ್ಲ.

ಬಲ್ಲವರು ಹೇಳಿದ ಮಾತೊಂದಿದೆ, “ಬದುಕು ಕಟ್ಟಿಕೊಳ್ಳಲು ಶ್ರೀಮಂತರಿಗೆ ನೂರು ದಾರಿಯಾದರೆ, ಬಡವರಿಗೆ ವಿದ್ಯೆ ಒಂದೇ ದಾರಿ”. ಈ ಮಾತು ನಿಜ ಅನಿಸುತ್ತದೆ. ಒಂದು ವೇಳೆ ಶಿಕ್ಷಣ ಇಲ್ಲದೇ ಹೋಗಿದ್ದರೆ ಒಂದು ಕಾಲದಲ್ಲಿ ಸಮಾಜದ ಕೆಳವರ್ಗದ, ತಳವರ್ಗದ ಕೆಲವರಿಗಾದರೂ ಇಂದು ಘನತೆಯುಕ್ತ ಜೀವನ ನಡೆಸಲು ನಮ್ಮ ಸಮಾಜದಲ್ಲಿ ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ವಾಸ್ತವ ಸತ್ಯ. ಬ್ರಹ್ಮ ಶ್ರೀ ನಾರಾಯಣ ಗುರುಗಳು ಕೂಡಾ ಸಂಘಟನೆಯಿಂದ ಶಕ್ತಿ ಪಡೆಯುವ ಮತ್ತು ವಿದ್ಯೆಯ ಮೂಲಕ ತಾವು ಬಂದಿಯಾಗಿರುವ ಸಾಮಾಜಿಕ ವ್ಯವಸ್ಥೆಯಿಂದ ಮುಕ್ತಿ ಪಡೆಯಿರಿ ಎಂದು ಹೇಳಿದ್ದರು. ವಿದ್ಯೆ ನೀಡುವ ಜ್ಞಾನ, ವೈಚಾರಿಕತೆ, ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅರಿವಿನ ಪರಿಧಿಯೊಳಗೆ ಪದಾರ್ಪಣೆ ಮಾಡುವ ಆರಂಭದ ಹೆಜ್ಜೆಗಳು ಪುಟ್ಟದಾದರೂ ಗಟ್ಟಿಯಾಗಿರಬೇಕು. ಹಾಗಿರಬೇಕಿದ್ದರೆ ಮಗುವಿನ ಮನೆ, ಮನಗಳಿಗೆ ಹತ್ತಿರವಿರುವ ತಾಯಿ ಬೇರಿನೊಂದಿಗೆ ಬೆಸೆದುಕೊಂಡಿರುವ ಮಾತೃ ಭಾಷೆಯ ಶಿಕ್ಷಣ ಹೆಚ್ಚು ಪರಿಣಾಮಕಾರಿ. ತರಗತಿಯಲ್ಲಿ ಮಾಡುವ ಪಾಠದಂತೆಯೇ, ತನ್ನ ಗೆಳೆಯ ಗೆಳತಿಯರೊಂದಿಗೆ ಸಂವಹಿಸುವ ಸಮಯದಲ್ಲಿಯೂ ಕಲಿಕೆ ನಡೆಯುತ್ತದೆ. ಮಗು ಶಾಲೆಯಲ್ಲಿ ನಡೆಸುವ ಕಲಿಕೆಯಲ್ಲಿ ಪಾಠ ಒಂದು ಭಾಗವಾದರೆ ಪಾಠೇತರವಾದ ಹಲವಾರು ವಿಷಯಗಳೂ ಮಗುವಿನ ಕಲಿಕೆಯಲ್ಲಿ ಹಾಸು ಹೊಕ್ಕಾಗಿರುವ ಉಳಿದ ಭಾಗ. ವಿಷಯ ಸಂಗ್ರಹಕ್ಕಿಂತಲೂ ಜ್ಞಾನದ ಗಳಿಕೆ ಬಹಳ ಮುಖ್ಯ.

ಭಾಷೆ ಎನ್ನುವುದು ಸಂವಹನದ ಸಾಧನ ಮಾತ್ರವಲ್ಲ. ಅದು ಜ್ಞಾನದ ಆಕರ ಕೂಡಾ. ಭಾಷೆಯ ಮೂಲಕ ನಮ್ಮ ಸುತ್ತಲಿನ ಪರಿಸರವನ್ನು ಗ್ರಹಿಸುವ ಮತ್ತು ಅದನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತದೆ. ಇಂತಹ ಪ್ರಕ್ರಿಯೆಯಲ್ಲಿ ನಾವು ನೋಡುವ ಅರಿಯುವ ವಸ್ತು ಮತ್ತು ವಿಷಯಗಳ ಬಗ್ಗೆ ನೋಟಗಳನ್ನು ಅರ್ಥೈಸುವಿಕೆಯ ಹೊಸ ವಿಧಾನಗಳನ್ನು ನಾವು ಅನ್ವೇಷಿಸುತ್ತಾ ಮುಂದೆ ಸಾಗುತ್ತೇವೆ. ಇಂತಹ ಅನ್ವೇಷಕ ಮನೋವೃತ್ತಿ ನಮ್ಮ ವ್ಯಕ್ತಿತ್ವದ ವೈಶಿಷ್ಠ್ಯವಾಗುತ್ತದೆ. ಈ ದಿಸೆಯಲ್ಲಿ ಮಾತೃಭಾಷಾ ಮಾಧ್ಯಮದ, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಬಹಳ ಉಪಯುಕ್ತ ಮಾತ್ರವಲ್ಲ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ ಕೂಡಾ. ಯಾಕೆಂದರೆ ಮಗುವೊಂದು ತನ್ನ ಭಾಷೆಯಿಂದ ದೂರವಾದಷ್ಟು ಊರಿನಿಂದ, ತಾಯಿ ಬೇರಿನಿಂದಲೂ ದೂರವಾಗುತ್ತಾ ಹೋಗುತ್ತದೆ. ನಮ್ಮನ್ನು ನಮ್ಮವರೊಂದಿಗೆ ಬಂಧಿಸುವ ಬಳ್ಳಿಗಳು ನಮ್ಮ ಅನುಭವದೊಂದಿಗೆ ನಮ್ಮ ಅನುನಯದ ಸಂಬಂಧಗಳೊಂದಿಗೆ ಬೆರೆತುಕೊಂಡಿರುತ್ತವೆ. ಅಂತಹ ಸಂಬಂಧಗಳನ್ನು ರೂಪಿಸುವುದು ನಮ್ಮ ಭಾವ ಮತ್ತು ಭಾಷೆಗಳು. ಭಾಷೆಗೆ ಒಂದು ಪಠ್ಯ ಇರುವಂತೆ ಆ ಪಠ್ಯಕ್ಕೆ ಅರ್ಥ ತುಂಬುವ ಪರಿಸರವೂ ಇರುತ್ತದೆ. ಮಾತೃಭಾಷೆಯನ್ನು ಹೊರತು ಪಡಿಸಿದ ಇತರ ಭಾಷೆಗಳಿಗೆ ಇಂತಹ ಪರಿಸರ ಇಲ್ಲದೇ ಹೋಗುವ ಕಾರಣದಿಂದ ಕಲಿಕೆ ಪರಿಣಾಮಕಾರಿಯಾಗದೆ ಸೋಲುವ ಸಾಧ್ಯತೆಗಳು ದಟ್ಟವಾಗಿವೆ.

ಇಷ್ಟೆಲ್ಲಾ ವಿಷಯಗಳನ್ನು ಪ್ರಸ್ತಾಪಿಸುವುದಕ್ಕೆ ಮುಖ್ಯ ಕಾರಣ ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿದು ಬೆಳೆಯಬೇಕಾದರೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ, ಸಾಹಿತ್ಯ ಪರಿಷತ್ತಿನ ಹೊರತಾಗಿ ಕನ್ನಡದ ಬೀಜಗಳು ಮೊಳಕೆಯೊಡೆಯುತ್ತಿರುವ ಕನ್ನಡದ ಶಾಲೆಗಳು ಕಲಿಕೆಯ ತಾಣಗಳಾಗಿ ಇನ್ನಷ್ಟು ಗಟ್ಟಿಯಾಗಬೇಕು. ಇದಕ್ಕೆ ಸಾರ್ವಜನಿಕರಲ್ಲಿ ತಿಳುವಳಿಕೆ ಮತ್ತು ಸರಕಾರದ ಕಡೆಯಿಂದ ಬದ್ಧತೆಯಿಂದ ಕೂಡಿದ ಯೋಚನೆ ಮತ್ತು ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕಾದ ಯೋಜನೆಗಳ ಅಗತ್ಯವಿದೆ. ಹಾಗಾಗಿ ಕನಿಷ್ಟ ಪಕ್ಷ ಸಾಹಿತ್ಯ ಸಮ್ಮೇಳನ ನಡೆಯುವ ಜಿಲ್ಲೆಯ ಎಲ್ಲ ಸರಕಾರೀ ಕನ್ನಡ ಮಾಧ್ಯಮದ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ ನಡೆಯುವ ಕೆಲಸ ಆಗಬೇಕು. ಪ್ರತೀ ಸಮ್ಮೇಳನಗಳಲ್ಲಿ ಸರಕಾರೀ ಶಿಕ್ಷಣ ವ್ಯವಸ್ಥೆಯ ಸ್ಥಿತಿಗತಿಗಳ ಅವಲೋಕನ ಮತ್ತು ಅದರ ಬಲಪಡಿಸುವಿಕೆಗೆ ಸಂಬಂಧಪಟ್ಟ ಒಂದು ವಿಶೇಷ ಗೋಷ್ಠಿಯನ್ನು ಆಯೋಜನೆ ಮಾಡಬಹುದು. ಮುಂದಿನ ಗೋಷ್ಠಿಯಲ್ಲಿ ಹಿಂದಿನ ಗೋಷ್ಠಿಯಲ್ಲಿ ಮಾಡಲಾದ ನಿರ್ಧಾರ ಮತ್ತು ಅವುಗಳ ಅನುಷ್ಠಾನದ ಕುರಿತು ಅವಲೋಕನ ನಡೆಸುವ ಪರಿಪಾಠ ಖಡ್ಡಾಯವಾಗಿರಬೇಕು. ಸಮಾಜದ ವಿವಿಧ ವರ್ಗದ ಜನರಲ್ಲಿ ಓದುವ ಅಭ್ಯಾಸವನ್ನು ಬೆಳೆಸುವ ಪ್ರೋತ್ಸಾಹಿಸುವ ಅಗತ್ಯವೂ ಇದೆ. ದೇವನೂರು ಮಹಾದೇವ ಅವರ ನಿಲುವು ಉಳಿದ ಸಾಹಿತಿಗಳಿಗೆ ಪ್ರೇರಣೆಯಾಗಬೇಕು.

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರ ತಲೆಯೊಳಗೆ ಹೊಸ ವಿಚಾರಗಳನ್ನು, ಚಿಂತನೆಗಳನ್ನು ತುಂಬಿಸುವ ಕೆಲಸಗಳಾಗಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ನಾಡು ನುಡಿಗೆ ಸಂಬಂಧಿಸಿದ ವಿಚಾರಗಳ ಕುರಿತು ಮೌಲಿಕವಾದ ಚರ್ಚೆ, ಸಂವಾದಗಳು ಇನ್ನಷ್ಟು ಗಂಭೀರವಾಗಿ ನಡೆಯುವ ಅಗತ್ಯವಿದೆ. ಬಹಳಷ್ಟು ಸಂದರ್ಭದಲ್ಲಿ ಕಳೆದ ಸಮ್ಮೇಳನಕ್ಕಿಂತ ಈ ಬಾರಿಯ ಸಮ್ಮೇಳನದ ಊಟ, ಮೆರವಣಿಗೆ ಭರ್ಜರಿಯಾಗಬೇಕು ಎಂದು ಜಿದ್ದಿಗೆ ಬಿದ್ದು ಹೆಚ್ಚು ಖರ್ಚು ಮಾಡಿ ಸಮ್ಮೇಳನಕ್ಕೆ ಮೆರುಗು ನೀಡುವುದಿದೆ. ಈ ವಿಷಯದಲ್ಲಿ ಒಂದು ಮಾದರಿ ಸಂಹಿತೆಯನ್ನು ಹಾಕಿಕೊಂಡು ಶುದ್ಧವಾದ, ಆರೋಗ್ಯಕರ ಬೇಕಿದ್ದರೆ ಸ್ಥಳೀಯ ಸೊಗಡಿರುವ ಆಹಾರ ನೀಡುವ ನಿರ್ಧಾರ ಮಾಡಬಹುದು. ಗೋಷ್ಠಿಗಳಿಗೆ ಸಾಕಷ್ಟು ಸಮಯವಕಾಶ ನೀಡಿ ಉತ್ತಮ ರೀತಿಯ ಚರ್ಚೆಗಳಾಗುವುದೂ ಅಗತ್ಯವಿದೆ. ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಪ್ರಕಟವಾಗುತ್ತಿರುವುದು ಸಂತೋಷದ ವಿಷಯವೂ ಕೂಡಾ. ಆದರೆ ಪ್ರಕಟವಾದುದೆಲ್ಲವನ್ನೂ ಜನ ಓದುತ್ತಿದ್ದಾರೆಯೇ? ಈ ಪ್ರಶ್ನೆಯೂ ಮುಖ್ಯವಾಗಬೇಕು.

ಕನ್ನಡದ ಉತ್ಸವಗಳು, ಸಾಹಿತ್ಯ ಸಂಭ್ರಮಗಳು ಕಳೆಗುಂದಿರುವ ಮತ್ತು ಕನ್ನಡವು ಉಳಿದು ಬೆಳೆಯುವ ದೃಷ್ಟಿಯಿಂದ ರಚನಾತ್ಮಕ ಯೋಚನೆಗಳು ಈ ಸಾಲಿನ ಸಾಹಿತ್ಯ ಸಮ್ಮೇಳನದ ಚರ್ಚೆ ಸಂವಾದಗಳಿಂದ ವೇಗ ಪಡೆಯಲಿ ಎನ್ನುವುದು ನಮ್ಮೆಲ್ಲರ ಹರಕೆ ಕೂಡಾ.

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ- ಮಹಿಳಾ ದೌರ್ಜನ್ಯಗಳ ಕುರಿತು ಒಂದಿಷ್ಟು ಚಿಂತನ ಮಂಥನ

More articles

Latest article