ನವದೆಹಲಿ: ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ದೇಶದ ಖ್ಯಾತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿರುವ ಅಮೆರಿಕ ನ್ಯಾಯಾಲಯದ ಪ್ರಕರಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷ ಕಾಂಗ್ರೆಸ್ ಪಟ್ಟು ಹಿಡಿದಿದ್ದರಿಂದ, ರಾಜ್ಯಸಭಾ ಕಲಾಪವನ್ನು ನ. 27, ಬುಧವಾರದವರೆಗೆ ಮುಂದೂಡಲಾಯಿತು. 1949ರಲ್ಲಿ ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿದ 75ನೇ ವರ್ಷಾಚರಣೆಯ ಅಂಗವಾಗಿ ಮಂಗಳವಾರ ಕಲಾಪ ನಡೆಯುವುದಿಲ್ಲ. ಬದಲಾಗಿ ಕಲಾಪ ಬುಧವಾರದಿಂದ ಮುಂದುವರಿಯಲಿದೆ.
ಗೌತಮ್ ಅದಾನಿ ಕುರಿತ ವಿಷಯವನ್ನು ಚರ್ಚಿಸಲು ನಿಯಮ 267ರ ಅಡಿಯಲ್ಲಿ ಒಟ್ಟು 13 ನೋಟಿಸ್‌ಗಳನ್ನು ಸಲ್ಲಿಸಲಾಗಿತ್ತು. ಆದರೆ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಅವರು ಈ ನೋಟಿಸ್ ಗಳನ್ನು ಮಾನ್ಯ ಮಾಡಲಿಲ್ಲ. ಇದರಲ್ಲಿ ಅದಾನಿ ವಿರುದ್ಧ ಕೇಳಿ ಬಂದಿರುವ 26.5 ಕೋಟಿ ಅಮೆರಿಕನ್ ಡಾಲರ್ ಲಂಚ ಪ್ರಕರಣ ಕುರಿತು ಏಳು ಅರ್ಜಿಗಳಿದ್ದವು. ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕಲಾಪವನ್ನು 15 ನಿಮಿಷ ಮುಂದೂಡಲು ಆಗ್ರಹಿಸಿದವು.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಅದಾನಿ ವಿಷಯವನ್ನು ಪಟ್ಟಿಗೆ ಸೇರಿಸಿದರೆ ಒಂದು ಪ್ರಮುಖ ವಿಷಯವು ದೇಶದ ಮೇಲೆ ಹೇಗೆ ಪ್ರಬಾವ ಬೀರುತ್ತದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ. ವಾಸ್ತವ ಪರಿಸ್ಥಿತಿ ಹೀಗಿದ್ದರೂ ಪ್ರಧಾನಿ ಮೋದಿ ಅದಾನಿ ಬೆಂಬಲಕ್ಕೆ ನಿಂತಿರುವುದು ಆಶ್ಚರ್ಯ ತಂದಿದೆ ಎಂದು ವಾಗ್ದಾಳಿ ನಡೆಸಿದರು.
ಆದರೆ ಖರ್ಗೆ ಅವರ ಮಾತುಗಳನ್ನು ಕಡತಕ್ಕೆ ಸೇರಿಸದಂತೆ ಧನಕರ್ ಆದೇಶಿಸಿದರು. ವಿರೋಧ ಪಕ್ಷಗಳ ಆಗ್ರಹಕ್ಕೆ ಮನಿದ ಅವರು 15 ನಿಮಿಷಗಳ ಕಾಲ ಸದನನ್ನು ಮುಂದೂಡಿದರು.
ಮತ್ತೆ ಸದನ ಆರಂಭವಾದಾಗ ಧನಕರ್ ಮಾತನಾಡಿ ಸದನದ ಸದಸ್ಯರ ಮೇಲೆ ಗೌರವವಿದೆ. ಕಲಾಪವನ್ನು ಸುಗಮವಾಗಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ಆದರೂ ಕೆಲವು ಸದಸ್ಯರು ಅದಾನಿ ವಿಷಯವನು ಚರ್ಚಿಸಲು ಒತ್ತಾಯಿಸಿದರು. ಆಗ ಅಧ್ಯಕ್ಷರು ಸದನವನ್ನು ಮುಂದೂಡಿದರು.
ಅದಾನಿ ವಿಷಯದ ಜತೆಗೆ ಮಣಿಪುರ ಹಿಂಸಾಚಾರ, ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಘರ್ಷಣೆ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಕುರಿತೂ ಚರ್ಚೆಗೆ ನಿಯಮ 267 ರ ಅಡಿಯಲ್ಲಿ ಚರ್ಚೆಗೆ ಮನವಿ ಸಲ್ಲಿಸಲಾಗಿತ್ತು.