ನಬಾರ್ಡ್ ಅನ್ಯಾಯ ಸರಿಪಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ

Most read

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್ ನಿಂದ ರಾಜ್ಯದ ರೈತರಿಗೆ ಆಗಿರುವ ಸಾಲದ ಕೊರತೆಯನ್ನು ಸರಿಪಡಿಸಿ, ಆಗಿರುವ ಅನ್ಯಾಯವನ್ನು ಸರಿದೂಗಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್, ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಉಪಸ್ಥಿತರಿದ್ದರು.

2023-24ನೇ ಸಾಲಿನಲ್ಲಿ ನಬಾರ್ಡ್ ಕೃಷಿ ಚಟುವಟಿಕೆಗಳಿಗೆ ರೂ.5600 ಕೋಟಿ ಮೊತ್ತದ ರಿಯಾಯಿತಿ ದರದ ಸಾಲದ ಮಿತಿಗೆ ಅನುಮೋದನೆ ನೀಡಿತ್ತು. 2024- 25ನೇ ಸಾಲಿನಲ್ಲಿ ರೂ.9,162 ಕೋಟಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ, ನಬಾರ್ಡ್ ಕೃಷಿ ಚಟುವಟಿಕೆಗಳಿಗೆ ಕೇವಲ ರೂ.2340 ಕೋಟಿ ರಿಯಾಯಿತಿ ದರದ ಸಾಲವನ್ನು ಅನುಮೋದಿಸಿದೆ ಇದು ಕಳೆದ ವರ್ಷಕ್ಕಿಂತ ಶೇ.58ರಷ್ಟು ಕಡಿಮೆಯಾಗಿದೆ ಆರ್ಬಿಐ ಸಾಮಾನ್ಯ ಸಾಲದ ಮಿತಿ (ಎಲ್ಒಸಿ)ಯನ್ನು ಕಡಿಮೆಗೊಳಿಸಿರುವುದೇ ಪ್ರಸ್ತುತ ವರ್ಷ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿಮೆಗೊಳಿಸಲು ಕಾರಣ ಎಂದು ನಬಾರ್ಡ್ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಾನ್ಸೂನ್ ಮಳೆಯಾಗಿದ್ದು, ರೈತರು ಕೃಷಿ ಸಹಕಾರಿ ಚಟುವಟಿಕೆಗಳಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಹೆಚ್ಚಿಸುವಂತೆ ಬೇಡಿಕೆ ಇರಿಸಿದ್ದಾರೆ. ಆದರೆ ಕರ್ನಾಟಕಕ್ಕೆ 2024-25ನೇ ಸಾಲಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿತಗೊಳಿಸಿರುವುದು ಅಲ್ಪಾವಧಿ ಕೃಷಿ ಸಹಕಾರಿ ಸಾಲದ ವಿತರಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ, ಕರ್ನಾಟಕದ ರೈತರ ಹಿತದೃಷ್ಟಿಯಿಂದ ಅವರು ಉತ್ತಮ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ 2024-25 ನೇ ಸಾಲಿನಲ್ಲಿ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸುವಂತೆ ನಬಾರ್ಡ್ ಹಾಗೂ ಆರ್ಬಿಐಗೆ ದಯವಿಟ್ಟು ನಿರ್ದೇಶನ ನೀಡಬೇಕೆಂದು ಮನವಿ ಪತ್ರದಲ್ಲಿ ರಾಜ್ಯ ಸರ್ಕಾರ ಕೋರಿದೆ.

More articles

Latest article