ಗೆಳೆಯಾ, ಅವನು ಗಾಯಗೊಂಡಿದ್ದಾನೆ

Most read

ಫೇಸ್‌ಬುಕ್ಕನ್ನೂ ಒಳಗೊಂಡಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ದುರಂತವೆಂದರೆ ಪ್ರಗತಿಪರರು ಎಂದೆನಿಸಿಕೊಂಡವರಿಂದಲೂ ಸೂಕ್ಷ್ಮಹಲ್ಲೆಗಳು ನಡೆಯುತ್ತಿದೆ. ಇವರು ಎತ್ತುವ ವಿಷಯಗಳು ಸರಿಯೇ ಇರಬಹುದು. ಆದರೆ ಸಂದರ್ಭ ಮತ್ತು ಬಳಸುವ ಭಾಷೆ ತದ್ವಿರುದ್ಧ ಪರಿಣಾಮಗಳನ್ನು ಉಂಟು ಮಾಡುವಂತಿವೆ ಡಾ.ಸರ್ಜಾಶಂಕರ ಹರಳಿಮಠ.

ರೈಲಿನಿಂದ ಇಳಿದು ನಿರ್ಗಮನ ಬಾಗಿಲಿನತ್ತ ಸಾಗುತ್ತಿದ್ದೆ. ಅಲ್ಲಿ ಪೊಲೀಸರ ದಂಡಿತ್ತು.

ನೋಡುತ್ತಿದ್ದೆ. ಅವರು ಯಾರನ್ನೂ ಪರೀಕ್ಷಿಸಲಿಲ್ಲ.

ಸುಮಾರು ಇಪ್ಪತ್ತೈದರ ಯುವಕನೊಬ್ಬ ನಮ್ಮಂತೆಯೇ ಒಂದು ಬ್ಯಾಗು ಹಿಡಿದುಕೊಂಡು ಸಾಗುತ್ತಿದ್ದ. ನನ್ನ ಆರನೇ ಇಂದ್ರಿಯಕ್ಕೆ ಹೊಳೆಯಿತು. ಪೊಲೀಸರು ಖಂಡಿತ ಇವನ ಬ್ಯಾಗನ್ನು ಚೆಕ್ ಮಾಡುತ್ತಾರೆ ಎಂದು. ಅದು ಸುಳ್ಳಾಗಲಿಲ್ಲ. ಆ ಯುವಕನನ್ನು ಪೊಲೀಸರು ತಡೆದು ಆತನ ಬ್ಯಾಗನ್ನು ಪರೀಕ್ಷಿಸತೊಡಗಿದರು.

ಪೋಲಿಸರು ಅವನ ಬ್ಯಾಗನ್ನು ಚೆಕ್ ಮಾಡುವ ಹಿಂದಿನ ಕಾರಣವಿಷ್ಟೆ. ಅವನು ಗಡ್ಡ ಬಿಟ್ಟಿದ್ದ, ಸಣ್ಣದೊಂದು ಬಿಳಿ ಟೋಪಿ ಹಾಕಿದ್ದ.

ಈ ರೀತಿ ಗಡ್ಡ ಬಿಟ್ಟವರು ಸಣ್ಣ ಟೋಪಿ ಧರಿಸಿದವರು ಯಾರೇ ಆಗಿರಲಿ, ಇವರನ್ನು ಒಂದು ಕ್ಷಣ ಅನುಮಾನದಿಂದಲೇ ನೋಡುವ ಮನಸ್ಥಿತಿ ಹುಟ್ಟಿಕೊಂಡಿದೆ. ಇದಕ್ಕೆ ವೋಟಿಗಾಗಿ ಸಮಾಜ ಒಡೆಯುವ ರಾಜಕೀಯ ಪಕ್ಷಗಳು, ಮತೀಯ ಪತ್ರಕರ್ತರು ಮತ್ತು ಸಮೂಹ ಮಾಧ್ಯಮಗಳು ಹಗಲು ರಾತ್ರಿ ಕೆಲಸ ಮಾಡುತ್ತಿವೆ.

ಲೋಕಸಭಾ ಚುನಾವಣೆಯ ಮತಗಟ್ಟೆಯೊಂದರಲ್ಲಿ….

ಈ ರೀತಿ ಗಡ್ಡ ಬಿಟ್ಟ, ಸಣ್ಣ ಬಿಳಿ ಟೋಪಿ ಧರಿಸಿದ ಎಲ್ಲರನ್ನೂ, ಅಂದರೆ, ಅವರು ಪ್ರಖ್ಯಾತ ಆಟಗಾರನಾಗಿರಲಿ, ಸಂಗೀತಗಾರನಾಗಿರಲಿ, ಲೇಖಕನಾಗಿರಲಿ ಎಲ್ಲರನ್ನೂ, ಕೊನೆಗೆ ಖಾನ್ ಅಬ್ದುಲ್ ಗಫಾರ್ ಖಾನರು ಬಂದರೂ ಅವರನ್ನೂ ಅನುಮಾನದಿಂದ ನೋಡುವ ಕಾಯಿಲೆ ಸಮಾಜದಲ್ಲಿ ಸಾಂಕ್ರಾಮಿಕದಂತೆ ಹರಡುತ್ತಿದೆ, ಅಷ್ಟೇ ಅಲ್ಲ, ಗಡ್ಡವನ್ನೇ ಬಿಡದಂತೆ, ಟೋಪಿಯನ್ನೇ ಧರಿಸದಂತೆ ಬೆದರಿಕೆ ಹಾಕಲಾಗುತ್ತಿದೆ..

ಈ ಮಧ್ಯೆ… 

ಗಾಜಾ ಪಟ್ಟಿಯ ಮೇಲಿನ ಮನೆಗಳು ರಕ್ತದಿಂದ ತೋಯ್ದು ಹೋಗುತ್ತಿರುವುದು, ಗರ್ಭಿಣಿ ಮಹಿಳೆಯರ ಹೊಟ್ಟೆಯ ಮೇಲೆ ಬಾಂಬುಗಳು ಬೀಳುತ್ತಿರುವುದು, ಪ್ರಪಂಚ ಕಾಣುವ ಮೊದಲೇ ಎಳೆಮಕ್ಕಳು ರಕ್ತ ತೊಟ್ಟಿಕ್ಕಿ ಚೂರು ಚೂರಾಗುತ್ತಿರುವುದು.. ಇದನ್ನು ಯಾರೂ ಪ್ರತಿಭಟಿಸುವಂತಿಲ್ಲ., ಪ್ರತಿಭಟಿಸಿದರೆ ಅವರು ದೇಶದ್ರೋಹಿಗಳು, ಅವರ ಮೇಲೆ ಜಾಮೀನಿರದ ಕೇಸುಗಳು ಬೀಳುತ್ತವೆ..

ಮಸೀದಿಯೊಂದು ಕೆಡವಲ್ಪಡುತ್ತದೆ, ಮಂದಿರ ಎದ್ದೇಳುತ್ತದೆ. ಇನ್ನೊಂದು ಮಸೀದಿಯ ಅಂಗಳದಲ್ಲಿ ಅಗೆತ ಆರಂಭವಾಗುತ್ತದೆ. ಇದರ ವಿರುದ್ಧ ಪ್ರತಿಭಟನೆ ಶುರುವಾಗುತ್ತದೆ. ಪ್ರತಿಭಟಿಸಿದವರ ಮನೆಗಳನ್ನು ಸರ್ಕಾರಿ ಬುಲ್ಡೋಜರ್‌ಗಳು ನೆಲಸಮಗೊಳಿಸುತ್ತವೆ..

ಪ್ರತಿಭಟನೆ

ಗಡ್ಡ ಬಿಟ್ಟವರನ್ನು, ಟೋಪಿ ಧರಿಸಿದವರನ್ನು, ಬುರ್ಕಾ ತೊಟ್ಟವರನ್ನು ಸಂತೆಯಿಂದ ಓಡಿಸಲಾಗುತ್ತದೆ. ಪಾದಚಾರಿಮಾರ್ಗ ಅತಿಕ್ರಮಿಸಿದ್ದಾರೆ ಎಂದು ಇಂತಹ ಬೀದಿಬದಿ ವ್ಯಾಪಾರಿಗಳನ್ನು ಬೀದಿಪಾಲು ಮಾಡಲಾಗುತ್ತದೆ.

ಪ್ರಶ್ನೆ ಇರುವುದು ನಿರ್ದಿಷ್ಟವಾಗಿ ನೇರ ಅನುಮಾನಕ್ಕೆ, ಅವಮಾನಕ್ಕೆ ಒಳಗಾಗುವ ಜನರದ್ದು ಮಾತ್ರವಲ್ಲ. ಗಡ್ಡ ಬಿಡುವ, ಸಣ್ಣಟೋಪಿ ಧರಿಸುವ, ಬುರ್ಕಾ ಧರಿಸುವ ಈ ಲೋಕದ ಎಲ್ಲಾ ಜನರದ್ದು. ಅಷ್ಟು ಮಾತ್ರವಲ್ಲ, ಈ ವೇಷಭೂಷಣದ ಜನರ ಹೆಸರನ್ನು ಹೊಂದಿರುವ  ಎಲ್ಲರದ್ದೂ. ಏಕೆಂದರೆ ಇದು ಮೊಬೈಲ್ ಯುಗ. ಪ್ರಪಂಚದಲ್ಲಿ ಏನಾಗುತ್ತಿದೆ ಎಂದು ಕ್ಷಣಮಾತ್ರದಲ್ಲಿ ನಮ್ಮ ತಲೆಗೆ ಹೋಗುತ್ತದೆ. ಎಲ್ಲೋ ಆಗಿದ್ದು ನಾಳೆ ಇಲ್ಲಿಯೇ ಆಗಬಹುದು, ಯಾರಿಗೋ ಆಗಿದ್ದು ನಮಗೇ ಆಗಬಹುದು..

ಇಡೀ ಸಮಾಜ ಇವರನ್ನು ಹೀಗೆ ನೋಡುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಎಲ್ಲರೂ ನಮ್ಮನ್ನು ಹಾಗೆ ನೋಡುತ್ತಿದ್ದಾರೆ ಎನಿಸಲು ಆರಂಭವಾಗುತ್ತದೆ. ಹೀಗೆ ಎನಿಸಲು ಆರಂಭವಾದ ತಕ್ಷಣ ನಿಂತ ನೆಲವೇ ಅದುರಿದ ಅನುಭವ ಸಣ್ಣಗೆ ಶುರುವಾಗುತ್ತದೆ..

ಮುಸ್ಲಿಂ ಸಮುದಾಯ ಪ್ರಸ್ತುತ ಇಂತಹ ಸಂಕಟವನ್ನು ಅನುಭವಿಸುತ್ತಿದೆ.

ಇಂತಹ ಸಂಕಟಕ್ಕೆ ಒಳಗಾಗುವ ಜನರ ಮನಸ್ಥಿತಿ ಹೇಗಿರುತ್ತದೆ ಎಂದು ಯೋಚಿಸುವ ಒಂದಿಷ್ಟು ಸಂವೇದನೆಯಿರುವ ಯಾರಿಗಾದರೂ ದುಗುಡ ಆವರಿಸಿಕೊಳ್ಳುತ್ತದೆ. ಆದರೆ ‘ಸಂವೇದನೆಗಳಿರುವ ಜನ’ ‘ಪ್ರಗತಿಪರರು’ ಎಂದು ನಾವು ಭಾವಿಸುವ ಜನರೇ ಒರಟಾಗಿ ವರ್ತಿಸುವುದನ್ನು ಕಂಡಾಗ ಏಕೆ ಹೀಗೆ ಎಂಬ ಪ್ರಶ್ನೆ ಎದುರಾಗುತ್ತದೆ.

ಮುಸ್ಲಿಂ ಸಮುದಾಯದ ಸಂವೇದನಾಶೀಲರು ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ. ಈ ಬಿಕ್ಕಟ್ಟು ಬಾಬರಿ ಮಸೀದಿ ಕೆಡವಲಾದ ನಂತರದ ಮೂರು ದಶಕಗಳಲ್ಲಿ ಇನ್ನಷ್ಟು ಹೆಚ್ಚಿದೆ. ಒಂದು ಕಡೆ ತಮ್ಮ ಸಮುದಾಯದೊಳಗಿನ ಸಂಪ್ರದಾಯ, ಕುರಾನಿನ ನೆಪದಲ್ಲಿ ಹೇರಲಾದ ಆಚರಣೆಗಳು, ನಿಯಮಗಳು. ಇನ್ನೊಂದು ಕಡೆ ಹಿಂದೂ ಕೋಮುವಾದಿಗಳು ಹೇರುವ ಅಗೋಚರ ನಿಷೇಧಗಳು. ದೈಹಿಕ ಹಲ್ಲೆಗಳು..

ಇಂತಹ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಮುಸ್ಲಿಂ ಸಮುದಾಯದ ಸಂವೇದನಾಶೀಲರನ್ನು, ಪ್ರಗತಿಪರರನ್ನು ಎದುರುಗೊಳ್ಳುವಾಗ ನಾವು ಅಳವಡಿಸಿಕೊಳ್ಳಬೇಕಾದ ಸಂವಾದದ ಭಾಷೆ ಯಾವುದು?

ಬುರ್ಕಾಪದ್ಧತಿಯನ್ನೂ ಒಳಗೊಂಡಂತೆ ಹೆಣ್ಣನ್ನು ನಿರ್ಬಂಧಿಸುವ ಮುಸ್ಲಿಂ ಸಮುದಾಯದೊಳಗಿನ ಪುರುಷಪ್ರಧಾನ ಆಚರಣೆಗಳು, ನಿಯಮಗಳ ಕುರಿತು ಅದರೊಳಗಿನ ಪ್ರಗತಿಪರರು ದನಿಯೆತ್ತಬೇಕು ಎಂಬ ಆಗ್ರಹ ಮೊದಲಿನಿಂದಲೂ ಇದೆ. ಮುಸ್ಲಿಂ ಲೇಖಕರಿಗಾಗಿಯೇ ಪ್ರಶಸ್ತಿಗಳನ್ನು ಮುಸ್ಲೀಮರೆ ಸ್ಥಾಪಿಸುವುದರ ಬಗೆಗೆ ನನಗೂ ತಕರಾರಿದೆ. ಅವರನ್ನು ಮುಖ್ಯವಾಹಿನಿಯಿಂದ ಇದು ಪ್ರತ್ಯೇಕವಾಗಿಡಬಹುದು ಎಂಬ ಆತಂಕ ಇದರ ಹಿಂದಿದೆ. ಶಿವಮೊಗ್ಗ ಕರ್ನಾಟಕ ಸಂಘವು ತಮ್ಮ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಲು ಹೊರಟಾಗ ಅದನ್ನು ಮುಸ್ಲಿಂ ಲೇಖಕರಿಗೆ ಕೊಡಬೇಕು ಎಂದು ಲಂಕೇಶ್ ಸೂಚಿಸಿದ್ದಕ್ಕೂ, ಮುಸ್ಲೀಮರೇ ತಮ್ಮ ಸಮುದಾಯಕ್ಕೆ ಮೀಸಲಾಗಿ ಪ್ರಶಸ್ತಿ ಕೊಡುವುದಕ್ಕೂ ವ್ಯತ್ಯಾಸವಿದೆ. ಆದರೆ ಇವನ್ನೆಲ್ಲ ಮುಸ್ಲಿಂ ಗೆಳೆಯರೊಂದಿಗೆ ಚರ್ಚಿಸುವ ನಮ್ಮ ಭಾಷೆ ಯಾವುದಾಗಿರಬೇಕು ಎಂಬುದು ಇಲ್ಲಿನ ವಿಚಾರ.

ಫೇಸ್‌ಬುಕ್ಕನ್ನೂ ಒಳಗೊಂಡಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ದುರಂತವೆಂದರೆ ಪ್ರಗತಿಪರರು ಎಂದೆನಿಸಿಕೊಂಡವರಿಂದಲೂ ಸೂಕ್ಷ್ಮಹಲ್ಲೆಗಳು ನಡೆಯುತ್ತಿದೆ. ಇವರು ಎತ್ತುವ ವಿಷಯಗಳು ಸರಿಯೇ ಇರಬಹುದು. ಆದರೆ ಸಂದರ್ಭ ಮತ್ತು ಬಳಸುವ ಭಾಷೆ ತದ್ವಿರುದ್ಧ ಪರಿಣಾಮಗಳನ್ನು ಉಂಟು ಮಾಡುವಂತಿವೆ.

ಕೆಲ ಮುಸ್ಲಿಂ ಲೇಖಕರು ಒಟ್ಟುಸೇರಿ ತಮ್ಮ ಸಮುದಾಯದೊಳಗಿನ ಮೂಲಭೂತವಾದ, ಹೊರಗಿನ ಹಿಂದೂ ಕೋಮುವಾದದಿಂದ ತಮ್ಮ ಸಮುದಾಯದ ಬಿಡುಗಡೆಗಾಗಿ ಒಂದು ವೇದಿಕೆಯನ್ನು ಕಟ್ಟಿಕೊಂಡಿದ್ದಾರೆ. ಇದರ ಇತಿಮಿತಿಗಳ ಬಗ್ಗೆ ಒರಟೊರಟು ಮಾತನಾಡುವುದು ಸದುದ್ದೇಶದ ವೇದಿಕೆಯ ಆತ್ಮಸ್ಥೈರ್ಯವನ್ನೇ ಕುಂದಿಸಿ ಬಿಡಬಹುದು. ಮುಸ್ಲಿಂ ಪ್ರಗತಿಪರರು ನಮ್ಮೆಡೆಗಿನ ವಿಶ್ವಾಸವನ್ನು ಕಳೆದುಕೊಂಡುಬಿಡಬಹುದು

ಮುಸ್ಲೀಮರು ಗಾಯಗೊಂಡಿದ್ದಾರೆ. ತಮ್ಮ ಮೇಲಿನ ಗಾಯಗಳು ಕಲಿತ ದಲಿತರಿಗೆ ಹೇಗೆ ಗಾಢವಾಗಿ ಅರಿವಿಗೆ ಬರುತ್ತದೆಯೋ ಹಾಗೆಯೇ ಕಲಿತ ಮುಸ್ಲೀಮರಿಗೆ ತಮ್ಮ  ಮೇಲಿನ ಗಾಯಗಳು ನೋವಿನಿಂದ ದಹಿಸುತ್ತಿವೆ.

ಮನೆಯೊಳಗಿನ ತಕರಾರುಗಳು ಬೀದಿಯ ವಾಗ್ವಾದಗಳಾಗದಿರಲಿ, ನಾವು ಕನಿಷ್ಟ ಮನುಷ್ಯರಾಗಿ ವರ್ತಿಸೋಣ.

ಡಾ.ಸರ್ಜಾಶಂಕರ ಹರಳಿಮಠ

ಹಿರಿಯ ಸಾಹಿತಿಗಳು

ಇದನ್ನೂ ಓದಿ- ಮುಸ್ಲಿಮರಲ್ಲಿ ನಾಯಕರು ಎಲ್ಲಿದ್ದಾರೆ?

More articles

Latest article