ಇಂದಿರಾ ಜನ್ಮ ದಿನ ವಿಶೇಷ
ಪುರುಷ ಪ್ರಧಾನ ಅಧಿಕಾರ ರಾಜಕಾರಣ ವ್ಯವಸ್ಥೆಯ ನಡುವೆ ಇಂದಿರಾ ಗಾಂಧಿಯವರ ಸಂಪುಟದ ಏಕೈಕ ಗಂಡಸು ಇಂದಿರಾ ಆಗಿದ್ದರು ಎನ್ನುವ ವಿಶೇಷಣ ಇವರ ಜೀವನದ ಎಲ್ಲಾ ತಪ್ಪು ಒಪ್ಪುಗಳನ್ನ ಕಥೆಯನ್ನು ಅರ್ಥ ಮಾಡಿಸುತ್ತದೆ. ಇವುಗಳೆಲ್ಲದರ ನಡುವೆ ಅವರ ಆಡಳಿತ ದೌರ್ಬಲ್ಯ, ವೈಯಕ್ತಿಕ ವಿಷಯಗಳು, ಮಾಡಿರಬಹುದಾದ ರಾಜಕೀಯ ತಪ್ಪುಗಳು ಅವರ ಜೊತೆಗೆ ಇರುತ್ತದೆ ಕೂಡಾ- ಎಂ ಜಿ ಹೆಗಡೆ, ಅಂಕಣ ಕಾರರು
ಇಂದಿರಾ ಗಾಂಧಿಯವರ ಕುರಿತು ಮಾತನಾಡುವ ಮೊದಲು, ಅವರು ಪ್ರಧಾನಿಯಾಗಿ ಆಡಳಿತ ಮಾಡಿದ ಅರವತ್ತು ಮತ್ತು ಎಪ್ಪತ್ತನೇ ದಶಕದಲ್ಲಿನ ಮಹಿಳೆಯರ ಸ್ಥಿತಿಗತಿಗಳನ್ನು ತಿಳಿದೇ ಮಾತನಾಡಬೇಕಾಗುತ್ತದೆ. ಭಾರತದಲ್ಲಿ ಪ್ರಬಲವಾಗಿದ್ದ ಪುರುಷ ಪ್ರಧಾನ ವ್ಯವಸ್ಥೆಯ ದಿನಗಳಲ್ಲಿ ಇಂದಿರಾ ಪ್ರಧಾನಿಯಾಗಿದ್ದು. ಹೆಣ್ಣು ಮಕ್ಕಳೆಂದರೆ ತಾತ್ಸಾರದ, ಅವರಿಗೆ ಶಿಕ್ಷಣ ನೀಡಲು ಒಪ್ಪದ, ಮನೆಯೊಳಗಿನ ಕೆಲಸಕ್ಕೆ ಮಾತ್ರ ಮಹಿಳೆ ಎಂಬ ಪರಿಕಲ್ಪನೆಯಿದ್ದ ದಿನಗಳು. ಅದರಲ್ಲೂ ಅಧಿಕಾರ ರಾಜಕಾರಣದಲ್ಲಿ ಮಹಿಳೆಯರಿಗೆ ತಳಮಟ್ಟದಲ್ಲೂ ಸ್ಥಾನ ಕೊಡಲೊಪ್ಪದ ಕಾಲವದು. ಕಾಂಗ್ರೆಸ್ ನಲ್ಲಿ ಘಟಾನುಘಟಿ ನಾಯಕರ ಹಿಂಡೇ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಇಂದಿರಾ ಪ್ರಧಾನ ಮಂತ್ರಿಯಾಗಿದ್ದರು ಅಂತಾದರೆ ಅವರ ಸುತ್ತಲಿನ ರಾಜಕೀಯ ಮತ್ತು ಸಾಮಾಜಿಕ ವಿರೋಧಿಗಳ ಶತ್ರುತ್ವ, ಕಿರಿಕಿರಿಗಳು ಯಾವ ಮಟ್ಟದಲ್ಲಿ ಇದ್ದಿರಬಹುದು ಎಂದು ಅಂದಾಜು ಮಾಡಿಕೊಂಡು ಅವರನ್ನು ವಿಮರ್ಶೆ ಮಾಡಬೇಕಿದೆ.
ಅಂದಿನ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಯವರು ನಿಧನರಾದಾಗ, 24 ಜನವರಿ 1966 ರಂದು ಭಾರತದ ಪ್ರಧಾನ ಮಂತ್ರಿಯಾಗಿ ಇಂದಿರಾಗಾಂಧಿಯವರು ಅಧಿಕಾರಕ್ಕೇರಿದರು. ಹೀಗೆ ಅಧಿಕಾರಕ್ಕೆ ಏರಿದ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಕೂಡಾ.
1930 ರಲ್ಲಿ, ಅವರು ಅಸಹಕಾರ ಚಳುವಳಿಯನ್ನು ಬೆಂಬಲಿಸಲು ಚಿಕ್ಕ ಮಕ್ಕಳನ್ನೊಳಗೊಂಡ “ಬಾಲ್ ಚರ್ಖಾ ಸಂಘ” ಮತ್ತು “ವಾನರ್ ಸೇನೆ” ಅನ್ನು ಸಂಘಟಿಸುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಣೆ ಮಾಡಿದ್ದರು. 1955 ರಲ್ಲಿ, ಇಂದಿರಾ ಗಾಂಧಿಯವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸೇರಿ ಮತ್ತು ಪಕ್ಷದ ಕೇಂದ್ರ ಚುನಾವಣೆಯಲ್ಲಿ ಭಾಗವಹಿಸಿದ್ದರು.
ಅವರು 1958 ರಲ್ಲಿ ಕಾಂಗ್ರೆಸ್‌ನ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು . 1956 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಹಿಳಾ ಇಲಾಖೆ ಮತ್ತು ಅಖಿಲ ಭಾರತ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಏಕೀಕರಣ ಮಂಡಳಿಯ ಅಧ್ಯಕ್ಷತೆ ವಹಿಸಿದ್ದರು . 1959 ರಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದರು. ಆದ್ದರಿಂದ ಅವರಿಗೆ ರಾಜಕೀಯ ಮತ್ತು ಸಾಮಾಜಿಕ ವಿಷಯದ ಅರಿವೂ ಇತ್ತು. ನಂತರ 1960 ರಿಂದ ಮತ್ತು ನಂತರ ಜನವರಿ 1978 ರಲ್ಲಿ ಕೂಡಾ ಅಧ್ಯಕ್ಷರಾಗಿದ್ದರು.
ಇಂದಿರಾ ಗಾಂಧಿ ಅವರ ವಿರೋಧಿಗಳಿಗೂ ಇಷ್ಟವಾಗುವುದು ಅವರ ಗಟ್ಟಿತನದ ನಿರ್ಧಾರಗಳು. ಈ ಕಾರಣಕ್ಕಾಗಿ ಅಟಲ್ ಬಿಹಾರಿ ವಾಜಪೇಯಿಯವರು ಇಂದಿರಾಗಾಂಧಿಯನ್ನು ದುರ್ಗೆಗೆ ಹೋಲಿಸಿದ್ದರು.
ಇಂದಿರಾ ಮಹಾತ್ಮಾ ಗಾಂಧಿ ಮತ್ತು ನೆಹರೂರವರ ವಿಚಾರಧಾರೆಯಿಂದ ಪ್ರೇರಿತರಾದರೂ, ತಮ್ಮ ಗಟ್ಟಿತನದ ನಿರ್ಧಾರಗಳನ್ನು ಜಾರಿಗೆ ತರಲು ಹಿಂದಕ್ಕೆ ಸರಿಯಲಿಲ್ಲ. 1971ರ ಭಾರತ ಮತ್ತು ಪಾಕಿಸ್ತಾನದ ಸಮಸ್ಯೆಗೆ ಅವರು ಗಾಂಧಿಯವರ ಅಹಿಂಸೆಯ, ಅಥವಾ ತನ್ನ ತಂದೆಯವರ ಅಲಿಪ್ತ ನೀತಿ ದಾರಿಯನ್ನು ಆಯ್ಕೆ ಮಾಡಿಕೊಳ್ಳದೇ ಆ ದಿನಕ್ಕೆ ಪೂರಕವಾದ ಮತ್ತು ಅಗತ್ಯವಾದ ತನ್ನ ನಿಲುವಿಗೆ ಅಂಟಿಕೊಂಡು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಇದರ ಫಲವಾಗಿ 1971ರಲ್ಲಿ ಪೂರ್ವ ಪಾಕಿಸ್ತಾನ ಸ್ವಾತಂತ್ರ್ಯ ಪಡೆದಿತ್ತು.
ಅವರ ಆಡಳಿತ ಜನಪರವಾಗಿತ್ತು. ಅವರಿಗೆ ಬಡವರ ಬಗ್ಗೆ ವಿಶೇಷ ಕಾಳಜಿಯಿತ್ತು. ಅದಕ್ಕಾಗಿ ಆಡಳಿತಾತ್ಮಕವಾಗಿ ಅನೇಕ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದರು. ಅದರಲ್ಲಿ 1975 ರಲ್ಲಿ ಜಾರಿಗೆ ತಂದ ಟ್ವೆಂಟಿ ಪಾಯಿಂಟ್ ಕಾರ್ಯಕ್ರಮ ಪ್ರಮುಖವಾದುದು. ಇದು ಬಡತನ ನಿರ್ಮೂಲನೆ ಮತ್ತು ಬಡವರ ಜೀವನ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಕಾರ್ಯಕ್ರಮ ಬೇರೆ ಬೇರೆ ರೀತಿಯ ಬದಲಾವಣೆಯೊಂದಿಗೆ, ಹೆಸರಿನೊಂದಿಗೆ ಈಗಲೂ ಜಾರಿಯಲ್ಲಿದೆ. ಕಾರ್ಯಕ್ರಮವು ಕುಡಿಯುವ ನೀರು, ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ ಮತ್ತು ಪರಿಸರದಂತಹ ವಿವಿಧ ಸಾಮಾಜಿಕ, ಆರ್ಥಿಕ, ಅಭಿವೃದ್ಧಿ ವಿಷಯಗಳನ್ನು ಒಳಗೊಂಡಿದ್ದು ವಿಶೇಷವಾಗಿ ಗ್ರಾಮೀಣ ಬಡತನ ನಿವಾರಣೆಗೆ ಸಹಕಾರಿಯಾಯಿತು. ಭಾರತದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ ಹಸಿರು ಕ್ರಾಂತಿ ಮತ್ತು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಿರಗೊಳಿಸಿದ ಬ್ಯಾಂಕ್‌ಗಳ ರಾಷ್ಟ್ರೀಕರಣ ಇವರು ನೀಡಿದ ಬಹು ಮುಖ್ಯ ಕೊಡುಗೆಯಾಗಿದೆ.
ಕೇವಲ ಶ್ರೀಮಂತರಿಗಾಗಿ, ಶ್ರೀಮಂತರಿಂದ ನಡೆಸಲ್ಪಡುತ್ತಿದ್ದ ಬ್ಯಾಂಕ್ ಗಳ ರಾಷ್ಟೀಕರಣ ಸರಳ ಸಂಗತಿಯಾಗಿರಲಿಲ್ಲ.
ಈ ವೇಳೆಯಲ್ಲಿ ಅದಾಗಲೇ ಚೀನಾದೊಂದಿಗೆ ಭಾರತದ ಬಾಂಧವ್ಯ ಹಳಸಿತ್ತು. ಪಾಕಿಸ್ತಾನದ ಮತ್ತು ಬಾಂಗ್ಲಾದ ವಿಷಯದಲ್ಲಿ ಭಾರತ ಮಧ್ಯ ಪ್ರವೇಶ ಮಾಡದಂತೆ ಚೀನಾ ಎಚ್ಚರಿಸಿತ್ತು. ಚೀನಾದ ಬೆಂಬಲವಾಗಿ ಅಮೆರಿಕ ಮುಂದೆ ಬಂದಿತ್ತು. ಇಂದಿರಾ ತಕ್ಷಣವೇ ರಷ್ಯಾದ ಜೊತೆ ಪರಸ್ಪರ ಭದ್ರತಾ ಸಹಾಯ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ ಉಭಯ ದೇಶಗಳಲ್ಲಿ ಯಾವ ದೇಶದ ಭದ್ರತೆಗೆ ಧಕ್ಕೆಯುಂಟಾದರೂ ಮತ್ತೊಂದು ದೇಶ ಸಹಾಯಕ್ಕೆ ನಿಲ್ಲಬೇಕೆಂಬ ಅಂಶವಿತ್ತು. ಸೇನೆಗೆ ಯುದ್ಧದ ಮುನ್ಸೂಚನೆ ನೀಡಿದ್ದರು.
1969 ರಂದು ಭಾರತದಲ್ಲಿ 14 ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣ ಮಾಡುವ ದಿಟ್ಟ ಘೋಷಣೆ ಮಾಡಿದ್ದರು. ಇದು ಹೊಸ ಸಂಚಲನವನ್ನು ಉಂಟುಮಾಡಿತ್ತು. ಅದಕ್ಕಾಗಿ ಇವರಿಗೆ ಕಮ್ಯೂನಿಸ್ಟ್ ಎಂಬ ಲೇಬಲ್ ಕೂಡಾ ಅಂಟಿಸಲಾಯಿತು. ಬ್ಯಾಂಕ್ ಗಳ ಬಾಗಿಲು ರೈತರು ಮತ್ತು ಗ್ರಾಮೀಣ ಜನತೆಗೆ ತೆರೆಯಲ್ಪಟ್ಟಿತು. ಬ್ಯಾಂಕಿಂಗ್ ಸೇವೆಗಳು ಮತ್ತು ಸಾಲ ಸೌಲಭ್ಯಗಳು ಎಲ್ಲರಿಗೂ ಸಿಗುವಂತಾಯಿತು. ರಾಜಪ್ರಭುತ್ವದ ರಾಜ್ಯಗಳ ಆಡಳಿತಗಾರರಿಗೆ “ಖಾಸಗಿ ಪರ್ಸ್” ಮೂಲಕ ಕೆಲವು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಇದು ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು 1971 ರಲ್ಲಿ ಭಾರತೀಯ ಸಂವಿಧಾನಕ್ಕೆ 26 ನೇ ತಿದ್ದುಪಡಿಯನ್ನು ತಂದರು. ಸಂವಿಧಾನದ 291 ಮತ್ತು 362 ನೇ ವಿಧಿಗಳನ್ನು ರದ್ದುಗೊಳಿಸಿ ಮತ್ತು ಖಾಸಗಿ ಪರ್ಸ್ ವ್ಯವಸ್ಥೆಯನ್ನು ತೆಗೆದುಹಾಕಿದರು.”ಇಂದಿರಾ ಹಟಾವೋ” ಎಂಬ ತನ್ನ ವಿರೋಧಗಳ ಘೋಷಣೆಗೆ ಪ್ರತಿಯಾಗಿ “ಗರೀಬಿ ಹಟಾವೋ” ಎಂಬ ಘೋಷಣೆ ಮಾಡಿ, ಬಡತನದ ನಿರ್ಮೂಲನೆಗೆ ಹೊಸ ಚಾಲನೆಯನ್ನು ನೀಡಿದರು.
ಯುದ್ಧ ಚಳಿಗಾಲದಲ್ಲೇ ಆಗಬೇಕು ಎಂಬ ಸೇನೆಯ ಸಲಹೆಯನ್ನು ಮುಕ್ತವಾಗಿ ಸ್ವೀಕರಿಸಿದ್ದರು. ಯುದ್ಧ ಪ್ರಾರಂಭವಾಗುವ ಮೊದಲು, ಬೆಲ್ಜಿಯಂ, ಜರ್ಮನಿ, ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ದೇಶಗಳಿಗೆ ಪ್ರವಾಸ ಮಾಡಿ ತಮ್ಮ ಪರ ಒಲವು ಬರುವಂತೆ ಪ್ರಯತ್ನ ಮಾಡಿದ್ದರು. ಡಿಸೆಂಬರ್ 3 ರಂದು ಪಾಕಿಸ್ತಾನ ಭಾರತದ ವಿಮಾನವೊಂದನ್ನು ಭಸ್ಮ ಮಾಡಿತ್ತು. ಇದನ್ನೇ ಕಾರಣ ಮಾಡಿಕೊಂಡು ಭಾರತದ ಸೈನಿಕರು ಮುಂದುವರಿದು ಪೂರ್ವ ಪಾಕಿಸ್ತಾನವನ್ನು ವಶಮಾಡಿಕೊಂಡರು. ಪಾಕಿಸ್ತಾನ ಮಂಡಿಯೂರಿತು. ಇಂದಿರಾ ತೋರಿದ ದಿಟ್ಟತನದಿಂದ ಚೀನಾ ಮತ್ತು ಅಮೆರಿಕ ದಿಕ್ಕೆಟ್ಟು, ಭಾರತ ಜಯ ಸಾಧಿಸಿತ್ತು. ಇಲ್ಲಿ ಇಂದಿರಾ ತೋರಿದ ಚಾಣಾಕ್ಷತನ, ಜಾಣತನ, ಮತ್ತು ಧೀರೋದ್ದಾತ ನಿಲುವುಗಳನ್ನು ಜಗತ್ತು ವಿಸ್ಮಯದಿಂದ ನೋಡಿತ್ತು.
ನೆಹರು ಮನೆತನ, ಮೋತಿಲಾಲರ ಮೊಮ್ಮಗಳು, ಜವಾಹರಲಾಲ್ ಅವರ ಮಗಳು ಎಂಬ ಅಂಶಗಳು ಅವರ ಬೆಳವಣಿಗೆಗೆ ಕಾರಣವಾಗಿದ್ದರೂ ರಾಜಕೀಯವಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಎಲ್ಲರನ್ನೂ ಮತ್ತು ಎಲ್ಲವನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಬೆಳೆದು ‘ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ’ ಅನ್ನುವ ಮಟ್ಟಕ್ಕೆ ಏರಿದ್ದು ಪುರುಷ ರಾಜಕಾರಣದ ವ್ಯವಸ್ಥೆಯ ನಡುವೆ ಅನ್ನುವುದು ಮುಖ್ಯವಾಗುತ್ತದೆ.
ಇದರ ಜೊತೆಗೆ ಚೀನಾ ಅನಗತ್ಯವಾಗಿ ತಗಾದೆ ಮಾಡಿ ಯುದ್ಧಕ್ಕೆ ಬಂದಾಗ, ಚಾಣಾಕ್ಷತನದಿಂದ ನಿಭಾಯಿಸಿ, ಭಾರತಕ್ಕೆ ಗೆಲುವು ತಂದು ಕೊಟ್ಟದ್ದು ಕೂಡಾ ಉಲ್ಲೇಖನೀಯ.
ಈ ನಡುವೆ ರಾಜಕಾರಣದ ಒಳ ಸುಳಿ ಅವರನ್ನು ಸುತ್ತಿಕೊಂಡಿತ್ತು. ರಾಜಕೀಯ ಕಾರಣಗಳಿಗಾಗಿ, 1969 ರಲ್ಲಿ ಅವರನ್ನು ಕಾಂಗ್ರೆಸ್‌ನಿಂದ ಹೊರಹಾಕಲಾಯಿತು. ಅದಕ್ಕೂ ಸೆಡ್ಡು ಹೊಡೆದ ಇವರು “ಹೊಸ” ಕಾಂಗ್ರೆಸ್ ಪಕ್ಷವನ್ನು ರಚಿಸಿದ್ದರು. 1971 ರ ಲೋಕಸಭಾ ಚುನಾವಣೆಯಲ್ಲಿ ಇವರ ಹೊಸ ಗುಂಪು ಭರ್ಜರಿ ಗೆಲುವು ಸಾಧಿಸಿತ್ತು.
ಆನಂತರ, ಪೂರ್ವ ಪಾಕಿಸ್ತಾನ ನಿರ್ಮಾಣ ಕಾರಣಕ್ಕಾಗಿ ಇಂದಿರಾ ತಮ್ಮ ಬಲವನ್ನು ಹೆಚ್ಚಿಸಿಕೊಂಡಿದ್ದರು. 1971ರ ಚುನಾವಣೆಯಲ್ಲಿ ಇಂದಿರಾ ಗೆಲುವು ಆಕ್ರಮ ಎಂಬ ತೀರ್ಪನ್ನು 1975 ರಲ್ಲಿ ನ್ಯಾಯಾಲಯವು ನೀಡುತ್ತದೆ. ಆಗ ಜಯಪ್ರಕಾಶ ನಾರಾಯಣ ಅವರ ಸರಕಾರದ ವಿರುದ್ಧ ಚಳುವಳಿ ಪ್ರಾರಂಭಿಸಿದ್ದರು. ದೇಶದ ಸೈನಿಕರು ಮತ್ತು ಪೊಲೀಸರು ಸರ್ಕಾರದ ವಿರುದ್ದ ನಿಲ್ಲುವಂತೆ ಕರೆ ನೀಡಿದರು. ಇದು ಭಾರತದ ಆಂತರಿಕ ಭದ್ರತೆಗೆ ಭಂಗ ತರುತ್ತದೆ ಎಂಬ ಕಾರಣಕ್ಕೆ ಸಂವಿಧಾನದ ವಿಧಿಗಳನ್ನೇ ಉಪಯೋಗಿಸಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಕಾಳ ಸಂತೆಕೋರರನ್ನು, ಕ್ರಿಮಿನಲ್ ಗಳನ್ನು ಜೈಲಿಗೆ ತಳ್ಳಿದರು. ಆದರೆ ತುರ್ತುಪರಿಸ್ಥಿತಿಯನ್ನು ವಿರೋಧಿಸಿದ ರಾಜಕೀಯ ಪ್ರತಿಪಕ್ಷದ ನಾಯಕರು ಮುಖಂಡರನ್ನೂ ಜೈಲಿಗೆ ತಳ್ಳಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿ, ಜನರು ಇವರ ವಿರುದ್ಧವಾದರು. ಮುಂದಿನ ಚುನಾವಣೆಯಲ್ಲಿ ಇವರನ್ನು ಸೋಲಿಸಿದರು. ಆದರೆ ಮತ್ತೆ ಮೂರು ವರ್ಷಗಳ ಅಂತರದಲ್ಲಿ ನಡೆದ ಚುನಾವಣೆಯಲ್ಲಿ ಇವರನ್ನು ಪ್ರಚಂಡವಾಗಿ ಗೆಲ್ಲಿಸಿದ್ದರು.
1984 ಅಕ್ಟೋಬರ್ 31 ರಂದು ಅವರದೇ ಅಂಗರಕ್ಷಕರ ಗುಂಡಿನ ದಾಳಿಗೆ ಬಲಿಯಾದರು. ಇದಕ್ಕೆ ಕಾರಣ ಖಾಲಿಸ್ತಾನಿ ಉಗ್ರಗಾಮಿಗಳನ್ನು ಮಟ್ಟ ಹಾಕಲು ಇವರು ಪಂಜಾಬಿನ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಮಂದಿರದ ಮೇಲೆ ದಾಳಿ ಮಾಡಿಸಿದ್ದರು. ಇದರಿಂದ ಆಕ್ರೋಶಗೊಂಡ ಸಿಖ್ ಆಗಿದ್ದ ಇವರ ಅಂಗರಕ್ಷರೇ ಇವರನ್ನು ಕೊಂದಿದ್ದರು.
ಪುರುಷ ಪ್ರಧಾನ ಅಧಿಕಾರ ರಾಜಕಾರಣ ವ್ಯವಸ್ಥೆಯ ನಡುವೆ ಇಂದಿರಾ ಗಾಂಧಿಯವರ ಸಂಪುಟದ ಏಕೈಕ ಗಂಡಸು ಇಂದಿರಾ ಆಗಿದ್ದರು ಎನ್ನುವ ವಿಶೇಷಣ ಇವರ ಜೀವನದ ಎಲ್ಲಾ ತಪ್ಪು ಒಪ್ಪುಗಳನ್ನ ಕಥೆಯನ್ನು ಅರ್ಥ ಮಾಡಿಸುತ್ತದೆ. ಇವುಗಳೆಲ್ಲದರ ನಡುವೆ ಅವರ ಆಡಳಿತ ದೌರ್ಬಲ್ಯ, ವೈಯಕ್ತಿಕ ವಿಷಯಗಳು, ಮಾಡಿರಬಹುದಾದ ರಾಜಕೀಯ ತಪ್ಪುಗಳು ಅವರ ಜೊತೆಗೆ ಇರುತ್ತದೆ ಕೂಡಾ. ಅವರ ಕುರಿತು ವಿಶೇಷವಾಗಿ ಆರ್ ಎಸ್ ಎಸ್ ಮತ್ತು ಬಿಜೆಪಿ ಪರಿವಾರ ಭಲಂ ಭಲಂ ಅಭ್ಯಾಸ ಭಲಂ ಅನ್ನುವಂತೆ ಅವರ ಬಗ್ಗೆ ಇಲ್ಲದ ಕಥೆಗಳನ್ನು ಹೇಳುತ್ತಲೇ ಹೋಗುತ್ತಾರೆ. ವಾಜಪೇಯಿ ಮತ್ತು ಮೋದಿಯವರ ಬಿಜೆಪಿ ಸರಕಾರ, ಜನತಾ ಪರಿವಾರ ( ಬಿಜೆಪಿ ಸಮ್ಮಿಶ್ರದ ) ಸುಮಾರು ಇಪ್ಪತ್ತು ವರ್ಷಗಳ ಕಾಲ ಆಡಳಿತ ಮಾಡಿದ್ದರೂ ಅವರ ಕೊಲೆಯ ವರದಿ ಬಂದಿಲ್ಲ, ಇವರ ಕೊಲೆಯ ವರದಿ ಬಹಿರಂಗವಾಗಿಲ್ಲ, ಆ ದಾಖಲೆ ಹಾಗಿತ್ತು ಈ ದಾಖಲೆ ಹೀಗಿತ್ತು ಎಂಬ ಕಾಗಕ್ಕ ಗುಬ್ಬಕ್ಕನ ಕಥೆ ಹೇಳುತ್ತಲೇ ಇದ್ದಾರೆ. ಅಂತಹ ಐತಿಹಾಸಿಕ ರಹಸ್ಯಗಳನ್ನು ಬಹಿರಂಗ ಪಡಿಸಲು ಇಪ್ಪತ್ತು ವರ್ಷಗಳ ಕಾಲಾವಕಾಶ ಸಾಲದೆ ಅನ್ನುವ ಪ್ರಶ್ನೆಗೂ ಅವರ ಬಳಿ ಉತ್ತರವಿಲ್ಲ. ಯಾಕೆಂದರೆ, ಅವರಿಗೆ ಐಕಾನ್ ಆಗಬಲ್ಲ ಐತಿಹಾಸಿಕ ನಾಯಕನಿಲ್ಲ. ಆದ್ದರಿಂದ ಉಳಿದವರಿಗೆ ಐಕಾನ್ ಆಗಿರುವ ನಾಯಕರ ತೇಜೋವಧೆ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ನೆಹರೂ ಅವರಿಂದ ಪ್ರಾರಂಭಿಸಿ ಮನಮೋಹನ್ ಸಿಂಗ್ ಅವರ ತನಕ ಎಲ್ಲರೂ ಪ್ರಧಾನಿಗಳಾಗಿದ್ದು, ಅವರವರ ಕಾಲಘಟ್ಟ, ಪರಿಸ್ಥಿತಿ ಮತ್ತು ಅವರವರ ಚಿಂತನೆ ವ್ಯಕ್ತಿತ್ವಕ್ಕೆ ಪೂರಕವಾಗಿ ಕೆಲಸ ಮಾಡಿದ್ದಾರೆ. ತಪ್ಪು ಒಪ್ಪುಗಳ ಜೊತೆಗೆ ದೀರ್ಘಕಾಲದ ತಲೆಮಾರುಗಳು ನಿರ್ಮಿಸಿದ ದಾರಿಯಲ್ಲಿ ನಾವೂ ಹೋಗುತ್ತಿದ್ದೇವೆ, ನಾವೇ ಏಕಾಏಕಿ ನಿರ್ಮಿಸಿದ ಹೆದ್ದಾರಿ ಇದಲ್ಲ. ನಮ್ಮ ನಡಿಗೆಯ ಇತಿಹಾಸ ಹೇಗಿರುತ್ತದೆ ಎಂಬುದಕ್ಕೆ ಕಾಯಬೇಕಿಲ್ಲ. ಅದು ವರ್ತಮಾನದ ನಮ್ಮ ಕ್ರಿಯೆಯ ಪ್ರತಿಫಲನವೇ ಆಗಿರುತ್ತದೆ ಎಂಬ ಪ್ರಜ್ಞೆ ಎಚ್ಚರವಾಗಿದ್ದರೆ ಸಾಕು.
ಎಂ ಜಿ ಹೆಗಡೆ
ಲೇಖಕರು, ಅಂಕಣಕಾರರು
ಇದನ್ನೂ ಓದಿ- ಇಂದಿನಾಚೆಯ “ಇಂದಿರಾ ಗಾಂಧಿ”