ಇಂದಿರಾ ನೇತೃತ್ವದ ಕಾಂಗ್ರೆಸ್ ಬಡಜನರಿಗೆ ಆಸ್ತಿಯ ಒಡೆತನ, ಆಹಾರ ಭದ್ರತೆ, ಮೀಸಲಾತಿ, ಮುಂತಾದ ಸಾಮಾಜಿಕ ಸುರಕ್ಷತೆಯ ಕಾರ್ಯಕ್ರಮ ರೂಪಿಸಿ ಜನರ ಕೈಗೆ ಸಂಪನ್ಮೂಲ ಬರುವ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದ ಸಂಪತ್ತು ಹಂಚಿಕೆಯಾಗುವ ಕಾರ್ಯಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯಿತು ಎಂದರೂ ತಪ್ಪಾಗಲಾರದು – ಡಾ.ಉದಯ ಕುಮಾರ ಇರ್ವತ್ತೂರು. ವಿಶ್ರಾಂತ ಪ್ರಾಂಶುಪಾಲರು.
ನನಗಿನ್ನೂ ನೆನಪಿದೆ, 1984 ನೇ ಇಸವಿ ಅಕ್ಟೋಬರ್ 31, ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯಾಟ ಅದಾಗಲೇ ರೋಚಕ ಹಂತ ತಲುಪಿದ್ದು, ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕ ವಿವರಣೆ ಇದ್ದಕ್ಕಿದ್ದಂತೆ ನಿಂತು ಹೋಗಿ, ಶೋಕ ರಾಗ ಬಿತ್ತರಗೊಳ್ಳತೊಡಗಿತು. ದೇಶದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಅಂಗರಕ್ಷಕರಿಂದಲೇ ಗುಂಡಿನ ದಾಳಿಗೊಳಗಾಗಿ ಜೀವನ್ಮರಣದ ಸ್ಥಿತಿಯಲ್ಲಿರುವ ಅವರನ್ನು ಅಖಿಲ ಭಾರತ ವೈದ್ಯಕೀಯ ಸಂಸ್ಥೆಗೆ ಒಯ್ಯಲಾಗಿದ್ದು, ವೈದ್ಯರ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ ಎನ್ನುವ ಸುದ್ದಿಯೂ ಬಿತ್ತರವಾಯಿತು. ರಾಜಕೀಯ ಮರುಹುಟ್ಟು ಪಡೆದು ಮತ್ತೆ ದೇಶದ ಪ್ರಧಾನಮಂತ್ರಿಯಾದ ಶ್ರೀಮತಿ ಇಂದಿರಾಗಾಂಧಿಯವರು ತನ್ನದೇ ಮನೆಯಂಗಳದಲ್ಲಿ ತನ್ನದೇ ಅಂಗರಕ್ಷಕರಿಂದ ಹತ್ಯೆಗೊಳಗಾಗಿ ಅಂತ್ಯ ಕಂಡ ಘಟನೆ ದೇಶಾದ್ಯಂತ ದಿಗ್ಭ್ರಮೆ ಮೂಡಿಸಿತು. ಆ ಕ್ಷಣದವರೆಗೂ ಯಾರೋ ಆಗಿದ್ದ ಇಂದಿರಾ ಗಾಂಧಿ ನನ್ನ ಹತ್ತಿರದ ಬಂಧುವಾಗಿ ಕಾಣತೊಡಗಿದರು, ಕಾಡತೊಡಗಿದರು.
ಇಂದಿರಾ ಗಾಂಧಿಯವರನ್ನು ಮತ್ತು ಅವರ ಪಕ್ಷವನ್ನು ಬಹುಪಾಲು ವೈಯಕ್ತಿಕ ಅನುಭವದ ಹಿನ್ನಲೆ ಮತ್ತು ಸೀಮಿತ ತಿಳುವಳಿಕೆಯ ಕಾರಣಕ್ಕೆ ವಿರೋಧಿಸುತ್ತಾ ಬಂದಿದ್ದ ನನ್ನಂತಹವನಿಗೂ ಆಕೆಯ ಸಾವು ಆಘಾತಕಾರಿಯಾಗಿಯೇ ಕಂಡಿತು. ಈ ದೇಶದ ರಾಜಕೀಯದಲ್ಲಿ 18 ವರ್ಷಗಳ ಕಾಲ ಮಹತ್ವದ ಪಾತ್ರವನ್ನು ನಿರ್ವಹಿಸಿದ ದಕ್ಷ ನಾಯಕಿಯೊಬ್ಬಳ ಈ ರೀತಿಯ ನಿರ್ಗಮನ ಅನಿರೀಕ್ಷಿತವಾಗಿತ್ತು. ಘಟನೆ ನಡೆಯುವ ವೇಳೆ ಬಂಗಾಳದ ಭೇಟಿಯಲ್ಲಿದ್ದ ಇಂದಿರಾ ಅವರ ಮಗ ರಾಜೀವ್ ಗಾಂಧಿ ಸುದ್ದಿ ತಿಳಿದಾಕ್ಷಣ ದೆಹಲಿಗೆ ಧಾವಿಸಿದರು. ಅಕಾಲಿಕ ನಿಧನದಿಂದ ತೆರವಾದ ಪ್ರಧಾನ ಮಂತ್ರಿ ಸ್ಥಾನಕ್ಕೆ ಸಚಿವ ಸಂಪುಟದ ಹಿರಿಯ ಸಚಿವ ಮತ್ತು ಶ್ರೀಮತಿ ಇಂದಿರಾಗಾಂಧಿಯವರ ನಂಬಿಕಸ್ಥರೂ ಆಗಿದ್ದ ಪ್ರಣವ್ ಮುಖರ್ಜಿಯವರು ತಾತ್ಕಾಲಿಕವಾಗಿ ಪ್ರಧಾನಮಂತ್ರಿಯಾಗಬಹುದು ಎನ್ನುವ ಎಲ್ಲರ ನಿರೀಕ್ಷೆ ಹುಸಿಯಾಯಿತು. ಇಂದಿರಾ ಅವರ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಮೊದಲ ಮಗ ಸಂಜಯ್ ಗಾಂಧಿ ಅವರ ನಿಧನಾನಂತರ ಒಲ್ಲದ ಮನಸ್ಸಿನಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದ ಶ್ರೀ ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ನಂತರ ನಡೆದ ರಾಜಕೀಯ ವಿದ್ಯಮಾನಗಳು ಎಲ್ಲರಿಗೂ ತಿಳಿದಿದ್ದೇ.
ಸ್ವರ್ಣಮಂದಿರದಲ್ಲಿ ನಡೆಸಿದ ‘ಬ್ಲೂ ಸ್ಟಾರ್’ ಆಪರೇಷನ್ನ ಪ್ರತಿಫಲವಾಗಿ ಸಿಖ್ಖರ ಮನಸ್ಸುಗಳಲ್ಲಿ ಉತ್ಪನ್ನವಾದ ಇಂದಿರಾ ಮತ್ತು ಕಾಂಗ್ರೆಸ್ ಬಗೆಗಿನ ದ್ವೇಷ, ಕಾಂಗ್ರೆಸ್ ಪಕ್ಷದ ಪ್ರಮುಖ ಆಧಾರಸ್ತಂಭ ಮತ್ತು ದೇಶದ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಅವರನ್ನೇ ಬಲಿ ತೆಗೆದುಕೊಳ್ಳಬಹುದು ಎಂದು ಯಾರೂ ಊಹಿಸಿರದ ಸಂಗತಿಯಾಗಿತ್ತು. ಒಂದು ಮೂಲದ ಪ್ರಕಾರ ಅಂಗರಕ್ಷಕರಾಗಿದ್ದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರನ್ನು ಅಂಗರಕ್ಷಕರ ಹುದ್ದೆಯಿಂದ ಬದಲಾಯಿಸುವಂತೆ ಗುಪ್ತಚರ ಇಲಾಖೆ ನೀಡಿದ ಸಲಹೆಗಳನ್ನು ಸ್ವತಃ ಇಂದಿರಾಗಾಂಧಿಯವರು ನಿರಾಕರಿಸಿದ್ದರಂತೆ. ದೇಶದ ರಾಜಕೀಯದ ದಿಕ್ಕು ಬದಲಿಸುವ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವದ ಗಣ್ಯ ನಾಯಕರೂ ಹುಬ್ಬೇರಿಸುವಂತಹ ಮಹತ್ವದ ರಾಜಕೀಯ ತೀರ್ಮಾನಗಳನ್ನು ತೆಗೆದುಕೊಂಡಿದ್ದ ಇಂದಿರಾಗಾಂಧಿಯವರು ತನ್ನ ವೈಯಕ್ತಿಕ ಸುರಕ್ಷೆಯ ಕುರಿತು ಬಂದ ಗುಪ್ತಚರ ಮಾಹಿತಿಗಳನ್ನು ಕಡೆಗಣಿಸಿದ ನಿರ್ಧಾರಕ್ಕೆ ತನ್ನ ಜೀವದ ಬೆಲೆಯನ್ನೇ ತೆರಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ.
ಇಂದಿರಾ ಗಾಂಧಿಯವರ ಹತ್ಯೆಗೆ ಪ್ರತೀಕಾರವಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಮತ್ತು ಇಂದಿರಾ ಅವರ ಅಭಿಮಾನಿಗಳು ನಡೆಸಿದ ಸಿಖ್ಖರ ವಿರುದ್ಧದ ಹಿಂಸೆ, ಇತಿಹಾಸದ ಪುಟಗಳಲ್ಲಿ ಇಂದಿರಾ ಹತ್ಯೆಯ ತೀವ್ರತೆಯನ್ನು ಕಡಿಮೆ ಮಾಡಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥವಾದ, ದೂರದೃಷ್ಟಿಯುಳ್ಳ ನಾಯಕತ್ವವಿದ್ದಿದ್ದರೆ ಇಂತಹ ದುರಂತಗಳನ್ನು ಒಂದೋ ತಡೆಯಬಹುದಾಗಿತ್ತು ಅಥವಾ ಕನಿಷ್ಠ ಅದರ ಕ್ರೌರ್ಯವನ್ನಾದರೂ ನಿಯಂತ್ರಿಸಬಹುದಿತ್ತೋ ಏನೋ? ಈಗ ಅದೆಲ್ಲವೂ ಅಂತೆ ಕಂತೆಯ ನಿಷ್ಪಲ, ನಿರುತ್ತರ ಪುರಾಣ. ಆದರೆ ಈ ಘಟನೆ ವಿಶ್ವಕ್ಕೆ ನೀಡಿದ ಸಂದೇಶ ಮಾತ್ರ ಸಾರ್ವಕಾಲಿಕ. ರಾಜಕೀಯ ನಿರ್ಧಾರಗಳಲ್ಲಿ ಎಡವಿದಾಗ ಕೆಲವೊಂದು ವೇಳೆ ಬಹಳ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಅಂತಹ ಬೆಲೆಯನ್ನು ತೆರುವ ಹಂತದಲ್ಲಿ ಜನಸಾಮಾನ್ಯರಿಂದ, ನಿರಪರಾಧಿಗಳಿಂದ ಅದನ್ನು ವಸೂಲು ಮಾಡುವ ಅಂದಾಭಿಮಾನಿಗಳ ಕ್ರೌರ್ಯ ಹಿಂಸೆಯ, ದ್ವೇಷದ ಇನ್ನಷ್ಟು ಬೀಜಗಳನ್ನು ಬಿತ್ತುವ ಕೆಲಸವನ್ನು ಮಾಡುವುದು ಬಿಟ್ಟರೆ ಬೇರೆನೂ ಮಾಡುವುದಿಲ್ಲ ಎನ್ನುವುದೇ ಆ ಸಂದೇಶವಾಗಿದೆ.
ಈ ದಿಸೆಯಲ್ಲಿ ರಾಜೀವ್ ಗಾಂಧಿಯವರ ಹತ್ಯೆ ನಡೆಸಿದ ಅಪರಾಧಿಗಳನ್ನು ರಾಹುಲ್ ಮತ್ತು ಪ್ರಿಯಾಂಕ ನಡೆಸಿಕೊಂಡ ರೀತಿ, ವಯಸ್ಸಿಗೆ ಮೀರಿದ ಪ್ರೌಢಿಮೆ, ಹಾಗೂ ಅಹಿಂಸೆ ಮತ್ತು ಸತ್ಯದ ಬಗೆಗಿನ ಅವರ ನಿಷ್ಠೆಗೆ ನಿದರ್ಶನವಾಗಿದೆ. ರಾಜಕೀಯ ಬಿಟ್ಟರೆ ಬೇರೇನನ್ನೂ ತಿಳಿಯುವ, ತಿಳಿಸುವ ಅಭ್ಯಾಸದಿಂದ ಅಂತರವುಳಿಸಿಕೊಂಡ ಬಹುಪಾಲು ಮಾಧ್ಯಮಗಳಿಗೆ ಇದರ ಮಹತ್ವ ತಿಳಿಯದಿರುವುದು ಕಾಲದ ವ್ಯಂಗ್ಯವೇ ಸರಿ. ಒಂದು ವೇಳೆ ಗಾಂಧೀಯವರ ಹತ್ಯೆ ನಡೆಸಿದ್ದ ಗೋಡ್ಸೆಯ ಮೇಲೆ ಮತ್ತು ಅವನ ಸಮುದಾಯದ ಮೇಲೆ ಇದೇ ರೀತಿಯ ಹಿಂಸೆ ನಡೆದಿದ್ದರೆ ಏನಾಗಬಹುದಿತ್ತು?. ದೇಶ ವಿಭಜನೆಯಾಗಿ, ಎರಡೂ ಕಡೆ ಅನ್ಯಾಯವಾಗಿ ಅಸಹಾಯಕ ಮುಗ್ಧರ ಹತ್ಯೆ ನಡೆಯುವ ಸಂದರ್ಭದಲ್ಲಿ ಪ್ರತೀಕಾರದ ಮಾತುಗಳು ಬಂದಾಗ ನಮ್ಮ ರಾಷ್ಟ್ರ ನಾಯಕರು ತಾವು ಅನುಭವಿಸುತ್ತಿದ್ದ ಎಲ್ಲ ಸಂಕಟ ನೋವುಗಳನ್ನು ನುಂಗಿ, ಪ್ರತೀಕಾರದ ಅತಿರೇಕಗಳಿಗೆ ಅವಕಾಶ ನೀಡದೆ ಅದನ್ನು ನಿಯಂತ್ರಿಸಿ ಮುನ್ನಡೆಯುವ ಬಹಳ ವಿವೇಕದ ನಿರ್ಧಾರ ಕೈಗೊಂಡರು. ಒಂದು ವೇಳೆ ಅಂತಹದ್ದು ನಡೆದಿದ್ದರೆ ನಾವು ಇನ್ನೊಂದು ಜ್ವಾಲಾಮುಖಿಯ ಮೇಲಿರುವ ದೇಶವಾಗುತ್ತಿದ್ದೆವೋ ಏನೋ ಹೇಳಲಾಗದು. ಇಂತಹ ಘಟನೆಗಳೆಲ್ಲಾ ನಾವು ಇಂತಹ ಸಂದಿಗ್ಧದ ಸ್ಥಿತಿಗಳಲ್ಲಿ ಏನು ಮಾಡಬಹುದು, ಮಾಡಬೇಕಿದೆ ಎಂದು ನಿರ್ಧರಿಸಲು ಆಹಾರ, ಆಕರ, ಅರಿವು ನೀಡಬಹುದಾಗಿದೆ.
ಸ್ವಾತಂತ್ರ್ಯ ಚಳುವಳಿಯ ಪರಿಸರ ಮತ್ತು ಪ್ರಭಾವಗಳ ಪರಿಣಾಮದಿಂದ ವಿಶಿಷ್ಠ ಅನುಭವವನ್ನು ಸಂಪಾದಿಸಿದ ನೆಹರೂ ಅವರ ಒಬ್ಬಳೇ ಮಗಳಾದ ‘ಇಂದಿರಾ’ ತಂದೆಯ ಸಮೀಪ ಇದ್ದುಕೊಂಡು ಎಷ್ಟೆಲ್ಲಾ ಕಲಿತಿದ್ದರು ಎನ್ನುವುದರ ಅಂದಾಜು ಯಾರಿಗೂ ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ “ಗೂಂಗಿ ಗುಡಿಯಾ” ಳನ್ನು (ಮೂಕ ಆಟಿಕೆ- ಕಾಂಗ್ರೆಸ್ ನ ಬಹುತೇಕ ಹಿರಿಯರು ಇಂದಿರಾ ಅವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸ ಬಹುದು ಎನ್ನುವ ಆಲೋಚನೆಯಿಂದ ಅಧಿಕಾರಕ್ಕೆ ತರಲು ಸಹಕರಿಸಿದರು ಎನ್ನುವ ಅಭಿಪ್ರಾಯವೂ ಇದೆ) ಲಾಲ್ ಬಹದೂರ್ ಶಾಸ್ತ್ರಿಯವರ ನಂತರ ಪ್ರಧಾನಿ ಪಟ್ಟಕ್ಕೆ ಆರಿಸುತ್ತಿರಲಿಲ್ಲವೇನೋ? ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸಹಜವಾಗಿಯೇ ಇಂದಿರಾ ಅವರು ತಂದೆಯ ಆಶಯಗಳಿಗೆ ತಕ್ಕಂತೆ ಬಹಳಷ್ಟು ಜನಪರ ನಿರ್ಧಾರಗಳನ್ನು ತೆಗೆದುಕೊಂಡರೂ ವಿರೋಧ ಪಕ್ಷದವರ ಟೀಕೆಗಳನ್ನು, ತನ್ನ ರಾಜಕೀಯ ನಿರ್ಧಾರಗಳಲ್ಲಿರುವ ಮಿತಿಗಳನ್ನು ಮತ್ತು ಅಧಿಕಾರ ಕೇಂದ್ರದ ಸುತ್ತ ಸೇರಿರುವ ಹೊಗಳು ಭಟರ ಅಭಿಪ್ರಾಯದ ಆಚೆ ಉಳಿದಿರಬಹುದಾದ ವಾಸ್ತವ ನೋಡುವ ಮತ್ತು ಅವುಗಳ ಗುಣಾವಗುಣಗಳನ್ನು ಸಮರ್ಥವಾಗಿ ಗ್ರಹಿಸುವಲ್ಲಿ ದೊಡ್ಡ ಯಶಸ್ಸು ಪಡೆಯದಿರುವುದು ಅವರ ಸಾಧನೆಯನ್ನು ಮುಕ್ಕಾಗಿಸಿದುವು. ಚುನಾವಣಾ ಮೂಲಕ ಬಂದ ರಾಜಕೀಯ ತೀರ್ಪು, ಮತ್ತು ಅದರ ಕುರಿತ ನ್ಯಾಯಾಂಗದ ತೀರ್ಪು ತನ್ನ ನಿರೀಕ್ಷೆಗೆ ವಿರುದ್ಧವಾಗಿ ಬಂದಾಗ ಅದನ್ನು ಅರಗಿಸಿಕೊಳ್ಳುವ ಪ್ರೌಢಿಮೆ ಇಲ್ಲದೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ರಾಜಕೀಯ ವಿರೋಧಿಗಳನ್ನು ಪತ್ರಕರ್ತರನ್ನು ಜೈಲಿಗಟ್ಟುವ ಮತ್ತು ದಮನಿಸುವ ಕೆಲಸಕ್ಕೂ ಇಂದಿರಾ ಗಾಂಧಿಯವರು ಮುಂದಾದರು. ಜನರ ಪ್ರತಿರೋಧ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚಸ್ಸು ಉಳಿಸಿಕೊಳ್ಳಲು ಇಂದಿರಾ ಗಾಂಧಿ 1977ರಲ್ಲಿ ತುರ್ತುಪರಿಸ್ಥಿತಿ ಕೊನೆಗೊಳಿಸಿ ಚುನಾವಣೆ ನಡೆಸಿದರು.
ಇಂದಿರಾ ಅವರ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳ ಪರಿಣಾಮವಾಗಿ 1977ರಲ್ಲಿ ದೇಶದಲ್ಲಿ ಮೊದಲ ಭಾರಿಗೆ ಕೇಂದ್ರದಲ್ಲಿ ಜನತಾ ಪಕ್ಷದ (ಕಾಂಗ್ರೆಸ್ಸೇತರ ಪಕ್ಷದ) ಸರಕಾರ ರಚನೆಯಾಯಿತು. ಆದರೆ ಜನರ ಮತದ ಮಹತ್ವವನ್ನೇ ತಿಳಿಯದೆ ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಸರಕಾರವನ್ನೇ ಬಲಿಕೊಟ್ಟ ಜನತಾ ನಾಯಕರು ಜನರು ಕೊಟ್ಟ ಕುದುರೆಯನ್ನು ಏರಲಾರದೇ ಮರಳಿ ಮನೆಗೆ ನಡೆಯುವಂತೆ ಆಯಿತು. ಆ ನಂತರ ಸಾರ್ವತ್ರಿಕ ಚುನಾವಣೆ ಎದುರಿಸುವ ಧೈರ್ಯ ಮಾಡಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಿದರೂ, ಮೂರೂವರೆ ವರ್ಷದಲ್ಲಿ ಮತ್ತೆ ಜನಮತದ ಮೂಲಕ ಅಧಿಕಾರಕ್ಕೆ ಏರಿದ್ದು ಇತಿಹಾಸ.
ಭಾರತದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯೋ ವಿಚಿತ್ರ ಮತ್ತು ವಿಶಿಷ್ಟ. ನಾವು ಪ್ರಜಾಪ್ರಭುತ್ವಕ್ಕೆ ಯೋಗ್ಯರೇ ಎನ್ನುವ ಪ್ರಶ್ನೆಗಳು ಕೆಲವೊಂದು ಭಾರಿ ನಮ್ಮನ್ನು ಕಾಡುವುದಿದೆ. ಅಂತಹ ಸಂದರ್ಭಗಳಲ್ಲಿ ಇಂದಿರಾ ಗಾಂಧಿಯವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ ಮತ್ತು ಏರಿಸಿದ, ಕರ್ನಾಟಕದಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸಿದ ಮತ್ತು ಸೋಲಿಸಿದ ಹಾಗೆಯೇ ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಗಳನ್ನು ಅಧಿಕಾರಕ್ಕೆ ಏರಿಸಿದ ಮತ್ತು ಇಳಿಸಿದ ಉದಾಹರಣೆಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವವನ್ನು ಭಾರತದ ಸಾಮಾನ್ಯ ಜನ ಅರಿತುಕೊಂಡಿದ್ದಾರೆ ಎನ್ನುವ ಸಂದೇಶ ಬಹಳ ಸ್ಪಷ್ಟವಾಗಿಯೇ ತಿಳಿಯುತ್ತದೆ. ಇದರಲ್ಲಿಯೂ ಬಹು ಸಂಸ್ಕೃತಿಯ, ಬಹುಭಾಷೆಯ, ಬಹುವಿಧಗಳ ಹದವಾದ ಮಿಶ್ರಣವಿದೆ, ಪ್ರಾಯಶಃ ‘ಭಾರತೀಯ ಪ್ರಜಾಪ್ರಭುತ್ವವೆನ್ನುವ’ ಪ್ರಜಾಪ್ರಭುತ್ವದ ವಿಶಿಷ್ಟ ಮಾದರಿಯೊಂದು ಪಕ್ಷವಾಗುತ್ತಿರಬಹುದೇ? ರಾಜಕೀಯ ಪಂಡಿತರೇ ಉತ್ತರಿಸಬೇಕು.
ನಾಳೆ ಇಂದಿರಾಗಾಂಧಿಯವರ ಪುಣ್ಯತಿಥಿ. ಅವರ ನಿರ್ಗಮನದ ನಂತರ ನಲ್ವತ್ತು ವರ್ಷಗಳು ಉರುಳಿ ಹೋಗಿವೆ. ಇಂತಹ ಹೊತ್ತಲ್ಲಿ ಹಿಂತಿರುಗಿ ನೋಡಿದರೆ, ಅಟಲ್ ಬಿಹಾರಿ ವಾಜಪೇಯಿಯವರು, ಬಾಂಗ್ಲಾಯುದ್ಧದ ವಿಜಯದ ಸಂದರ್ಭದಲ್ಲಿ ಇಂದಿರಾ ಅವರನ್ನು ಕುರಿತು “ದುರ್ಗೆಯಂತೆ” ಎನ್ನುವ ಮೆಚ್ಚುಗೆಯ ನುಡಿಗಳು ನೆನಪಾಗುತ್ತವೆ. ಬಹುತೇಕ ಇಡೀ ವಿಶ್ವವೇ ಪಾಕಿಸ್ತಾನದ ಜೊತೆಗಿದ್ದರೂ, ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಿಸಿ ಕೇವಲ ಎರಡು ವಾರಗಳಲ್ಲಿ ನಿರ್ಣಾಯಕ ಫಲಿತಾಂಶ ಪಡೆದ ಶ್ರೀಮತಿ ಇಂದಿರಾ ಗಾಂಧಿ ಖಂಡಿತವಾಗಿಯೂ “ಗಟ್ಟಿ ಕಾಳು”.
ಲಾಗಾಯ್ತಿನಿಂದಲೂ ವಿಶ್ವದಲ್ಲಿ ಮುಕ್ತ ಆರ್ಥಿಕ ನೀತಿಯನ್ನು ಬಲವಾಗಿ ಪ್ರತಿಷ್ಠಾಪಿಸಲು ಸದಾ ಕಾರ್ಯಮಗ್ನವಾಗಿರುವ ಅಮೇರಿಕಾ ತನ್ನ ನೀತಿಯ ಅನುಷ್ಠಾನಕ್ಕಾಗಿ ಮಾಡದ ತಂತ್ರವಿಲ್ಲ, ಆಡದ ಆಟವಿಲ್ಲ. ಇವರ ಪರಿಣಾಮವನ್ನು ಬಹುತೇಕ ಜಗತ್ತಿನ ಬಡ ದೇಶಗಳು ಅನುಭವಿಸಿವೆ, ಅನುಭವಿಸುತ್ತಲೂ ಇವೆ. ಅಂತಹ ಅಮೇರಿಕವನ್ನು ಎದುರಿಸುವ ಎದೆಗಾರಿಕೆ ತೋರಿದವರು ಇಂದಿರಾ. ಅಮೇರಿಕಾ ಉದಾರವಾಗಿ ನೀಡುತ್ತಿದ್ದ ಗೋಧಿ, ಅಡುಗೆ ಎಣ್ಣೆಯ ಔದಾರ್ಯದ ಉರುಳಿಂದ ಬಿಡುಗಡೆಯಾಗಲು ಹಸಿರುಕ್ರಾಂತಿ, ಶ್ವೇತಕ್ರಾಂತಿಯಂಥಹ ನಿರ್ಧಾರಗಳು ಈ ದೇಶದ ಜನರ ಹಸಿವನ್ನು ನೀಗಿಸಲು ಸಾಧ್ಯವಾಗಿದ್ದರೆ ಇದರ ಹಿಂದಿನ ರಾಜಕೀಯ ನಿರ್ಧಾರಗಳು ಬೇಡಿದ ಬೆಲೆಯನ್ನು ನಾವು ಮರೆಯುವ ಹಾಗಿಲ್ಲ. ಬ್ಯಾಂಕುಗಳಿಗೆ ಮತ್ತು ದೇಗುಲಗಳಿಗೆ ಭಾರತದ ಕೆಳವರ್ಗದ ಜನರಿಗೆ ಪ್ರವೇಶವೇ ಇಲ್ಲದಂತಹ ಸ್ಥಿತಿ ಒಂದು ಕಾಲದಲ್ಲಿ ಇತ್ತು ಎನ್ನುವ ನೆನಪು ಈಗಿನ ಯುವ ಜನಾಂಗಕ್ಕೆ ಗೊತ್ತಿಲ್ಲ. ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವ ನಿರ್ಧಾರ ಕೈಗೊಂಡು ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿದ ಇಂದಿರಾಗಾಂಧಿಯವರನ್ನು ಈ ಕಾರಣಕ್ಕಾಗಿ ಮರೆಯುವ ಹಾಗಿಲ್ಲ.
ತುರ್ತು ಪರಿಸ್ಥಿತಿಯ ಕಾಲದಲ್ಲಿ ನಡೆದ ವಿಪರೀತಗಳ ಬಗ್ಗೆ ಈ ಲೇಖನದಲ್ಲಿ ಈಗಾಗಲೇ ಹೇಳಿದ್ದೇನೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಜಾರಿಯಾದ ಇಪ್ಪತ್ತು ಅಂಶಗಳ ಆರ್ಥಿಕ ಕಾರ್ಯಕ್ರಮಗಳು ಬಡಜನರ ಬದುಕಿಗೆ ಇಂಬು ನೀಡಿದ್ದು ಮಾತ್ರ ಸೂರ್ಯ ಸ್ಪಷ್ಟ. ಜೀತದಾಳುಗಳನ್ನು ಬಿಡುಗಡೆ ಮಾಡುವ ಮಾನವೀಯ ಕಾರ್ಯವನ್ನು ಜೀವ ಪರವಾಗಿರುವ ಯಾರಾದರೂ ಹೇಗೆ ಮರೆಯಬಹುದು? ಇದರ ಮಹತ್ವ ಬಹುಪಾಲು ಜನರಿಗೆ ತಿಳಿಯದಿರಲು ಪ್ರಮುಖ ಕಾರಣ ಇದರಿಂದ ಉಪಕೃತರಾದ ಜನರಿಗೆ ಮಾತಿಲ್ಲ. ಅವರೇನಿದ್ದರೂ ಕಾಯಕ ಮಾಡುವವರು ಮಾತನ್ನೇ ಬಂಡವಾಳ ಮಾಡಿಕೊಳ್ಳುವವರ ಮಧ್ಯೆ ಅವರು ಕಾಣದಿರುವುದು ದುರಂತವೇ ಸರಿ. ಸರಕಾರೀ ಒಡೆತನದ ಬ್ಯಾಂಕುಗಳ ಮೂಲಕ ಜಾರಿಯಾದ ಶಿಕ್ಷಣಕ್ಕಾಗಿ ಸಾಲ ಯೋಜನೆ ಇಪ್ಪತ್ತು ಅಂಶಗಳ ಆರ್ಥಿಕ ಕಾರ್ಯಕ್ರಮಗಳಲ್ಲಿ ಒಂದು. ಇದರಿಂದ ನನ್ನನ್ನೂ ಸೇರಿದಂತೆ ಲಕ್ಷಾಂತರ ಜನರು ಪ್ರಯೋಜನ ಪಡೆದು ಬದುಕು ಕಟ್ಟಿಕೊಂಡಿದ್ದಾರೆ.
ಕಾಂಗ್ರೆಸ್ ವಿರುದ್ದ ಲೋಕ ನಾಯಕ ಜಯಪ್ರಕಾಶ ನಾರಾಯಣ್ ಅವರ ನಾಯಕತ್ವದಲ್ಲಿ ತುರ್ತು ಪರಿಸ್ಥಿತಿಯ ಕಾರಣಕ್ಕೆ ಎಲ್ಲಾ ಪಕ್ಷಗಳೂ ವಿಲೀನವಾಗಿ “ಜನತಾ ಪಕ್ಷ” ಅಸ್ತಿತ್ವಕ್ಕೆ ಬಂದಿತು. ಅದುವರೆಗೂ ಆರೆಸ್ಸೆಸ್ ಜತೆಗಿನ ನಂಟಿನ ಕಾರಣಕ್ಕೆ ಗಾಂಧಿ ಹತ್ಯೆಯ ಸೂತಕ ಅಂಟಿಸಿಕೊಂಡಿದ್ದ ಭಾರತೀಯ ಜನತಾ ಪಕ್ಷ ಮುಖ್ಯವಾಹಿನಿಗೆ ಬರಲು ತುರ್ತು ಪರಿಸ್ಥಿತಿಯೇ ಕಾರಣ. ಆ ನಂತರದಲ್ಲಿ ಜನತಾ ಪಕ್ಷದಿಂದ ಹೊರಬಂದ ಮೂಲ ಜನಸಂಘದ ನಾಯಕರನ್ನು ಸೇರಿಸಿ “ಭಾರತೀಯ ಜನತಾ ಪಕ್ಷ” ಹುಟ್ಟಿಕೊಂಡಿದೆ. ಆದ್ದರಿಂದ ಭಾರತೀಯ ಜನತಾ ಪಕ್ಷದ ಹುಟ್ಟಿಗೆ ಪರೋಕ್ಷವಾಗಿ ಇಂದಿರಾ ಅವರ ಕೊಡುಗೆಯೂ ಇದೆ.
ಪ್ರಜಾಪ್ರಭುತ್ವದಲ್ಲಿ ಬಹುಜನರ ಮನಗೆಲ್ಲುವತ್ತ ಎಲ್ಲ ರಾಜಕೀಯ ಪಕ್ಷಗಳೂ ಕಾರ್ಯಕ್ರಮ ರೂಪಿಸುತ್ತವೆ. ಇಂದಿರಾ ನೇತೃತ್ವದ ಕಾಂಗ್ರೆಸ್ ಬಡಜನರಿಗೆ ಆಸ್ತಿಯ ಒಡೆತನ, ಆಹಾರ ಭದ್ರತೆ, ಮೀಸಲಾತಿ, ಮುಂತಾದ ಸಾಮಾಜಿಕ ಸುರಕ್ಷತೆಯ ಕಾರ್ಯಕ್ರಮ ರೂಪಿಸಿ ಜನರ ಕೈಗೆ ಸಂಪನ್ಮೂಲ ಬರುವ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದ ಸಂಪತ್ತು ಹಂಚಿಕೆಯಾಗುವ ಕಾರ್ಯಕ್ಕೆ ಮುನ್ನುಡಿ ಬರೆಯಿತು ಎಂದರೂ ತಪ್ಪಾಗಲಾರದು. ಜಾಗತಿಕವಾಗಿ ಸಮಾಜವಾದಿ ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆ ಮತ್ತು ಮಿಶ್ರಾರ್ಥಿಕತೆಯನ್ನು ಆಧರಿಸಿದ ಅಭಿವೃದ್ಧಿ ವಿನ್ಯಾಸವನ್ನು ಅನುಷ್ಟಾನಗೊಳಿಸಲು ಮುಂದಾದ ಕಾರಣಕ್ಕೆ ಅಮೇರಿಕದ ಅವಕೃಪೆಗೆ ಪಾತ್ರವಾದರೂ ಸಮಾಜದ ಕೆಳವರ್ಗದ, ತಳವರ್ಗದ ಜನರ ಬದುಕಲ್ಲಿ ಬದಲಾವಣೆ ತರುವ ಕಾರ್ಯಸೂಚಿಯನ್ನು ಕಾಂಗ್ರೆಸ್ ನೇತೃತ್ವದ ಸರಕಾರಗಳು ಮಾಡುತ್ತ ಬಂದಿವೆ.
ಆದರೆ, ಇಂದು ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿದೆ. ವಿಶ್ವದಲ್ಲಿ ಆರ್ಥಿಕ ಮತ್ತು ರಾಜಕೀಯ ಸಮೀಕರಣಗಳು ಬದಲಾಗಿವೆ. ಸದ್ಯಕ್ಕೆ ಸಮಾಜವಾದ ಹಿನ್ನಡೆ ಅನುಭವಿಸಿದ್ದು, ಅಮೇರಿಕಾ ಪ್ರತಿಪಾದಿಸುವ ಮುಕ್ತ ಮಾರುಕಟ್ಟೆಯ ಕೈ ಮೇಲಾಗುತ್ತಿದೆ. ಹಿರಿಯಣ್ಣನ ಅನುಕರಣೆ ವಿಶ್ವದ ಇತರೆಡೆಯೂ ನಡೆಯುತ್ತಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ನಡೆದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯವನ್ನು ವಿಶ್ವದೆಲ್ಲೆಡೆ ಮುಕ್ತ ಮಾರುಕಟ್ಟೆಯ ಪ್ರತಿಪಾದಕರು ಸಂಭ್ರಮಿಸುತ್ತಿರುವುದು. ಜನರ ಮನಗೆಲ್ಲಲು ಧರ್ಮ, ಜಾತಿ, ಭಾಷೆಯಂತಹ ವಿಚಾರಗಳನ್ನು ಬಡಿದೆಬ್ಬಿಸಿ ಸಮಾಜದಲ್ಲಿ ಸಂಪನ್ಮೂಲ ಸೃಷ್ಟಿಸುವ ಕೆಲಸ ಹಿನ್ನಲೆಗೆ ಸರಿಯುತ್ತಿದೆ. ಈಗಾಗಲೇ ಸಮಾಜದ ಕೆಳವರ್ಗದವರಲ್ಲಿರುವ ಅಲ್ಪಸ್ವಲ್ಪ ಸಂಪನ್ಮೂಲವೂ ಹೊರ ಹರಿಯುತ್ತಿದೆ. ಅಂತಾರಾಷ್ಟ್ರೀಯವಾಗಿ ಗಟ್ಟಿಯಾಗುತ್ತಿರುವ, ಶಕ್ತಿವಂತರಿಗೆ ಮಾತ್ರ ಹೆಚ್ಚು ಅವಕಾಶಗಳನ್ನು ಸೃಷ್ಟಿಸುವ ಮುಕ್ತ ಆರ್ಥಿಕ ವ್ಯವಸ್ಥೆಯನ್ನು ಭಾರತವೂ ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಮೂಲಕ ಅಮೇರಿಕಾಕ್ಕೆ ಹತ್ತಿರವಾಗುತ್ತದೆ. ಇದು ದೃತರಾಷ್ಟ್ರಾಲಿಂಗನವಾಗದಿದ್ದರೆ ಸಾಕು. ಇಂದಿರಾ ಕಾಲದಲ್ಲಿ ಸರಕಾರದ ನೀತಿಯನ್ನು ಟೀಕಿಸುತ್ತಿದ್ದ ಬಹುತೇಕ ಬುದ್ಧಿಜೀವಿಗಳು, ಪತ್ರಿಕೆಗಳು, ಮಾಧ್ಯಮಗಳು ಸಮಾಜದ ಮೇಲ್ವರ್ಗದ ಜನ ಇಂದು ಅಧಿಕಾರದೊಂದಿಗೆ ಹೊಂದಿಕೊಂಡು ಹೋಗುವುದೇ ಜಾಣತನ ಎನ್ನುವ ನೀತಿಗೆ ಶರಣಾದಂತೆ ಕಂಡು ಬರುತ್ತಿದೆ. ಅಂದು ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಇನ್ನಿಲ್ಲದಂತೆ ಟೀಕಿಸಿದ ಜನವರ್ಗ ಯಾಕೆ ಹೀಗೆ ಮೌನಕ್ಕೆ ಶರಣಾಗಿದೆ? ಅಂದಿನ ಸರಕಾರದ ನೀತಿಗಳು ಸಮಾಜವಾದಿ ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ಇದ್ದಿದ್ದೇ ಆ ಎಲ್ಲ ಹೋರಾಟಗಳಿಗೆ ಪ್ರೇರಣೆಯಾಗಿದ್ದಿರಬಹುದೇ ಎನ್ನುವ ಅನುಮಾನ ಬಹುಜನರನ್ನು ಕಾಡುತ್ತಿರುವುದಂತೂ ಸತ್ಯ. ದೇಶದ ಏಳಿಗೆಯಲ್ಲಿ ಉಳಿದವರೊಂದಿಗೆ ಅಲ್ಪಸಂಖ್ಯಾತರ, ದುರ್ಬಲರ, ಕೆಳ ವರ್ಗದ, ತಳ ವರ್ಗದ ಜನರ ಪಾತ್ರ ಮತ್ತು ಪಾಲ್ಗೊಳ್ಳುವಿಕೆಯ ಸ್ವರೂಪವನ್ನು ಕುರಿತು ಯೋಚಿಸಲು ಇಂದಿರಾ ಗಾಂಧಿಯವರ ಪುಣ್ಯ ತಿಥಿ ನೆಪವಾಗಲಿ ಎನ್ನುವ ಹಾರೈಕೆ ನಮ್ಮೆಲ್ಲರದು.
ಡಾ. ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- ಮಾನವೀಯ ಮೌಲ್ಯಗಳ ಹರಿಕಾರರು ಭಕ್ತ ಕನಕದಾಸರು