ಮೂರು ಕ್ಷೇತ್ರ ನೂರಾರು ಸಮಸ್ಯೆ!

Most read

ತ್ರಿ ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರುತ್ತಿರೋದೇನೋ ನಿಜ. ಆದರೆ ಅದರ ಕಾವು ಕೇವಲ ಮೂರು ಕುಟುಂಬಗಳಲ್ಲಿ ಮಾತ್ರ ಕಾಣಿಸುತ್ತಿದೆ ಎನ್ನುವುದೇ ವಿಪರ್ಯಾಸ-ರಮೇಶ್‌ ಹಿರೇಜಂಬೂರು, ಹಿರಿಯ ಪತ್ರಕರ್ತರು.

ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರಿದೆ. ಕ್ಷಣ ಕ್ಷಣಕ್ಕೂ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ಸುರಿಯುತ್ತಿದೆ. ರಾಜಕಾರಣದಲ್ಲಿ ಇದೆಲ್ಲ ಈಗ ಕಾಮನ್… ಆದರೆ ಸಮಸ್ಯೆಗಳು ಮಾತ್ರ ಬಡಾಯಿ ಜನತಾ ಪಕ್ಷದಲ್ಲಿ ಸಾಲು ಸಾಲು.

 ನಿಜ, ಇಷ್ಟು ದಿನ ಕುಟುಂಬ ರಾಜಕಾರಣದ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡುತ್ತಿದ್ದವರೆಲ್ಲ ಗಪ್ ಚುಪ್ ಆಗಿದ್ದಾರೆ! ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದರೆ, ಶಿಗ್ಗಾವಿಯಲ್ಲಿ ಬಿಜೆಪಿಯ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಬಿಜೆಪಿ ಟಿಕೆಟ್ ನೀಡಿದೆ. ಸಂಡೂರಿನಲ್ಲಿ ಎಸ್ಟಿ ಮೀಸಲು ಕ್ಷೇತ್ರವಾದ ಕಾರಣ ಬಿಜೆಪಿಗೆ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲದಾಗಿದೆ. ಅಲ್ಲಿ ಬಿಜೆಪಿಗೆ ನಾಯಕರೇ ಇಲ್ಲ ಎಂದರೂ ತಪ್ಪಿಲ್ಲ! ಆದರೆ ಕಾಂಗ್ರೆಸ್ ಮಾಜಿ ಸಚಿವ, ಸಂಸದ ತುಕಾರಾಮ್ ಕಾಂಗ್ರೆಸ್ ನಿಂದ ತಮ್ಮ ಪತ್ನಿ ಇ. ಅನ್ನಪೂರ್ಣ ಗೆ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಸವರಾಜ್ ಬೊಮ್ಮಾಯಿ, ಭರತ್ ಬೊಮ್ಮಾಯಿ

ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿ ನಾಯಕರ ಪಡೆ ಅದ್ಯಾಕೋ ಇತ್ತೀಚೆಗೆ ಗಪ್ ಚುಪ್! ಅತ್ತ ದೇವೇಗೌಡರ ಕುಟುಂಬ ಇತ್ತ ಯಡಿಯೂರಪ್ಪ ಕುಟುಂಬ ಕುಟುಂಬ ರಾಜಕಾರಣಕ್ಕೇ ಜೋತು ಬಿದ್ದಾದ ಮೇಲೆ ಬೊಮ್ಮಾಯಿ ಬೀಳದೆ ಇರ್ತಾರಾ? ಅದೇ ದಾರಿಯಲ್ಲಿ ಈಗ ಬೊಮ್ಮಾಯಿ ಕೂಡ ತನ್ನ ಮಗನಿಗೆ ಟಿಕೆಟ್ ಕೊಡಿಸಿ ʼಬೀದಿʼಗೆ ತಂದಿದ್ದಾರೆ. ಆದರೆ ಅದೇ ಈಗ ಮುಳುವಾಗಿದೆ ಅನ್ನುವ ಗುಸು ಗುಸು ಕೂಡ ಶಿಗ್ಹಾವಿ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ.

ಸಿಡಿ ಗುಸುಗುಸು:

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಅದೇನೋ ಮಾಡೋಕೆ ಹೋಗಿ, ಪತ್ನಿ ಕೈಲಿ ತಗುಲಾಕಿಕೊಂಡಿದ್ದರಂತೆ. ಅದಕ್ಕೂ ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಗೂ ಸಂಬಂಧ ಇದೆಯಂತೆ! ಅದರ ಸಿಡಿ ಏನೋ ಬಿಡುಗಡೆ ಆಗುತ್ಯಂತೆ ಎಂಬ ಗುಸು ಗುಸು ರಾಜ್ಯವ್ಯಾಪಿ ಹರಿದಾಡುತ್ತಿದೆ! ಶಿಗ್ಹಾವಿ ಜನರಂತೂ ಬೊಮ್ಮಾಯಿಯ “ಆ ಪುರಾಣ” ಯಾವಾಗ ಹೊರಗೆ ಬರುತ್ತೋ ಅಂತ ಕಾದು ಕುಳಿತಿದ್ದಾರಂತೆ…

ಹೀಗಾಗಿ ಮುಜುಗರದ ನಡುವೆಯೂ ಬಸವರಾಜ್ ಬೊಮ್ಮಾಯಿ ಕುಂಟುತ್ತಲೇ ತಮ್ಮ ಮಗನ ಭವಿಷ್ಯಕ್ಕಾಗಿ ಊರೂರು ಅಲೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವಿಚಾರ ಸತ್ಯವೋ ಸುಳ್ಳೋ ಆದರೆ ಈ ಸಿಡಿ ವಿಚಾರ ಬೊಮ್ಮಾಯಿ ಕಿವಿಗೂ ಬಿದ್ದಿದೆ ಎನ್ನಲಾಗುತ್ತಿದೆ. ವಾಟ್ಸಪ್ ಗ್ರೂಪ್ ಗಳಲ್ಲಂತೂ ಗುಲ್ಲೋ ಗುಲ್ಲು. ಅಪ್ಪಿ ತಪ್ಪಿ ಅದು ಹೊರ ಬಂದರೆ ಅದು ಯಾವ ಸಿಡಿ? ಭ್ರಷ್ಟಾಚಾರದ್ದೋ ಅಥವಾ ಇನ್ನಾವುದೋ ಗೊತ್ತಿಲ್ಲ. ಮೊದಲೇ ಬಿಜೆಪಿ ನಾಯಕರು “ಸಿಡಿ ವೀರರು…” ಎಂಬ ಮಾತುಗಳು ಶಿಗ್ಹಾವಿ ಕ್ಷೇತ್ರದಲ್ಲಿ ಗುಲ್ಲಾಗುತ್ತಿವೆ.

ಬೊಮ್ಮಾಯಿ ಕಂಡರೆ ಕೆಂಡ ಕಾರುತ್ತಿದ್ದ ಬಿಜೆಪಿ ನಾಯಕರೇ ಈ ಸಿಡಿ ಜಾಲ ಭೇದಿಸಲು ಸಜ್ಜಾಗಿದ್ದು, ಹೇಗಾದರೂ ಮಾಡಿ ಬೊಮ್ಮಾಯಿಗೆ ಮುಜುಗರ ಸೃಷ್ಟಿಸಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೂ ಎಂಟೆದೆ ಭಂಟನಂತೆ ಬೊಮ್ಮಾಯಿ ಈ ಬಾರಿ ಬೀದಿ ಬೀದಿ ಸುತ್ತುತ್ತಿದ್ದಾರೆ. ಮಗನನ್ನು ಹೇಗಾದರೂ ಮಾಡಿ ಗೆಲ್ಲಿಸುವುದಷ್ಟೇ ರಣತಂತ್ರ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಿಎಂ ಬೊಮ್ಮಾಯಿ ಅವರನ್ನು ಶಕುನಿ ಎಂದು ಜರೆದಿದ್ದಾರೆ.

 ನಿಖಿಲ್ ಎಲ್ಲಿದ್ದೀಯಪ್ಪಾ!?:

ನಿಖಿಲ್ , ಕುಮಾರಸ್ವಾಮಿ

ಮಂಡ್ಯದಲ್ಲಿ ಕಳೆದ ಬಾರಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಟ್ರೋಲ್ ಆಗಿದ್ದ ನಿಖಿಲ್ ಕುಮಾರಸ್ವಾಮಿ ಈಗ ಮತ್ತೆ ಚನ್ನಪಟ್ಟಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಇಲ್ಲಿ ಕಣ್ಣೀರ ಧಾರೆ ಸುರಿಸಿ ಮತಬ್ಯಾಂಕ್ ಮಾಡಲು ಅಣಿಯಾದ ನಿಖಿಲ್ ಗೆ ಜನ ಮತ್ತೆ ಗದರಿಸಲು ಶುರು ಮಾಡಿದ್ದಾರೆ. “ಇಷ್ಟು ದಿನ ಜನತೆ ಬಗ್ಗೆ ಯೋಚನೆ ಕೂಡ ಮಾಡದವನು ಈಗ ಬಂದು ಡ್ರಾಮಾ ಮಾಡ್ತಿದ್ದೀಯಾ!?” ಎಂದು ನೇರವಾಗಿ ಛೇಡಿಸೋಕೆ ಶುರು ಮಾಡಿದ್ದಾರೆ. ಮತ್ತೊಂದು ಕಡೆ ಅಪ್ಪ ಮಕ್ಕಳು ಕಣ್ಣೀರು ಸುರಿಸೋದ್ರಲ್ಲಿ ಎಕ್ಸ್ ಪರ್ಟ್ ಎಂದು ಮೂದಲಿಸುತ್ತಿದ್ದಾರೆ. ಇದಕ್ಕೆ ಕಾರಣ ನಿಖಿಲ್ ಕುಮಾರಸ್ವಾಮಿಯೇ…

ಇಷ್ಟು ದಿನ ಚುನಾವಣೆಗೆ ನಿಲ್ಲುವ ಚನ್ನಪಟ್ಟಣಕ್ಕೆ ಕಾಲಿಡದವನು ಇದ್ದಕ್ಕಿದ್ದಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾತ್ರಕ್ಕೆ ಹೋಗಿ ಅಲ್ಲಿ ಕಣ್ಣೀರಿಟ್ಟರೆ ಜನರೇನು ದಡ್ಡರಾ? ಏಕಾಏಕಿ ಮತ ನೀಡಿ ಗೆಲ್ಲಿಸಿಬಿಡ್ತಾರಾ? ಇದಕ್ಕೆ ಉತ್ತರ ಮತದಾರನೇ ಕೊಡಬೇಕು. ಅದಕ್ಕಾ ಮತದಾರ ಮತದಾನದ ದಿನಕ್ಕಾಗಿ ಕಾಯುತ್ತಿದ್ದಾನೆ.

 ಹಾಳೂರಿಗೆ ಉಳಿದವನೇ ನಾಯಕ!

ಬಂಗಾರು ಹನುಮಂತು

ಇನ್ನು ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ವಿರುದ್ಧ ಬಿಜೆಪಿ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಿದ್ದಾರೆ. ಈತನೋ ಹಾಳೂರಿಗೆ ಉಳಿದವನೇ ನಾಯಕ ಎನ್ನುವಂತಾಗಿದೆ. ಜನರ ಬಗ್ಗೆ ಅರಿವೇ ಇಲ್ಲದೆ ಬಿಜೆಪಿ ಕಚೇರಿಯಲ್ಲಿ ಮಹಿಳಾ ಕಾರ್ಯಕರ್ತೆಯರ ಕೈಲಿ ಹಿಗ್ಗಾಮುಗ್ಗಾ ಉಗಿಸಿಕೊಂಡಿದ್ದ ಈತ ಈಗ ಬಿಜೆಪಿ ಅಭ್ಯರ್ಥಿ. ಅದು ಹೇಗೋ ಜನಾರ್ಧನ ರೆಡ್ಡಿಯನ್ನು ಮನೆಗೆ ಕರೆದು ಟಿಕೆಟ್ ಗಿಟ್ಟಿಸಿಕೊಂಡ. ಆದರೆ ಬಿಜೆಪಿಗೂ ಇಲ್ಲಿ ವಿಧಿ ಇರಲಿಲ್ಲ.‌ ರಾಷ್ಟ್ರೀಯ ಪಕ್ಷ ಅಂತ ಹೇಳಿಕೊಂಡು ಒಬ್ಬ ಸಮರ್ಥ ನಾಯಕನನ್ನು ಹುಡುಕಲು ಆಗಲಿಲ್ಲ. ಅನಿವಾರ್ಯವಾಗಿ ಬಂಗಾರು ಗೆ ಟಿಕೆಟ್ ನೀಡಿ ಕೈ ತೊಳೆದುಕೊಂಡಿದೆ. ಆದರೆ ಈಗ ಬಂಗಾರು ಮನೆಯಲ್ಲಿ ಉಂಡೆದ್ದು ಬರುವವರೆ ಹೆಚ್ಚಾಗಿದ್ದಾರೆ. ಹೀಗಾಗಿ ಬಂಗಾರು ಬರಿಗೈಲಿ ನಿಂತಿದ್ದಾರೆ.

ಬಂಗಾರು ಒಬ್ಬ ನಾಯಕ ಎಂಬುದನ್ನೇ ಒಪ್ಪಿಕೊಳ್ಳಲು ಸಿದ್ದರಿಲ್ಲದ ಬಿಜೆಪಿ ಕಾರ್ಯಕರ್ತರು ಪ್ರಚಾರಕ್ಕೂ ತೆರಳುತ್ತಿಲ್ಲ! ಆದರೆ ಬಿಜೆಪಿ ನಾಯಕರ ರೋಡ್ ಶೋಗೆ ಸ್ಥಳೀಯ ನಾಯಕರು ಹಣ ಕೊಟ್ಟು ಜನರನ್ನು ಕರೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವು ಮತಗಳಾಗುತ್ತವಾ ಎನ್ನುವುದೇ ಈಗ ಯಕ್ಷ ಪ್ರಶ್ನೆಯಾಗಿದೆ. ಅದಕ್ಕಾಗಿ ಹರಸಾಹಸ ನಡೆಸಲಾಗುತ್ತಿದೆ. ಆದರೆ ಮತದಾನದ ದಿನವೇ ಅದಕ್ಕೆ ಉತ್ತರ ಸಿಗುವುದು ನಿಶ್ಚಿತ.

ಕೊನೆ ಮಾತು:

ಅದೇನೇ ಇರಲಿ ತ್ರಿ ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರುತ್ತಿರೋದೇನೋ ನಿಜ. ಆದರೆ ಅದರ ಕಾವು ಮಾತ್ರ ಕೇವಲ ಮೂರು ಕುಟುಂಬಗಳಲ್ಲಿ ಮಾತ್ರ ಕಾಣಿಸುತ್ತಿದೆ ಎನ್ನುವುದೇ ವಿಪರ್ಯಾಸ.

ರಮೇಶ್ ಹಿರೇಜಂಬೂರು

ಹೋರಾಟಗಾರರು, ಸಾಹಿತಿ, ಹಿರಿಯ ಪತ್ರಕರ್ತರು

ಇದನ್ನೂ ಓದಿ- ಮುಡಾ ಹಗರಣ ಮತ್ತು ಬಿಜೆಪಿ ನಾಯಕತ್ವದ ಸಮಸ್ಯೆ!

More articles

Latest article