ನಾಗಸಂದ್ರ- ಮಾದಾವರ ಮೆಟ್ರೋ ಮಾರ್ಗ ಉದ್ಘಾಟನೆ; ನಾಳೆಯಿಂದ ಸಂಚಾರ ಆರಂಭ

Most read

ಬೆಂಗಳೂರು: ನಾಗಸಂದ್ರದಿಂದ ಮಾದಾವರ ಮೆಟ್ರೋ ನಿಲ್ದಾಣದವರೆಗಿನ ವಿಸ್ತರಿತ 3.14 ಕಿಮೀ ಮಾರ್ಗ ಇಂದು ಸಂಚಾರಕ್ಕೆ ಮುಕ್ತವಾಗಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಇಂದು ಲೋಕಾರ್ಪಣೆಗೊಳಿಸಿದರು.


ನಂತರ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಾಗರಿಕರನ್ನು ಹೆಚ್ಚು ಕಾಯಿಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಈಗಲೇ ಹೊಸ ಮಾರ್ಗದ ಸೇವೆಯನ್ನು ಆರಂಭಿಸಲಾಗಿದೆ. ಇಡೀ ದೇಶದಲ್ಲೇ ಅತಿ ಹೆಚ್ಚು ಮೆಟ್ರೋ ಪ್ರಯಾಣಿಕರನ್ನು ಬೆಂಗಳೂರು ಹೊಂದಿದೆ. ವಿಸ್ತರಿತ 3.14 ಕಿ.ಮೀ ಸೇರಿ ಬೆಂಗಳೂರು ಮೆಟ್ರೋ 76.95 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಮೆಟ್ರೋ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ವರ್ಷಕ್ಕೆ ಇನ್ನೂ 30 ಕಿ.ಮೀ ಸೇರ್ಪಡೆಯಾಗಲಿದೆ. 2026ಕ್ಕೆ
ಬೆಂಗಳೂರು ಮೆಟ್ರೋದ ಒಟ್ಟು ವ್ಯಾಪ್ತಿ 175 ಕಿ.ಮೀ ಆಗಲಿದೆ ಎಂದು ಅವರು ಹೇಳಿದರು. ನೆಲಮಂಗಲ ಶಾಸಕಅ ಎಂ. ಶ್ರೀನಿವಾಸ್, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ವರ ರಾವ್ ಮೊದಲಾದವರು ಉಪಸ್ಥಿತರಿದ್ದರು.


ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಡಿಸಿಎಂ ಮತ್ತು ಶಾಸಕರ ಜೊತೆಗೆ ಮಾದಾವರವರಗೆ ಪ್ರಾಯೋಗಿಕ ಚಾಲನೆ ನೀಡಿದ್ದೇವೆ. ನಾಳೆ ಸಾರ್ವಜನಿಕರಿಗೆ ಮೆಟ್ರೋ ಆರಂಭ ಆಗುತ್ತದೆ. ಸಾರ್ವಜನಿಕರಿಗೆ ಅನಕೂಲವಾಗಲಿ ಎಂಬ ಉದ್ಧೇಶದಿಂದ ಉದ್ಘಾಟನೆ ಮಾಡಿದ್ದೇವೆ ಎಂದು ಹೇಳಿದರು.


ಅಕ್ಟೋಬರ್ 4 ರಂದು ರೈಲ್ವೆ ಸುರಕ್ಷತಾ ಆಯುಕ್ತರು ಸಂಚಾರಕ್ಕೆ ಹಸಿರು ನಿಶಾನೆ ನೀಡಿದ್ದರು. ನಾಗಸಂದ್ರದಿಂದ ಮಾದಾವರ ಮಾರ್ಗವನ್ನು 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ನಾಳೆ ಬೆಳಿಗ್ಗೆ ಐದು ಗಂಟೆಯಿಂದ ಮಾದಾವರ ದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ರೈಲು ಸಂಚಾರ ಮಾಡಲಿದೆ. ಕಳೆದ ವರ್ಷ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಟು ಕೆ.ಆರ್ ಪುರ ಮೆಟ್ರೋ ಉದ್ಘಾಟನೆ ಮಾಡಲಾಗಿತ್ತು. ವಿಸ್ತರಿತ ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ ಗಳನ್ನು ಒಳಗೊಂಡ 3 ಮೆಟ್ರೋ ನಿಲ್ದಾಣಗಳಿವೆ.

ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಈ ಮಾರ್ಗವು ಬಹುಮುಖ್ಯ ಪಾತ್ರ ವಹಿಸಲಿದೆ. ಸದ್ಯ ಹಸಿರು ಮಾರ್ಗದ ನಾಗಸಂದ್ರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ ವರೆಗೆ ಮೆಟ್ರೋ ರೈಲು ಸಂಚಾರ ಮಾಡುತ್ತಿದೆ. 34.14 ಕಿಮೀ ಉದ್ದದ ಈ ಹಸಿರು ಮಾರ್ಗದಲ್ಲಿ 32 ಮೆಟ್ರೋ ಸ್ಟೇಷನ್ ಗಳಿವೆ.

More articles

Latest article