Saturday, December 7, 2024

ಮನೆ ಧ್ವಂಸ; ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

Most read

ನವದೆಹಲಿ: ರಸ್ತೆ ವಿಸ್ತರಣೆ ಯೋಜನೆಗಾಗಿ ಅಕ್ರಮವಾಗಿ ಮನೆಗಳನ್ನು ಕೆಡವಿಹಾಕಿದ್ದಕ್ಕಾಗಿ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.


ಮಹಾರಾಜ್‌ಗಂಜ್ನ ನಿವಾಸಿ ಮನೋಜ್ ತಿಬ್ರೆವಾಲ್ ಆಕಾಶ್ ಎಂಬವರ ಮನೆಯನ್ನು 2019ರಲ್ಲಿ ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಮನೋಜ್ ಅವರು ಪತ್ರದ ಮೂಲಕ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ 2020ರಲ್ಲಿ ದಾಖಲಾದ ಸ್ವಯಂ ಪ್ರೇರಿತ ರಿಟ್ ಅರ್ಜಿಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿತು.


ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇದು ಮಿತಿ ಮೀರಿದ ನಡವಳಿಕೆ ಎಂದು ಆಕ್ಷೇಪ ವ್ಯಕ್ತಪಡಿಸಿತು.


ಅರ್ಜಿದಾರರು ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಚಂದ್ರಚೂಡ್ ಅವರು, ಅರ್ಜಿದಾರ 3.7 ಚದರ ಮೀಟರ್ ಜಾಗವನ್ನು ಅತಿಕ್ರಮಿಸಿದ್ದಾರೆ ಎಂಬ ನಿಮ್ಮ ವಾದವನ್ನು ನಾವು ಒಪ್ಪುತ್ತೇವೆ. ಅರ್ಜಿದಾರನರಿಗೆ ಕ್ಲೀನ್ ಚಿಟ್ ನೀಡುವುದಿಲ್ಲ. ಆದರೆ, ಯಾವುದೇ ನೋಟಿಸ್ ನೀಡದೆ ನೀವು ಜನರ ಮನೆಯನ್ನು ಹೇಗೆ ಕೆಡವುತ್ತೀರಿ? ಯಾರದ್ದಾದರೂ ಮನೆಯನ್ನು ಹಠಾತ್ ಕೆಡವಿ ಹಾಕುವುದು ಕಾನೂನುಬಾಹಿರ ಅಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿರು.


ಮನೆ ಕೆಡವುದಕ್ಕೂ ಮುನ್ನ ನೋಟಿಸ್ ನೀಡಿಲ್ಲ. ನಿಯಮಗಳನ್ನು ಅನುಸರಿಸಿಲ್ಲ ಎಂಬ ಅಂಶ ಕುರಿತು ಪ್ರತಿಕ್ರಿಯಿಸಿದ ಸಿಜೆಐ, ಇದು ಮಿತಿ ಮೀರಿದ ನಡವಳಿಕೆಯಾಗಿದೆ. ನೀವು ಎಲ್ಲಿ ನಿಯಮಗಳನ್ನು ಅನುಸರಿಸಿದ್ದೀರಿ? ನೀವು ಯಾವುದೇ ನೋಟಿಸ್ ನೀಡಿಲ್ಲ ಎಂಬ ಅಫಿಡವಿಟ್ ನಮ್ಮ ಬಳಿ ಇದೆ. ನೀವು ನೋಟಿಸ್ ಕೊಟ್ಟಿಲ್ಲ. ಬದಲಾಗಿ ಜನರ ಮನೆ ಬಳಿ ಹೋಗಿ ಮೈಕ್ ಮೂಲಕ ಮನೆ ಧ್ವಂಸಗೊಳಿಸುವ ಬಗ್ಗೆ ಕೂಗಿ ಹೇಳಿದ್ದೀರಿ ಎಂದದು ನ್ಯಾಯಪೀಠ ಟೀಕಿಸಿದೆ.


ನೀವು ರಾತ್ರೋರಾತ್ರಿ ನುಗ್ಗಿ ಮನೆಗಳನ್ನು ಕೆಡವಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ನೀವು ಜನರಿಗೆ ಮನೆ ಖಾಲಿ ಮಾಡಲು ಸಮಯ ನೀಡಿಲ್ಲ. ಹೀಗಿರುವಾಗ ಜನರು ತಮ್ಮ ಸಾಮಾಗ್ರಿಗಳನ್ನು ಏನು ಮಾಡಬೇಕು? ಮನೆ ಕೆಡವುದಾದರೆ ಸರಿಯಾದ ಪ್ರಕ್ರಿಯೆ ಅನುಸರಿಸಬೇಕು ಎಂದು ನ್ಯಾಯಮೂರ್ತಿ ಪರ್ದಿವಾಲಾ ಕೂಡ ಹೇಳಿದ್ದಾರೆ.


ಪ್ರತಿಯೊಬ್ಬರಿಗೂ ಪ್ರತ್ಯೇಕ ನೋಟಿಸ್‌ಗಳನ್ನು ನೀಡದೆ, ಎಲ್ಲರಿಗೂ ಸೇರಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸುವುದು ಮತ್ತು ತಮಟೆ ಬಾರಿಸುವ ಮೂಲಕ ಅಧಿಕಾರಿಗಳು ಮಾಹಿತಿ ನೀಡುವುದಕ್ಕೆ ನ್ಯಾಯಮೂರ್ತಿ ಪರ್ದಿವಾಲ ಅಸಮ್ಮತಿ ಸೂಚಿಸಿದ್ದಾರೆ.


ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಹೆಚ್‌ಆರ್‌ಸಿ) ವರದಿಯನ್ನು ಪೀಠವು ಪರಿಗಣಿಸಿದೆ. ಕೇವಲ 3.70 ಚದರ ಮೀಟರ್ ಜಾಗ ಅತಿಕ್ರಮಣವಾಗಿದ್ದಕ್ಕೆ ಅಧಿಕಾರಿಗಳು ಇಡೀ ಮನೆಯನ್ನೇ ಕಡೆವಿದ್ದಾರೆ. ಇಡೀ ಮನೆ ಕೆಡವಿ ಹಾಕುವ ಅಗತ್ಯ ಇರಲಿಲ್ಲ. ಆದ್ದರಿಂದ ಅರ್ಜಿದಾರರಿಗೆ ಮಧ್ಯಂತರ ಪರಿಹಾರ ನೀಡಬೇಕು. ಅರ್ಜಿದಾರರ ದೂರಿನ ಮೇರೆಗೆ ತಪ್ಪಿತಸ್ಥರ ವಿರುದ್ದ ಎಫ್‌ಐಆರ್ ದಾಖಲಿಸಬೇಕು ಮತ್ತು ಅಧಿಕಾರಿಗಳ ವಿರುದ್ದ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಎನ್‌ಹೆಚ್‌ಆರ್‌ಸಿ ಶಿಫಾರಸು ಮಾಡಿದೆ.


ಅತಿಕ್ರಮಣಗಳನ್ನು ಗುರುತಿಸಲು ಅಧಿಕಾರಿಗಳು ಯಾವುದೇ ತನಿಖೆ ನಡೆಸಿಲ್ಲ.ಮನೆ ನೆಲಸಮ ಮಾಡುವ ಮೊದಲು ಭೂಮಿ ಸ್ವಾಧೀನಪಡಿಸಿಕೊಂಡಿದ್ದೇವೆ ಎಂದು ತೋರಿಸಲು ಯಾವುದೇ ದಾಖಲೆ ಅವರಲ್ಲಿ ಇರಲಿಲ್ಲ ಎಂಬುವುದನ್ನು ನ್ಯಾಯಾಲಯ ಪರಿಗಣಿಸಿದೆ.
ಅರ್ಜಿದಾರರಿಗೆ 25 ಲಕ್ಷ ರೂಪಾಯಿ ದಂಡದ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಈ ಪರಿಹಾರವು ಮಧ್ಯಂತರ ಸ್ವರೂಪದ್ದಾಗಿದೆ ಎಂದು ಸ್ಪಷ್ಟಪಡಿಸಿದೆ. ಅಕ್ರಮ ನೆಲಸಮಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸುವಂತೆ ಮತ್ತು ಶಿಸ್ತು ಕ್ರಮಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ.


ಕಾನೂನುಬಾಹಿರ ಕ್ರಮಗಳಿಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ರಸ್ತೆ ವಿಸ್ತರಣೆ ಯೋಜನೆಗಳಿಗ ಅತಿಕ್ರಮಣಗಳನ್ನು ತೆರವುಗೊಳಿಸುವ ಮುನ್ನ ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳನ್ನು ತೀರ್ಪಿನಲ್ಲಿ ನ್ಯಾಯಾಲಯ ವಿವರಿಸಿದೆ. ಈ ತೀರ್ಪಿನ ಪ್ರತಿಯನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲು ನಿರ್ದೇಶಿಸಿದೆ.

More articles

Latest article