US Election: ತನ್ನ ಗೆಳೆಯ ಟ್ರಂಪ್‌ ಗೆಲುವಿಗೆ ಶುಭಕೋರಿದ ಮೋದಿ

Most read

ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಟ್ರಂಪ್‌ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಟ್ರಂಪ್ ಜೊತೆಗಿನ ಫೋಟೋ ಹಂಚಿಕೊಂಡು ಶುಭ ಕೋರಿದ್ದಾರೆ.

ಟ್ವೀಟ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. “ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರಿಗೆ ಐತಿಹಾಸಿಕ ಚುನಾವಣಾ ಗೆಲುವಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಹಿಂದಿನ ಅವಧಿಯ ಯಶಸ್ಸನ್ನು ಮುಂದುವರೆಸುತ್ತಿದ್ದೀರಿ. ಭಾರತ-ಅಮೆರಿಕ ವ್ಯಾಪಕ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು, ನಮ್ಮ ಸಹಯೋಗವನ್ನು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಜನರ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡೋಣ. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸೋಣ” ಎಂದು ಮೋದಿ ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ.

ಕಮಲಾ ಹ್ಯಾರಿಸ್ ಹಾಗೂ ಟ್ರಂಪ್ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ವಿರುದ್ದ ಟ್ರಂಪ್ ಗೆಲುವು ಸಾಧಿಸಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತಗಳ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗಿಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇಲ್ಲಿಯವರೆಗೂ ಕಮಲಾ ಹ್ಯಾರಿಸ್ 224 ಮತಗಳನ್ನು ಪಡೆದಿದ್ದರೆ, ಡೊನಾಲ್ಡ್‌ ಟ್ರಂಪ್‌ ಅವರು 267 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

More articles

Latest article