ಬೆಂಗಳೂರು: ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗ್ರಹಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಮತ್ತು ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಪಡಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ ನಿಮ್ಮನ್ನು ಕಂಡು ಲೋಕಾಯುಕ್ತ ಅಧಿಕಾರಿಗಳಿಗೆ ಭಯ ಬಂದಿರಬೇಕು. ಆದ್ದರಿಂದ ರಾಜೀನಾಮೆ ನೀಡಿ ತನಿಖೆ ಎದುರಿಸುವಂತೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳೇ ವಿಚಾರಣೆಗೆ ಸ್ಕ್ರಿಪ್ಟ್ ಬರೆದುಕೊಟ್ಟಿದ್ದಾರೆ. ಈ ವಿಚಾರಣೆಯಿಂದ ಸತ್ಯ ಹೊರಬರುವುದು ಸಾಧ್ಯವೇ ಇಲ್ಲ.ಕೇವಲ 2 ತಾಸಿನಲ್ಲಿ ಇವರ ವಿಚಾರಣೆ ಮುಗಿದು ಹೋಗುತ್ತದೆ ಎಂದು ಕಿಡಿ ಕಾರಿದ್ದಾರೆ
ಮುಡಾ ಹಗರಣವನ್ನು ಹೈಕೋರ್ಟ್ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಮುಖ್ಯಮಂತ್ರಿಯೊಬ್ಬರು ತನಿಖೆ ಹಾಜರಾಗುತ್ತಿರುವುದು ಇದೇ ಮೊದಲು. ಇವರು ತನ್ನ ಕೈಕೆಳಗೆ ಕೆಲಸ ಮಾಡುವ ಅಧಿಕಾರಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರೂ ಸಹ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮುಡಾ ಪ್ರಕರಣ ಕಾಂಗ್ರೆಸ್ ಪಕ್ಷ ಮತ್ತು ಸ್ವತಃ ಸಿಎಂ ಅವರಿಗೆ ಕಪ್ಪುಚುಕ್ಕೆಯಾಗಿದೆ. ನನ್ನ ಮೇಲೆ ಆರೋಪ ಬಂದಾಗ ನೀವು ಪ್ರತಿಭಟನೆ ಮಾಡಿದ್ದೀರಿ. ಅದೇ ನಿಯಮ ಈಗ ನಿಮಗೆ ಅನ್ವಯಿಸಬೇಕಲ್ಲವೇ ಎಂದು ಪ್ರಶ್ನಿಸಿ ರಾಜೀನಾಮೆ ನೀಡಿ ವಿಚಾರಣೆ ಎದುರಿಸಬೇಕು ಎಂದು ಆಗ್ರಹಪಡಿಸಿದ್ದಾರೆ.