ನವದೆಹಲಿ: ಸುಪ್ರೀಂಕೋರ್ಟ್ ಕಲಾಪಗಳು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇರಬೇಕು ಎನ್ನುವ ಸಂವಿಧಾನದ 348(1) ನೇ ವಿಧಿಯನ್ನು ಪ್ರಶ್ನಿಸಿ ಹಿಂದಿ ಭಾಷೆಯಲ್ಲೂ ಕಲಾಪ ನಡೆಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಹಿಂದಿ ಭಾಷೆಗೆ ಮಾತ್ರ ಏಕೆ ವಿಶೇಷ ಪ್ರಾಮುಖ್ಯತೆ ನೀಡಬೇಕು ಎಂದು ಅರ್ಜಿದಾರರಿಗೆ ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ನಲ್ಲಿ ವೈವಿಧ್ಯತೆ ಇರುವ ದೇಶದ ಎಲ್ಲಾ ರಾಜ್ಯಗಳೂ ನಮ್ಮ ನಮ್ಮ ಭಾಷೆಗಳಲ್ಲೂ ಕಲಾಪ ನಡೆಸುವಂತೆ ಅರ್ಜಿಗಳು ಸಲ್ಲಿಕೆ ಮಾಡಲು ಮುಂದಾಗುತ್ತವೆ. ಹಾಗಾದರೆ ನಾವು ಸಂವಿಧಾನದಲ್ಲಿ ಮಾನ್ಯತೆ ಲಭಿಸಿರುವ ಎಲ್ಲಾ ಭಾಷೆಗಳಲ್ಲೂ ಕಲಾಪ ನಡೆಸಬೇಕಾ? ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಸಂವಿಧಾನದ 348(1) ವಿಧಿಯ ಸಿಂಧುತ್ವವನ್ನು ನೀವು ಹೇಗೆ ಪ್ರಶ್ನಿಸಲು ಸಾಧ್ಯ? ಅದು ಸಂವಿಧಾನ ಮೂಲ ಭಾಗವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿರುವ ಭಾಷೆಯ ಸಮಸ್ಯೆಯು ನ್ಯಾಯದ ನಿರಾಕರಣೆಗೆ ಕಾರಣವಾಗಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. ಹೆಚ್ಚಿನ ವಿಚಾರಣೆಗೆ ನಿರಾಕರಿಸಿದ ನ್ಯಾಯಮೂರ್ತಿಗಳ ಪೀಠ ಅರ್ಜಿಯನ್ನು ತಿರಸ್ಕರಿಸಿತು.