ಬೆಂಗಳೂರು: ದೀಪಾವಳಿ ಆಚರಿಸಿದ ಅಕ್ಟೋಬರ್ 31ರಿಂದ ನವಂಬರ್ 3ರ ನಡುವೆ ನಡುವೆ ಪಟಾಕಿ ಸಿಡಿಸಿ ಬೆಂಗಳೂರಿನಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ 150 ರ ಗಡಿ ದಾಟಿದೆ. ಮೂರು ಪ್ರಮುಖ ಆಸ್ಪತ್ರೆಗಳಲ್ಲಿ 150 ಕ್ಕೂ ಹೆಚ್ಚು ಮಂದಿ ಪಟಾಕಿ ಸಿಡಿದು ಕಣ್ಣಿಗೆ ಗಾಯ ಮಾಡಿಕೊಂಡು ಸರ್ಕಾರಿ ಮಿಂಟೋ ಕಣ್ಣಿನ ಆಸ್ಪತ್ರೆ, ನಾರಾಯಣ ನೇತ್ರಾಲಯ ಮತ್ತು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಬೌರಿಂಗ್, ಕೆಸಿ ಜನರಲ್ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ನಗರದ ಅಸಂಖ್ಯಾತ ನರ್ಸಿಂಗ್ ಹೋಂ ಗಳಲ್ಲಿ ದಾಖಲಾದವರ ಸಂಖ್ಯೆಯ ಮಾಹಿತಿ ಇಲ್ಲ.
ನಾರಾಯಣ ನೇತ್ರಾಲಯದಲ್ಲಿ 10 ವರ್ಷದೊಳಗಿನ 14 ಮಕ್ಕಳು, ಮತ್ತು 10 ರಿಂದ 18 ವರ್ಷದೊಳಗಿನ 21 ಮಂದಿ ಸೇರಿದಂತೆ 35 ಮಂದಿ ಚಿಕಿತ್ಸೆ ಪಡೆದಿದ್ದಾರೆ. ನಾಲ್ವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಕಣ್ಣಿಗೆ ಗಾಯವಾದದಂತಹ ಸಣ್ಣ ಪ್ರಮಾಣದ ಪ್ರಕರಣದಿಂದ ಹಿಡಿದು ಕಾರ್ನಿಯಾ ಹರಿದುಹೋಗಿರುವುದು, ಎಪಿಥೆಲಿಯಲ್ ದೋಷ ಮತ್ತು ಲೆನ್ಸ್ ಜರುಗಿರುವುದು ಸೇರಿದಂತೆ ಅನೇಕ ರೀತಿಯ ದೃಷ್ಟಿ ದೋಷದ ಪ್ರಕರಣಗಳು ವರದಿಯಾಗಿವೆ.
ಮಕ್ಕಳಿಗೆ ಸುರಕ್ಷತಾ ಕ್ರಮಗಳನ್ನು ಹೇಳಿಕೊಡದೆ ಇರುವುದು, ಪಟಾಕಿ ಹಚ್ಚುವಾಗ ಪೋಷಕರು ಅವರತ್ತ ಗಮನ ಹರಿಸಿದೆ ಇರುವುದು, ಕೈಗಳಲ್ಲಿ ಪಟಾಕಿ ಹಿಡಿದುಕೊಂಡು ಸಿಡಿಸುವುದು ಮತ್ತು ಪಟಾಕಿಗೆ ತುಂಬಾ ಹತ್ತಿರ ನಿಂತುಕೊಳ್ಳುವಂತಹ ಕ್ರಮಗಳಿಂದ ಮಕ್ಕಳಿಗೆ ದೃಷ್ಟಿ ದೋಷ ಉಂಟಾಗಿದೆ.
ಮಹಾಲಕ್ಷ್ಮಿ ಬಡಾವಣೆಯ 12 ವರ್ಷದ ಬಾಲಕಿಯೊಬ್ಬಳು ಬುಲೆಟ್ ಬಾಂಬ್ ಹಚ್ಚುವಾಗ ಪಟಾಕಿ ಸಿಡಿದು ಕಣ್ಣಿಗೆ ಭಾರಿ ಹಾನಿಯುಂಟಾಗಿದೆ. ಈಕೆಯ ಕಣ್ಣಿನಲ್ಲಿ ರಕ್ತ ತುಂಬಿಕೊಂಡಿದೆ. ಈಕೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ನಾರಾಯಣ ನೇತ್ರಾಲಯದ ವೈದ್ಯರು ತಿಳಿಸಿದ್ದಾರೆ.
ಮತ್ತೊಬ್ಬ ಬಾಲಕ ಪಟಾಕಿಯು ಪೂರ್ಣ ಸಿಡಿದಿಲ್ಲ ಎಂದು ನೋಡಲು ಹೋದಾಗ ಆ ಪಟಾಕಿ ಸಿಡಿದು ಬಲಗಣ್ಣಿಗೆ ಹಾನಿಯಾಗಿದೆ. ಈತನ ಕಣ್ಣಿಗೆ ಆಪರೇಷನ್ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಶಂಕರ ಆಸ್ಪತ್ರೆಯಲ್ಲಿ ದಾಖಲಾದ 18 ಮಂದಿ ಚಿಕಿತ್ಸೆ ಪಡೆದಿದ್ದು, ಇವರಲ್ಲಿ ಐವರಿಗೆ ದೃಷ್ಟಿದೋಷ ಉಂಟಾಗಿದ್ದು, 9 ಮಕ್ಕಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.