ವಕ್ಫ್ ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಮುಸ್ಲಿಂ ಸಮಾಜದವರು ಹಿಂದೂ ಬಾಂಧವರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಿಲ್ಲ. ಬಹುಸಂಖ್ಯಾತ ಹಿಂದೂಗಳು ವಕ್ಫ್ ಬಗ್ಗೆ ಅರಿತುಕೊಳ್ಳುವ ಯೋಚನೆಯನ್ನೂ ಮಾಡಲಿಲ್ಲ. ಹೀಗಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಾ ಈ ಅರಿವಿನ ಕೊರತೆಯ ಲಾಭವನ್ನು ಪಡೆಯಲು ಮತೀಯ ಶಕ್ತಿಗಳು ಮುಂದಾಗುತ್ತವೆ. ಎರಡೂ ಸಮುದಾಯಗಳಲ್ಲಿ ಅಸಹನೆಯನ್ನು ಹೆಚ್ಚಿಸುತ್ತಾ ಧಾರ್ಮಿಕ ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುತ್ತವೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ವಕ್ಫ್ ಮಂಡಳಿ ಯಾವ ಆಸ್ತಿಯನ್ನು ತನ್ನದೆನ್ನುತ್ತದೆಯೋ ಅದು ಅವರದ್ದೇ ಆಗುತ್ತದೆ. ಯಾವ ಕಾನೂನೂ ಏನೂ ಮಾಡಲು ಆಗುವುದಿಲ್ಲ.
ತಲತಲಾಂತರದಿಂದ ರೈತರು ಅನುಭವಿಸುತ್ತಾ ಬಂದಿರುವ ಜಮೀನು ವಕ್ಫ್ ಆಸ್ತಿಯೆಂದು ನೋಟೀಸ್ ಕಳಿಸಿ ರೈತರನ್ನು ಬೀದಿ ಪಾಲು ಮಾಡಲಾಗುತ್ತಿದೆ.
ವಕ್ಫ್ ಮಂಡಳಿ ಯಾರೊಬ್ಬರ ಆಸ್ತಿಯನ್ನು ತನ್ನದೇ ಎಂದು ಘೋಷಿಸಬಹುದು ಮತ್ತು ಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
ಕಾಂಗ್ರೆಸ್ ಸರಕಾರದ ಮುಸ್ಲಿಂ ತುಷ್ಟೀಕರಣದಿಂದಾಗಿ ಪ್ರೇರೇಪಿತವಾದ ಮುಸ್ಲಿಂ ವಕ್ಫ್ ನವರು ರೈತರ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ.
ದೆಹಲಿಯ ಪಾರ್ಲಿಮೆಂಟ್ ಜಾಗವೂ ಸಹ ವಕ್ಫ್ ಆಸ್ತಿಯೆಂದು ಮುಸಲ್ಮಾನರು ಕ್ಲೇಮ್ ಮಾಡುತ್ತಿದ್ದಾರೆ.
ಷರಿಯಾ ಕಾನೂನನ್ನು ಮಾತ್ರ ಮಾನ್ಯ ಮಾಡುವ ಮುಸಲ್ಮಾನರು ಸಂವಿಧಾನ ವಿರೋಧಿಗಳಾಗಿದ್ದು ಪಾಕಿಸ್ತಾನಕ್ಕೆ ಹೋಗಲಿ.
ಹೀಗೆ ಇಸ್ಲಾಮೋಫೋಬಿಯಾ ಪೀಡಿತ ಸಂಘ ಪರವಾರದ ಬಿಜೆಪಿಗರು ಸುಳ್ಳುಗಳ ಮೂಲಕ ಮತೀಯ ಭಾವನೆ ಕೆರಳಿಸಿ ದೇಶಾದ್ಯಂತ ಹಿಂದೂರಾಷ್ಟ್ರ ನಿರ್ಮಾಣದ ಪ್ರಯತ್ನದಲ್ಲಿದ್ದಾರೆ. ಕೇಸರಿ ಪಡೆ ಹೇಳಿದ್ದನ್ನೇ ಇನ್ನಷ್ಟು ಒಗ್ಗರಣೆ ಬೆರೆಸಿ ಮಡಿಲ ಮಾಧ್ಯಮಗಳು ಮತೀಯ ದ್ವೇಷವನ್ನು ಹರಡುತ್ತಿದ್ದಾರೆ.
ಇಷ್ಟಕ್ಕೂ ವಕ್ಫ್ ಎಂದರೇನು? ಅಲ್ಲಿ ಏನು ನಡೆಯುತ್ತದೆ? ಅದರ ಕಾರ್ಯಾಚರಣೆಗಳೇನು ಎನ್ನುವುದೇ ಬಹುತೇಕ ಹಿಂದೂಗಳಿಗೆ ನಿಗೂಢವಾಗಿದೆ. ವಕ್ಫ್ ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಮುಸ್ಲಿಂ ಸಮಾಜದವರು ಹಿಂದೂ ಬಾಂಧವರಿಗೆ ತಿಳಿಸುವ ಪ್ರಯತ್ನವನ್ನೂ ಮಾಡಿಲ್ಲ. ಬಹುಸಂಖ್ಯಾತ ಹಿಂದೂಗಳು ವಕ್ಫ್ ಬಗ್ಗೆ ಅರಿತುಕೊಳ್ಳುವ ಯೋಚನೆಯನ್ನೂ ಮಾಡಲಿಲ್ಲ. ಹೀಗಾಗಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಾ ಈ ಅರಿವಿನ ಕೊರತೆಯ ಲಾಭವನ್ನು ಪಡೆಯಲು ಮತೀಯ ಶಕ್ತಿಗಳು ಮುಂದಾಗುತ್ತವೆ. ಎರಡೂ ಸಮುದಾಯಗಳಲ್ಲಿ ಅಸಹನೆಯನ್ನು ಹೆಚ್ಚಿಸುತ್ತಾ ಧಾರ್ಮಿಕ ಸೌಹಾರ್ದತೆಯನ್ನು ಕದಡಲು ಪ್ರಯತ್ನಿಸುತ್ತವೆ.
ವಕ್ಫ್ ಅಂದರೆ ದಾನ ಎಂದರ್ಥ. ಯಾವುದೇ ಮುಸ್ಲಿಂ ತನ್ನ ಚರ ಅಥವಾ ಸ್ಥಿರಾಸ್ತಿಗಳನ್ನು ಅವರ ದೇವರಾದ ಅಲ್ಲಾಹುವಿನ ಹೆಸರಿನಲ್ಲಿ ಶಾಶ್ವತವಾಗಿ ಧಾರ್ಮಿಕ ಉದ್ದೇಶಕ್ಕಾಗಿ ದಾನವಾಗಿ ಕೊಟ್ಟಾಗ ಅಂತಹ ಸಮರ್ಪಣೆಯನ್ನು ವಕ್ಫ್ ಎಂದು ಕರೆಯಲಾಗುತ್ತದೆ. ಹೀಗೆ ದಾನದಿಂದ ಬಂದ ಆಸ್ತಿಯೇ ವಕ್ಫ್.
ಈ ವಕ್ಫ್ ಕಾಯಿದೆಯನ್ನು 1954 ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿ ನಿರ್ವಹಣೆಗಾಗಿ ವಕ್ಫ್ ಮಂಡಳಿ ರಚಿಸಲಾಯ್ತು. 1995 ರಲ್ಲಿ ತಿದ್ದುಪಡಿ ತಂದು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಕ್ಫ್ ಮಂಡಳಿ ಸ್ಥಾಪಿಸಲಾಯ್ತು. ಈ ವಕ್ಫ್ ಮಂಡಳಿಗಳೊಂದಿಗೆ ಸಮನ್ವಯ ಸಾಧಿಸಲು ಕೇಂದ್ರೀಯ ವಕ್ಫ್ ಕೌನ್ಸಿಲ್ ರಚಿಸಲಾಯ್ತು 2013 ರಲ್ಲು ಮತ್ತೆ ತಿದ್ದುಪಡಿ ಮಾಡಿ ವಕ್ಫ್ ಹಕ್ಕುಗಳನ್ನು ಬಲಪಡಿಸಲಾಯ್ತು. ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಬಂದಾದ ಮೇಲೆ 1995 ರ ವಕ್ಫ್ ಕಾಯಿದೆಗೆ ತಿದ್ದುಪಡಿ ವಿಧೇಯಕ ತರಲು ಮುಂದಾಯಿತು. ಈ ವಿಧೇಯಕದ ಪ್ರಕಾರ ವಕ್ಫ್ ಮಂಡಳಿಗಳು ದಾನವಾಗಿ ಬಂದ ಆಸ್ತಿಗಳನ್ನು ಜಿಲ್ಲಾಧಿಕಾರಿಗಳ ಮೂಲಕ ನೋಂದಣಿ ಮಾಡುವುದನ್ನು ಕಡ್ಡಾಯ ಗೊಳಿಸಿತು. ಈಗ ವಿಧೇಯಕ ಜಂಟಿ ಸಂಸದೀಯ ಸದನದ ಮುಂದಿದೆ.
ತಿರುಪತಿಯಂತಹ ಅನೇಕ ದೇವಸ್ಥಾನಗಳನ್ನು ನಿರ್ವಹಿಸಲು ಹೇಗೆ ಟಿಟಿಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ರಚಿಸಲಾಗಿದೆಯೋ ಹಾಗೆಯೇ ವಕ್ಫ್ ಆಸ್ತಿ ಹಾಗೂ ಚಟುವಟಿಕೆಗಳನ್ನು ನಿರ್ವಹಿಸಲು ದೇಶದಲ್ಲಿ 30 ವಕ್ಫ್ ಮಂಡಳಿಗಳಿವೆ. ಈ ಮಂಡಳಿಯ ಸುಪರ್ದಿಯಲ್ಲಿರುವ ಆಸ್ತಿಗಳಿಂದ ವಾರ್ಷಿಕವಾಗಿ 200 ಕೋಟಿಯಷ್ಟು ಆದಾಯ ಬರುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಿಂತಲೂ ಹೆಚ್ಚು ಆದಾಯ ನಮ್ಮ ತಿರುಪತಿ ದೇವಸ್ಥಾನ ಒಂದರಿಂದಲೇ ಸಂಗ್ರಹವಾಗುತ್ತದೆ.
ಹೀಗೆ ವಕ್ಫ್ ಆಸ್ತಿಗಳಿಂದ ಸಂಗ್ರಹವಾಗುವ ಆದಾಯವನ್ನು ಧಾರ್ಮಿಕ ಚಟುವಟಿಕೆಗಳಿಗೆ, ಬಡವರಿಗೆ ಸಹಾಯ ಮಾಡಲು, ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಳಕೆಯಾಗುತ್ತದೆ. ಇದೇ ರೀತಿಯ ಕೆಲಸಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಂತ್ರಣದಲ್ಲಿ ಹಿಂದೂ ದೇವಾಲಯಗಳೂ ಮಾಡುತ್ತವೆ. ಮುಸ್ಲಿಂ ಸಮುದಾಯದಲ್ಲಿ ವಕ್ಫ್ ಮಂಡಳಿಯ ನಿಯಂತ್ರಣದ ಮೂಲಕ ಸಮುದಾಯದ ಒಳಿತಿಗೆ ವಕ್ಫ್ ಆದಾಯವನ್ನು ಬಳಸಲಾಗುತ್ತದೆ.
2023 ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ಪ್ರಕಾರ ಯಾವುದೇ ಆಸ್ತಿಯನ್ನು ವಕ್ಫ್ ಎಂದು ಘೋಷಿಸಲು ಕೇವಲ ಅಧಿಸೂಚನೆ ಹೊರಡಿಸಿದರೆ ಸಾಕಾಗುವುದಿಲ್ಲ. ಅದಕ್ಕಾಗಿ ಸಮೀಕ್ಷೆಗಳು, ವಿವಾದಗಳ ಕುರಿತು ವಿಚಾರಣೆ ಹಾಗೂ ಶಾಸನಬದ್ಧ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯ ವಾಗಿದೆ.
ಅದಕ್ಕಾಗಿಯೇ ಶಾಸನಬದ್ದವಾದ ವಕ್ಫ್ ಟ್ರ್ಯಬ್ಯುನಲ್ ಎನ್ನುವ ನ್ಯಾಯ ಮಂಡಳಿ ಇರುತ್ತದೆ. ರಾಜ್ಯ ಹೈಕೋರ್ಟ್ ಈ ನ್ಯಾಯಮಂಡಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುತ್ತದೆ. ಇದರಲ್ಲಿ ಹಿಂದೂ ನ್ಯಾಯಾಧೀಶರೂ ಇರುತ್ತಾರೆ. ವಕ್ಫ್ ಕುರಿತ ವಿವಾದಗಳನ್ನು ಈ ನ್ಯಾಯಮಂಡಳಿ ವಿಚಾರಣೆ ನಡೆಸಿ ತೀರ್ಪು ಕೊಡುತ್ತದೆ ಹಾಗೂ ಅದಕ್ಕೆ ಶಾಸನಾತ್ಮಕ ಮಾನ್ಯತೆ ಇರುತ್ತದೆ. ಭೂಮಿ ಮಾಲೀಕತ್ವದ ಕುರಿತು ವಕ್ಫ್ ನ್ಯಾಯಮಂಡಳಿಯ ನಿರ್ಧಾರವನ್ನು ಅಂತಿಮವಾಗಿ ಪರಿಗಣಿಸಲಾಗುತ್ತದೆ.
ವಕ್ಫ್ ಕಾಯಿದೆಯ ಸೆಕ್ಷನ್ 28 ಮತ್ತು 29 ರಲ್ಲಿ ವಕ್ಫ್ ನ್ಯಾಯಮಂಡಳಿ ಹಾಗೂ ಅದರ ಮುಖ್ಯಸ್ಥರಿಗೆ ಮಂಡಳಿಯ ನಿರ್ಧಾರಗಳನ್ನು ಜಾರಿಗೆ ತರಲು ರಾಜ್ಯದ ಯಂತ್ರಾಂಗವನ್ನು ಬಳಸುವ ಅಧಿಕಾರವನ್ನು ನೀಡಲಾಗಿದೆ. ವಕ್ಫ್ ನ್ಯಾಯಮಂಡಳಿಯ ತೀರ್ಪುಗಳನ್ನು ಅನುಷ್ಟಾನಗೊಳಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರವರು ಜವಾಬ್ದಾರರಾಗಿರುತ್ತಾರೆ.
ಬಿಜೆಪಿಗರು ಆಪಾದಿಸುವ ಹಾಗೆ ವಕ್ಫ್ ತನ್ನದೆಂದು ಹೇಳಿದ ಆಸ್ತಿಗಳೆಲ್ಲಾ ಅದರದ್ದೇ ಆಗುತ್ತದೆ ಎನ್ನುವುದೆಲ್ಲಾ ಸುಳ್ಳು ಸಂಗತಿಯಾಗಿದೆ. ಬಿಜೆಪಿ ಹಾಗೂ ಸಂಘ ಪರಿವಾರವು ವಕ್ಫ್ ಕಾಯ್ದೆ ಹಾಗೂ ಮಂಡಳಿಯನ್ನು ವಿರೋಧಿಸುತ್ತಾ ಬಂದಿದೆ. ವಕ್ಫ್ ಕಾಯಿದೆಗೆ ತಿದ್ದುಪಡಿ ತಂದು ವಕ್ಫ್ ಮಂಡಳಿಯ ಅಧಿಕಾರವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದೆ.
ವಕ್ಪ್ ಮಂಡಳಿಯ ಸದಸ್ಯರು ಮುಸ್ಲಿಂ ಸಮುದಾಯಗಳ ಮತದಾರರ ಮೇಲೆ ಪ್ರಭಾವ ಬೀರುತ್ತಾರೆ ಹಾಗೂ ಬೇರೆ ರಾಜಕೀಯ ಪಕ್ಷಗಳ ಜೊತೆ ಸಂಪರ್ಕ ಹೊಂದಿರುತ್ತಾರೆ ಎಂದು ಆಪಾದಿಸುವ ಬಿಜೆಪಿ ಪಕ್ಷವು ತಿದ್ದುಪಡಿಯ ಮೂಲಕ ವಕ್ಫ್ ರೆಕ್ಕೆ ಪುಕ್ಕ ಕತ್ತರಿಸಲು ಬಯಸುತ್ತಿದೆ.
ವಕ್ಫ್ ಕುರಿತ ಹಿನ್ನೆಲೆ ಹೀಗಿರುವಾಗ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದ ರೈತರ ಜಮೀನು ವಕ್ಫ್ ಆಸ್ತಿ ಎಂದು ಉಲ್ಲೇಖಿಸಿ ನೋಟೀಸ್ ಜಾರಿ ಮಾಡಿದಾಗ ವಿವಾದ ಭುಗಿಲೆದ್ದಿತು. ಕೆಲವಾರು ಗ್ರಾಮಗಳ ರೈತರ ಜಮೀನಿನ ಪಹಣಿಯ 11 ನೇ ಕಲಂ ನಲ್ಲಿ ವಕ್ಫ್ ಆಸ್ತಿ ಎಂದು ನಮೂದಾದಾಗ ಸಂಬಂಧಿಸಿದ ರೈತರು ಸಹಜವಾಗಿ ಆತಂಕಗೊಂಡರು.
ಈಗ ಕರ್ನಾಟಕದಲ್ಲಿ ಉಪಚುನಾವಣಾ ಕಾಲ ಹಾಗೂ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಪೂರ್ಣ ಪ್ರಮಾಣದ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದೆ. ಮತೀಯ ಭಾವನೆ ಕೆದಕಿ ಸೌಹಾರ್ದತೆಯನ್ನು ಕದಡಲು ಸದಾ ಅವಕಾಶಕ್ಕಾಗಿ ಕಾಯುತ್ತಿರುವ ಬಿಜೆಪಿ ಪಕ್ಷಕ್ಕೆ ಈ ವಕ್ಫ್ ನೋಟೀಸ್ ಅಸ್ತ್ರವಾಯಿತು.
ಕಾಂಗ್ರೆಸ್ ಮೇಲೆ ಮುಸ್ಲಿಂ ತುಷ್ಟೀಕರಣದ ಆರೋಪ ಮಾಡುತ್ತಾ ತನ್ನ ರೂಢಿಗತ ಮತಾಂಧ ರಾಜಕಾರಣವನ್ನು ಕೇಸರಿಗರು ಶುರು ಮಾಡಿದರು. ರೈತರ ಹೆಗಲಮೇಲೆ ಮತೀಯ ಬಂದೂಕನ್ನಿಟ್ಟು ಕಾಂಗ್ರೆಸ್ ಪಾಳೆಯದತ್ತ ಸುಳ್ಳಿನ ಗುಂಡುಗಳನ್ನು ಹಾರಿಸತೊಡಗಿದರು. ರಾಜ್ಯ ಸರಕಾರ ಹಾಗೂ ವಕ್ಫ್ ಮಂಡಳಿಯಿಂದ ಲ್ಯಾಂಡ್ ಜಿಹಾದ್ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕರವರು ಹೇಳಿದ್ದಾರೆ.
“ಸಂವಿಧಾನ ಮಾನ್ಯಮಾಡದೆ ಷರಿಯಾ ಕಾನೂನು ಬೇಕೆನ್ನುವ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ” ಎಂದು ಸಿ.ಟಿ.ರವಿಯವರು ತಮ್ಮ ಮತೀಯ ವರಸೆ ಶುರುಮಾಡಿದರು. ಆದರೆ ಅಂಬೇಡ್ಕರ್ ರವರ ಸಂವಿಧಾನವನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿರುವ ಆರೆಸ್ಸೆಸ್ ಮುಖಂಡರು, ಸಂವಿಧಾನ ಬದಲಾಯಿಸಲೆಂದೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುವ ಕೇಸರಿಗರು, ಸಂವಿಧಾನವನ್ನು ಸುಟ್ಟ ಸಂಘಿ ಕೇಡಿಗಳನ್ನು ಖಂಡಿಸದೇ ಇರುವ ಮತಾಂಧರುಗಳು ಮೊದಲು ಈ ದೇಶ ಬಿಟ್ಟು ತೊಲಗಬೇಕಿದೆ. ಅಂತವರು ತಮಗೆ ಅನುಕೂಲವಾಗುವಾಗ ಸಂವಿಧಾನದ ಪರ ಮಾತಾಡುವುದೇ ದೊಡ್ಡ ಹಿಪಾಕ್ರಸಿಯಾಗಿದೆ.
ಆಯ್ತು.. ಕೆಲವು ರೈತರ ಜಮೀನು ತನ್ನದೆಂದು ವಕ್ಫ್ ಮಂಡಳಿ ನೋಟೀಸ್ ಜಾರಿ ಮಾಡಿತು ಎಂದ ತಕ್ಷಣ ಬಿಜೆಪಿಗರು ಹೇಳುವಂತೆ ಆ ಆಸ್ತಿ ವಕ್ಫ್ ಗೆ ಸೇರುವುದಿಲ್ಲ. ದಾಖಲಾತಿಗಳ ಸಮೇತ ತಕರಾರು ಸಲ್ಲಿಸುವಂತೆ ಅಧಿಕಾರಿಗಳು ಕೊಟ್ಟ ನೋಟೀಸಲ್ಲಿ ಬರೆಯಲಾಗಿದೆ. ಈ ನೋಟಿಸಿಗೆ ಹೆದರುವ ಅಗತ್ಯವಿಲ್ಲ, ಸಂಬಂಧ ಪಟ್ಟ ಕಛೇರಿಗೆ ಸೂಕ್ತ ದಾಖಲಾತಿ ನೀಡಿ ಎಂದು ವಿಜಯಪುರದ ಜಿಲ್ಲಾಧಿಕಾರಿ ಹೇಳಿಯಾಗಿದೆ.
“ಯಾವ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ, ಕೊಟ್ಟ ನೊಟೀಸ್ ನ್ನು ವಾಪಸ್ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸ್ವತಃ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಭರವಸೆ ಕೊಟ್ಟಾಗಿದೆ. ಮೂವರು ಸಚಿವರಿಂದ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನು ವಿವರಿಸಲಾಗಿದೆ.
“ರೈತರು 1974 ಕ್ಕಿಂತ ಮೊದಲಿನ ದಾಖಲೆ ಕೊಟ್ಟರೆ ಅಂತಹ ಆಸ್ತಿಗಳನ್ನು ವಕ್ಫ್ ಅಧಿಸೂಚನೆಯಿಂದ ಕೈಬಿಡಲಾಗುವುದು” ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಹೇಳಿಯಾಗಿದೆ, ಜಿಲ್ಲಾಧಿಕಾರಿಗಳಾದ ಭೂಬಾಲನ್ ನೇತೃತ್ವದಲ್ಲಿ ದಾಖಲೆ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸಲು ರಾಜ್ಯ ಸರಕಾರದಿಂದ ಟಾಸ್ಕ್ ಫೋರ್ಸ್ ಒಂದನ್ನು ರಚಿಸಲಾಗಿದೆ.
ರೈತರ ಪರವಾಗಿ ಇಷ್ಟೆಲ್ಲಾ ಹೇಳಿದರೂ, ಬಿಜೆಪಿಗರ ಸುಳ್ಳು ಆರೋಪಗಳಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸಮರ್ಥನೆಗಳನ್ನು ಕೊಟ್ಟರೂ, ಅನ್ನದಾತರ ಆತಂಕವನ್ನು ದೂರಮಾಡಿದರೂ, ಅಗತ್ಯ ಕ್ರಮಗಳನ್ನು ತೆಗೆದುಕೊಂಡರೂ ಅತೃಪ್ತ ಆತ್ಮಗಳಾಗಿರುವ ಈ ಬಿಜೆಪಿಗರಿಗೆ ತೃಪ್ತಿ ಎಂಬುದಿಲ್ಲ.
ಸುಳ್ಳುಗಳನ್ನು ಹೇಳುತ್ತಾ ಆತಂಕ ಸೃಷ್ಟಿ ಮಾಡಿ ಹಿಂದೂ ಮುಸ್ಲಿಂ ಹೆಸರಲ್ಲಿ ರೈತರನ್ನು ಸರಕಾರದ ವಿರುದ್ಧ ಎತ್ತಿಕಟ್ಟಿ ಮತೀಯ ಭಾವನೆಗಳನ್ನು ಪ್ರಚೋದಿಸುವ ಕೆಲಸವನ್ನು ಬಿಜೆಪಿ ನಾಯಕರು ಸಮರೋಪಾದಿಯಲ್ಲಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎನ್ನುತ್ತಲೇ ಕೋಮುಭಾವನೆ ಕೆರಳಿಸಿ ಹಿಂದೂಗಳ ತುಷ್ಟೀಕರಣವನ್ನು ಕೇಸರಿಪಡೆ ಮಾಡುತ್ತಿದೆ.
ಈ ಹಿಂದೆ ಇದೇ ಬಿಜೆಪಿ ನೇತೃತ್ವದ ಸರಕಾರ ಇದ್ದಾಗಲೂ ವಕ್ಫ್ ಪರವಾಗಿ ರೈತರಿಗೆ ನೋಟೀಸ್ ಕೊಟ್ಟಿದ್ದನ್ನು ಬಿಜೆಪಿ ಮರೆಮಾಚುತ್ತಿದೆ. ಕಾಂಗ್ರೆಸ್ ಸರಕಾರ ಇದ್ದಾಗ ನೋಟೀಸ್ ಜಾರಿಯಾದರೆ ಭೂಮಿ ಆಕಾಶ ಒಂದು ಮಾಡಿ ಗದ್ದಲ ಎಬ್ಬಿಸುತ್ತದೆ. ಅವರ ಆರೋಪಗಳಿಗೆ ಕಾಂಗ್ರೆಸ್ಸಿಗರು ಸಮರ್ಥನೆ ಕೊಡುವುದರಲ್ಲೇ ತಮ್ಮ ಶಕ್ತಿ ಸಾಮರ್ಥ್ಯವನ್ನು ವ್ಯಯಿಸುತ್ತಾರೆ.
ಈ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳು ಚುನಾವಣೆಯಲ್ಲಿ ಯಾರಿಗೆ ಲಾಭ ನಷ್ಟ ತಂದುಕೊಡುತ್ತದೆಯೋ ಗೊತ್ತಿಲ್ಲ. ಆದರೆ ಹಿಂದೂ ಮುಸ್ಲಿಂ ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಹಾಳುಮಾಡಿ ಮತೀಯ ದ್ವೇಷ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.
ಚುನಾವಣಾ ಸಮಯದಲ್ಲಿ ಬಿಜೆಪಿಗರಿಗೆ ರೈತರ ಮೇಲೆ ಎಲ್ಲಿಲ್ಲದ ಕಾಳಜಿ ಕಳಕಳಿ ಉದ್ಭವವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ನೆರೆ ಬಂದು ರೈತರು ತೀವ್ರ ಕಷ್ಟ ನಷ್ಟಗಳಿಗೆ ಒಳಗಾದಾಗ ಪರಿಹಾರ ಕೊಡಲಿಲ್ಲ. ದೆಹಲಿ ಗಡಿಯಲ್ಲಿ ರೈತರು ವರ್ಷಗಳ ಕಾಲ ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟನೆ ಮಾಡಿದಾಗ ಕ್ರೂರವಾಗಿ ರೈತರನ್ನು ದಮನಿಸಲು ಪ್ರಯತ್ನಿಸಿದ್ದೇ ಇದೇ ಬಿಜೆಪಿಯ ಕೇಂದ್ರ ಸರಕಾರ. ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಪಡಿಸುವುದಾಗಿ ಲಿಖಿತವಾಗಿ ಕೊಟ್ಟು ಇಲ್ಲಿಯವರೆಗೂ ಕೊಟ್ಟ ಮಾತು ಉಳಿಸಿಕೊಳ್ಳದೇ ರೈತರಿಗೆ ದ್ರೋಹ ಮಾಡಿದ್ದು ಇದೇ ಕೇಸರಿ ಪಕ್ಷದ ಸರಕಾರ.
ರಾಜ್ಯದಲ್ಲಿ ಮಹದಾಯಿ ಯೋಜನೆ ಜಾರಿಗೆ ತಂದೇ ತರುತ್ತೇವೆ ಎಂದು ಆಶ್ವಾಸನೆ ಕೊಟ್ಟು ಇಲ್ಲಿಯವರೆಗೂ ಏನನ್ನೂ ಮಾಡದೇ ರೈತರ ಬೆನ್ನಿಗೆ ಚೂರಿ ಹಾಕಿ ವಂಚಿಸಿದ್ದೂ ಇದೇ ಬಿಜೆಪಿ ಪಕ್ಷ. ಒಟ್ಟಾರೆಯಾಗಿ ರೈತ ವಿರೋಧಿತನವನ್ನು ಹೊಂದಿರುವ ಬಿಜೆಪಿ ಪಕ್ಷಕ್ಕೆ ಚುನಾವಣಾ ಸಂದರ್ಭದಲ್ಲಿ ರೈತರ ಮೇಲೆ ಪ್ರೀತಿ ಉಕ್ಕೇರಿ ಬಂದಿದೆ. ಮೊದಲು ರೈತ ಸಮುದಾಯ ಬಿಜೆಪಿ ಪಕ್ಷದ ಹುನ್ನಾರಗಳನ್ನು ತಿಳಿಯಬೇಕಿದೆ. ಬಿಜೆಪಿ ಹಿಂದಿನಿಂದಲೂ ರೈತರಿಗೆ ಮಾಡಿದ ವಂಚನೆಯನ್ನು ನೆನಪಿಸಿಕೊಳ್ಳಬೇಕಿದೆ.
ವಕ್ಫ್ ಬೋರ್ಡಿನವರಿಂದಲೋ ಅಥವಾ ಅಧಿಕಾರಿಗಳಿಂದಲೋ ಅಥವಾ ಕಾಂಗ್ರೆಸ್ ಸರಕಾರದಿಂದಲೋ ರೈತರಿಗೆ ಅನ್ಯಾಯವಾಗಿದೆ ಎಂದರೆ ರೈತ ಸಂಘಟನೆಗಳು ಈ ಮತಾಂಧ ಬಿಜೆಪಿಗರನ್ನು ದೂರವಿಟ್ಟು ಹೋರಾಟ ಮಾಡಲಿ. ಬಿಜೆಪಿಗರು ಹುಟ್ಟುಹಾಕುವ ಮತೀಯ ದ್ವೇಷಕ್ಕೆ ರೈತರು ಬಲಿಯಾಗದಿರಲಿ.
ಗ್ರಾಮ ಗ್ರಾಮಗಳಲ್ಲಿ ಸೌಹಾರ್ದತೆಯಿಂದ ಬದುಕುತ್ತಿರುವ ಹಿಂದೂ ಮುಸ್ಲಿಂ ಸಮುದಾಯದವರು ಹಿಂದುತ್ವವಾದಿಗಳು ಹಚ್ಚುವ ಬೆಂಕಿ ಸೋಂಕಿಸಿಕೊಂಡು ದ್ವೇಷದ ಉರಿಯಲ್ಲಿ ಸಮಾಜದ ನೆಮ್ಮದಿ ಹಾಳು ಮಾಡದಿರಲಿ. ಈ ಬಿಜೆಪಿಗರು ಹಚ್ಚುವ ಕೋಮು ಬೆಂಕಿಗೆ ಇನ್ನಷ್ಟು ಇಂಧನ ಸುರಿದು ಕೋಮುಜ್ವಾಲೆಯನ್ನು ದೇಶಾದ್ಯಂತ ಹರಡಲು ಪ್ರಯತ್ನಿಸುವ ಮಾರಿಕೊಂಡ ಮಡಿಲ ಮಾಧ್ಯಮಗಳ ಬಗ್ಗೆ ಜನರು ಎಚ್ಚರದಿಂದ ಇರಲಿ. ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಲಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ವಕ್ಫ್ ಆಸ್ತಿಯ ಹಿನ್ನೆಲೆ ಮತ್ತು ಕಾನೂನು