ಡಾ. ವಿನಯಾ ಒಕ್ಕುಂದ ಅವರ ಕದಳಿ ಸಮಾವೇಶದ ಭಾಷಣದ ಟಿಪ್ಪಣಿ
ಕಲಬುರಗಿಯಲ್ಲಿ ಅ.27 ರಂದು ನಡೆದ 12 ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿಯಲ್ಲಿ “ಒಳಗೆ ಸುಳಿವ ಆತ್ಮ” ಎಂಬ ವಿಷಯದಲ್ಲಿ ಡಾ. ವಿನಯಾ ಒಕ್ಕುಂದ ಅವರು ಆಡಿದ ಮಾತುಗಳ ಸಂಕ್ಷಿಪ್ತ ಟಿಪ್ಪಣಿ ಇಲ್ಲಿದೆ.
ವಚನ ಸಾಹಿತ್ಯ ಒಂದು ವಿಸ್ಮಯ. ಪ್ರಪಂಚದ ಇತಿಹಾಸದಲ್ಲಿ ಜನಸಾಮಾನ್ಯರು ಕಟ್ಟಿದ ಚಳುವಳಿ ಮತ್ತು ಆ ಚಳುವಳಿಯ ಸಾಹಿತ್ಯ ಇಷ್ಟೊಂದು ಮರು ಓದುಗಳಿಗೆ ಒಳಗಾದದ್ದಿಲ್ಲ. ತನ್ನ ಕಾಲವನ್ನು ಮಾತ್ರವಲ್ಲ ತನ್ನ ಮುಂದಿನ ತಲೆಮಾರುಗಳನ್ನೂ ತೀವ್ರವಾಗಿ ಎಚ್ಚರಿಸಿದ, ಪ್ರಶ್ನಿಸಿದ ಮತ್ತೊಂದನ್ನು ಕಾಣುವುದು ಕಷ್ಟ. ಇಂದಿಗೂ ಸಾಹಿತ್ಯದ ಓದಿಗೆ ಸಮ ಸಮಾಜದ ಕನಸಿಗೆ ಇಂಬು ಕೊಡುವ ಗುರುಮನೆಯಿದು.
I. ವಚನಗಳ ಓದು ಮೂರು ಕ್ರಮಗಳಲ್ಲಿ ನಡೆದು ಬಂದಿದೆ.
1. ಸಾಂಪ್ರದಾಯಿಕ ಓದು : ವಚನಗಳ ಸಂಪಾದನೆಯ, ರಾಷ್ಟ್ರೀಯ ಪುನರುತ್ಥಾನವಾದೀ ಚಿಂತನೆಯ ಗುಣ ಬೆರೆತ, ಸ್ವಮತ-ಧರ್ಮಗಳ ಜಾಗೃತಿ ಮುಖ್ಯವಾದ, ಉದಾರವಾಗಿ ನಿರ್ವಚಿಸಿಕೊಳ್ಳುವ ಜರೂರತ್ತಿನ ಓದು. ವಚನಗಳ ಸಂಗ್ರಹ, ಸಂಪಾದನೆ ವಿಶ್ಲೇಷಣೆಗಳಲ್ಲಿ ಈ ಗುಣ ದಟ್ಟವಾಗಿತ್ತು. ಇಲ್ಲಿ ವಚನಗಳ ಆಯ್ದು ಕಟ್ಟುವ ಬಗೆಯೂ ಕಾಣಿಸಿಕೊಂಡಿತು.
2. ಪ್ರಗತಿಪರ ಓದು : ಸ್ವಾತಂತ್ರ್ಯಾ ನಂತರದ ಸಾಮಾಜಿಕ ತಲ್ಲಣಗಳು ಸಮಕಾಲೀನ ಸಂಕಟಗಳಿಗೆ ಪರಂಪರೆಯಲ್ಲಿ ಪರಿಹಾರಗಳಿವೆಯೇ ಎಂಬ ಜೀವಪರ ಹುಡುಕಾಟಗಳಿಗೆ ಆಸ್ಪದ ಒದಗಿಸಿದ ಈ ಅಧ್ಯಯನ ದಾರಿಯು ನೂರು, ಸಾವಿರ ಮರು ಓದುಗಳಾಗಿ ವಚನ ಸಾಹಿತ್ಯವನ್ನು ಅನುಸಂಧಾನಗೊಳಿಸಿಕೊಂಡಿದೆ.
3. ನಿರಾಕರಣೆಯ ಓದು : ಸಾಂಪ್ರದಾಯಿಕ ಮತ್ತು ಪ್ರಗತಿಪರ ಓದುಗಳು ಪರಸ್ಪರ ಬೆರೆವ ಅಗತ್ಯದ ಕಾಲದಲ್ಲಿ ವಚನ ಸಾಹಿತ್ಯವು ಧರ್ಮವೊಂದರ ಆಶಯಗಳ ದಾಖಲೆ ಆರ್ಷೇಯ ಧರ್ಮಗಳಲ್ಲಿ ಯಾವುದು ಉಲ್ಲೇಖಗೊಂಡಿವೆಯೋ ಅವೇ ಇಲ್ಲೂ ಮುಂದುವರೆದಿವೆ, ಅನುವಾದಿತವಾಗಿವೆ-ವಾಸ್ತವದಲ್ಲಿ ಇದೊಂದು ಬಾಳಿನ ಪ್ರಾಕ್ಟಿಸ್ ಆಗಿರಲಿಲ್ಲ ಎನ್ನುವ ನಿರಾಕರಣೆಯ ಚರ್ಚೆ ಮುನ್ನೆಲೆಗೆ ಬರತೊಡಗಿತು. ಇದರ ಉದ್ದೇಶ ಸಮಸಮಾಜದ ಕನಸಿನ ಬೇರುಗಳನ್ನು ಕತ್ತರಿಸುವುದಾಗಿತ್ತು.
ಅಂದಂದಿನ ನುಡಿಯ ಅಂದಂದೇ ಅರಿಯಲಾಗದು-ಎನ್ನುತ್ತಾನೆ ಅಲ್ಲಮ. ಹೊಸ ಕಾಲದ ಹೊಸನೋಟ ಕ್ರಮಗಳಿಗೆ ಹಾಸುಹೊಕ್ಕಾಗುವ ತ್ರಾಣ ವಚನಗಳಿಗಿದೆ.
II. ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ- ಎಂಬ ಈ ತಾತ್ವಿಕ ಚೌಕಟ್ಟು ಈ ನೆಲದ ಮೊಟ್ಟ ಮೊದಲ ಮಹಿಳಾ ಸಮಾನತೆಯ ರೂಪಕ. ಗಂಡಾಗಿ ಮಾತ್ರ ಮೋಕ್ಷಕ್ಕೆ ಅರ್ಹ ಎಂದ ಜೈನ ಧರ್ಮ, ಹೆಣ್ಣಿನ ಸಹಬಾಳ್ವೆಯನ್ನು ಅನುಮಾನಿಸಿದ ಬೌದ್ಧ ಧರ್ಮದ ಮೊದಲರ್ಧ, ಹೆಣ್ಣನ್ನು ಹೊಲೆ ಎಂದ ವೈದಿಕಶಾಹಿ ಇವುಗಳ ಜಡತೆಯನ್ನು ನೀಗಿಸಿದ್ದು ಶರಣ ಚಳುವಳಿ, ಹೆಣ್ಣನ್ನು ಮನುಷ್ಯಳೆಂದು ಒಪ್ಪದ ವೈದಿಕ ಧರ್ಮಶಾಸ್ತçಗಳ ಕಾಠಿಣ್ಯದಿಂದ ಬಿಡುಗಡೆಯ ಬಾಗಿಲು ತೆರೆದದ್ದು ಶರಣಧರ್ಮ. ಹೆಣ್ಣು ಬಾಳಿನ ಘನತೆಯ ಮರುಜೀವಣಿಯಿದು. ಜಗತ್ತಿನೆದುರು ಕನ್ನಡದ ಗೌರವದ ಕುರುಹು ಈ ಚಳುವಳಿ. ಆದ್ಯ ವಚನಕಾರ ಜೇಡರ ದಾಸಿಮಯ್ಯನ- ಮೊಲೆ ಮುಡಿ ಬಂದಡೆ…… ಎಂಬ ವಚನ, ಹೆಣ್ತನದ ಹರಲಿಗಳಿಂದ ಬಿಡುಗಡೆ ಕೊಟ್ಟ ಸಂವಿಧಾನದ ಪ್ರಿಯಾಂಬಲ್. ವ್ಯಕ್ತಿತ್ವಕ್ಕೆ ಹುಟ್ಟಿನ ಸೋಂಕಿಲ್ಲ, ಲಿಂಗದ ಸೋಂಕಿಲ್ಲ- ಎಂಬ ತಿಳಿವಿನ ಧಾರೆ. ಈ ವೈಚಾರಿಕತೆಯನ್ನು, ಅನ್ವಯಗೊಳಿಸಲು ವಿಸ್ತರಿಸಲು ಬಸವಣ್ಣ, ಅಲ್ಲಮಪ್ರಭು ಆದಿಯಾಗಿ ಎಲ್ಲರ ವಚನಗಳ ಸಾಕ್ಷ್ಯಗಳಿವೆ. ಸತಿ ಭಕ್ತೆಯಾದೊಡೆ ಹೊಲೆಗಂಜಲಾಗದು ಎಂಬ ನಿಲುವು. ತನ್ನ ಸೀಮಿತತೆಯಲ್ಲೂ ಹೆಣ್ಣಿನ ಗೃಹಿಣಿತನಕ್ಕೆ ಸಿಕ್ಕ ಮನ್ನಣೆ. ಹೆಣ್ಣಿನ ಕುರಿತ ವೈದಿಕ ಧರ್ಮಶಾಸ್ತ್ರಗಳು ಯಾವ ಮಿಥ್ಯಗಳನ್ನು ಕಟ್ಟಿದ್ದವೋ ಅದನ್ನು ಮುರಿವ ಪರ್ಯಾಯವು ರೂಪುಗೊಂಡ ಬಗೆ.
III. ಹೆಣ್ಣಿನ ಸಮಾನತೆಯ ಪ್ರಶ್ನೆಯು ಸಂವೇದನೆಯಾಗಿ ಅಂತರ್ಗತವಾಯಿತೇ, ಆದರ್ಶದ ಹಂತಕ್ಕೇ ಉಳಿಯಿತೇ? ಈ ಕೇಳಿಕೆ, ಇಂದಿನ ಕಣ್ಣಪಟ್ಟಿಯಿಂದ ಅಂದನ್ನು ಅಳೆದು ತೂಗುವುದಕ್ಕಾಗಿ ಅಲ್ಲ. ನಡೆ-ನುಡಿಗಳ ಒಂದುತನದ ಹಂಬಲ ಹೊತ್ತ ವಚನ ಚಳವಳಿಗೆ ಲಿಂಗಸಮಾನತೆಯನ್ನು ಬದುಕಾಗಿಸಿಕೊಳ್ಳುವುದು ಸಾಧ್ಯವಾಯಿತೇ ಎಂಬ ಹುಡುಕಾಟಕ್ಕಾಗಿ. ಇದು ಇಂದಿಗೂ ಮೀರಲಾಗದ ತೊಡಕು. ಪ್ರಾಣ ಘಾತುಕ ಸಂಕಟ. ಬಸವಣ್ಣನಿಗೆ ಜಾತಿ ನಿರಸನವನ್ನು ಸಾಧಿಸಿಕೊಳ್ಳುವುದು ಸಾಧ್ಯವಾಯಿತು. ಚೆನ್ನಯ್ಯನ ಮನೆಯ ದಾಸನ ಮಗನು……., ನೆಲನೊಂದೆ ಹೊಲಗೇರಿ……., ಅಪ್ಪನು ನಮ್ಮ ಮಾದಾರ ಚನ್ನಯ್ಯ …… , ಇವೆಲ್ಲ ಹುಟ್ಟನ್ನು ವೈಭವೀಕರಿಸುವ ವೈದಿಕಕ್ಕೆ ಒಡ್ಡಿದ ಸವಾಲುಗಳು. ಇಷ್ಟು ದಟ್ಟವಾದ ಖಚಿತವಾದ ರೀತಿಯಲ್ಲಿ ಪುರಷಾಹಂಕಾರವನ್ನು ಕಳೆದುಕೊಳ್ಳುವುದು ಸಾಧ್ಯವಾಗಲಿಲ್ಲ.
ಎನ್ನ ಸತಿ ನೀಲಲೋಚನೆ….. –ಎಂಬ ವಚನ, ಹೆಣ್ಣು ಮತ್ತು ದೇಹದ ಸಮೀಕರಣದ ಪೂರ್ವನಿಶ್ಚಿತ ನೆಲೆಯನ್ನು ಸತಿ-ಪತಿಗಳೊಂದಾಗುವ ಹೆಣ್ಣಿನ ಅನಾಯ್ಕೆಯನ್ನು ಎದುರಿಡುತ್ತಿದೆ. ಬಸವಣ್ಣನ ಭಕ್ತಿ ಪರೀಕ್ಷೆಗಾಗಿ ಒದಗಬೇಕಾದವಳು ನೀಲಾಂಬಿಕೆ. ನೀಲಮ್ಮನ ವಚನಗಳು ಪ್ರಸಾದಕಾಯವಾಗಿ ಅರ್ಪಿತಳಾದವಳ ಬೇಗುದಿಯ ಭಾವಗೀತೆಗಳಂತಿವೆ. ಕಳ್ಳನ ಮನೆಗೊಬ್ಬ …….ಚಾಂಡಲಗಿತ್ತಿ…… ಎಂಬ ವಚನ ಸತೀತ್ವದ ಬಿಕ್ಕಟ್ಟುಗಳ ಮತ್ತೊಂದು ಕಥನ. ಜೇಡರ ದಾಸಿಮಯ್ಯ ಮತ್ತು ದುಗ್ಗಳೆಯ ವಿವಾಹ ಪೂರ್ವದ ಪರೀಕ್ಷೆಯ ಕಥನ, ಅಂಬಲಿಯ ಪ್ರಸಂಗಗಳು- ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ-ಎಂಬ ಸಾಂಪ್ರದಾಯಿಕ ಪರಿಭಾಷೆಗಳು, ಪತಿಯಾಜ್ಞೆಯಲ್ಲಿ ನಡೆಯದಿರೆ ಯಾತನೆಯಲ್ಲವೆ ? (ಗಂಗಾಂಬಿಕೆ), ಇಂತಿವರ ಕಾರುಣ್ಯ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ ತತ್ತ್ವದ ಮಾತು ಎನಗೇಕಯ್ಯ ? (ದುಗ್ಗಳೆ)- ಹೀಗೆ ಮುಖಾಮುಖಿಗೊಳಿಸಿದಾಗ ಹೊರಡುವ ಫಲಿತ ಹೆಣ್ಣಿನ ಸಮಾನತೆಯ ಸಂಕಟದ ಸಂಕೀರ್ಣತೆಯ ಆಯಾಮ. ಇವು ದಾಂಪತ್ಯವೆಂಬ ಖಾಸಗಿ ವಲಯದ ಸಮಸ್ಯೆ ಎಂದು ಅಲಕ್ಷಿಸಲಾಗುವುದಿಲ್ಲ. ಸಾಮಾಜಿಕವಾಗಿ ಹೆಣ್ಣನ್ನು ಸಹಜೀವಿಯಾಗಿ ಒಪ್ಪಿಕೊಳ್ಳುವಲ್ಲಿಯೂ ಈ ತೊಂದರೆ ಎದುರಾಗಿದೆ. ಪರಸತಿಯನು ಮಹಾದೇವಿಯೆಂಬೆ-ಎಂಬ ಗೌರವ ಸಮರ್ಪಣೆ, ಆ ಸತಿಯ ಪತಿಗೆ ಸಲ್ಲುವಂಥದ್ದು. ಸತಿಯರಲ್ಲದ ಗೊಗ್ಗವ್ವೆ, ಸಂಕವ್ವೆಯಂಥವರ ಬಗೆಗಿನ ನಿಲುವು ?
ಹೆಣ್ಣಿಗೆ ಸಾಮಾಜಿಕ ಗೌರವವನ್ನು ಕೊಟ್ಟ ಬಸವಣ್ಣನಿಗೂ ಈ ತೊಡಕು ನೀಗುವುದು ಸುಲಭವಾಗುವುದಿಲ್ಲ ಎನ್ನುವುದೇ ಸಮಸ್ಯೆಯ ತೀವ್ರತೆಯನ್ನು ಎದುರಿಡುತ್ತಿದೆ. ಲಿಂಗನಿಷ್ಠೆಯ ಶರಣಧರ್ಮದ ನಿಯಮ ಮಂಡಿಸುವಾಗ ಮತ್ತೆ ಮತ್ತದೇ ಮಡದಿ-ಸೂಳೆಯರ ಮಾದರಿಗಳು. ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ………., ಕೂಸುಳ್ಳ ಸೂಳೆ ಧನದಾಸೆಗೆ ………….. ಇಂತಹ ಹಲವುಗಳಿವೆ.
ಇದು, ಮಹಿಳಾ ಸಮಾನತೆ ಎಂಬ ಅಗ್ನಿದಿವ್ಯ. ಇಂದಿಗೂ ಗಂಡಿಗೂ, ಹೆಣ್ಣಿಗೂ ದಕ್ಕಿಸಿಕೊಳ್ಳಲಾಗದ ಪ್ರಮೇಯವೇ ಎಂಬುದಕ್ಕೆ ಸಾಕ್ಷಿ. ಅಚ್ಚರಿ & ಸಂಭ್ರಮವೆಂದರೆ ಈ ತೊಡಕನ್ನು ದಾಟಿದವರು ೧೨ನೇ ಶತಮಾನದ ಶರಣೆಯರು. ವಚನ ಚಳವಳಿ ಎಂಬ ಸಾಮಾಜಿಕ ಕ್ರಾಂತಿಗೆ ದೀವಿಗೆಯಿವರು. ಒಳಗೆ ಸುಳಿವಾತ್ಮ ಎಂಬ ಬೆಳಕಿನ ಬೀಜವನ್ನು ತಮ್ಮ ವ್ಯಕ್ತಿತ್ವದಲ್ಲಿ ನೆಟ್ಟು ಬೆಳಕನ್ನು ಬೆಳೆದರು. ಬೆಟ್ಟಿ ಫ್ರೀಡನ್ ಎಂಬ ಸ್ತ್ರೀವಾದಿ ಚಿಂತಕಿ “ಜಗತ್ತಿನ ಎಲ್ಲ ಚಳುವಳಿಗಳು ಹೆಣ್ಣಿನ ಪಾಲುದಾರಿಕೆಯಿಂದ ಯಶಸ್ವಿಯಾಗಿವೆ. ಆದರೆ ಆ ಚಳುವಳಿಗಳು ಹೆಣ್ಣಿಗೆ ಕೊಟ್ಟಿದ್ದೇನು?” ಎಂಬ ಪ್ರಮೇಯವನ್ನಿಡುತ್ತಾರೆ. ಆ ಮರುವಿವೇಚನೆಗೆ ವಚನ ಚಳುವಳಿಯೂ ಹೊರತಲ್ಲ. ಒಳಗೆ ಸುಳಿವ ಆತ್ಮಶಕ್ತಿಯ ನಿರ್ವಚನದ ನೆಲೆ ಅಕ್ಕ ಎಂಬ ಮೊದಲ ಸ್ತ್ರೀವಾದಿಯದು. ಅಕ್ಕನೆಂಬ ಅನೂಹ್ಯ ಚೈತನ್ಯದ ಆಸ್ಫೋಟಕ್ಕೆ ಬಸವಾದಿ ಪ್ರಮಥರ ಅನುಭಾವ ಮಂಟಪದ ನೆಲೆ ಒದಗಿತು ಎಂಬುದು ಸತ್ಯ. ಅಕ್ಕನೆಂಬ ಸ್ವಯಂಭೂ ದೀಪ್ತಿಯೂ ಅಷ್ಟೇ ಸತ್ಯ. ಹೆಣ್ಣನ್ನು ಆಳಬಹುದೆಂಬ ಪಿತೃಸತ್ತೆಗೆ ಸವಾಲಾದವಳು ಅಕ್ಕ. ಆರೂ ಇಲ್ಲದವಳೆಂದು……, ಹಸಿವಾದೊಡನೆ ಭಿಕ್ಷಾನ್ನಗಳುಂಟು……… ಕಾಮನ ತಲೆಯ ಕೊರೆದು………. ಅತಿಕಾಮಿ ಚನ್ನಮಲ್ಲಿಕಾರ್ಜುನಿಗೂ ತೊಡರನಿಕ್ಕಿದವಳು ಅಕ್ಕ. ಕೌಶಿಕನನ್ನು ಮಾತ್ರವಲ್ಲ ಕೌಶಿಕತನವನ್ನೇ ಎದುರಿಸಿದವಳು. ಎಲುಬಿನ ತಡಿಕೆ— ಎಂಬ ದೇಹ ನಿರಾಕರಣೆಯಿಂದ, ಎನ್ನ ದೇಹವೇ ನೀನಾದ ಬಳಿಕ ನಿನ್ನನೆಂತು ಪೂಜಿಸಲಿ ? ಎಂಬ ಹೆಣ್ತನವೆಂಬ ಘನತೆಯ ಎತ್ತರವನ್ನು ಸ್ಥಾಪಿಸಿದವಳು.
ಹೆಣ್ತನದ ಬೌದ್ಧಿಕ ವಿಕಾಸದ ಒಂದೊಂದು ಹೆಜ್ಜೆಯಲ್ಲಿಯೂ ಒಳಗೆ ಸುಳಿವಾತ್ಮದ ನಿಷ್ಕರ್ಷೆಗಳು ನಡೆದಿವೆ. ನೀಲಮ್ಮನ- ಹಂದೆಯಲ್ಲ ನಾನು ಹರುಷದ ಧೈರ್ಯವುಳ್ಳ ಹೆಣ್ಣು – ಎಂಬ ವಚನ. ಹೆಣ್ಣು ಎಂದರೆ ಹೀಗೇ ಎಂಬ ರೂಢಿಯನ್ನು ನಿರಾಕರಿಸಿ, ಹೆಣ್ಣಾಗಿ ತಾನೇನು ಎಂದು ಮರುನಿರ್ವಚಿಸಿಕೊಳ್ಳುತ್ತದೆ. ತನ್ನ ತಾನರಿತ ಅರಿವಿನ ನಿರ್ಭೀತ ದಾರಿಯನ್ನು ತೆರೆಯುತ್ತದೆ. ವಚನ ಚಳುವಳಿಗೆ ತಾಯ್ತನದ ವಿವೇಕದ ಸಂಗೋಪನೆ ಮಾಡಿದವರು ವಚನಕಾರ್ತಿಯರು. ಶರಣರೊಳಗೂ ಇದ್ದ ಅವೈಚಾರಿಕ ಅಸಮಾನ ಸ್ಥಿತಿಯ ತಿದ್ದುಪಡಿಗಳಲ್ಲಿ ಅದೆಷ್ಟು ನಿಷ್ಠೆಯಿಂದ ತೊಡಗಿಸಿಕೊಂಡರು! ಭವಿಗಳು ತಪ್ಪಿದರೆ ಒಪ್ಪುವ. ಭಕ್ತ ತಪ್ಪಿದರೆ ಒಪ್ಪಲಾಗದು ಎಂಬ ಅಕ್ಕರೆಯಲ್ಲಿ.
೧) ಅವನ ಎದುರು ಅವನ ಸತಿಯನ್ನು ಅವ್ವಾ ಎಂದು, ಆತ ಸಂದಲ್ಲಿ ಸತಿ ಎಂಬ ಭಂಡರಿಗೆ ವೃತನೇಮಗಳೇಕೆ?
೨) ತುಪ್ಪ ಬೋನ ಉಂಡು, ಅರಿವುಗೆಟ್ಟವರಾಗಿ ಇಷ್ಟಲಿಂಗವಪ್ಪಿದವರು ಜ್ಞಾನಿಗಳು ಎಂದರೆ ಅವರ ಬಾಯಲ್ಲಿ ಬಾಲ ಹುಳು ಸುರಿಯುವೆ.
೩) ಕೈದು ಕೊಡುವರಲ್ಲದ ಕಲಿತನವ ಕೊಡುವರೇ ಮಾರಯ್ಯ?
೪) ಸೀರೆಯೊಳಗೊಂದೆಳೆಯ……. ಎಂಬ ದೃಢತೆ, ಕುರಿಕೋಳಿ ಕಿರಿಮೀನು ತಿಂಬವರಿಗೆಲ್ಲ —- ಎಂಬ ವಚನದಲ್ಲಿ ಇರುವ ಆಹಾರ ರಾಜಕಾರಣದ ತಿಕ್ಕಾಟದ ತೀಕ್ಷ್ಣತೆ,………
ಇಂತಹ ನೂರಾರು ವಚನಗಳು ವಚನಕಾರ್ತಿಯರ ಪ್ರಬುದ್ಧತೆಯ ಸಾಕ್ಷೀಪ್ರಜ್ಞೆಗಳಾಗಿ ನಮ್ಮೆದುರಿವೆ. ಯಾರು ಯಾರನ್ನು ಮುನ್ನಡೆಸಿದರು ಎಂಬ ಅಚ್ಚರಿಯೂ ಅಗಿದೆ.
IV. ನಾವಿಂದು ವಚನ ಚಳವಳಿಯನ್ನು ಮರುಸಂಕಥನಗೊಳಿಸಿಕೊಳ್ಳುವ ಅಗತ್ಯವೇನು ? ಯಾವ ವೈದಿಕ ಜಾಡ್ಯವನ್ನು ವಿರೋಧಿಸಿ, ಸಮ ಸಮಾಜದ ಕನಸು ಕಾಣಲಾಗಿತ್ತೋ ಅದೀಗ ಏನಾಗುತ್ತಿದೆ ? ಜನ ವಿವೇಕವನ್ನು ಮತೀಯಗೊಳಿಸುವ ಆಕ್ರಮಣ, ಬೌದ್ಧಿಕ ವಿಕಾಸವನ್ನು ಹತ್ತಿಕ್ಕುತ್ತಿದೆ. ನಾವಿಂದು ಮಹಿಳೆಯರು, ಜಾತಿ-ಧರ್ಮಗಳ ಸ್ಥಾವರದೊಳಗೆ ಸಿಲುಕಿದ್ದೇವೆ. ತಪ್ಪು-ಸರಿಗಳನ್ನು ಕಾಣಲಾರದವರಾಗಿದ್ದೇವೆ. ವಚನ ಚಳವಳಿ ಕೊಟ್ಟ ಸಮಸಮಾಜದ ಕನಸಿನ ಬೀಜ ನಮ್ಮೆಲ್ಲರ ಬೊಗಸೆಯಲ್ಲಿದೆ. ನೆಲಕ್ಕೂರಿ ಬೆಳೆಸುವ ಬಯಲಿಗೆ ಒಡ್ಡಿಕೊಳ್ಳಬೇಕಿದೆ.
ಇನ್ನೊಂದು ಇತ್ತೀಚಿನ ಲೇಖನ ಇದಕ್ಕೆ ಪೂರಕವಾಗಿ (ಶ್ರೀ ಶಿವಕುಮಾರ ಕಲಾ ಸಂಘ ಸಾಣೆಹಳ್ಳಿಯಿಂದ ಪ್ರಕಟವಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಸಂಪಾದಿಸಿದ “ವಚನ ಸಂವಿಧಾನ” ಕೃತಿಯಲ್ಲಿ ಪ್ರಕಟವಾದ ಒಂದು ಲೇಖನ). “ವಚನ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ”
ನಾವಿಂದು ಪ್ರಜಾಪ್ರಭುತ್ವದಲ್ಲಿದ್ದೇವೆ. ಸಾಂವಿಧಾನಿಕ ಕಾನೂನುಗಳ ರಕ್ಷಣೆಯಲ್ಲಿದ್ದೇವೆ. ಈ ನೆಲದಲ್ಲಿ ಜನಿಸಿದ ಪ್ರತಿಯೊಂದು ಜೀವವೂ ಜೀವಿಸುವ ಮತ್ತು ಜೀವಿಸಲು ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಪಡೆಯುವ ಸ್ವಾತಂತ್ರ್ಯವನ್ನು ಹೊಂದಿವೆ. ಪ್ರಜಾವರ್ಗವು ನಾಗರಿಕ ಬದುಕಿಗೆ ಅತ್ಯಗತ್ಯವಾದ ಮೂಲಭೂತ ಹಕ್ಕುಗಳನ್ನು ಪಡೆದಿದೆ. ಯಾರಿಗೆ ಯಾರಿಂದಲೇ ಅನ್ಯಾಯ ನಡೆದರೂ ಕಾನೂನಿನ ಪ್ರಕಾರ ನ್ಯಾಯವನ್ನು ಪಡೆದುಕೊಳ್ಳುವ ಅವಕಾಶವಿದೆ. ಪ್ರಭುತ್ವದಿಂದಲೇ ಅನ್ಯಾಯ ನಡೆದರೂ ವಿರೋಧಿಸುವ ಸಾಮೂಹಿಕವಾಗಿ ಪ್ರತಿಭಟಿಸುವ ಹಕ್ಕೂ ಇದೆ. ನಿರ್ಭೀತವಾಗಿ ಮತ್ತು ಸಾಂವಿಧಾನಿಕ ಶಿಸ್ತಿಗೆ ಒಳಪಟ್ಟು ಯಾವ ತಾರತಮ್ಯವೂ ಇಲ್ಲದೆ ಬಾಳುವ ಸ್ವಾತಂತ್ರ್ಯವನ್ನು ವ್ಯಕ್ತಿ ಮತ್ತು ಸಮಾಜದ ಗುಂಪುಗಳು ಪಡೆದಿವೆ. ನಮ್ಮ ಸಂವಿಧಾನದ ಪೀಠಿಕೆಯೇ ಈ ಸ್ವಾತಂತ್ರ್ಯದ ಸಂಭ್ರಮವಾಗಿದೆ. ಆದರೆ, ಇಂದಿನ ನಾಗರಿಕರಾಗಿ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆಯೋ? ಉತ್ತರ ಕಡು ಕಷ್ಟದ್ದಾಗಿದೆ. ಜಾರ್ಜ ಆರ್ವೆಲ್ ಕಾದಂಬರಿಯಲ್ಲಿ ಬರುವ
Thought Policy ಎಂಬ ಕಲ್ಪಿತ ನಿಯಂತ್ರಕವು ವಾಸ್ತವವಾಗಿಯೂ ವಿಜೃಂಭಿಸುತ್ತಿದೆ. ನಮ್ಮ ಸುತ್ತಲೂ ಆರ್ಟಿಫೀಶಿಯಲ್ ಇಂಟಲಿಜೆನ್ಸ್ನ ಭ್ರಾಮಕ ಜಗತ್ತು ತೆರೆದುಕೊಳ್ಳುತ್ತಿದೆ. ಯಾವುದು ಸತ್ಯ ಯಾವುದು ಭ್ರಮೆ ಎಂದು ನಿರ್ಧರಿಸಲಾಗದ ಸ್ಥಿತಿಯಿದೆ. ನಮ್ಮ ಬಗ್ಗೆ ನಾವೇ ಸಾಕ್ಷಿಗಳನ್ನು ಕೊಟ್ಟುಕೊಳ್ಳಬೇಕಾದ ಅಸಂಗತ ವಾಸ್ತವದ ದಿನಗಳಿವು. ಯಾರಿಗಾದರೂ ಯಾವಾಗಲಾದರೂ ಇದ್ದಕ್ಕಿದ್ದಂತೆ ಕಟಕಟೆಗಳೇಳಬಹುದು. ಜಾತಿ, ವರ್ಗ, ಲಿಂಗ, ಧರ್ಮಗಳೆಂಬ ಹಳೆಯ ರೋಗಾಣುಗಳು ಅಧಿಕಾರ ರಾಜಕಾರಣದ ಬಲದಿಂದ ಮರಳಿ ಮರಳಿ ರೂಪಾಂತರಗೊಳ್ಳುತ್ತ, ರೂಪಾಂತರಗೊಂಡಷ್ಟು ಪ್ರಬಲವಾಗುತ್ತ, ಆಧುನಿಕ ಪ್ರಜೆಗಳ ಸ್ವಾತಂತ್ರ್ಯವಿಚಾರಶಕ್ತಿಯನ್ನೇ ವಿಫಲಗೊಳಿಸಿವೆ. ಆತ್ಮ ಸ್ವಾತಂತ್ರ್ಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಯ ಪರಿಣಾಮವಾಗಿ ಜನಪ್ರಜ್ಞೆಯಲ್ಲಿ ಅಪರಾಧ ನಿರಪರಾಧಗಳನ್ನು ಗುರುತಿಸುವ ವಿವೇಕ ಇಲ್ಲವಾಗುತ್ತಿದೆ. ಯಾವುದೋ ಬಲಾಢ್ಯ ಪಾಶಗಳು ಸುತ್ತಿ ಜಗ್ಗುತ್ತಿರುವ ಸ್ಥಿತಿಯಿದು. ಇಂತಹ ವರ್ತಮಾನದಲ್ಲಿ ಪರಂಪರೆಯ ತಂಪಿನ ತಾಣಗಳನ್ನು ಹುಡುಕಾಡುವಂತಾಗುತ್ತದೆ. ಹಾಗೇ ಮನಸ್ಸಿಗೆ ತಾಕುವುದು ವಚನ ಸಾಹಿತ್ಯ. ಆಧುನಿಕ ಭಾರತದ ಬಹುದೊಡ್ಡ ಗೆಲುವಾದ ಪ್ರಜಾಸತ್ತೆ ಮತ್ತು ಸಂವಿಧಾನಗಳಿಗೆ ಪಾಶ್ಚಿಮಾತ್ಯ ತತ್ತ್ವ ಚಿಂತನೆಗಳು ಮಾತ್ರ ಕಾರಣವಾಗಿಲ್ಲ. ನಮ್ಮ ನೆಲದ ಜಲಮೂಲಗಳಂತಿರುವ ಭಕ್ತಿ ಪರಂಪರೆಯ ಸೌಹಾರ್ದ ಸಮಾಜದ ಚಿಂತನೆಗಳೂ ಕಾರಣವಾಗಿವೆ. ಇದಕ್ಕೆ ವಚನ ಸಾಹಿತ್ಯದಲ್ಲೂ ಸಾಕಷ್ಟು ಪುರಾವೆಗಳಿವೆ.
ಕನ್ನಡದ ಇತಿಹಾಸದಲ್ಲಿ ವಚನ ಸಾಹಿತ್ಯದಷ್ಟು ಮರುಓದುಗಳಿಗೆ ಒಳಗಾದ ಇನ್ನೊಂದು ಪ್ರಕಾರವಿಲ್ಲ. ಕಳೆದ ೯೦೦ ವರ್ಷಗಳ ಹಿಂದೆ ವಚನ ಚಳುವಳಿಯು ಈಗ ನಾವು ಕಲ್ಪಿಸಿಕೊಳ್ಳುತ್ತಿರುವ ರೀತಿಯಲ್ಲಿಯೇ ಅಕ್ಷರಶಃ ಸಂಭವಿಸಿತ್ತು ಎನ್ನವುದು ಕಷ್ಟ. ನಮಗಿರುವುದು ಸೃಜನಶೀಲ ಪಠ್ಯಗಳ ಪುರಾವೆ. ಆದರೆ, ವಚನ ಚಳುವಳಿ ಎಂಬ ಚರಿತ್ರೆಯೊಳಗಿನ ಚಾರಿತ್ರ್ಯವನ್ನು ಕನ್ನಡವು ಇಂದಿಗೂ ಮರುಸಂಭವಿಸಿಕೊಳ್ಳುತ್ತಿದೆ. ವಚನಗಳ ಸಂಪಾದನೆಯೊಂದಿಗೆ ಪ್ರಾರಂಭವಾದ ಸಾಂಪ್ರದಾಯಿಕ ಓದು, ಕಳೆದ ಶತಮಾನದ ೭೦ರ ದಶಕದಲ್ಲಿ ವೈಚಾರಿಕ ಓದಾಗಿ ಬೆಳೆಯುತ್ತಾ ಬಂದಿತು. ವಚನಗಳ ವಿಶ್ಲೇಷಣೆ ಅರ್ಥಾನ್ವಯಗಳಿಗಷ್ಟೇ ಸೀಮಿತವಾಗದೆ; ವಚನ ಚಳವಳಿಯ ಕಥನವಾಗಿ ಮರುಸೃಷ್ಟಿಗೊಳ್ಳುತ್ತ ಬಂದಿದೆ. ಸಾಹಿತ್ಯದ ವಿವಿಧ ಪ್ರಕಾರಗಳನ್ನು ರಂಗಭೂಮಿಯನ್ನು ಚಿತ್ರಕಲೆ, ವಾಸ್ತುಶಿಲ್ಪಗಳನ್ನು ಕರ್ನಾಟಕದ ಸಾಮಾಜಿಕ ಸಾಹಿತ್ಯಿಕ ಸಾಂಸ್ಕೃತಿಕ ಚಳಿವಳಿಗಳನ್ನು ಸಂವೇದನೆಯಾಗಿ ಆವರಿಸಿಕೊಂಡಿದೆ. `ಅಂದಂದಿನ ನುಡಿಯ ಅಂದAದೇ ಅರಿಯಲಾಗದು’ ಎಂಬ ಅಲ್ಲಮನ ನುಡಿ ನುಡಿಯುತ್ತಲೇ ಇದೆ. ಇಂದು ಸ್ಥಾವರವಾಗಿರುವ ಲಿಂಗಾಯತ ಧರ್ಮದ ರೀತಿ-ರಿವಾಜುಗಳಿಂದ ಬೇರ್ಪಡಿಸಿ ವಚನ ಸಾಹಿತ್ಯವನ್ನು ‘ಮಗು ಕಂಡ ಕನಸಿನ’ ತಳಮಳದಲ್ಲಿ ಕನ್ನಡ ಮನಸ್ಸು ಭಾವಿಸಿಕೊಳ್ಳುತ್ತಿದೆ.
ಜನ ಸಮುದಾಯವನ್ನು ಒಳಗೊಳ್ಳುತ್ತ, ಸಮಸಮಾಜದ ಕನಸು ಕಾಣುವಾಗ ಮತ್ತು ಆ ಕನಸನ್ನು ಬದುಕಾಗಿಸುವ ಸವಾಲನ್ನು ನಿಭಾಯಿಸುವಾಗ; ನಿಯಮ ನಿಬಂಧನೆಗಳು ಅನಿವಾರ್ಯವಾಗಿತ್ತು. ಇದು ಶ್ರಮ ವರ್ಗದ ಸಂಘಟನೆಯಾದ್ದರಿಂದ ಸಾಮುದಾಯಿಕ ಭಾಗೀದಾರಿಕೆಯಲ್ಲಿ ನಂಬಿಕೆಯಿತ್ತು. ಶರಣ ಪಥವನ್ನು ರೂಹುಗೊಳಿಸು ವಾಗಲೇ ಜಂಗಮತ್ವದ ಲಿಂಗಾಯತಕ್ಕೂ, ಸಾಂಸ್ಥಿಕ ಇನ್ನಿತರ ಧರ್ಮಗಳಿಗೂ ಸ್ಪಷ್ಟವಾದ ವ್ಯತ್ಯಾಸ ಕಾಣುತ್ತದೆ. ಇಷ್ಟದೈವ ಸಾನಿಧ್ಯವನ್ನು ಪಡೆಯುವ ಶರಣನಾಗಲು ಅನುಸರಿಸಬೇಕಾದ ನೇಮ, ಅಂತರಂಗ-ಬಹಿರಂಗ ಶುದ್ಧಿಯದ್ದೇ ವಿನಃ ವ್ರತನೇಮ ನಿಷ್ಠಗಳದ್ದಲ್ಲ. ಅನುಭಾವ ಮಂಟಪದ ಪರಿಕಲ್ಪನೆಯೇ ಆಧುನಿಕ ನಾಗರಿಕತೆಯ ಪಾರ್ಲಿಮೆಂಟರಿ ಸ್ಟ್ರಕ್ಚರ್ನ ಬೇರಿನಂತಿದೆ. ಜಗತ್ತಿನಾದ್ಯಂತ ಬುಡಕಟ್ಟು ಸಮುದಾಯಗಳಲ್ಲಿ ಇಂತಹ ರೂಢಿಗಳಿದ್ದವು ಎಂದು ಒಪ್ಪಿತವಾಗಿದೆಯಾದರೂ ಅಲ್ಲಿ ಶ್ರೇಣಿಕೃತ ತರತಮ ಗಳಿರುತ್ತಿದ್ದವು. ತಳಮೂಲದವರು ಮಹಿಳೆಯರು ನಿಷೇಧಿತವಾಗಿರುತ್ತಿದ್ದರು. ಹೇಳುವವರು ಕೇಳುವವರ ಮಧ್ಯೆ ಖಚಿತವಾದ ಅಂತರವಿರುತ್ತಿತ್ತು. ಈ ಗಡಿರೇಖೆಗಳನ್ನು ಉಲ್ಲಂಘಿಸಿದ ಚಾರಿತ್ರಿಕ ಬೆಳವಣಿಗೆ ಅನುಭವ ಮಂಟಪ. ಶರಣರು ಧಾರ್ಮಿಕ ಸಿದ್ಧಾಂತಗಳಾಗಿ ಏನನ್ನು ರೂಪಿಸಿ ಕೊಂಡರೋ ಅದನ್ನೇ ಪ್ರಶ್ನಿಸಿದ ವೈಚಾರಿಕ ಮರುಚಿಂತನೆಗೆ ಒತ್ತಾಯಿಸಿದ ಹಕ್ಕೊತ್ತಾಯಗಳು ತಳಸಮುದಾಯ ಗಳಿಂದ ಮತ್ತು ಮಹಿಳೆಯರಿಂದ ನಡೆದದ್ದೇ, ಜೀವಸತ್ಯವಾದ ಸ್ವಾತಂತ್ರ್ಯದ ಅನ್ವೇಷಣೆಯ ಅಭೀಪ್ಸೆಯಾಗಿದೆ.
ಹಲವು ವಿರುದ್ಧ ಅಭಿಪ್ರಾಯಗಳು ಸಹಮತವಾಗಿ ಬಾಳಿದ ಬಹುತ್ವದಲ್ಲಿಯೇ ವಚನ ಸಾಹಿತ್ಯದ ಸ್ವಾತಂತ್ರ್ಯದ ಸಂಪುಟಗಳಿವೆ.
ಇಷ್ಟಲಿಂಗ ಧಾರಣೆ – ಶರಣ ಧರ್ಮದ ಪ್ರಧಾನ ಕುರುಹಾಗಿತ್ತು. ಅದೇ ಕಾಲದಲ್ಲಿ ಕುರುಹನ್ನು ನಿರಾಕರಿಸಿ, ಅರಿವನ್ನು ಮಾತ್ರ ನಂಬಿದ ಪ್ರಬಲ ಧಾರೆಯೊಂದು ಜೊತೆಯಾಗಿಯೇ ಪ್ರವಹಿಸುತ್ತಿತ್ತು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಬಸವಣ್ಣನ ನಿಲುವನ್ನು ಅಲ್ಲಮಪ್ರಭು ಮತ್ತಿಷ್ಟು ಪ್ರಬಲವಾಗಿ ಪ್ರತಿಪಾದಿಸುತ್ತಾನೆ. ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ, ಆ ಕಲ್ಲು ಕಲ್ಲಮೇಲೆ ಕೆಡೆದಡೆ ದೇವರೆತ್ತ ಹೋಹುದೋ ? ಎಂದು ಎಚ್ಚರಿಸುತ್ತಾನೆ. ಇಷ್ಟಲಿಂಗ ದೀಕ್ಷೆಯು ಸಾಂಸ್ಥಿಕ ಆಚರಣೆ ಆದೊಡನೆಯೇ ಅದನ್ನು ಆವರಿಸಿಕೊಳ್ಳುವ ಕಾಳಿಕೆಗಳ ಅರಿವು ಶರಣರಿಗಿತ್ತು. ಸ್ವಾತಂತ್ರ್ಯವು ಸಂಸ್ಕೃತಿಯ ತಳಹದಿ. ನಾಗರಿಕತೆಯ ರೆಕ್ಕೆ. ಜಗತ್ತಿನ ಪ್ರತಿಯೊಂದು ಜನ ಚಳವಳಿಯೂ ಈ ಪರಿಕಲ್ಪನೆಯನ್ನೇ ಆಸರೆಯಾಗಿಸಿ ಕೊಂಡಿದೆ. ಸ್ವಾತಂತ್ರ್ಯಎಂದರೇನು ? ಎನ್ನುವುದು ಏನಲ್ಲ ಎಂಬ ಸ್ಪಷ್ಟೀಕರಣವನ್ನು ಕೊಡುವುದಾಗಿರುತ್ತದೆ. ಸ್ವಾತಂತ್ರ್ಯವು ಎಲ್ಲ ವಿಧದ ಬಂಧನಗಳಿಂದ ಬಿಡುಗಡೆ ಸಾಧಿಸಿಕೊಳ್ಳುವ ಆತ್ಮೋನ್ನತಿ ಎನ್ನುವುದಾದರೆ ಯಾವ ಸಾಂಸ್ಥಿಕ ಧರ್ಮವೂ ಇದನ್ನು ಬೆಂಬಲಿಸುವುದಿಲ್ಲ. ಧರ್ಮ ಸಂಹಿತೆಗಳನ್ನು ಕಟ್ಟುಪಾಡುಗಳನ್ನು ಸಾಂಸ್ಥಿಕ ಧರ್ಮಗಳು ಬಯಸುತ್ತವೆ. ಆದರೆ, ಶರಣಧರ್ಮದ ಸಂಹಿತೆಯಲ್ಲಿಯೇ ಸಾಂಸ್ಥಿಕ ಜಡ ಲಕ್ಷಣಗಳಿರಲಿಲ್ಲ ಎನ್ನುವುದಕ್ಕೆ ವಚನಗಳಲ್ಲಿ ಸಾಕ್ಷ್ಯಗಳಿವೆ. ಈ ಮಾತು ಇಂದಿನ ಲಿಂಗಾಯತ ಧರ್ಮಕ್ಕೆ ಅನ್ವಯವಾಗುವುದಿಲ್ಲ. ಅದೀಗ ಸಂಪೂರ್ಣ ಸಾಂಸ್ಥಿಕ ಸ್ಥಿತಿಯನ್ನು ತಲುಪಿದೆ. ಹಾಗೆಯೇ ಇಂದು ಹಿಂದೂ ಎಂದು ಕರೆಯಿಸಿಕೊಳುತ್ತಿರುವ ಧರ್ಮವು ಮೇಲ್ನೋಟಕ್ಕೆ ಉದಾರವಾಗಿ ಬಹು ಆಚರಣೆಗಳ ಮೊತ್ತವಾಗಿ ಕಾಣುತ್ತದೆಯಾದರೂ, ಅದು ಮೂಲತಃ ಬಹು ಬದುಕಿನ ಕ್ರಮಗಳಿಗೆ ಈಗ ಕಟ್ಟುತ್ತಿರುವ ಚೌಕಟ್ಟಾಗಿದೆ. ಶರಣ ಧರ್ಮವು ಸಾಮಾಜಿಕ ಚಳುವಳಿಯ ಆಶಯಗಳಿಂದ ರೂಪುಗೊಂಡಿದ್ದರಿಂದ ಬೇರೆ ಧರ್ಮಗಳಿಗೆ ಕಷ್ಟವಾದ ಸ್ವಾತಂತ್ರ್ಯದ ಪರಿಕಲ್ಪನೆಗಳನ್ನು ತನ್ನೊಳಗೆ ಅಂತರ್ಗತಗೊಳಿಸಿಕೊಂಡಿದೆ. ಸಮುದಾಯವು ಆಚರಣೆಯ ಬಹಿರಂಗದತ್ತ ವಾಲತೊಡಗಿದಂತೆ ಅದನ್ನು ಎಳೆದು ನಿಲ್ಲಿಸಿ ಸಂಭಾಳಿಸುವ ಜವಾಬ್ದಾರಿ ನಿರ್ವಹಣೆಯಾಗಿದೆ.
ಮಿಂದು ದೇವರ ಪೂಜಿಸಿಹೆನೆಂಬ
ಸಂದೇಹಿ ಮಾನವ ನೀ ಕೇಳಾ
ಮೀಯದೇ ಮೀನು ? ಮೀಯದೇ ಮೊಸಳೆ ?
ತಾ ಮಿಂದು ತನ್ನ ಮನ ಮೀಯದನ್ನಕ್ಕರ
ಈ ಬೆಡಗಿನ ಮಾತ ಮೆಚ್ಚುವನೆ ಗುಹೇಶ್ವರ ?
ಧರ್ಮದ ನೀತಿ ನಿರೂಪಣಾ ತತ್ತ್ವ ರೂಪುಗೊಳ್ಳುತ್ತಿರುವಾಗಲೇ ಅದನ್ನು ಪ್ರಶ್ನಿಸುವ ಒಳಗಿನವರಾಗಿ ವಿರೋಧಿಸುವ ವಿಚಾರ ಸ್ವಾತಂತ್ರ್ಯವಿದು. ಒಂದು ನಿಯಮ, ಒಂದು ಅನುಸರಣೆ ಎಂಬ ಕಟ್ಟುನಿಟ್ಟಿನ ಹಂಗಿಲ್ಲದ ನಿರಂತರ ಚಲನಶೀಲತೆಯ ಮೂಲಕವೇ ಚೈತನ್ಯಶೀಲವಾಗಿಸುವ ಪ್ರಯತ್ನವು ನಡೆಯಿತು. ಗುರು-ಲಿಂಗ-ಜAಗಮಗಳೆಂಬ ನಂಬಿಕೆಯನ್ನು ಗಾಢವಾದ ತಾತ್ವಿಕತೆಯಲ್ಲಿ ಪ್ರಶ್ನಾರ್ಹವಾಗಿಸುವ ಸ್ವಾತಂತ್ರ್ಯವು ಇಲ್ಲಿತ್ತು.
ಗುರುವೆಂಬವನು ನರನು
ಲಿಂಗವೆಂಬುದು ಕಲ್ಲು
ಜಂಗಮವೆಂಬುದು ಆತ್ಮನು
ಎನ್ನುವ ಅಮುಗೆ ರಾಯಮ್ಮ ತನ್ನ ಅರಿವೇ ತನಗೆ ಗುರು ಎಂಬ ತತ್ತ್ವದವಳು. ಆತ್ಮೋದ್ಧಾರಕ್ಕೆ ಗುರು-ಲಿಂಗ-ಜಂಗಮಗಳ ಹಂಗಿಲ್ಲವೆಂಬ ಸ್ಪಷ್ಟತೆಯವಳು.
ಅಂಗವ ಮರೆದವಂಗೆ ಲಿಂಗದ ಹಂಗೇಕೋ
ಅರಿವ ಕಂಡವಂಗೆ ಕುರುಹಿನ ಹಂಗೇಕೋ
ಎಂದು ಪ್ರಶ್ನಿಸುವ ಲಿಂಗಮ್ಮ, ಕುರುಹುಗೆಟ್ಟು ಅರಿವ ಅರಸಬೇಕು ಎನ್ನುತ್ತಾಳೆ. ಕೆಳಜಾತಿಯ ಭಕ್ತನ ಮನೆಗೆ ಬಂದು, ಲಿಂಗದೀಕ್ಷೆಯನ್ನು ಕೊಟ್ಟು ಜಾತಿಹೀನನೆಂದು ಭಾವಿಸಿ, ಆತನಿಂದ ಅಕ್ಕಿ ಕಣಕವ ಕೊಂಡು ಉಣ್ಣಲಾರದ ಮಡಿವಂತಿಕೆಯಲ್ಲಿ ಹೋಗುವ ಗುರುವಿನ ಮೂಗಕೊಯ್ದು ಖಾರ ತಿಕ್ಕಿ, ಹುಳಿ ಹಿಂಡಿ ದಕ್ಷಿಣದ ಗಾಳಿಗೆ ಒಡ್ಡಬೇಕು ಎಂಬ ನಿಷ್ಠುರದ ಅಂಬಿಗರ ಚೌಡಯ್ಯನ ವಚನವು, ಪ್ರಶ್ನಿಸುವ ಸ್ವಾತಂತ್ರ್ಯದ ಪ್ರತಿನಿಧಿಯಾಗಿದೆ.
ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ
ಪ್ರತ್ಯಕ್ಷನಾದ ಪರಮೇಶ್ವರನ ಕಂಡು
ಇತ್ತಲೇಕಯ್ಯಾ ಕಾಯದ ತಿತ್ತಿಯ ಹೊತ್ತಾಡುವನ ಮುಂದೆ ?
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು
ನೀ ಹೊತ್ತ ಬಹುರೂಪ ತಪ್ಪದೆ
ರಜತಬೆಟ್ಟದ ಮೇಲಕ್ಕೆ ಹೋಗು
ನಿನ್ನ ಭಕ್ತರ ಮುಕ್ತಿಯ ಮಾಡು
ಕಾಮಧೂಮ ಧೂಳೇಶ್ವರನ ಕರುಣದಿಂದ
ನೀನೇ ಬದುಕು
ಎಂಬ ಮಾದಾರ ಧೂಳಯ್ಯನ ವಚನವು, ಅಂಗದೊಳಗಿನ ಲಿಂಗವನ್ನಷ್ಟೇ ಅಲ್ಲ, ಲಿಂಗದೊಳಗಿನ ಶಿವನನ್ನೂ ನಿರಾಕರಿಸುತ್ತದೆ. ಭಕ್ತಿಪಂಥದೊಳಗಿನ ಈ ವಿಮರ್ಶಾ ನಿಲುವು ಅಪರೂಪದ್ದಾಗಿದೆ. ಕಾಯ ಮತ್ತು ಕಾಯಕದೆದುರು ದೈವಬಲವನ್ನು ಭಕ್ತಿಯ ಫಲವನ್ನು ನಿರಾಕರಿಸುವ ಸ್ವಾತಂತ್ರö್ಯ ಶರಣರದಾಗಿತ್ತು. ಭಕ್ತಿಯನ್ನು ಪೂಜೆ-ಪ್ರಸಾದಗಳೆಂಬ ಬಂಧನದಿAದ ಬಿಡುಗಡೆಗೊಳಿಸುವ ಪ್ರಕ್ರಿಯೆ ಇದು. ಬಸವಣ್ಣ ದೇಹವನ್ನು ದೇವಾಲಯವಾಗಿಸಿದ. ಜೇಡರ ದಾಸಿಮಯ್ಯ ದೇಹವನ್ನು ಕೀಳುಗಾಣುವ ದೃಷ್ಟಿಯನ್ನೇ ಪ್ರಶ್ನಿಸಿದ. ‘ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ’ ಎಂಬ ಜೇಡರ ದಾಸಿಮಯ್ಯ ನಿನ್ನ ಭಕ್ತರ ಮುಕ್ತಿಯ ಮಾಡು ಎಂಬ ಮಾದಾರ ಧೂಳಯ್ಯನ ಸಂಕಟದಲ್ಲಿ – ಪರಂಪರೆಯುದ್ದಕ್ಕೂ ತಳಸಮುದಾಯ ಗಳನ್ನು ದೂರವಿಟ್ಟ ಸ್ಥಿತಿಯ ಬಗ್ಗೆ ನೋವಿದೆ. ಮಹಿಳೆಯರಿಗೆ ಮೊಟ್ಟಮೊದಲು ಇಷ್ಟದೈವವನ್ನು ಪಡೆಯುವ ಅವಕಾಶ ಒದಗಿತು. ಹಾಗಾಗಿ ಬಹುತೇಕ ವಚನಕಾರ್ತಿಯರು ವೃತ-ನೇಮ-ನಿಷ್ಠೆಗಳ ಮಾತನಾಡುತ್ತಾರೆ. ಆದರೆ ಅಕ್ಕನಂತಹ ಅನುಭಾವಿ ಹೆಣ್ಣೆಂಬ ಕಾರಣಕ್ಕಾಗಿಯೇ ನಿಗ್ರಹಿಸಲ್ಪಟ್ಟ ಆಧ್ಯಾತ್ಮ ಹಕ್ಕಿನ ಬಗ್ಗೆ ಎಚ್ಚರವಾಗುತ್ತಾಳೆ. `ಎನ್ನ ದೇಹವೇ ನೀನಾದ ಬಳಿಕ ನಿನ್ನನೆಂತು ಪೂಜಿಸಲಿ? ಎಂಬ ಅದ್ವೆöÊತದ ಸವಾಲನ್ನು ಎದುರಿಡುತ್ತಾಳೆ.
ಶರಣಧರ್ಮ, ತನ್ನ ಪಂಥಿಗಳ ಬಾಳ್ವೆಯ ಆಚಾರಕ್ಕೆ ರೂಪಿಸಿ ಕೊಟ್ಟ ಸಿದ್ಧಾಂತಗಳೂ ಪ್ರಶ್ನಾರ್ಹವಾಗಿವೆ. ಸಮ ಸಮಾಜದ ಕನಸನ್ನು ದಿನನಿತ್ಯದ ಬಾಳ್ವೆಗೆ ಅನ್ವಯಗೊಳಿಸುವಾಗ ಕೆಲವು ನಿರ್ದೇಶಕ ತತ್ತ್ವಗಳು ಅಗತ್ಯವಾಗುತ್ತವೆ. ಬಯಲಿಗೂ ಹಾದಿ ಬರೆದುಕೊಳ್ಳುವ ಅಗತ್ಯದಂತೆ. `ಶರಣ ಸತಿ ಲಿಂಗಪತಿ ಎಂಬ ಪ್ರಮೇಯವನ್ನೂ ಹೀಗೇ ನೋಡಬೇಕು. ಆದರೆ, ಸತಿ-ಪತಿ ಎಂಬ ಅನುಕ್ರಮಣಿಕೆಯಲ್ಲಿಯೇ ಸೇರಿ ಹೋಗಿರುವ ಶ್ರೇಣೀಕರಣವನ್ನು ಪ್ರಶ್ನಿಸುವ ಸ್ವಾತಂತ್ರ್ಯ ವ್ಯಕ್ತವಾಗಿದೆ. “ಕೂಟಕ್ಕೆ ಸತಿ-ಪತಿಯೆಂಬ ನಾಮವಲ್ಲದೆ / ಅರಿವಿಗೆ ಬೇರೊಂದೊಡಲುAಟೇ?” “ಲಿಂಗ ಗಂಡಾದ ಪರಿಯೆಂತು, ಶರಣ ಹೆಣ್ಣಾದ ಪರಿಯೆಂತು ?” ಶರಣ ಧರ್ಮದ ಸೈದ್ಧಾಂತಿಕತೆಯನ್ನೂ ಪ್ರಶ್ನಿಸುವ ಸ್ವಾತಂತ್ರ್ಯವನ್ನು ಗೌರವದಿಂದ ನೆನಪಿಸಿಕೊಳ್ಳಬೇಕಿದೆ. ಆಯ್ಕೆ ಮತ್ತು ಅಧಿಕಾರ ರಾಜಕಾರಣವು ಹೆಣ್ಣು ಬಯಸುವ ಸಹಬಾಳ್ವೆಯ ನಿಲುವುಗಳಿಗೆ ಹೊರತಾಗಿರುವುದನ್ನು ವಚನಕಾರ್ತಿಯರು ಪ್ರಶ್ನಿಸುತ್ತಾರೆ. `ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ವಚನದಲ್ಲಿ ಅಕ್ಕ ಕನಸು ಕಾಣುವ ಆಯ್ಕೆಯ ಹಕ್ಕನ್ನು ಎಷ್ಟು ನೊಂದರೂ ದಕ್ಕಿಸಿಕೊಳ್ಳುವ ಸಂಭ್ರಮವನ್ನು ವ್ಯಕ್ತಿಸುತ್ತಾಳೆ. ಆಧುನಿಕ ಮಹಿಳಾ ಸಂವೇದನೆಯ ಮೊಳಕೆಗಳು ಇಲ್ಲಿವೆ ಅನ್ನಿಸುತ್ತದೆ. ಸತಿ-ಪತಿಗಳ ಒಂದುತನದ ಆಧ್ಯಾತ್ಮಿಕ ಭಾಷೆಯೂ ಹೆಣ್ಣನ್ನು ಹೊಂದಿಕೊಳ್ಳಬೇಕಾದ ಒತ್ತಡದಲ್ಲಿಯೇ ನಿರ್ವಚಿಸುವುದನ್ನು ಪ್ರಶ್ನಿಸುತ್ತಾರೆ. “ಇಹಕ್ಕೊಬ್ಬ ಗಂಡ, ಪರಕ್ಕೊಬ್ಬ ಗಂಡನೇ?” ಎಂಬ ಪ್ರಶ್ನೆ ಅಂಥದ್ದು. ಸಂಸಾರ ಸೌಖ್ಯದ ಸಿದ್ಧಾಂತದ ಜೊತೆಯಲ್ಲಿಯೇ ಸಂಸಾರ ನಿರಸನದ ಪರ್ಯಾಯದ ಅವಕಾಶ ಶರಣಧರ್ಮದ್ದು. ಕನ್ನಡದ ಸಾಂಸ್ಕೃತಿಕ ಚರಿತ್ರೆಯಲ್ಲಿಯೇ ಪುರುಷರೊಂದಿಗೆ ಲಗತ್ತಿಸಿಕೊಂಡಿರುವ ಗುರುತುಪತ್ರವನ್ನು ಕಳಚಿ, ಕಾಯಕದಿಂದ ಗುರುತಿಸಿಕೊಂಡ ಸ್ವಾತಂತ್ರ್ಯವನ್ನು ಮಹಿಳೆಯರು ಪಡೆದರು. ಶ್ರಮಜೀವಿಗಳು ತಮ್ಮ ವಚನಗಳ ಅಂಕಿತವನ್ನು ಕಾಯಕದ ವಸ್ತುಗಳಿಗೆ ಅನ್ವಯಿಸುವ ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡಿದ್ದಾರೆ. ವೇಶ್ಯಾವೃತ್ತಿಯ ಹಿನ್ನೆಲೆಯಿಂದ ಬಂದ ಮಹಿಳೆಯರು ತಮ್ಮ ಕಾಯಕದ ಧರ್ಮ ಸಂಕಟವನ್ನು ವ್ಯಕ್ತಪಡಿಸಿದ್ದಾರೆ. ಕೊಟ್ಟಣದ ಸೋಮಮ್ಮ –
ಹದತಪ್ಪಿ ಕುಟ್ಟಲು ನುಚ್ಚಲ್ಲದ ಅಕ್ಕಿಯಿಲ್ಲ
ವೃತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ
ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ
ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ
ಎನ್ನುತ್ತಾಳೆ. ನಾಸ್ತಿನಾಥಾ, ಗುಮ್ಮೇಶ್ವರಾ, ನಿರ್ಲಜ್ಜೇಶ್ವರಾ ಇಂತಹ ಅಂಕಿತಗಳೂ ವಚನಕಾರ್ತಿಯರ ಸ್ವಾತಂತ್ರ್ಯಸೃಷ್ಟಿ. ದೈವವನ್ನೂ ಸೃಷ್ಟಿಸಿಕೊಳ್ಳುವ ಸ್ವಾತಂತ್ರ್ಯದ ಸೌಖ್ಯವಿದು.
ಸಮಾಜದ ಬೇರೆ ಬೇರೆ ಹಿನ್ನೆಲೆಗಳಿಂದ ಬಂದ ವಚನಕಾರರನ್ನು ವಚನಕಾರ್ತಿಯರನ್ನು ಆ ವೈವಿಧ್ಯದ ಸಂವೇದನೆಗಳಿಂದಲೇ ನೋಡಬೇಕು. ಶರಣಧರ್ಮ ಎಂಬ ಮೂಸೆಯಲ್ಲಿ ಎಲ್ಲವನ್ನೂ ಬದಲಿಸಿ ಏಕರೂಪೀಕರಣ ಗೊಳಿಸುವ ಅಪರಾಧ ಇಲ್ಲಿ ನಡೆಯಲಿಲ್ಲ. ಪ್ರತಿಯೊಬ್ಬರೂ ಅವರ ಅಭಿಪ್ರಾಯಗಳಿಗೆ ಬದ್ಧರಾಗಿರುವ ಎಲ್ಲರ ಅಭಿಪ್ರಾಯಗಳೂ ಸಮಾನ ಗೌರವಾರ್ಹವಾಗಿರುವ ನಿಜವಾದ ಸ್ವಾತಂತ್ರ್ಯದ ಸಾಧ್ಯತೆಯಿದು. ಶರಣ ಧರ್ಮದೊಳ ಆವರಣದ ತಪ್ಪು-ತಡೆಗಳ ಬಗ್ಗೆ ಪ್ರಶ್ನಿಸುವ ಸ್ವಾತಂತ್ರ್ಯವಿತ್ತು.
` ಆಸೆಯೆಂಬುದು ಅರಸಿಂಗಲ್ಲದ ಶಿವಭಕ್ತರಿಗುಂಟೇ ಅಯ್ಯಾ – ಎಂದು ಗಂಡ ಮಾರಯ್ಯನನ್ನು ಕೇಳುವ ಆಯ್ದಕ್ಕಿ ಲಕ್ಕಮ್ಮ ಇದ್ದಾಳೆ.
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ
ಅಣ್ಣಗಳಿರಾ, ನೀವು ಕೇಳಿರೋ
ಎಂದು ಭಕ್ತ ಸಮುದಾಯವನ್ನು ಎಚ್ಚರಿಸುವ ಲಿಂಗಮ್ಮ ಇದ್ದಾಳೆ.
ಭಕ್ತರೊಳಗೂ ಜಾತಿಬೇಧ ಮಾಡುವ ಜಾತ್ಯಂಧರನ್ನು ನಿರ್ಭೀತಿಯಿಂದ ಕೇಳುವ ಸ್ವಾತಂತ್ರ್ಯವಿದೆ. ಶ್ರೀಮಂತರಿಗೆ ಒಂದು ನ್ಯಾಯ. ಬಡವರಿಗೆ ಒಂದು ನ್ಯಾಯ ಮಾಡುವ ಇವರು ಲಿಂಗವನಪ್ಪಿದ ನಿಜಶರಣರು – ಎಂದು ವ್ಯಂಗ್ಯಿಸುವುದು ಸಾಧ್ಯವಾಗುತ್ತದೆ. ಸದ್ಭಕ್ತರು ಎನ್ನಿಸಿಕೊಂಡವರೂ ಸದೈವ ತಪ್ಪುತ್ತಲೇ ಇರುವುದಾದರೆ ಅದರ ಫಲಿತ ಏನಾದೀತು ? ಎಂಬ ಆತಂಕವಿದೆ. ಸ್ತ್ರೀ ಸಮಾನತೆಯ ಮಾತಿನ ವೈಭವೀಕರಣದಲ್ಲಿ ಮುಳುಗಿ, ಅನ್ವಯದಲ್ಲಿ ಶೂನ್ಯವಾಗಿಬಿಡುವ ಸಂಕಟವನ್ನು ಅಭಿವ್ಯಕ್ತಿಸಿದ್ದಾರೆ.
‘ಆತನ ಇದಿರಲ್ಲಿ ಆತನ ಸತಿಯ ಅವ್ವಾ ಎಂದು
ಆತ ಸಂದಲ್ಲಿ ಸತಿ ಎಂಬ ಭಂಡರಿಗೇಕೆ, ವೃತನೇಮ ನಿತ್ಯ ?’
ಎಂದು ಅಕ್ಕಮ್ಮ ತೀಕ್ಷ್ಣವಾಗಿ ಕೇಳುತ್ತಾಳೆ. ಅಮುಗೆ ರಾಯಮ್ಮನಂತೂ ಜ್ಞಾನಿಗಳೆಂಬ ವೇಷಧಾರಿಗಳ ಬಾಯಲ್ಲಿ ಬಾಲಹುಳು ಸುರಿಯುತ್ತೇನೆ– ಎಂದು ನಿರ್ಭೀತವಾಗಿ ಹೇಳುತ್ತಾಳೆ. ತಮ್ಮ ಸುತ್ತಲಿನ ಸಮಾಜದ ಕೆಡುಕನ್ನು ಪ್ರಶ್ನಿಸುವ ತಿದ್ದುವ ನೈತಿಕ ಜವಾಬ್ದಾರಿಯನ್ನು ನಿರ್ವಹಿಸುವ ಈ ಸ್ವಾತಂತ್ರ್ಯದ ಅವಕಾಶವು ಶರಣ ಧರ್ಮದಲ್ಲಿತ್ತು–ಎನ್ನಲು ಇವು ಒಂದೊಂದು ನಿದರ್ಶನಗಳು ಮಾತ್ರ. ಇಂತಹ ಹಲವಾರು ವಚನಗಳು ಆ ಕಾಲದ ದುಡಿಯುವ ಜನರು ಕಟ್ಟಿಕೊಂಡ ಸಾಂವಿಧಾನಿಕ ಜೀವನ ವಿನ್ಯಾಸಕ್ಕೆ ಸಾಕ್ಷö್ಯಗಳಾಗಿವೆ. ಸಾಹಿತ್ಯ ಮತ್ತು ವಚನ ಚಳುವಳಿಗಳು ಜಡ ಸಂಪ್ರದಾಯವನ್ನು ಚಲನಶೀಲ ಶಕ್ತಿಯಾಗಿಸಿದ ಪ್ರಯತ್ನಗಳು. ತಾಳಮಾನ ಸರಿಸಮವನ್ನರಿಯೆ – ಎಂದು ಬಸವಣ್ಣ ಪರಂಪರಾಗತ ಅಭಿವ್ಯಕ್ತಿ ಕ್ರಮವನ್ನು ಮಾತ್ರ ಸೂಚಿಸುತ್ತಿಲ್ಲ. ರೂಢಿಯ ಭಾಷೆಯನ್ನು ಮೀರುವುದು ಎಂದರೆ, ರೂಢಿಯನ್ನು ಮೀರುವುದು. ಪರ್ಯಾಯ ವೆಂದರೆ “ಆನು ಒಲಿದಂತೆ ಹಾಡುವೆ ಕೂಡಲ ಸಂಗಯ್ಯ ನಿನಗೆ ಕೇಡಿಲ್ಲವಾಗಿ” ಎನ್ನವುದು ಬಸವತತ್ತ್ವ. ಕೂಡಲ ಮತ್ತು ಸಂಗಮ ದ್ವಿರುಕ್ತಿಗಳು. ಇಹದ ಬಾಳಿನ ಸಂಕರಶೀಲ ಗುಣದ ಪ್ರತೀಕಗಳು. ಇಂತಹ ಸಂಕರದ ಸಮಸಮಾಜದ ಸಿದ್ಧತೆಗೆ ಮುಕ್ತವಾದ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ವಿವೇಕ ಎರಡೂ ಬೇಕು. ಈ ಸ್ಪಷ್ಟತೆ ಶರಣರಿಗಿತ್ತು.
ನಾವಿಂದು ಪ್ರಶ್ನಿಸುವುದು ಅಪರಾಧವಾಗಿರುವ ಸ್ವಾತಂತ್ರ್ಯ ಹೀನ ಸಮಾಜದಲ್ಲಿದ್ದೇವೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ಕಾಲದಲಲಿದ್ದೇವೆ. ನಾಗರಿಕ ಸಮುದಾಯ ಭೋಗಾಕಾಂಕ್ಷೆಯ ದಾಳಿಗೆ ತುತ್ತಾಗಿ, ವಿಚಾರ ಸಾಮರ್ಥ್ಯವನ್ನೇ ಕಳೆದುಕೊಂಡ ಪೊಳ್ಳುತನದಲ್ಲಿದೆ. ಸಮಾಜದ ಮಹೋನ್ನತ ಕನಸು ಕಂಡ ವಚನ ಚಳುವಳಿಯೀಗ ಜಡವಾಗಿದೆ. ಮಠಮಾನ್ಯಗಳು ಹಣ-ಅಧಿಕಾರ ಕಬಳಿಕೆಯ ಗುರುತುಗಳಾಗಿವೆ. ವಚನಗಳ ಆಶಯಗಳಿಗೆ ಈ ಸ್ಥಿತಿ ಸಂಪೂರ್ಣ ವಿರುದ್ದವಾಗಿದೆ. ಜಾತಿ-ಮತ-ವರ್ಗಗಳು ಪತಾಕೆಯೆತ್ತಿವೆ. ಮಹಿಳಾ ಸಮಾನತೆಯ ಪಥಶ್ರಮದ ಚಿಂತನೆಗಳ ಆವರಣದಲ್ಲಿ ಹೆಣ್ಣು ದೇಹವನ್ನು ಭೋಗದ ಸರಕಾಗಿಸಿಕೊಳ್ಳಲಾಗುತ್ತಿದೆ. ಕಾನೂನಿನ ಭರವಸೆ ಕುಸಿಯುತ್ತಿದೆ. ಅತ್ಯಂತ ಭಯಾನಕ ಸಂಗತಿಯೆಂದರೆ, ಜನಸಾಮಾನ್ಯರ ಅವಿವೇಕ ಮತ್ತು ನಿರ್ಲಜ್ಜೆ, ವಿಸ್ಮೃತಿಯ ರೋಗವೀಗ ವರ್ತಮಾನವನ್ನು ಅಗೆಯುತ್ತಿದೆ. ತುಂಬ ಹತಾಶೆ ಮತ್ತು ಯಾತನೆ ಕಾಡುತ್ತಿದೆ. ಮನುಷ್ಯ ಬಾಳು ಘನತೆಯನ್ನು ಕಳೆದುಕೊಳ್ಳುತ್ತಿರುವ ಹೊತ್ತಲ್ಲಿ ವ್ಯಕ್ತಿ ಘನತೆ ಮತ್ತು ಬಾಳಿನ ಗೌರವವನ್ನು ಸ್ವಾತಂತ್ರ್ಯ ಸಮಾನತೆಯ ಧಾರ್ಮಿಕ ಸಂವಿಧಾನದಲ್ಲಿ ತುಂಬಿಕೊಟ್ಟವರ ಧೀಮಂತಿಕೆ ನೆನಪಾಗುತ್ತಿದೆ. ಮನಸ್ಸು ತೋಯುತ್ತಿದೆ.
ವಿನಯಾ ಒಕ್ಕುಂದ