ಬೆಂಗಳೂರು: ಬೆಂಗಳೂರಿನ ಪೀಣ್ಯದ HMT ಅರಣ್ಯದಲ್ಲಿ ಯಾವುದೇ ಮರಗಳನ್ನು ಕಡಿದಿಲ್ಲ. ಅರಣ್ಯದ ಖಾಲಿ ಪ್ರದೇಶದಲ್ಲಿ ಸಿನಮಾ ಶೂಟಿಂಗ್ ಗಾಗಿ ಸೆಟ್ ಹಾಕಲಾಗಿದೆ ಎಂದು ಟಾಕ್ಸಿಕ್ ಚಿತ್ರತಂಡ ಸ್ಪಷ್ಟನೆ ನೀಡಿದೆ. ಖ್ಯಾತ ಚಿತ್ರನಟ ಯಶ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸೆಟ್ ಕೇವಲ ತಾತ್ಕಾಲಿಕ ಎಂದೂ ಸ್ಪಷ್ಟಪಡಿಸಿದೆ.
ಶೂಟಿಂಗ್ ಬಳಿಕ ಸೆಟ್ ತೆಗೆಯುತ್ತೇವೆ. ಒಂದು ತಿಂಗಳಿಂದ ಈ ಸೆಟ್ ನಲ್ಲಿ ಚಿತ್ರೀಕರಣ ನಡೆದಿಲ್ಲ. ಸೆಟ್ ಹಾಕುವ ಸಂದರ್ಭದಲ್ಲೇ ಇಲ್ಲಿ ಖಾಲಿ ಜಾಗವಿತ್ತು. ಕೆಲವು ಕಡೆಗಳಲ್ಲಿ ಮಾತ್ರ ಚಿಕ್ಕ ಚಿಕ್ಕ ಪೊದೆಗಳಿದ್ದವು. ಅವುಗಳನ್ನು ಮಾತ್ರ ತೆಗೆದು ಸೆಟ್ ಹಾಕಲಾಗಿದೆ ಎಂದು ಟಾಕ್ಸಿಕ್ ಸಿನಿಮಾ ತಂಡ ಮಾಹಿತಿ ನೀಡಿದೆ.
HMT ಅರಣ್ಯದಲ್ಲಿ ಮರಗಳ ನಾಶ ಕುರಿತು ಪರಿಶೀಲನೆಗೆ ಬಿಬಿಎಂಪಿ ಉಪ ಅರಣ್ಯಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮರಗಳನ್ನು ಕಡಿಯಬೇಕಾದರೆ ಬಿಬಿಎಂಪಿ ಅನುಮತಿ ಪಡೆಯಬೇಕು. ಆದರೆ ಅನುಮತಿ ಪಡೆದಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಈ ಜಾಗವನ್ನು ಖರೀದಿಸಿದ್ದ ಕೆನರಾ ಬ್ಯಾಂಕ್ ಶೂಟಿಂಗ್ ಗೆ ಅನುಮತಿ ನೀಡಿದೆ ಎನ್ನುವುದು ಬೆಳಕಿಗೆ ಬಂದಿದೆ. ಹೆಚ್ ಎಂಟಿ ಜಮೀನು ನೋಡಿಕೊಂಡು ಬರಲು ಹೋಗಿದ್ದಾಗ ಅಲ್ಲಿ ಸೆಟ್ ಹಾಕಿರುವುದು ಗಮನಕ್ಕೆ ಬಂದಿತ್ತು. ದ್ದೆ. ಅನೇಕ ಮರಗಳನ್ನು ಕಡಿಯಲಾಗಿದೆ. ಆದ್ದರಿಂದ ತನಖೆ ನಡೆಸುವಂತೆ ಬಿಬಿಎಂಪಿಗೆ ಪತ್ರ ಬರೆದಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಎಚ್.ಎಂ.ಟಿ. ತನ್ನ ವಶದಲ್ಲಿರುವ ಅರಣ್ಯ ಭೂಮಿನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಖಾಲಿ ಜಾಗವನ್ನು ದಿನದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿರುವುದು ತಿಳಿದು ಬಂದಿದೆ. ಕೆನರಾ ಬ್ಯಾಂಕ್ ಗೆ ಎಚ್.ಎಂ.ಟಿ. ಮಾರಾಟ ಮಾಡಿರುವ ಅರಣ್ಯ ಭೂಮಿಯಲ್ಲಿ ಟಾಕ್ಸಿಕ್ ಚಲನಚಿತ್ರಕ್ಕಾಗಿ ಚಿತ್ರೀಕರಣ ನಡೆಯುತ್ತಿದ್ದು, ಬೃಹತ್ ಸೆಟ್ ಹಾಕಲಾಗಿದೆ. ಇದಕ್ಕಾಗಿ ಇಲ್ಲಿದ್ದ ನೂರಾರು ಮರ ಗಿಡ ಕಡಿಯಲಾಗಿದೆ. ನಿಯಮಾನುಸಾರ ಅನುಮತಿ ಇಲ್ಲದೆ ಇಲ್ಲದ ಮರ ಕಡಿಯುವುದು ಅದರಲ್ಲೂ ಅರಣ್ಯ ಭೂಮಿಯಲ್ಲಿ ಮರ ಗಿಡಗಳನ್ನು ಕಡಿಯುವುದು ದಂಡನೀಯ ಅಪರಾಧವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಹಿಂದಿನ ಮತ್ತು ಇಂದಿನ ಉಪಗ್ರಹ ಚಿತ್ರಗಳನ್ನು ಪಡೆದು, ಎಷ್ಟು ಮರ ಕಡಿಯಲಾಗಿದೆ? ಇದಕ್ಕೆ ನಿಯಮಾನುಸಾರ ಅನುಮತಿ ಪಡೆಯಲಾಗಿದೆಯೇ ಅನುಮತಿ ಕೊಟ್ಟಿದ್ದರೆ ಅರಣ್ಯ ಭೂಮಿಯಲ್ಲಿ ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು, ಅನುಮತಿ ಇಲ್ಲದೆ ಮರ ಕಡಿದಿದ್ದಲ್ಲಿ ಅದಕ್ಕೆ ಕಾರಣರಾದ ಎಲ್ಲರ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸಚಿವರು ಸೂಚಿಸಿದ್ದಾರೆ.