ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಿ ಅನ್ಯಾಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಒಳಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಇದು ಜಾರಿಯಾಗಲು ಇಷ್ಟವಿಲ್ಲ. ಎಲ್ಲ ಅವಕಾಶವಿದ್ದರೂ ಮತ್ತೆ ಆಯೋಗ ರಚಿಸಿ, ಮೂರು ತಿಂಗಳವರೆಗೆ ಕಾಯಲು ನಿರ್ಧರಿಸಲಾಗಿದೆ. ಇನ್ನು ಜನಗಣತಿ ಆರಂಭವಾದರೆ ಆಗ ಮತ್ತೊಂದು ಸಬೂಬು ಹೇಳಬಹುದು. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಒಳಮೀಸಲಾತಿಯನ್ನು ಒಪ್ಪಿತ್ತು. ಎಷ್ಟು ಮೀಸಲು ನೀಡಬೇಕೆಂದು ತಿಳಿಸಲಾಗಿತ್ತು. ಇನ್ನು ಯಾವುದೇ ಹುನ್ನಾರ ಮಾಡದೆ ಸರ್ಕಾರ ಒಳಮೀಸಲು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ವಕ್ಫ್ ಬೋರ್ಡ್ ರೈತರ ಜಮೀನುಗಳನ್ನು ಕಬಳಿಸುತ್ತಿದೆ. ಇದು ಭಾರತಕ್ಕೆ ಸೇರಿದ ಆಸ್ತಿ. ಕಂಡ ಜಮೀನುಗಳೆಲ್ಲ ತಮ್ಮದೇ ಎಂದು ಇವರು ಹೇಳುತ್ತಿದ್ದಾರೆ. ಕೆಲವು ಮತಾಂಧ ಅಧಿಕಾರಿಗಳು ಖಬರ್ಸ್ತಾನ, ವಕ್ಫ್ ಬೋರ್ಡ್ ಆಸ್ತಿ ಎಂದು ದಾಖಲೆ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ರೈತರ ಅನ್ನ ಕೀಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ಮಾಡುತ್ತಿರುವುದರಿಂದಲೇ ಭಯೋತ್ಪಾದನೆ, ಮತಾಂಧತೆ ನಡೆಯುತ್ತಿದೆ. ಹಿಂದೂಗಳು ಗಣೇಶನ ಮೂರ್ತಿಯ ಮೆರವಣಿಗೆ ಕೂಡ ಮಾಡುವಂತಿಲ್ಲ. ಸಂಜೆಯಿಂದ ರಾತ್ರಿವರೆಗೆ ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ ಹಸಿರು ಪಟಾಕಿ ಮಾತ್ರ ಸಿಡಿಸಬೇಕು, ಅದು ಕೂಡ ಎರಡು ಗಂಟೆ ಮಾತ್ರ ಎಂದು ಕಾಂಗ್ರೆಸ್ ಸರ್ಕಾರ ನಿಯಮ ವಿಧಿಸಿದೆ ಎಂದರು.