ಈಗ ಬಹುಸಂಖ್ಯಾತ ಶೂದ್ರ ದಲಿತ ಸಮುದಾಯ ಎಚ್ಚೆತ್ತು ಕೊಳ್ಳಬೇಕಿದೆ. ಜಾತಿ ಜನಗಣತಿಗಾಗಿ ಒತ್ತಾಯಿಸಲೇ ಬೇಕಿದೆ. ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ಯೋಜನೆ ಸಂಪನ್ಮೂಲಗಳಲ್ಲಿ ಪಾಲುದಾರಿಕೆ ಪಡೆಯಬೇಕಿದೆ. ಸಂವಿಧಾನದ ಆಶಯ ಗೆಲ್ಲಲೇಬೇಕಿದೆ. ಹಿಂದುತ್ವವಾದಿಗಳ ಹುನ್ನಾರ ಹಾಗೂ ಪ್ರಭಲ ಜಾತಿಗಳ ಶಡ್ಯಂತ್ರ ಸೋಲಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಜಾತ್ಯತೀತ ದೇಶದಲ್ಲಿ ಜಾತಿ ಜನಗಣತಿ ಯಾಕೆ ಬೇಕು?” ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಕೇಳಿದ್ದರಲ್ಲಿ ತಪ್ಪೇನಿದೆ? ಸಮಸ್ತ ಬ್ರಾಹ್ಮಣ ಕುಲ ಸಂಜಾತರ ಅಭಿಪ್ರಾಯವೂ ಇದೇ ಆಗಿದೆ. ಸಕಲ ಮೇಲ್ಜಾತಿಯವರ ಅನಿಸಿಕೆಯೂ ಇಂತಹುದೇ ಆಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 1931 ರಲ್ಲಿ ಬ್ರಿಟೀಷರು ಜಾತಿ ಜನಗಣತಿ ಮಾಡಿದ್ದು ಬಿಟ್ಟರೆ ಇಲ್ಲಿವರೆಗೂ ಈ ದೇಶದಲ್ಲಿ ಜಾತಿ ಜನಗಣತಿ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಮಾಡಲು ಶ್ರೇಷ್ಠ ಕುಲ ತಿಲಕರು ಬಿಟ್ಟಿಲ್ಲ. ಮೇಲ್ಜಾತಿಯವರ ಒಪ್ಪಿಗೆ ಸಿಕ್ಕಿಲ್ಲ.
ಅದೇನೋ ಜನಗಣತಿ, ದನಗಣತಿಗಳನ್ನ ಮಾಡಿದ್ರೆ ಯಾರದ್ದೂ ತಕರಾರಿಲ್ಲ. ಈ ದೇಶದಲ್ಲಿ ಜನ- ಜಾನುವಾರುಗಳು ಎಷ್ಟಿವೆ ಅಂತಾ ಆಗಾಗ ಲೆಕ್ಕ ಹಾಕ್ತಾ ಇರ್ಲಿ ಬೇಡ ಎನ್ನುವವರು ಯಾರು? ಆದರೆ ಜಾತಿ ಜನಗಣತಿಗೆ ಮಾತ್ರ ಕೈ ಹಾಕಬಾರದು. ಹಾಗೆ ಹಾಕಿದವರ ಕೈ ಸುಡದೇ ಇರದು. ಇದ್ದದ್ದು ಇದ್ದಂಗೆ, ಯಥಾಸ್ಥಿತಿಯಲ್ಲಿ ಸನಾತನ ಕಾಲದಿಂದ ಬಂದ ಜಾತಿ ವ್ಯವಸ್ಥೆ ಹೀಗೆಯೇ ಇರಬೇಕು. ಹಿಂದುಳಿದ ಜಾತಿಯವರು ಹೆಚ್ಚಿದ್ದಾರೆ ಅಂತಾ ಎಲ್ಲಾ ಸವಲತ್ತುಗಳನ್ನು ಅವರಿಗೆ ಬಿಟ್ಟು ಕೊಡಲು ಎಂದಾದರೂ ಸಾಧ್ಯವಾ? ಅದನ್ನು ವೈದಿಕ ಧರ್ಮ ಒಪ್ಪುತ್ತದಾ? ಈ ದೇಶದ ಶಿಕ್ಷಣ ಉದ್ಯೋಗ ಅಧಿಕಾರದಲ್ಲಿ ಸಕಲ ಅವಕಾಶಗಳನ್ನು ಪಡೆದು ಅನುಭವಿಸುತ್ತಾ ಬಂದಿರುವ ಮೇಲ್ವರ್ಗದವರಿಗೆ ಇದರಿಂದ ಅನ್ಯಾಯ ಆಗೋದಿಲ್ವಾ?
ಹೀಗಾಗಿ ಸಂವಿಧಾನ ಹೇಳಿದೆ ನಮ್ಮದು ಜಾತ್ಯತೀತ ದೇಶ, ಆದ್ದರಿಂದ ಯಾರೂ ಜಾತಿ ಅಧಾರಿತ ಜನಗಣತಿ ಮಾಡಬಾರದು. ಹೌದು ಮಾಡಬಾರದು. ಅದೇ ಸಂವಿಧಾನವು ಈ ದೇಶದ ಪ್ರಜೆಗಳೆಲ್ಲರೂ ಸಮಾನರು ಅಂತಲೂ ಹೇಳಿದೆ. ಆದರೆ ಇದನ್ನು ಬ್ರಹ್ಮಣ ಶಿರ ಸಂಜಾತರು ಒಪ್ಪಲು ಹೇಗೆ ಸಾಧ್ಯ? ಸನಾತನ ಧರ್ಮ ಸಂವಿಧಾನಕ್ಕಿಂತ ಸನಾತನವಾದದ್ದು. ಶ್ರೇಷ್ಠತೆಯ ವಿಷಯ ಬಂದಾಗ ಬ್ರಾಹ್ಮಣರೇ ಅತೀ ಶ್ರೇಷ್ಠರು ಎನ್ನುವುದು ಮನುವಿನ ಆಣೆಯಾಗಿ ಸತ್ಯ.
ಹೀಗಾಗಿ ಸನಾತನ ವೈದಿಕರ ವಾದದ ಪ್ರಕಾರ ವರ್ಣ ವ್ಯವಸ್ಥೆ ಇದ್ದರೆ ಈ ಜಾತಿಗಣತಿಯ ಅಗತ್ಯವೇ ಇರುವುದಿಲ್ಲ. ಅಲ್ಲಿರೋದೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ನಾಲ್ಕೇ ನಾಲ್ಕು ವರ್ಗ. ಐದನೆಯದಾಗಿ ಪಂಚಮ ವರ್ಗವು ಇದೆಯಾದರೂ ಅದು ಲೆಕ್ಕಕ್ಕಿಲ್ಲ. ಯಾಕೆಂದ್ರೆ ಅವರು ಮನುಷ್ಯರೇ ಅಲ್ಲ. ಹೀಗೆ ‘ಪ್ರತಿ ವರ್ಣಗಳೂ ಎಲ್ಲೆಲ್ಲಿ ಇರಬೇಕು, ಹೇಗೆಲ್ಲಾ ಇರಬೇಕು ಅಂತ ಮನುಸ್ಮೃತಿಯಲ್ಲಿ ವಿವರವಾಗಿ ಹೇಳಲಾಗಿದೆ. ಅದನ್ನೇ ಮುಂದುವರೆಸಿಕೊಂಡು ಹೋದರೆ ಈ ಜಾತಿ ಗೀತಿ ಗಣತಿ ಗೋಜಲಾದರೂ ಯಾಕೆ ಬೇಕು?’ ಎಂಬುದೇ ಪುರೋಹಿತಶಾಹಿ ಹಿಂದುತ್ವವಾದಿಗಳ ವಾದವಾಗಿದೆ.
ಈ ಪ್ರಸನ್ನ ತೀರ್ಥರ ತೀರ್ಥರೂಪದಂತಿದ್ದ ದಿವಂಗತ ಪೇಜಾವರರು “ಬ್ರಾಹ್ಮಣರು ಹಿಂದೂಗಳಲ್ಲ” ಎಂದು ಹೇಳಿಯಾಗಿದೆಯಲ್ಲಾ. ಯಾಕೆ ಅವರ ಮಾತನ್ನು ಎಲ್ಲರೂ ಒಪ್ಪಿಕೊಂಡು ಸೋ ಕಾಲ್ಡ್ ಹಿಂದೂ ಧರ್ಮದಿಂದ ವೈದಿಕ ಧರ್ಮವನ್ನು ಬೇರೆ ಮಾಡಿ ಸಾಂವಿಧಾನಿಕ ಮಾನ್ಯತೆ ಕೊಡಬಾರದು?. ಅಲ್ಪಸಂಖ್ಯಾತ ಧರ್ಮವೆಂದು ಪರಿಗಣಿಸಿದರೆ ಸಂವಿಧಾನಾತ್ಮಕ ಸವಲತ್ತುಗಳೂ ಸಿಗುತ್ತಲ್ವಾ? ಈಗ ನೋಡಿ ‘ಜಾತಿಗಣತಿ ಬೇಡವೆಂದರೆ ಬ್ರಾಹ್ಮಣ ಜಾತಿಗೆ ಕೊಟ್ಟಿರುವ 10% ಮೀಸಲಾತಿಯನ್ನು ವಾಪಸ್ ಕೊಡಿ ಎಂದು ಜನ ಕೇಳುತ್ತಿದ್ದಾರೆ. ಇದನ್ನು ಈ ತೀರ್ಥರ ಸಮುದಾಯ ಒಪ್ಪಲು ಸಾಧ್ಯವಾ? ಅದೇಗೆ ಸಾಧ್ಯವಾಗುತ್ತೆ?. ಸನಾತನ ಧರ್ಮವೂ ಇರಲಿ, ಸಂವಿಧಾನದ ಲಾಭವೂ ಬರಲಿ ಅಂದಾಗ ಮಾತ್ರವೇ ವಿಪ್ರ ಕುಲ ಉದ್ಧಾರ ಆಗಲು ಸಾಧ್ಯ. ಹೀಗಾಗಿ ಬ್ರಾಹ್ಮಣ ಕೋಟಾದ ಮೀಸಲಾತಿ ಬೇಕು ಅದರೆ ಜಾತಿ ಗಣತಿ ಬೇಡ ಎನ್ನುವುದು ಸನಾತನಿಗಳ ಒತ್ತಾಸೆ.
“ಯಾರು ಏನೇ ಹೇಳಲಿ, ವೈದಿಕರ ದೇವಸ್ಥಾನಗಳಲ್ಲಿ ಪಂಕ್ತಿಬೇಧ ಮಾಡಲಾಗುತ್ತದೆ. ಬ್ರಾಹ್ಮಣರು ತಿಂದ ಎಂಜಲೆಲೆಯ ಮೇಲೆ ಶೂದ್ರರಿಂದ ಉರುಳುಸೇವೆ ಮಾಡಿಸಲಾಗುತ್ತದೆ. ಅಂತರ್ ಜಾತಿ, ಅಂತರ್ ಧರ್ಮದ ವಿವಾಹಗಳನ್ನು ನಿಷೇಧಿಸಲಾಗುತ್ತದೆ, ಸನಾತನ ಮನುಧರ್ಮದ ಪ್ರಕಾರ ಅಸ್ಪೃಶ್ಯತೆಯನ್ನೂ ಆಚರಿಸಲಾಗುತ್ತದೆ. ಇದೆಲ್ಲಾ ವೈದಿಕರ ಕುಲಾಚಾರ. ಇದಕ್ಕೆ ತಡೆಯೊಡ್ಡಿದರೆ ಸಂವಿಧಾನವನ್ನೇ ಬದಲಾಯಿಸಬೇಕಾಗುತ್ತದೆ” ಎಂಬುದು ವೈದಿಕಶಾಹಿ ಪ್ರೇರಿತ ಹಿಂದುತ್ವವಾದಿಗಳ ಆಗ್ರಹವಾಗಿದೆ. ಅದಕ್ಕೆ ಇವರು ಈ ಜಾತಿ ಜನಗಣತಿ ಬೇಡ ಎನ್ನುವುದು. ಶೂದ್ರ ದಲಿತರು ಜನಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ ಎಂದ ಮಾತ್ರಕ್ಕೆ ಮೇಲ್ಜಾತಿ ವರ್ಗದವರು ತಲೆತಲಾಂತರದಿಂದ ಅನುಭವಿಸುತ್ತಾ ಬಂದಿರುವ ಸವಲತ್ತುಗಳನ್ನು ಬಿಟ್ಟು ಕೊಡಬೇಕಾ? ಸಹಸ್ರ ಸಹಸ್ರ ವರ್ಷಗಳಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬಹುಜನತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡ ವೈದಿಕರು ಅಂದರೆ ಭಯಭಕ್ತಿ ಬೇಡ್ವಾ? ಎಲ್ಲದರಲ್ಲೂ ಬ್ರಾಹ್ಮಣರಿಗೆ ಮೊದಲ ಪಾಲು ಎಂಬ ಅರಿವು ಇರಬೇಕಲ್ವಾ? ದೇವರುಗಳೇ ಮಂತ್ರಗಳಿಗೆ ಆಧೀನವಾದರೆ ಆ ಮಂತ್ರಗಳು ಬ್ರಾಹ್ಮಣರ ಆಧೀನವಾದ್ದರಿಂದ ದೇವರುಗಳೂ ವೈದಿಕರ ಆಧೀನ ಎನ್ನುವುದನ್ನು ಯಾರೂ ಮರೆಯಬಾರದು ಅಲ್ವಾ?
ಇಷ್ಟಕ್ಕೂ ಈ ಜಾತಿಗಣತಿ ಮಾಡಿಸಿ ಈ ಶೂದ್ರರಿಗ್ಯಾಕೆ ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು? ಸರಕಾರಿ ಯೋಜನೆಗಳ ಮೂಲಕ ಸಂಪನ್ಮೂಲಗಳನ್ನು ಹಂಚಿಕೆ ಮಾಡಬೇಕು? ಎಲ್ಲರೂ ಮನುವಿನ ನಿಯಮಾನುಸಾರ ಅವರವರ ಕೆಲಸಗಳನ್ನು ನಿಷ್ಠೆಯಿಂದ ಮಾಡಿಕೊಂಡು ಹೋದರೆ ಈ ಜಾತಿಗಣತಿಯ ಅಗತ್ಯವೇ ಬಾರದು ಅಲ್ವಾ? ಹೀಗಾಗಿ ಮನುವಿನ ವಂಶಸ್ಥರಾದ ಸಮಸ್ತ ವೈದಿಕ ಕುಲದವರಿಂದ ಜಾತಿ ಗಣತಿಯನ್ನು ವಿರೋಧಿಸಲಾಗುತ್ತದೆ. ಇಂದಿಲ್ಲಾ ಮುಂದೆಂದಾದರೂ ಸನಾತನ ಮನುವಾದಿ ಪ್ರಣೀತ ಸಂವಿಧಾನವನ್ನು ಅನುಷ್ಠಾನಕ್ಕೆ ತಂದು ಮತ್ತೆ ಚಾತುರ್ವರ್ಣ ಪದ್ಧತಿಯನ್ನು ಜಾರಿಗೊಳಿಸಲಾಗುತ್ತದೆ. ಅದಕ್ಕಾಗಿ ಪೇಜಾವರ ತೀರ್ಥರು ಹೇಳಿದಂತೆ ಈಗ ಜಾತ್ಯತೀತ ದೇಶದಲ್ಲಿ ಜಾತಿಗಣತಿಯನ್ನು ವಿರೋಧಿಸಲಾಗುತ್ತದೆ. ಪರೋಕ್ಷವಾಗಿ ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಮೋಟ್ ಮಾಡಲಾಗುತ್ತದೆ.
ಮೇಲೆ ತಿಳಿಸಿರುವ ಈ ಎಲ್ಲಾ ಸಂಗತಿಗಳು ಜಾತಿಗಣತಿ ವಿರೋಧಿಸುವ ಪುರೋಹಿತಶಾಹಿ ವರ್ಗದವರ ಉದ್ದೇಶ. ಜೊತೆಗೆ ಇತರೆ ಮೇಲ್ಜಾತಿಗಳ ಒತ್ತಾಸೆ. ಆದರೆ ಯಾರು ಎಷ್ಟೇ ತಡೆದರೂ ಡಾ.ಅಂಬೇಡ್ಕರ್ ವಿರಚಿತ ಸಮಾನತೆ ಸಾರುವ ಸಂವಿಧಾನ ಇರುವವರೆಗೂ ಹಿಂದುತ್ವವಾದಿಗಳ ಹುನ್ನಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯಲಾರದು. ಬಹುತ್ವದ ಮೇಲೆ ಬ್ರಾಹ್ಮಣತ್ವ ಹೇರಲು ಬಂದರೆ ಬಹುಜನರು ಸಹಿಸಲಾರರು.
ಅದಕ್ಕಾಗಿಯೇ ಹಿಂದುತ್ವವಾದಿ ಸಂಘಿಗಳು ಹಿಂದೂ ಹಿಂದೂ ಎಂದು ಹುಯಿಲೆಬ್ಬಿಸುವುದು. ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಆತಂಕವನ್ನು ಸೃಷ್ಟಿಸುತ್ತಿರುವುದು. ಹಿಂದೂ ಧರ್ಮದ ಹೆಸರಲ್ಲಿ ಬಹುಸಂಖ್ಯಾತ ಶೂದ್ರ ದಲಿತರನ್ನು ಇತರೆ ಅಲ್ಪಸಂಖ್ಯಾತ ಧರ್ಮೀಯರ ಮೇಲೆ ಎತ್ತಿಕಟ್ಟಿ ಹಿಂದುತ್ವ ರಾಷ್ಟ್ರ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವುದು. ಹಾಗೂ ಆ ಮೂಲಕ ಈಗಿರುವ ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿ ಆಧರಿಸಿದ ಸನಾತನ ಸಂವಿಧಾನವನ್ನು ಜಾರಿಗೆ ತಂದು ಮತ್ತೆ ವರ್ಣಾಶ್ರಮ ವ್ಯವಸ್ಥೆಯನ್ನು ಅನುಷ್ಠಾನದ ಮೂಲಕ ಎಲ್ಲಾ ವೈದಿಕೇತರ ಸಮುದಾಯಗಳನ್ನು ನಿಯಂತ್ರಿಸ ಬೇಕೆನ್ನುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರಿ. ಹಿಂದೂ ಧರ್ಮ, ಹಿಂದೂ ರಾಷ್ಟ್ರ ಎನ್ನುವುದು ಆ ಗುರಿಯತ್ತ ಸಾಗುವ ದಾರಿ.
ಈ ದಾರಿ ಗುರಿಗೆ ಅಡೆತಡೆ ಒಡ್ಡಬಹುದಾದ ಜಾತಿ ಜನಗಣತಿಯನ್ನು ಹಿಂದುತ್ವವಾದಿಗಳು, ಸಂಘ ಪರಿವಾರದವರು, ಪುರೋಹಿತಶಾಹಿ ಮಠಮಾನ್ಯ ಸ್ವಾಮಿಗಳು ವಿರೋಧಿಸುತ್ತಿದ್ದಾರೆ. ನೂರೆಂಟು ನೆಪಗಳನ್ನು ಹೇಳುತ್ತಾ, ವಿತಂಡ ವಾದಗಳನ್ನು ಮಂಡಿಸುತ್ತಾ ಕರ್ನಾಟಕದ ಜಾತಿ ಸಮೀಕ್ಷಾ ವರದಿಯನ್ನೇ ಅಧಿವೇಶನದಲ್ಲಿ ಮಂಡನೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.
ಈಗ ಬಹುಸಂಖ್ಯಾತ ಶೂದ್ರ ದಲಿತ ಸಮುದಾಯ ಎಚ್ಚೆತ್ತು ಕೊಳ್ಳಬೇಕಿದೆ. ಜಾತಿ ಜನಗಣತಿಗಾಗಿ ಒತ್ತಾಯಿಸಲೇಬೇಕಿದೆ. ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ, ಯೋಜನೆ ಸಂಪನ್ಮೂಲಗಳಲ್ಲಿ ಪಾಲುದಾರಿಕೆ ಪಡೆಯಬೇಕಿದೆ. ಸಂವಿಧಾನದ ಆಶಯ ಗೆಲ್ಲಲೇಬೇಕಿದೆ. ಹಿಂದುತ್ವವಾದಿಗಳ ಹುನ್ನಾರ ಹಾಗೂ ಪ್ರಭಲ ಜಾತಿಗಳ ಶಡ್ಯಂತ್ರ ಸೋಲಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ
ಇದನ್ನೂ ಓದಿ- ಬಣ್ಣದಾಚೆಗಿನ ಬದುಕು, ಬೆಂಕಿಯಾಚೆಗಿನ ಬೆಳಕು